'ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ'
‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮೂರನೇ ಆವೃತ್ತಿಯ ಸಮಾರಂಭ ಜೂನ್ 27ರಂದು ನಡೆಯಲಿದೆ. 19 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಹೆಸರುಗಳನ್ನು, ನಾಮನಿರ್ದೇಶನಗೊಂಡ ಸಿನಿಮಾಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದೀಗ ‘ಅತ್ಯುತ್ತಮ ನಟಿ’ ವಿಭಾಗದಲ್ಲಿ ನಾಮನಿರ್ದೇಶನಗೊಂಡವರನ್ನು ಪರಿಚಯಿಸುವ ಸಮಯ.
ಶರಣಮ್ಮ ಚೆಟ್ಟಿ
ಶರಣಮ್ಮ ಚೆಟ್ಟಿ
‘ಶಿವಮ್ಮ ಯರೇಹಂಚಿನಾಳ’ ಸಿನಿಮಾದಲ್ಲಿನ ನಟನೆಗಾಗಿ ಇವರು ನಾಮನಿರ್ದೇಶನಗೊಂಡಿದ್ದಾರೆ. ನಟ ರಿಷಬ್ ಶೆಟ್ಟಿ ನಿರ್ಮಾಣದ, ಜೈಶಂಕರ್ ಆರ್ಯರ್ ನಿರ್ದೇಶನದ ಚಿತ್ರವಿದು. ಮೂಲತಃ ಕೊಪ್ಪಳದ ಯರೇಹಂಚಿನಾಳ ಗ್ರಾಮದವರಾದ ಶರಣಮ್ಮ ಹೊಲ–ಮನೆ ಕೆಲಸ ಮಾಡಿಕೊಂಡು ಇರುವವರು. ನಟನೆಯ ಯಾವ ಅನುಭವವೂ ಇಲ್ಲದ ಇವರಿಗೆ ತರಬೇತಿ ನೀಡಿ ಸಿನಿಮಾಗೆ ಸಜ್ಜುಗೊಳಿಸಿದವರು ಅದೇ ಊರಿನ ಜೈಶಂಕರ್. ಸೊಗಸಾಗಿ ಮಾತನಾಡುವ ಕಲೆ ಹೊಂದಿರುವ ಶರಣಮ್ಮ ಅವರಲ್ಲಿ ನಾಯಕತ್ವದ ಗುಣವಿದೆ. ಊರಿನಲ್ಲಿ ‘ಶಿವಮ್ಮ’ನ ಪಾತ್ರಕ್ಕೆ ಯಾರನ್ನೇ ಕೇಳಿದರೂ ಜನ ಶರಣಮ್ಮ ಅವರತ್ತ ಬೊಟ್ಟು ಮಾಡುತ್ತಿದ್ದರು. ಹೀಗೆ ಶರಣಮ್ಮ ಅವರಲ್ಲಿ ಜೈಶಂಕರ್ ‘ಶಿವಮ್ಮ’ನನ್ನು ಕಂಡರು.
****
ಸ್ವತಿಷ್ಠ ಕೃಷ್ಣನ್
ಸ್ವತಿಷ್ಠ ಕೃಷ್ಣನ್
‘ಒಂದು ಸರಳ ಪ್ರೇಮಕಥೆ’ ಸಿನಿಮಾದಲ್ಲಿನ ನಟನೆಗಾಗಿ ಇವರು ನಾಮನಿರ್ದೇಶನಗೊಂಡಿದ್ದಾರೆ. ಚೆನ್ನೈನಲ್ಲಿ ಹುಟ್ಟಿ ಬೆಳೆದ ಇವರು ಪತ್ರಕರ್ತೆಯಾಗಿ ಕೆಲಸ ಮಾಡಿದ ಅನುಭವವಿರುವವರು. ಇವರ ಪೋಷಕರು ಕರ್ನಾಟಕ ಮೂಲದವರು. ತಮಿಳಿನಲ್ಲಿ ನಾಲ್ಕೈದು ಸಿನಿಮಾಗಳನ್ನು ಮಾಡಿದ್ದ ಇವರಿಗೆ ಸಿನಿಪಯಣದಲ್ಲಿ ದೊಡ್ಡ ತಿರುವು ನೀಡಿದ್ದು ಕಮಲ್ ಹಾಸನ್ ನಟನೆಯ ಹಿಟ್ ಸಿನಿಮಾ ‘ವಿಕ್ರಮ್’. ಸಿಂಪಲ್ ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮ ಕಥೆ’ ಇವರ ಚೊಚ್ಚಲ ಕನ್ನಡ ಸಿನಿಮಾ. ಈ ಸಿನಿಮಾದಲ್ಲಿ ಗಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡ ಸ್ವತಿಷ್ಠ ತಮ್ಮ ನಟನೆಯಿಂದ ಗಮನಸೆಳೆದಿದ್ದರು. ಮ್ಯೂಸಿಕಲ್ ಲವ್‌ಸ್ಟೋರಿ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು.
****
ಅಂಕಿತಾ ಅಮರ್
ಅಂಕಿತಾ ಅಮರ್
‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದಲ್ಲಿನ ನಟನೆಗಾಗಿ ಇವರು ನಾಮನಿರ್ದೇಶನಗೊಂಡಿದ್ದಾರೆ. ಮೈಸೂರು ಮೂಲದ ಇವರು ಕಿರುತೆರೆ ಮೂಲಕ ಬೆಳ್ಳಿತೆರೆಗೆ ಹೆಜ್ಜೆ ಇಟ್ಟವರು. ‘ತುಂಟ’ ಸಿನಿಮಾದಲ್ಲಿ ಬಾಲನಟಿಯಾಗಿ, ‘ಪುಟ್ಟಗೌರಿ ಮದುವೆ’ ಧಾರಾವಾಹಿಯ ಮೂಲಕ ಕಿರುತೆರೆಗೆ ಬಂದವರು. ‘ನಮ್ಮನೆ ಯುವರಾಣಿ’ ಇವರ ಬಣ್ಣದ ಬದುಕಿಗೆ ತಿರುವು ನೀಡಿದ ಧಾರಾವಾಹಿ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ರಿಯಾಲಿಟಿ ಶೋ ನಿರೂಪಕಿಯಾಗಿಯೂ ಇವರು ಕಾರ್ಯನಿರ್ವಹಿಸಿದ್ದಾರೆ. ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ಮೂಲಕ ಕಮರ್ಷಿಯಲ್ ಸಿನಿಪಯಣ ಆರಂಭಿಸಿದ ಇವರು ಚೊಚ್ಚಲ ಚಿತ್ರದಲ್ಲೇ ತಮ್ಮ ನಟನೆಯಿಂದ ಪ್ರೇಕ್ಷಕರ ಮೆಚ್ಚುಗೆ ಪಡೆದವರು. ಇವರ ಸಿನಿಬ್ಯಾಂಕ್‌ನಲ್ಲಿ ‘ಜಸ್ಟ್ ಮ್ಯಾರೀಡ್’, ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಹಾಗೂ ‘ಭಾರ್ಗವ’ ಸಿನಿಮಾವಿದೆ.
****
ರೋಶಿನಿ ಪ್ರಕಾಶ್
ರೋಶಿನಿ ಪ್ರಕಾ
‘ಮರ್ಫಿ’ ಚಿತ್ರದಲ್ಲಿನ ನಟನೆಗಾಗಿ ಇವರು ನಾಮನಿರ್ದೇಶನಗೊಂಡಿದ್ದಾರೆ. ಮೈಸೂರಿನ ಇವರು ಎಂಜಿನಿಯರಿಂಗ್ ಪದವೀಧರೆ. 2016ರಲ್ಲಿ ತೆರೆಕಂಡ ‘ಸಪ್ತಗಿರಿ ಎಕ್ಸ್‌ಪ್ರೆಸ್’ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟರು. ಇವರ ಎರಡನೇ ಸಿನಿಮಾ ನೀನಾಸಂ ಸತೀಶ್ ನಾಯಕರಾಗಿ ನಟಿಸಿದ್ದ ‘ಟೈಗರ್ ಗಲ್ಲಿ’. ರೋಶಿನಿ ಅವರ ಸಿನಿಪಯಣಕ್ಕೆ ತಿರುವು ನೀಡಿದ್ದು ಹೇಮಂತ್ ಎಂ.ರಾವ್ ನಿರ್ದೇಶನದ ‘ಕವಲುದಾರಿ’. ಟೈಂ ಟ್ರಾವೆಲಿಂಗ್ ಪ್ರೇಮಕಥೆಯ ‘ಮರ್ಫಿ’ಯಲ್ಲಿ ಜನನಿ ಎಂಬ ಪಾತ್ರದಲ್ಲಿ ಇವರು ನಟಿಸಿದ್ದರು. ಕನ್ನಡದಲ್ಲಷ್ಟೇ ಅಲ್ಲದೆ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲೂ ಇವರು ಸಕ್ರಿಯರಾಗಿದ್ದಾರೆ
****
ನಿಶಾ ರವಿಕೃಷ್ಣನ್
ನಿಶಾ ರವಿಕೃಷ್ಣನ್
‘ಅಂಶು’ ಚಿತ್ರದಲ್ಲಿನ ನಟನೆಗಾಗಿ ಇವರು ನಾಮನಿರ್ದೇಶನಗೊಂಡಿದ್ದಾರೆ. ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿ ಮನರಂಜನೆ ಕ್ಷೇತ್ರಕ್ಕೆ ಕಾಲಿಟ್ಟ ಇವರು ಗುರುತಿಸಿಕೊಂಡಿದ್ದು ಕಿರುತೆರೆಯಿಂದ. 2018ರಲ್ಲಿ ‘ಸರ್ವಮಂಗಳ ಮಾಂಗಲ್ಯ’ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಬಳಿಕ ‘ಗಟ್ಟಿಮೇಳ’ ಧಾರಾವಾಹಿ ಇವರಿಗೆ ಜನಪ್ರಿಯತೆ ತಂದುಕೊಟ್ಟಿತು. ಸದ್ಯ ‘ಅಣ್ಣಯ್ಯ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ‘ಅಂದೊಂದಿತ್ತು ಕಾಲ’ ಇವರ ನಟನೆಯ ಮೊದಲ ಚಿತ್ರ. ಇದು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
****
ಮಹಾಲಕ್ಷ್ಮಿ ಟಿ.ಆರ್.
ಮಹಾಲಕ್ಷ್ಮಿ ಟಿ.ಆರ್.
‘ಕುಬುಸ’ ಚಿತ್ರದಲ್ಲಿನ ನಟನೆಗಾಗಿ ಇವರು ನಾಮನಿರ್ದೇಶನಗೊಂಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಭರತನಾಟ್ಯ ಕಲಾವಿದೆಯಾಗಿರುವ ಇವರು ಪಾಶ್ಚಾತ್ಯ ಶೈಲಿಯ ನೃತ್ಯಗಾರ್ತಿ ಕೂಡ. ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪೂರೈಸಿದ್ದಾರೆ. ಯಕ್ಷಗಾನ, ಮೋಹಿನಿಯಾಟ್ಟಂ ಮುಂತಾದ ನೃತ್ಯ ಪ್ರಕಾರಗಳನ್ನು ಕಲಿತಿದ್ದಾರೆ. 2010 ರಿಂದ ರಂಗಭೂಮಿಯಲ್ಲಿ ಸಕ್ರಿಯ. ‘ರಾಗ ಭೈರವಿ’ ಚಿತ್ರದಿಂದ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಇವರು ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತೆಲುಗು, ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ.
****
ಮಮತಾ ರಾಹುತ್
ಮಮತಾ ರಾಹುತ್
‘ತಾರಿಣಿ’ ಚಿತ್ರಕ್ಕಾಗಿ ಇವರು ನಾಮನಿರ್ದೇಶನಗೊಂಡಿದ್ದಾರೆ. ಇವರು ಏಳು ತಿಂಗಳ ಗರ್ಭಿಣಿಯಾಗಿರುವಾಗ ನಟಿಸಿರುವ ಈ ಸಿನಿಮಾವಿದು. ಭ್ರೂಣ ಹತ್ಯೆ ಕುರಿತು ಸಂದೇಶ ಸಾರುವ ಪಾತ್ರ ನಿಭಾಯಿಸಿದ್ದಾರೆ. 2005ರಲ್ಲಿ ಮಕ್ಕಳ ಸಿನಿಮಾ ಮೂಲಕ ಚಿತ್ರೋದ್ಯಮಕ್ಕೆ ಬಂದ ಇವರು ಹಾಸ್ಯನಟಿಯಾಗಿ ಗುರುತಿಸಿಕೊಂಡರು. ‘ಗಂಗೆ ಬಾರೆ ತುಂಗೆ ಬಾರೆ’ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಕನ್ನಡದ ಪ್ರಮುಖ ಹಾಸ್ಯ ನಟರ ಜತೆ ನಟಿಸಿದ್ದಾರೆ. ‘ಕಾಲಿಂಗ್ ಬೆಲ್’ ಎಂಬ ತೆಲುಗು ಸಿನಿಮಾ ಮೂಲಕ ನಾಯಕಿಯಾದರು. ‘ಗೂಳಿಹಟ್ಟಿ’, ‘ಅಪ್ಸರೆ’ ಮೊದಲಾದ ಕನ್ನಡ ಸಿನಿಮಾಗಳಲ್ಲಿಯೂ ನಾಯಕಿಯಾಗಿ ಕಾಣಿಸಿಕೊಂಡರು. ಸದ್ಯ ಇವರ ‘ಮುರುಗ ಸನ್ ಆಫ್ ಕಾನೂನು’ ಚಿತ್ರ ಬಿಡುಗಡೆಗೆ ಸಿದ್ಧವಿದೆ.
****
'ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ'
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.