
ಹೊಸ ವರ್ಷದ ಸಂಭ್ರಮಾಚರಣೆಗಾಗಿ ಹಲವರು ಜನಸಂದಣಿ ಇಲ್ಲದ ಪ್ರದೇಶಗಳಿಗೆ ವಿಶೇಷವಾಗಿ, ನೈಸರ್ಗಿಕ ತಾಣಗಳಿಗೆ ಹೋಗಲು ಯೋಚಿಸುತ್ತಾರೆ. ಆದರೆ, ಡಿಸೆಂಬರ್ 31ರಂದು ಕೆಲವು ಸ್ಥಳಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಹೊಸ ವರ್ಷದ ದಿನ ಯಾವ ಯಾವ ಸ್ಥಳಗಳಿಗೆ ನಿರ್ಬಂಧ
ನಂದಿ ಬೆಟ್ಟ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿ ಬೆಟ್ಟ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಹೊಸ ವರ್ಷದ ಹಿನ್ನಲೆ ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಂದಿ ಗಿರಿಧಾಮಕ್ಕೆ ಮುಂಗಡವಾಗಿ ಅತಿಥಿ ಕೊಠಡಿಗಳನ್ನು ಕಾಯ್ದಿರಿಸಿರುವ ಪ್ರವಾಸಿಗರನ್ನು ಹೊರತುಪಡಿಸಿ ಡಿಸೆಂಬರ್ 31 ರ ಮಧ್ಯಾಹ್ನ 2 ಗಂಟೆಯಿಂದ 2026ರ ಜನವರಿ 1 ರ ಬೆಳಗ್ಗೆ 10 ಗಂಟೆಯರವರೆಗೆ ಸಾರ್ವಜನಿಕರ, ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಈ ಪ್ರೇಕ್ಷಣೀಯ ಸ್ಥಳಗಳಿಗೆ ನಿರ್ಬಂಧ
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ, ಝರಿ ಫಾಲ್ಸ್, ಹೊನ್ನಮ್ಮನಹಳ್ಳ, ಗಾಳಿಕೆರೆ ಹಾಗೂ ಹಿರೇಕೊಳಲೆ ಕೆರೆ, ಕಾಮೇನಹಳ್ಳಿ ಗ್ರಾಮದಲ್ಲಿರುವ ಡೈಮಂಡ್ ಫಾಲ್ಸ್, ಮೂಡಿಗೆರೆ ತಾಲ್ಲೂಕು ವ್ಯಾಪ್ತಿಯ ಎತ್ತಿನಭುಜ, ದೇವರಮನೆ, ರಾಣಿಝರಿ, ಬಲ್ಲಾಳರಾಯನ ದುರ್ಗ, ಬಂಡಾಜೆ ಫಾಲ್ಸ್, ಕುಡಿಗೆ ಫಾಲ್ಸ್, ಕಳಸ ತಾಲ್ಲೂಕು ವ್ಯಾಪ್ತಿಯ ಕ್ಯಾತನಮಕ್ಕಿ, ರುದ್ರಪಾದ, ತೂಗು ಸೇತುವೆ ಮತ್ತು ಅಬ್ಬುಗುಡಿಗೆ ಫಾಲ್ಸ್, ಕಡೂರು ತಾಲ್ಲೂಕು ವ್ಯಾಪ್ತಿಯ ಅಯ್ಯನಕೆರೆ, ಮದಗದಕೆರೆ, ತರೀಕೆರೆ ತಾಲ್ಲೂಕು ವ್ಯಾಪ್ತಿಯ ಕೆಮ್ಮಣ್ಣುಗುಂಡಿ, ಕಲ್ಲತ್ತಿಗಿರಿ, ಹೆಬ್ಬೆ ಫಾಲ್ಸ್, ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹೆಚ್ಚು ಹೋಗುವುದರಿಂದ ಡಿಸೆಂಬರ್31ರ ಸಂಜೆ 6 ಗಂಟೆಯಿಂದ ಜನವರಿ1 ಬೆಳಗ್ಗೆ6 ಗಂಟೆಯರವರೆಗೆ ಈ ಸ್ಥಳಿಗಳಿಗೆ ಭೇಟಿ ನೀಡುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಆನ್ ಲೈನ್‌ನಲ್ಲಿ ಹೋಂ ಸ್ಟೇ, ರೆಸಾರ್ಟ್‌ಗಳನ್ನು ಕಾಯ್ದಿರಿಸಿದ ಪ್ರವಾಸಿಗರನ್ನು ಹೊರತುಪಡಿಸಿ ಇತರೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.