ADVERTISEMENT

ಅಮಿತ್‌ ಶಾಗೆ ರಾಜ್ಯದಲ್ಲಿ ಮತ ಕೇಳುವ ನೈತಿಕತೆ ಇಲ್ಲ: ಸಿದ್ದರಾಮಯ್ಯ ವಾಗ್ದಾಳಿ

ತವರು ಜಿಲ್ಲೆಯಲ್ಲಿ ಸಿದ್ದರಾಮಯ್ಯ ಭರದ ಪ್ರಚಾರ; ಬಿಜೆಪಿ–ಜೆಡಿಎಸ್ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 13:37 IST
Last Updated 2 ಏಪ್ರಿಲ್ 2024, 13:37 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಮೈಸೂರು: ‘ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ರಾಜ್ಯದಲ್ಲಿ ಪ್ರಚಾರ ನಡೆಸುವ ನೈತಿಕತೆ ಇಲ್ಲ. ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಂಗಳವಾರ ಇಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ ಬರ ಪರಿಹಾರ ನಿರ್ಧರಿಸುವ ಸಮಿತಿಗೆ ಅಮಿತ್‌ ಶಾ ಅವರೇ ಅಧ್ಯಕ್ಷ. ಐದು ತಿಂಗಳಾದರೂ ರಾಜ್ಯಕ್ಕೆ ಬಿಡಿಗಾಸು ಬರ ಪರಿಹಾರ ನೀಡಿಲ್ಲ. ಅವರೇನು ತಮ್ಮ ಮನೆಯಿಂದ ಪರಿಹಾರದ ಹಣ ಕೊಡುತ್ತಾರ? ಅದೇನು ನಮಗೆ ಭಿಕ್ಷೆನಾ? ಪರಿಹಾರ ನೀಡದೇ ಹೇಗೆ ಇಲ್ಲಿಗೆ ಬಂದು ಮತ ಕೇಳುತ್ತಾರೆ’ ಎಂದು ಪ್ರಶ್ನಿಸಿದರು.

ADVERTISEMENT

‘ಕುಮಾರಸ್ವಾಮಿ ಅವರೇ ಬಿಜೆಪಿಯ ದೊಡ್ಡ ವಕ್ತಾರ ಆಗಿದ್ದಾರೆ. ಕೇಂದ್ರ ಪರಿಹಾರ ಕೊಡದ್ದನ್ನೂ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರೇ ಬಿಜೆಪಿ ನಾಯಕರಿಗೆ ಇದನ್ನೆಲ್ಲ ಹೇಳಬೇಕು’ ಎಂದರು.

ಭಾವನಾತ್ಮಕವಾಗಿ ಮಾತನಾಡಿಲ್ಲ: ‘ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು 60 ಸಾವಿರ ಲೀಡ್ ಕೊಡಿ ಎಂದು ವರುಣಾ ಕ್ಷೇತ್ರದ ಜನರನ್ನು ಕೇಳಿದ್ದೇನೆ. ಭಾವನಾತ್ಮಕವಾಗಿ ಮಾತನಾಡಿಲ್ಲ’ ಎಂದರು.

‘ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ನನಗೆ 82 ವರ್ಷ ವಯಸ್ಸಾಗುತ್ತದೆ. ಆ ವಯಸ್ಸಿನಲ್ಲಿ ಉತ್ಸಾಹದಲ್ಲಿ ರಾಜಕೀಯ ಮಾಡಲು ಆಗದು. ಹೀಗಾಗಿ ನಾನು ಸ್ಪರ್ಧಿಸುವುದಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ನೀರಿನ ಸಮಸ್ಯೆ ಇಲ್ಲ: ‘ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇಲ್ಲ. ಒಂದೆರಡು ಕಡೆ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸುವಂತೆ ಸೂಚಿಸಿದ್ದೇನೆ. ಕುಡಿಯುವ ನೀರು ಪೂರೈಕೆಗೆ ಹಣದ ಕೊರತೆ ಇಲ್ಲ’ ಎಂದು ಸ್ಪಷ್ಟನೆ ನೀಡಿದರು.

ಮಂಡ್ಯದ ಸ್ಪರ್ಧೆ ದೇವರ ಇಚ್ಛೆ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ ‘ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೇ ಅವರ ಮಗ ಅಲ್ಲಿ ಸೋತಿದ್ದ. ಈ ಬಾರಿ ಮೂರು ಕ್ಷೇತ್ರದಲ್ಲೂ ಜೆಡಿಎಸ್​ನವರು ಸೋಲುತ್ತಾರೆ. ಮೈತ್ರಿ ಧರ್ಮ ಎಂದರೆ ಎಲ್ಲ ಕ್ಷೇತ್ರಕ್ಕೂ ಒಂದೇ. ಮೈಸೂರಿನಲ್ಲಿ ಚೂರಿ ಹಾಕಿ, ಈಗ ಮಂಡ್ಯದಲ್ಲಿ ನಮಗೆ ಚೂರಿ ಹಾಕಿದ್ದಾರೆ ಎಂದರೆ ಅದರಲ್ಲಿ ಯಾವ ನ್ಯಾಯ ಇದೆ?’ ಎಂದು ಪ್ರಶ್ನಿಸಿದರು. ‘ಕಳೆದ ಬಾರಿ ನಾನು ಹೋಗಿದ್ದಕ್ಕೆ ಹಾಸನದಲ್ಲಿ ಪ್ರಜ್ವಲ್ ಗೆದ್ದಿದ್ದು. ಈ ಬಾರಿಯೂ ಹಾಸನಕ್ಕೆ ಹೋಗುತ್ತೇನೆ. ಪ್ರಜ್ವಲ್​ನನ್ನು ಸೋಲಿಸುತ್ತೇನೆ’ ಎಂದರು.

ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ‘ಬಿಜೆಪಿ ಕೋಮುವಾದಿ ಪಕ್ಷ ಎಂದು ದೇವೇಗೌಡರೇ ಹೇಳಿದ್ದರು. ಈಗ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಜೆಡಿಎಸ್‌ನಿಂದ ‘ಎಸ್’ ತೆಗೆಯಿರಿ ಎಂದಿದ್ದಕ್ಕೆ ನನ್ನ ಗರ್ವ ಭಂಗ ಮಾಡುತ್ತೇನೆ ಎಂದಿದ್ದಾರೆ. ಆದರೆ ನನಗೆ ಗರ್ವವೇ ಇಲ್ಲ’ ಎಂದರು.

‘ನಾನು ದೇವೇಗೌಡರ ನಿರ್ಣಯಗಳಿಗೆ ವಿರುದ್ಧವಾಗಿ ಇದ್ದೇನೆಯೇ ಹೊರತು ವೈಯಕ್ತಿಕವಾಗಿ ಅವರ ವಿರುದ್ಧವಲ್ಲ’ ಎಂದು ಸಮಜಾಯಿಷಿ ನೀಡಿದರು.

ಮಿಂಚಿನ ಪ್ರಚಾರ: ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್‌ ಪರ ಸಿದ್ದರಾಮಯ್ಯ ಮಂಗಳವಾರ ದಿನವಿಡೀ ಬಿರುಸಿನ ಪ್ರಚಾರ ನಡೆಸಿದರು. ಬೆಳಿಗ್ಗೆ ತಮ್ಮ ನಿವಾಸದಲ್ಲಿ ಮುಖಂಡರ ಜೊತೆ ಸಭೆ ನಡೆಸಿದ ಅವರು, ನಂತರ ಅಗ್ರಹಾರದ ಶಂಕರ ಮಠಕ್ಕೆ ಭೇಟಿ ನೀಡಿದರು. ಚಾಮರಾಜ ಕ್ಷೇತ್ರದಲ್ಲಿ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡರು. ಮಧ್ಯಾಹ್ನ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರ ಸಹೋದರ ರಾಮಸ್ವಾಮಿ ಹಾಗೂ ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಸಂಜೆ ಖಾಸಗಿ ಹೋಟೆಲ್‌ನಲ್ಲಿ ಪಕ್ಷದ ನಾಯಕರ ಜೊತೆಗೂಡಿ ಸಭೆಯಲ್ಲಿ ಚುನಾವಣಾ ತಂತ್ರಗಳ ಕುರಿತು ಚರ್ಚಿಸಿದರು.

ನಾವು ಬಿಜೆಪಿ ಥರ ಕೊಟ್ಟ ಮಾತಿಗೆ ತಪ್ಪುವವರಲ್ಲ. ಕಾಂಗ್ರೆಸ್ ಸರ್ಕಾರದ ಐದು ವರ್ಷವೂ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.