ADVERTISEMENT

ಸುಲಿಗೆ, ವೇಶ್ಯಾವಾಟಿಕೆ, ಕಳ್ಳತನ: ಮೆಜೆಸ್ಟಿಕ್‌ನಲ್ಲಿ ಅನೈತಿಕ ಚಟುವಟಿಕೆಯ ಹಾವಳಿ

ಬಾಲಕೃಷ್ಣ ಪಿ.ಎಚ್‌
Published 2 ಫೆಬ್ರುವರಿ 2026, 19:30 IST
Last Updated 2 ಫೆಬ್ರುವರಿ 2026, 19:30 IST
<div class="paragraphs"><p>ಬೆಂಗಳೂರು ಮೆಜೆಸ್ಟಿಕ್‌ನಲ್ಲಿರುವ ಪಾದಚಾರಿ ಮೇಲ್ಸೇತುವೆ ಹಗಲಿನಲ್ಲಿ ಜನಸಂಚಾರಕ್ಕೆ ಅನುಕೂಲವಾಗಿದ್ದು, ರಾತ್ರಿ ಅಪಾಯಕಾರಿ ಸ್ಥಳವಾಗುತ್ತಿದೆ. </p></div>

ಬೆಂಗಳೂರು ಮೆಜೆಸ್ಟಿಕ್‌ನಲ್ಲಿರುವ ಪಾದಚಾರಿ ಮೇಲ್ಸೇತುವೆ ಹಗಲಿನಲ್ಲಿ ಜನಸಂಚಾರಕ್ಕೆ ಅನುಕೂಲವಾಗಿದ್ದು, ರಾತ್ರಿ ಅಪಾಯಕಾರಿ ಸ್ಥಳವಾಗುತ್ತಿದೆ.

   

ಪ್ರಜಾವಾಣಿ ಚಿತ್ರ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಿಂದ, ಪರ ರಾಜ್ಯಗಳಿಂದ ಪ್ರತಿದಿನ ಲಕ್ಷಾಂತರ ಮಂದಿ ಬಂದು ಹೋಗುವ, ನಗರದ ಜನರು ನಿತ್ಯ ಸಂಚರಿಸುವ ಕೇಂದ್ರ ಸ್ಥಳವಾದ ಬೆಂಗಳೂರಿನ ‘ಮೆಜೆಸ್ಟಿಕ್‌’ ಎಂಬ ಮೋಹಕ ಜಾಗದಲ್ಲಿ ಸುಲಿಗೆಕೋರರ, ಕಳ್ಳಕಾಕರ, ವೇಶ್ಯಾವಾಟಿಕೆಯ ಹಾವಳಿ ಹೆಚ್ಚಾಗಿದೆ.

ADVERTISEMENT

ಮೆಜೆಸ್ಟಿಕ್ ಬಂದಿಳಿಯುವ ಜನರಿಗೆ ಇಲ್ಲಿ ಯಾರು ಒಳ್ಳೆಯವರು ಯಾರು ಕೆಟ್ಟವರು ಎಂಬುದು ಗೊತ್ತಾಗದೇ, ಅನೇಕರು ಇಲ್ಲಿ ‘ಎಲ್ಲ’ವನ್ನೂ ಕಳೆದುಕೊಂಡಿದ್ದಾರೆ. ಬೆಳಿಗ್ಗಿನ ಜಾವ ಮತ್ತು ರಾತ್ರಿ ಹೊತ್ತಿನಲ್ಲಿ ಮರ್ಯಾದಸ್ಥರು ಓಡಾಡುವುದೇ ಕಷ್ಟವಾಗಿದೆ. 

ರಾತ್ರಿ 9.30ರ ನಂತರ ಕುಡಿದು ಇಲ್ಲವೇ ಅನಾರೋಗ್ಯದಿಂದ ಯಾರಾದರೂ ಮಲಗಿದ್ದರೆ ಅವರ ಜೇಬಲ್ಲಿದ್ದುದನ್ನು ಕಿತ್ತುಕೊಳ್ಳಲಾಗುತ್ತದೆ. ವಿರೋಧ ವ್ಯಕ್ತಪಡಿಸಿದವರಿಗೆ ಚೂರಿ ತೋರಿಸಿ ಬೆದರಿಸಿ ಸುಮ್ಮನಿರಿಸಲಾಗುತ್ತದೆ.

ರಾತ್ರಿ ಹೊತ್ತಲ್ಲಿ ಮಹಿಳೆಯರು ಬಿಎಂಟಿಸಿ ಬಸ್‌ ನಿಲ್ದಾಣಕ್ಕೆ ಬಂದರೆ ಅವರನ್ನು ‘ಬೆಲೆವೆಣ್ಣು’ಗಳೆಂದು ತಿಳಿದು ಕರೆಯುವಂಥ ಅಧೋಗತಿ ಬಂದೊಂದಗಿದೆ. ಪುರುಷರು ರಾತ್ರಿ ಒಬ್ಬರೇ ನಡೆದು ಹೋಗುತ್ತಿದ್ದರೆ ಅವರನ್ನು ಅಡ್ಡಗಟ್ಟಿ ಕರೆಯುವ ಲೈಂಗಿಕ ಕಾರ್ಯಕರ್ತೆಯರು, ಲಿಂಗತ್ವ ಅಲ್ಪಸಂಖ್ಯಾತರ ಹಾವಳಿ ಹೆಚ್ಚಾಗಿದೆ. ಹಿಂದಿ ಅಥವಾ ಉತ್ತರ ಭಾರತದ ಭಾಷೆಯನ್ನಾಡುವವರನ್ನೇ ಗುರಿ ಮಾಡಿ ಸುಲಿಗೆ ಮಾಡಲಾಗುತ್ತಿದೆ ಎಂದು ಇಲ್ಲಿ ಓಡಾಡಿ, ಸಂಕಷ್ಟಕ್ಕೆ ತುತ್ತಾದವರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ಗುಬ್ಬಿ ತೋಟದಪ್ಪ ರಸ್ತೆ, ಧನ್ವಂತರಿ ರಸ್ತೆ ಸಂಪರ್ಕ ಕಲ್ಪಿಸುವ ಪಾದಚಾರಿ ಮೇಲ್ಸೇತುವೆ, ರೈಲು ನಿಲ್ದಾಣದ ಕಡೆಗೆ ಸಾಗುವ ಅಂಡರ್‌ ಪಾಸ್‌ಗಳು ಅಪಾಯಕಾರಿ ಸ್ಥಳಗಳಾಗಿ ಪರಿವರ್ತನೆಗೊಂಡಿವೆ ಎಂಬ ದೂರುಗಳೂ ಇವೆ.

ಇತ್ತೀಚಿನ ಪ್ರಕರಣಗಳು

ತುಮಕೂರಿನಿಂದ ಹದಿನೆಂಟರ ಹರೆಯದ ಯುವತಿಯೊಬ್ಬಳು ಮನೆ ಬಿಟ್ಟು ಬಂದಿದ್ದರು. ಎಲ್ಲಿಗೆ ಹೋಗಬೇಕು ಎಂದು ಗೊತ್ತಾಗದೇ ಮೆಜೆಸ್ಟಿಕ್‌ನಲ್ಲಿ ಕುಳಿತಿದ್ದ ಆಕೆ ಸ್ಪಲ್ಪ ಹೊತ್ತಿನಲ್ಲೇ ಪರಿಚಯವಾಗಿದ್ದ ಯುವತಿ ಜೊತೆಗೆ ಹೋಗಿದ್ದರು. ತುಮಕೂರಿನಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅಲ್ಲಿನ ಪೊಲೀಸರು ಯುವತಿಯನ್ನು ಹುಡುಕುತ್ತಾ ಬಂದು ಮೆಜೆಸ್ಟಿಕ್‌ನಲ್ಲಿ ಪತ್ತೆ ಹಚ್ಚಿದ್ದರು. ಆ ಯುವತಿ ಅದಾಗಲೇ ವೇಶ್ಯಾವಾಟಿಕೆಯ ದಂದೆಯಲ್ಲಿ ಸಿಲುಕಿಯಾಗಿತ್ತು.

ವಿಜಯಪುರದ ಇನ್ನೊಂದು ಹುಡುಗಿ ಎಸ್‌ಎಸ್‌ಎಲ್‌ಸಿ ಮುಗಿಸಿ ನಂತರ ಓದು ಮುಂದುವರಿಸಬೇಕು ಎಂದು ಕನಸು ಕಟ್ಟಿಕೊಂಡಿದ್ದಳು. ಆದರೆ, ಹೆತ್ತವರಿಗೆ ಮಗಳಿಗೆ ಮದುವೆ ಮಾಡುವ ತವಕ. ಸಂಬಂಧಿಕ ಹುಡುಗನೊಂದಿಗೆ ಮಾತುಕತೆ ನಡೆಸಿ ನಿಶ್ಚಿತಾರ್ಥಕ್ಕೆ ದಿನ ನಿಗದಿ ಮಾಡಿದ್ದರು.

ಮದುವೆಯಾಗಲು ಮನಸ್ಸಿಲ್ಲದ ಹುಡುಗಿ ನಿಶ್ಚಿತಾರ್ಥದ ಎರಡು ದಿನ ಮುಂಚೆಯೇ ಬಸ್‌ ಹತ್ತಿ ನೇರವಾಗಿ ಮೆಜೆಸ್ಟಿಕ್‌ಗೆ ಬಂದಿಳಿದಿದ್ದಳು. ಮುಂದಿನ ದಾರಿ ಗೊತ್ತಾಗದೇ ಅಳುತ್ತಾ ಕುಳಿತಿದ್ದಳು. ಕೆಲಸಕ್ಕೆ ಹೊರಟಿದ್ದ ಖಾಸಗಿ ಸಂಸ್ಥೆಯ ಉದ್ಯೋಗಿ ಮಹಿಳೆಯೊಬ್ಬರು ಈಕೆಯನ್ನು ನೋಡಿ ವಿಚಾರಿಸಿದರು. ತಮ್ಮ ಮೊಬೈಲ್ ಸಂಖ್ಯೆ ನೀಡಿ, ‘ನನ್ನ ಕೆಲಸಕ್ಕೆ ತಡವಾಗಿದೆ. ಏನಾದರೂ ಸಹಾಯ ಬೇಕಾದರೆ ಫೋನು ಮಾಡು. ಯಾರೂ ಕರೆದರೂ ಹೋಗಬೇಡ’ ಎಂದು ತಿಳಿಸಿ ಬಸ್‌ ಹತ್ತಿ ತಮ್ಮ ಕೆಲಸಕ್ಕೆ ತೆರಳಿದ್ದರು.

ಆನಂತರ  ಸಂತೈಸುವ ನೆಪದಲ್ಲಿ ಹಲವು ಮಹಿಳೆಯರು, ಯುವತಿಯರು ಕರೆದಿದ್ದರೂ ಈ ಹುಡುಗಿ ವಿಚಲಿತಳಾಗದೇ ಕುಳಿತಿದ್ದಳು. ಸಂಜೆ ವಾಪಸ್ಸಾದ ಆ ಮಹಿಳೆ ಸ್ಥಳೀಯ ಬಿಎಂಟಿಸಿ ಸಹಿತ ವಿವಿಧ ಅಧಿಕಾರಿಗಳ ನೆರವಿನೊಂದಿಗೆ ‘ಸಖಿ’ ಕೇಂದ್ರಕ್ಕೆ ಕರೆದುಕೊಂಡು ಹೋದರು. ಮರುದಿನ ಹೆತ್ತವರಿಗೆ ಬಾಲ್ಯ ವಿವಾಹ ಮಾಡಿದರೆ ಶಿಕ್ಷೆ ಏನು ಎಂಬುದರ ಅರಿವು ಮೂಡಿಸಿ ಯುವತಿಯನ್ನು ಊರಿಗೆ ಕಳುಹಿಸಿಕೊಡಲಾಯಿತು.

ಯಾವುದೋ ಊರಿಂದ ತಪ್ಪಿಸಿಕೊಂಡು ಬರುವ ಯುವತಿಯರು ಮುಂಜಾನೆಯೇ ಮೆಜೆಸ್ಟಿಕ್‌ ತಲುಪುವುದರಿಂದ ಬಹುತೇಕ ಸಂದರ್ಭಗಳಲ್ಲಿ ಅವರು ಒಳ್ಳೆಯವರ ಕಣ್ಣಿಗೆ ಬೀಳುವ ಮೊದಲೇ ವೇಶ್ಯಾವಾಟಿಕೆ ಜಾಲದೊಳಗೆ ಸಿಲುಕಿ ಬಿಡುತ್ತಾರೆ ಎಂದು ಪ್ರತ್ಯಕ್ಷದರ್ಶಿಗಳು ‍‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮರ್ಯಾದಸ್ಥರಿಗೆ ಅವಮಾನ: ಇತ್ತೀಚೆಗೆ ಗಂಡ, ಹೆಂಡತಿ ಮತ್ತು ಮಗ ರಾತ್ರಿ 10 ಗಂಟೆಯ ಸುಮಾರಿಗೆ ಬಿಎಂಟಿಸಿ ಬಸ್‌ ನಿಲ್ದಾಣಕ್ಕೆ ಬಂದಿದ್ದರು. ಮಗ ತಿಂಡಿ ಬೇಕು ಎಂದು ಕೇಳಿದ ಎಂಬ ಕಾರಣಕ್ಕೆ ಅಲ್ಲೇ ಪಕ್ಕದಲ್ಲಿದ್ದ ಅಂಗಡಿಯಿಂದ ತಿಂಡಿ ಖರೀದಿಸಲು ಗಂಡ ಮತ್ತು ಮಗ ಹೋಗಿದ್ದರು. ಮಹಿಳೆ ಅಲ್ಲಿಂದ ಕೇವಲ 10 ಅಡಿ ದೂರದಲ್ಲಿ ನಿಂತಿದ್ದರು. ಅದೇ ಹೊತ್ತಿಗೆ ಬಂದ ಪುರುಷನೊಬ್ಬ ಆ ಮಹಿಳೆಯಲ್ಲಿ ‘ಬರ್ತೀರಾ’ ಎಂದು ಕೇಳಿದ್ದ. ಕೂಡಲೇ ಆ ಮಹಿಳೆ ತನ್ನ ಗಂಡನನ್ನು ಕರೆದರು. ಅದನ್ನು ನೋಡಿ ಅಪರಿಚಿತ ಪುರುಷ ನಾಪತ್ತೆಯಾದ. ಈ ಕುಟುಂಬವು ಪೊಲೀಸರಿಗೆ ಈ ಘಟನೆಯನ್ನು ವಿವರಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. 

ಇಂಥ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ನಿಯಂತ್ರಿಸಲು ಯಾವುದೇ ಪ್ರಯತ್ನ ಆಗುತ್ತಿಲ್ಲ. ಪೊಲೀಸ್‌ ಬೀಟ್‌ ಇದೆಯಾದರೂ ಅವರು ಸುಮ್ಮನೆ ಬಂದು ಹೋಗುತ್ತಾರೆ. ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಎಂಟಿಸಿ ನೌಕಕರರೊಬ್ಬರು ಅಸಹಾಯಕತೆ ತೋಡಿಕೊಂಡರು.

ಹಗಲು ಹೊತ್ತಿನಲ್ಲಿಯೂ ಗಿರಾಕಿಗಳನ್ನು ಕಾಯುತ್ತಾ ನಿಂತಿರುವ ದೃಶ್ಯಗಳು ಕಾಣುತ್ತದೆಯಾದರೂ ಸುಲಿಗೆಗಳು ರಾತ್ರಿಯೇ ಹೆಚ್ಚಾಗಿ ನಡೆಯುತ್ತವೆ ಎಂದು ಜನರು ದೂರಿದ್ದಾರೆ.

ಗಸ್ತು ಹೆಚ್ಚಿಸಿ
‘ಮೆಜೆಸ್ಟಿಕ್‌ನಲ್ಲಿ ಉಪ್ಪಾರಪೇಟೆ ಹೊರಠಾಣೆ ಇದೆ. ಇಲ್ಲಿ ಹಿಂದೆ ‘ಒನಕೆ ಓಬವ್ವ’ ಪಡೆ ಇತ್ತು. ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದ ಕಾರಣ ಅಕ್ರಮ ಪ್ರಕರಣಗಳು ಸ್ವಲ್ಪ ನಿಯಂತ್ರಣವಾಗಿತ್ತು. ಈಗ ಪಡೆ ನಿಸ್ತೇಜವಾಗಿದೆ. ಪೊಲೀಸರು ಗಸ್ತು ಹೆಚ್ಚು ಮಾಡಬೇಕು. ಮಫ್ತಿಯಲ್ಲಿ ತಿರುಗಾಡಬೇಕು. ಹೊಯ್ಸಳ ಚೀತಾಗಳನ್ನು ಬಳಸಿಕೊಳ್ಳಬೇಕು. ನಾವೇ ಕುಟುಂಬ ಸಹಿತ ಅಡ್ಡಾಡಲು ನಾಚಿಕೆ ಪಟ್ಟುಕೊಳ್ಳುವ ಪರಿಸ್ಥಿತಿ ಇದ್ದು ಸಬ್‌ ಇನ್‌ಸ್ಪೆಕ್ಟರ್‌ಗಳ ಸಂಖ್ಯೆ ಹೆಚ್ಚಿಸಿ ಮನಸ್ಸಿಟ್ಟು ಕೆಲಸ ಮಾಡಿದರೆ ಪರಿಸ್ಥಿತಿ ಸುಧಾರಣೆ ಮಾಡಬಹುದು’ ಎಂದು ಪೊಲೀಸರೊಬ್ಬರು ಹೇಳಿದರು.

‘ನಿಯಂತ್ರಿಸುವ ಮನಸ್ಸಿಲ್ಲ’

‘ಜೀವನಕ್ಕಾಗಿ ವೇಶ್ಯಾವಾಟಿಕೆ ಮಾಡುವ ಮಹಿಳೆಯರನ್ನು ಲಿಂಗತ್ವ ಅಲ್ಪಸಂಖ್ಯಾತರನ್ನು ದಂಡಿಸುವಂತಿಲ್ಲ. ಆದರೆ ವೇಶ್ಯಾವಾಟಿಕೆಗೆ ಸಾರ್ವಜನಿಕ ಸ್ಥಳವನ್ನು ಬಳಸಿಕೊಳ್ಳುವಂತಿಲ್ಲ. ವೇಶ್ಯಾವಾಟಿಕೆಯ ಹೆಸರಲ್ಲಿ ಸುಲಿಗೆ ಮಾಡುವಂತೆಯೂ ಇಲ್ಲ. ಪೊಲೀಸರು ಮನಸ್ಸು ಮಾಡಿದರೆ ಇದನ್ನು ನಿಯಂತ್ರಿಸುವುದು ಕಷ್ಟದ ಕೆಲಸವಲ್ಲ. ಆದರೆ ಅವರಿಗೂ ಈ ಅಕ್ರಮದ ‘ಪಾಲು’ ಸಲ್ಲುವುದರಿಂದ ನಿಯಂತ್ರಿಸುತ್ತಿಲ್ಲ’ ಎಂದು ಸಾರ್ವಜನಿಕರೊಬ್ಬರು ದೂರಿದರು.

‘ಬಾರ್‌ಗಳು ರಾತ್ರಿ 1ರಿಂದ ಬೆಳಿಗ್ಗೆ 10ರವರೆಗೆ ಮುಚ್ಚಬೇಕು. ಆದರೆ ಮೆಜೆಸ್ಟಿಕ್ ಆಸುಪಾಸಿನ ಗಲ್ಲಿಯಂಥ ಪ್ರದೇಶಗಳಲ್ಲಿ ಬಾರ್‌ಗಳು ರಾತ್ರಿಯಿಡೀ ತೆರೆದೇ ಇರುತ್ತವೆ. ಅಲ್ಲದೇ ಆಟೊಗಳಿಗೂ ವೇಶ್ಯಾವಾಟಿಕೆ ನಡೆಸುವವರಿಗೂ ಕೊಂಡಿ ಇರುತ್ತದೆ. ಇದಕ್ಕೆ ಸಂಬಂಧಿಸಿದ ಆಟೊಗಳು ಎಲ್ಲಿಂದ ಬರುತ್ತವೆ ಎಂದು ಮೇಲ್ನೋಟಕ್ಕೆ ಗೊತ್ತೇ ಆಗುವುದಿಲ್ಲ. ಆದರೆ ಗಿರಾಕಿಗಳು ಸಿಕ್ಕಿದ ಕೂಡಲೇ ಯಾವುದೇ ಕರೆ ಮಾಡದೆಯೇ ಆಟೊ ಚಾಲಕರಿಗೆ ಸಿಗ್ನಲ್‌ ಹೋಗುತ್ತದೆ. ಮೇಲ್ಸೇತುವೆಯಿಂದ ರಸ್ತೆಗೆ ಇಳಿಯುವ ಹೊತ್ತಿಗೆ ಇಲ್ಲವೇ ಬಸ್‌ ನಿಲ್ದಾಣದಿಂದ ಹೊರ ಬರುವ ಹೊತ್ತಿಗೆ ಸರಿಯಾಗಿ ಆಟೊ ಬಂದು ನಿಲ್ಲುತ್ತದೆ. ಹತ್ತಿಕೊಂಡು ಹೋಗುತ್ತಾರೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದರು.

ನಿಯಂತ್ರಣಕ್ಕೆ ಕ್ರಮ
ಸುಲಿಗೆಗೆ ಸಂಬಂಧಿಸಿದಂತೆ ಕಳೆದ ಒಂದು ವಾರದಲ್ಲಿ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಮೆಜೆಸ್ಟಿಕ್‌ ಪಾದಚಾರಿ ಮೇಲ್ಸೇತುವೆಯಲ್ಲಿ ದೀರ್ಘ ಅವಧಿ ಯಾರೂ ನಿಲ್ಲದಂತೆ ಕ್ರಮ ಕೈಗೊಳ್ಳಲಾಗಿದೆ. ಯಾರಾದರೂ ನಿಂತಿದ್ದರೆ ಮಹಿಳಾ ಪೊಲೀಸ್‌ ಸಿಬ್ಬಂದಿಯನ್ನು ಬಳಸಿ ಕಳುಹಿಸಲಾಗುತ್ತದೆ.  ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಮೆಜೆಸ್ಟಿಕ್‌ ಸುತ್ತಮುತ್ತ ಅಪರಾಧ ಪ್ರಕರಣಗಳ ತಡೆಯಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಶ್ಚಿಮ ವಿಭಾಗದ ಡಿಸಿಪಿ ಎನ್‌. ಯತೀಶ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.