ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ
ಬೆಂಗಳೂರು: ಕಾಂತಾರ ಚಿತ್ರದ ಮೂಲಕ ಅದ್ಭುತ ಯಶಸ್ಸು ಸಾಧಿಸಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ನಟನೆಯಿಂದ ಎಲ್ಲರ ಮನ ಗೆದ್ದಿದ್ದಾರೆ. ಜತೆಗೆ ಉತ್ತಮ ನಟರಾಗಿಯೂ ಗುರುತಿಸಿಕೊಂಡಿದ್ದಾರೆ. 2022ರಲ್ಲಿ ತೆರೆಕಂಡ ಕಾಂತಾರ ಚಿತ್ರವು ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಒಂದಾಗಿತ್ತು.
ಕಾಂತಾರ ಚಿತ್ರ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಇದರೊಂದಿಗೆ ರಿಷಬ್ ಶೆಟ್ಟಿ ಅವರಿಗೆ ವಿಶ್ವಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟಿತ್ತು.
ನಿನ್ನೆ (ಜುಲೈ 7) ರಿಷಬ್ ಹುಟ್ಟುಹಬ್ಬದಂದು ಪತ್ನಿ, ವಸ್ತ್ರ ವಿನ್ಯಾಸಕಿ ಪ್ರಗತಿ ಶೆಟ್ಟಿ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು, ಇದೀಗ ಈ ಪೋಸ್ಟ್ ಗಮನ ಸೆಳೆದಿದೆ.
'ತಮ್ಮ ಮುದ್ದಾದ ಮಕ್ಕಳಾದ ರಣವಿತ್ ಮತ್ತು ರಾಧ್ಯಾ ಅವರೊಂದಿಗೆ ಫೋಟೊ ಹಂಚಿಕೊಂಡಿರುವ ಪ್ರಗತಿ, ನನ್ನ ಶಕ್ತಿ, ನನ್ನ ಶಾಂತತೆ ಮತ್ತು ನನ್ನ ಸ್ಫೂರ್ತಿಯ ಚಿಲುಮೆಗೆ ಹುಟ್ಟುಹಬ್ಬದ ಶುಭಾಶಯಗಳು. ತಂದೆಯಾಗಿ, ಗಂಡನಾಗಿ, ನಟನಾಗಿ, ಮಗನಾಗಿ, ನಿರ್ದೇಶಕನಾಗಿ ಹೀಗೆ ಅನೇಕ ಜವಾಬ್ದಾರಿಯನ್ನು ನಿರ್ವಹಿಸುತ್ತೀರಿ. ಸದಾ ನೀವು ನನ್ನ ಮೊದಲ ವ್ಯಕ್ತಿಯೇ ಆಗಿರುತ್ತೀರಿ. ಒಬ್ಬ ಅದ್ಭುತ ತಂದೆಯಾಗಿ ನೀವು ಮಕ್ಕಳನ್ನು ನೋಡಿಕೊಳ್ಳುವ ರೀತಿ ಹೆಮ್ಮೆಪಡುವಂತೆ ಮಾಡುತ್ತದೆ. ನಾನು ಸದಾ ನಿಮ್ಮ ಪ್ರಯಾಣದಲ್ಲಿ ನಿಮ್ಮ ಜತೆಗೆ ಹೆಜ್ಜೆ ಹಾಕಲು ಕೃತಜ್ಞಳಾಗಿದ್ದೇನೆ' ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ರಿಷಬ್ ಶೆಟ್ಟಿ ಹುಟ್ಟುಹಬ್ಬದಂದು ಕಾಂತಾರ ಅಧ್ಯಾಯ–1 ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದ ಚಿತ್ರತಂಡ ಅಕ್ಟೋಬರ್ 2ರಂದು ತೆರೆ ಮೇಲೆ ಬರಲಿದೆ ಎಂದು ತಿಳಿಸಿತ್ತು.
ಇದಲ್ಲದೆ ಮುಂಬರುವ ಪೌರಾಣಿಕ ಚಿತ್ರ ಜೈ ಹನುಮಾನ್ ಚಿತ್ರದಲ್ಲಿ ರಿಷಬ್ ನಟಿಸಲಿದ್ದಾರೆ. ‘ದಿ ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಮಹಾರಾಜ್‘ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.