ADVERTISEMENT

ಕನ್ನಡದ ಹಿರಿಯ ನಟಿ, ಬಹುಭಾಷಾ ತಾರೆ ಬಿ. ಸರೋಜಾ ದೇವಿ ನಿಧನ

ತಮಿಳುನಾಡಿನಲ್ಲಿ ‘ಕನ್ನಡದ ಅರಗಿಣಿ’, ಕನ್ನಡದಲ್ಲಿ ‘ಲೇಡಿ ಸೂಪರ್‌ಸ್ಟಾರ್‌’

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 5:25 IST
Last Updated 14 ಜುಲೈ 2025, 5:25 IST
<div class="paragraphs"><p>ಸರೋಜಾದೇವಿ ಅವರು ವಯೋಸಹಜ ಅನಾರೋಗ್ಯದಿಂದಾಗಿ ಸೋಮವಾರ ಮಲ್ಲೇಶ್ವರದ‌ ಸ್ವಗೃಹದಲ್ಲಿ ನಿಧನರಾದರು.</p></div>

ಸರೋಜಾದೇವಿ ಅವರು ವಯೋಸಹಜ ಅನಾರೋಗ್ಯದಿಂದಾಗಿ ಸೋಮವಾರ ಮಲ್ಲೇಶ್ವರದ‌ ಸ್ವಗೃಹದಲ್ಲಿ ನಿಧನರಾದರು.

   

ಬೆಂಗಳೂರು: ಬಹುಭಾಷಾ ನಟಿ ಬಿ. ಸರೋಜಾದೇವಿ(87) ಅವರು ವಯೋಸಹಜ ಅನಾರೋಗ್ಯದಿಂದಾಗಿ ಸೋಮವಾರ ಮಲ್ಲೇಶ್ವರದ‌ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಪಾರ್ಥಿವಶರೀರವನ್ನು ನಾಳೆ ಬೆಳಿಗ್ಗೆವರೆಗೆ ಮಲ್ಲೇಶ್ವರದಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ನಾಳೆ 11.30ಕ್ಕೆ ಹುಟ್ಟೂರು ಚನ್ನಪಟ್ಟಣ ತಾಲ್ಲೂಕಿನ ದಶಾವರದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಪುತ್ರ ಗೌತಮ್ ತಿಳಿಸಿದ್ದಾರೆ.

ADVERTISEMENT

ಜಗ್ಗೇಶ್, ಉಪೇಂದ್ರ, ಯೋಗರಾಜ ಭಟ್ ಸೇರಿದಂತೆ ಹಲವು ನಟ ನಟಿಯರು ವಿರೋಧಪಕ್ಷದ ನಾಯಕ ಆರ್. ಅಶೋಕ, ಸಂಸದ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ರಾಜಕೀಯ ನಾಯಕರು ಸರೋಜಾದೇವಿ ಅವರ ಅಂತಿಮ ದರ್ಶನ ಪಡೆದರು.

ಸರೋಜಾ ದೇವಿ ಜನಿಸಿದ್ದು 1938ರ ಜನವರಿ 7ರಂದು, ಬೆಂಗಳೂರಿನಲ್ಲಿ. ತಂದೆ ಬೈರಪ್ಪ, ಪೊಲೀಸ್ ಅಧಿಕಾರಿಯಾಗಿದ್ದರು. ತಾಯಿ ರುದ್ರಮ್ಮ. 14ನೇ ವಯಸ್ಸಿಗೆ ಸಿನಿಮಾ ರಂಗ ಪ್ರವೇಶ. ಮಹಾಕವಿ ಕಾಳಿದಾಸ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.

ಆರೂವರೆ ದಶಕಗಳು ಚಿತ್ರರಂಗದಲ್ಲಿ‌ ಕ್ರಿಯಾಶೀಲರಾಗಿದ್ದ ಸರೋಜಾದೇವಿ ಅವರು, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

1955ರಲ್ಲಿ ಮಹಾಕವಿ ಕಾಳಿದಾಸ ಮೊದಲ ಚಿತ್ರ, 2019ರಲ್ಲಿ ಬಿಡುಗಡೆಯಾದ ಪುನೀತ್ ರಾಜ್ಕುಮಾರ್ ನಟನೆಯ ‘ನಟಸಾರ್ವಭೌಮ’ ಅವರು ನಟಿಸಿದ ಕೊನೆಯ ಚಿತ್ರ.

'ಕಿತ್ತೂರು ಚೆನ್ನಮ್ಮ, 'ಅಣ್ಣಾ ತಮ್ಮ', 'ಭಕ್ತ ಕನಕದಾಸ', 'ಬಾಳೇ ಬಂಗಾರ', 'ನಾಗಕನ್ಯ', 'ಬೆಟ್ಟದ ಹೂವು', 'ಕಸ್ತೂರಿ ನಿವಾಸ', 'ಬಬ್ರುವಾಹನ, ಕಥಾಸಂಗಮ, 'ಅಮರ ಶಿಲ್ಪಿ ಜಕಣಾಚಾರಿ', 'ಮಲ್ಲಮ್ಮನ ಪವಾಡ' ಅಗ್ನಿ ಐ.ಪಿ.ಎಸ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು.

'ನಾಡೋಡಿ ಮನ್ನನ್', 'ಕರ್ಪೂರ ಕರ'ಸಿ, 'ತಿರುಮಣಂ', 'ಪಾಟ್ಟಾಲಿ ಮುತ್ತು', 'ಪಡಿಕಥ ಮೇಥೈ', 'ಕಲ್ಯಾಣ ಪರಿಸು', ಮುಂತಾದ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದರು.

'ಪಾಂಡುರಂಗ ಮಹಾತ್ಯಂ', 'ಭೂಕೈಲಾಸ್, 'ಪೆಲ್ಲಿ ಸಂದಡಿ' 'ಪಂಡರಿ ಭಕ್ತಲು', 'ದಕ್ಷಯಜ್ಞಂ' ಮುಂತಾದ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರು.

ದಿಲೀಪ್ ಕುಮಾರ್ ಅವರ 'ಪೈಗಮ್', 'ಆಶಾ', 'ಮೆಹಂದಿ ಲಗಾ ಕೆ ರಖನಾ' ಮುಂತಾದ ಹಿಂದಿ ಚಿತ್ರದಲ್ಲಿ ಸರೋಜಾ ದೇವಿ ನಟಿಸಿದ್ದರು.

ತಮಿಳುನಾಡಿನಲ್ಲಿ ಕನ್ನಡದ ಅರಗಿಣಿ’ ಎಂದೇ ಖ್ಯಾತಿ ಪಡೆದಿದ್ದರು. ಕನ್ನಡ ಚಿತ್ರರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಎಂದು ಖ್ಯಾತಿ ಗಳಿಸಿದ್ದರು.

ಪ್ರಶಸ್ತಿ– ಗೌರವಗಳು

ಆರು ದಶಕಗಳಲ್ಲಿನ ಸಿನಿಮಾ ಪಯಣದಲ್ಲಿ ಬಿ.ಸರೋಜಾದೇವಿ ಅವರಿಗೆ ಹಲವು ಗೌರವಗಳು ಸಂದಿವೆ. 1965ರಲ್ಲಿ ಅಭಿನಯ ಸರಸ್ವತಿ ಗೌರವ, 1969ರಲ್ಲಿ ಪದ್ಮಶ್ರೀ, 1992ರಲ್ಲಿ ಪದ್ಮಭೂಷಣ, 1988ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2006ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಲಾಗಿದೆ.

ಕರ್ನಾಟಕ ಸರ್ಕಾರದಿಂದ ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ, ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಜೀವಮಾನ ಸಾಧನೆ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.