ADVERTISEMENT

‘ಪೀಕಬೂ’ದಲ್ಲಿ ನಟಿ ಅಮೂಲ್ಯಗೆ ಜೋಡಿಯಾದ ಜನಪ್ರಿಯ ಧಾರಾವಾಹಿಯ ನಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜನವರಿ 2026, 13:09 IST
Last Updated 15 ಜನವರಿ 2026, 13:09 IST
   

‘ಪೀಕಬೂ’ ಚಿತ್ರದಲ್ಲಿ ಅಮೂಲ್ಯ ಅವರು ನಾಯಕಿಯಾಗಿ ನಟಿಸುತ್ತಿರುವ ಬಗ್ಗೆ ಚಿತ್ರತಂಡ ಕೆಲವು ತಿಂಗಳ ಹಿಂದೆ ಖಚಿತಪಡಿಸಿತ್ತು. ಆದರೆ ಈ ಚಿತ್ರದ ನಾಯಕನ ಬಗ್ಗೆ ಎಲ್ಲೂ ಹೇಳಿರಲಿಲ್ಲ. ಈಗ ಈ ಚಿತ್ರದ ನಾಯಕನನ್ನು ಪರಿಚಯಿಸಲಾಗಿದೆ.

‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಖ್ಯಾತಿಯ ಶ್ರೀರಾಮ್ ಅವರು ನಾಯಕನಾಗಿ ನಟಿಸುತ್ತಿದ್ದಾರೆ. ಈ ಬಗ್ಗೆ  ಕೆಂಚಾಂಬ ಫಿಲ್ಮ್ಸ್ ಪ್ರೊಡಕ್ಷನ್ಸ್ ಸಂಸ್ಥೆ ಸಾಮಾಜಿಕ ಮಾಧ್ಯಮದಲ್ಲಿ ‘ನಾಯಕನ ಅನಾವರಣ ಟೀಸರ್’ ಎಂದು ಬರೆದುಕೊಂಡು ವಿಡಿಯೊ ಹಂಚಿಕೊಂಡಿದೆ.

ಈ ವಿಡಿಯೊದಲ್ಲಿ  ಅಮೂಲ್ಯ ಅವರು ಈ ಹಿಂದೆ ಚಂದವನದ ತಾರೆಯರಾದ ಗಣೇಶ್, ಯಶ್, ಅಜಯ್, ದುನಿಯಾ ವಿಜಯ್ ಸೇರಿ ಅನೇಕ ನಟರ ಜೊತೆ ನಟಿಸಿದ್ದ ಚಿತ್ರಗಳ ಸಣ್ಣ ತುಣುಕುಗಳನ್ನು ಚಿತ್ರತಂಡ ಹಂಚಿಕೊಂಡಿದೆ. ಆದರೆ ‘ಪೀಕಬೂ’ ಚಿತ್ರದಲ್ಲಿ ಈ ನಟರು ಇರುವುದಿಲ್ಲ. ಅದರ ಬದಲಾಗಿ ಶ್ರೀರಾಮ್ ಅವರು ನಟಿಸುತ್ತಿದ್ದಾರೆಂದು ಚಿತ್ರತಂಡ ನಾಯಕನ ಪರಿಚಯ ಮಾಡಿದೆ.

ADVERTISEMENT

ಈ ಚಿತ್ರಕ್ಕೆ ಮಂಜು ಸ್ವರಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಗಣೇಶ್ ಕೆಂಚಾಂಬಾ ಬಂಡವಾಳ ಹೂಡಿದ್ದಾರೆ.

ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದವರು ಅಮೂಲ್ಯ, ‘ಚೆಲುವಿನ ಚಿತ್ತಾರ’ ಚಿತ್ರದ ಮೂಲಕ ಮೊದಲು ನಾಯಕಿಯಾಗಿ ಕಾಣಿಸಿಕೊಂಡರು. ಬಳಿಕ ‘ಮಳೆಯಲಿ ಜೊತೆಯಲಿ’, ‘ಗಜಕೇಸರಿ’, ‘ಶ್ರಾವಣಿ ಸುಬ್ರಮಣ್ಯ’ ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಎಂಟು ವರ್ಷದ ವಿರಾಮದ ಬಳಿಕ ಅಮೂಲ್ಯ ಅವರು  ‘ಪೀಕಬೂ’ ಚಿತ್ರದ ಮೂಲಕ ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.