‘ಕಾಂತಾರ ಅಧ್ಯಾಯ–1‘ ಚಿತ್ರ ತಂಡದ ನಾಯಕರು, ನಿರ್ದೇಶಕರು ಆದ ರಿಷಬ್ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಕಠಿಣ ಪರಿಶ್ರಮ, ದಯೆ ಮತ್ತು ಛಲ ಈ ಚಿತ್ರವನ್ನು ವಿಶೇಷವಾಗಿಸಿದೆ‘ ಎಂದು ನಟಿ ರುಕ್ಮಿಣಿ ವಸಂತ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ಒಂದು ವರ್ಷದ ಹಿಂದೆ, ಕನ್ನಡದ ಹೆಮ್ಮೆ ಎನಿಸಿರುವ, ‘ಕಾಂತಾರ ಚಾಪ್ಟರ್–1‘ ತಂಡ ಸೇರೋ ಅವಕಾಶ ನನಗೆ ಸಿಕ್ಕಿತು. ಈ ಚಿತ್ರದಲ್ಲಿ ಕೆಲಸ ಮಾಡುವುದು ಒಂದು ದೊಡ್ಡ ಜವಾಬ್ದಾರಿ, ಸಾಹಸವೂ ಆಗಿತ್ತು. ಈ ಸಿನಿಮಾ ನನ್ನ ಜೀವನವನ್ನೇ ಬದಲಾಯಿಸಿದೆ. ಚಿತ್ರತಂಡದಲ್ಲಿ ನಾನು ತುಂಬಾ ಕಲಿತಿದ್ದೀನಿ ಮತ್ತು ಅದಕ್ಕಾಗಿ ನಾನು ಬಹಳ ಕೃತಜ್ಞಳಾಗಿದ್ದೇನೆ ಎಂದು ಸಿನಿಮಾದಲ್ಲಿ ಕನಕವತಿ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ರುಕ್ಮಿಣಿ ವಸಂತ್ ಅವರು ಹೇಳಿದ್ದಾರೆ.
ಹೊಂಬಾಳೆ ತಂಡ, ನನ್ನನ್ನು ನಿಮ್ಮ ಕುಟುಂಬದಲ್ಲಿ ಒಬ್ಬಳನ್ನಾಗಿಸಿಕೊಂಡಿದ್ದೀರಿ. ನಿಮಗೆ ನಾನು ಸದಾ ಚಿರಋಣಿ. ವಿಜಯ್ ಸರ್, ಚಲುವೆ ಸರ್, ಆದರ್ಶ್ ಹಾಗೂ ತೆರೆಮರೆಯಲ್ಲಿರುವ ಎಲ್ಲರಿಗೂ ಹಾಗೂ ನಾನು ಭೇಟಿಯಾಗಲು ಸಾಧ್ಯವಾಗದ ತಂಡದ ಇತರರಿಗೂ ಧನ್ಯವಾದಗಳು ಎಂದಿದ್ದಾರೆ.
ಸಿನಿಮಾದಲ್ಲಿ ನಾನು ಸುಂದರವಾಗಿ ಕಾಣಲು ಸೂಪರ್ ಕೂಲ್ ಕ್ಯಾಮೆರಮ್ಯಾನ್ ಅರವಿಂದ್ ಹಾಗೂ ಅತ್ಯಅದ್ಭುತ ವಸ್ತ್ರ ವಿನ್ಯಾಸಕರಾದ ಪ್ರಗತಿ ಶೆಟ್ಟಿ ಅವರು ಕಾರಣ. ಕಾಂತಾರದ ಅತ್ಯದ್ಭುತ ಲೋಕ ಸೃಷ್ಠಿ ಮಾಡಿದ ಕಲಾ ನಿರ್ದೇಶಕರಾದ ಬಾಂಗ್ಲಾನ್, ರೋಮಾಂಚನಕಾರಿ ಸಂಗೀತ ನೀಡಿದ ಅಜನೀಶ್ ಸರ್‌ಗೆ, ನಿರ್ದೇಶನ ತಂಡದವರಿಗೆ, ನೃತ್ಯ ಸಂಯೋಜಕರು ಭೂಷಣ್ ಮಾಸ್ಟರ್, ಫೈಟ್ ಮಾಸ್ಟರ್ಸ್ ಆದ ಜೂಜಿ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸೇರಿದಂತೆ ಎಲ್ಲರಿಗೂ ಧನ್ಯವಾದಗಳು ಎಂದು ನಟಿ ಬರೆದು ಕೊಂಡಿದ್ದಾರೆ.
ಶುಚಿಯಾದ ರುಚಿಕರವಾದ ಆಹಾರ ನೀಡಿದ ಕೇಟರಿಂಗ್, ಬಿಸಿಲಿರಲಿ ಮಳೆಯಿರಲಿ ನನ್ನನ್ನು ಹೊಳೆಯುವಂತೆ ಮಾಡಿದ ಹೇರ್ ಅಂಡ್ ಮೇಕಪ್ ತಂಡಕ್ಕೆ ಹಾಗೂ ವಿಶೇಷವಾಗಿ ನನ್ನನ್ನು ಹರಸಿ ಹುರಿದುಂಬಿಸುತ್ತಿರುವ ಎಲ್ಲಾ ಕನ್ನಡ ಚಲನಚಿತ್ರ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದಗಳು ಎಂದು ರುಕ್ಮಿಣಿ ವಸಂತ್ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.