ADVERTISEMENT

ಆರ್ಥಿಕ ಸಮೀಕ್ಷೆ 2025–26: ಹಲವು ಸಾಧನೆ; ಬದಲಾವಣೆಯ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 0:02 IST
Last Updated 30 ಜನವರಿ 2026, 0:02 IST
 ಚಿತ್ರ: ಆರ್ಥಿಕ ಸಮೀಕ್ಷೆ ವರದಿ 
 ಚಿತ್ರ: ಆರ್ಥಿಕ ಸಮೀಕ್ಷೆ ವರದಿ    
2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ್ದು,  ಹಲವು ಕ್ಷೇತ್ರಗಳ ಬೆಳವಣಿಗೆ ಮತ್ತು ಕೊರತೆಗಳ ಬಗ್ಗೆ ಉಲ್ಲೇಖಿಸಿದೆ. ಕೃಷಿ, ಆರೋಗ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳ ಬೆಳವಣಿಗೆಯನ್ನು ಗಮನಿಸುತ್ತಲೇ ಆಗಬೇಕಾದ ಕೆಲಸಗಳ ಬಗ್ಗೆಯೂ ಪ್ರಸ್ತಾಪಿಸಿದೆ. ಡಿಜಿಟಲ್ ವ್ಯಸನ ಹೆಚ್ಚುತ್ತಿರುವ ಬಗ್ಗೆ ಸಮೀಕ್ಷೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಈ ದಿಸೆಯಲ್ಲಿ ನಿರ್ದಿಷ್ಟ ‍ಪರಿಹಾರ ಕ್ರಮಗಳನ್ನು ರೂಪಿಸಬೇಕು ಎಂದು ಸೂಚಿಸಿದೆ.

ಮಕ್ಕಳ ಡಿಜಿಟಲ್ ವ್ಯಸನಕ್ಕೆ ಬೀಳಲಿ ಕಡಿವಾಣ

ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದಕ್ಕೆ ಮಿತಿ ಹೇರುವ, ಬಳಕೆದಾರನ ವಯಸ್ಸು ಆಧರಿಸಿ ಆನ್‌ಲೈನ್ ವೇದಿಕೆಗಳ ಬಳಕೆಗೆ ಅವಕಾಶ ಕಲ್ಪಿಸುವ ಮತ್ತು ಡಿಜಿಟಲ್ ವ್ಯಸನವನ್ನು ತಡೆಯಲು ಆನ್‌ಲೈನ್ ತರಗತಿಗಳನ್ನು ಕಡಿತಗೊಳಿಸುವ ಅಗತ್ಯದ ಬಗ್ಗೆ ಆರ್ಥಿಕ ಸಮೀಕ್ಷೆ ಪ್ರತಿಪಾದಿಸಿದೆ. ಹೆಚ್ಚುತ್ತಿರುವ ಡಿಜಿಟಲ್ ವ್ಯಸನಕ್ಕೆ ಸಂಬಂಧಿಸಿದಂತೆ ವಯಸ್ಸು ದೃಢೀಕರಣಕ್ಕೆ ಆನ್‌ಲೈನ್ ವೇದಿಕೆಗಳನ್ನು ಜವಾಬ್ದಾರರನ್ನಾಗಿಸಬೇಕು ಮತ್ತು ಶೈಕ್ಷಣಿಕ ವಸ್ತು–ವಿಷಯ ತಿಳಿಯಲು ಮಕ್ಕಳ ನಡುವೆ ಬೇಸಿಕ್ ಫೋನ್‌ಗಳಂತಹ ಸರಳ ಸಾಧನಗಳ ಬಳಕೆ ಉತ್ತೇಜಿಸಬೇಕು. ವಿಶೇಷವಾಗಿ ಸಾಮಾಜಿಕ ಜಾಲತಾಣಗಳು, ಜೂಜಿನ ಆ್ಯಪ್‌ಗಳು ಮತ್ತು ಜಾಹೀರಾತುಗಳಿಗೆ ಸಂಬಂಧಿಸಿದಂತೆ ವಯಸ್ಸು ಮುಖ್ಯವಾಗುತ್ತದೆ ಎಂದಿದೆ.

ಆಸ್ಟ್ರೇಲಿಯಾ, ಚೀನಾ, ದಕ್ಷಿಣ ಕೊರಿಯಾದಂಥ ದೇಶಗಳಲ್ಲಿ ಈ ಕುರಿತು ಜಾರಿಗೆ ತರಲಾಗಿರುವ ನಿಯಮಗಳನ್ನು ಉಲ್ಲೇಖಿಸಲಾಗಿದ್ದು, ಯುವಕರು ಮತ್ತು ವಯಸ್ಕರ ಮಾನಸಿಕ ಆರೋಗ್ಯದ ಮೇಲೆ ಡಿಜಿಟಲ್ ವ್ಯಸನವು ಪರಿಣಾಮ ಬೀರುತ್ತಿದೆ. ಈ ವಿಚಾರದಲ್ಲಿ ಕುಟುಂಬಕ್ಕೂ ಅರಿವು ಮೂಡಿಸುವ ಅಗತ್ಯವಿದ್ದು, ಸ್ಕ್ರೀನ್ ಟೈಮ್‌ಗೆ ಮಿತಿ ಹೇರುವುದು, ಸಾಧನಗಳಿಂದ ಮುಕ್ತವಾಗಿ ಸಮಯ ಕಳೆಯುವುದು, ಎಲ್ಲರೂ ಒಟ್ಟಾಗಿ ಆಫ್‌ಲೈನ್ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಉತ್ತೇಜಿಸಬೇಕು ಎಂದು ಸಮೀಕ್ಷೆ ಹೇಳಿದೆ.

ಕಲಿಕೆ, ಉತ್ಪಾದಕತೆಗೆ ಕುತ್ತು: ಡಿಜಿಟಲ್ ವ್ಯಸನವು ಶೈಕ್ಷಣಿಕ ಸಾಧನೆ, ಉತ್ಪಾದಕತೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಸಾರ್ವಜನಿಕ ಆರೋಗ್ಯ ಕ್ಷೇತ್ರದ ಗಮನಾರ್ಹ ಸಮಸ್ಯೆಯಾಗಿದೆ. 

ADVERTISEMENT

ಭಾರತದಲ್ಲಿ ಡಿಜಿಟಲ್ ವ್ಯಸನ ಮತ್ತು ಅದು ಮಾನಸಿಕ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಸಮಗ್ರ ರಾಷ್ಟ್ರೀಯ ದತ್ತಾಂಶ ಲಭ್ಯವಿಲ್ಲ. ಗುರಿ ಆಧಾರಿತ ಕಾರ್ಯಕ್ರಮಗಳು, ಸಂಪನ್ಮೂಲ ಮೀಸಲಿಡುವಿಕೆ ಮತ್ತು ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯತಂತ್ರಗಳಲ್ಲಿ ಡಿಜಿಟಲ್ ಆರೋಗ್ಯವನ್ನು ಒಳಗೊಳ್ಳುವುದರ ಅಗತ್ಯ ಇದೆ ಎಂದು  ಸಮೀಕ್ಷೆ ಹೇಳಿದೆ.

ಭಾರತೀಯ ಸಂದರ್ಭದಲ್ಲಿ ಡಿಜಿಟಲ್ ವ್ಯಸನದ ಮಾನಸಿಕ ಪರಿಣಾಮಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಿಮ್ಹಾನ್ಸ್ ನೇತೃತ್ವದಲ್ಲಿ ಅಧ್ಯಯನ ನಡೆಸುತ್ತಿದ್ದು, ಅದರ ವರದಿಯು ಸಮಗ್ರ ಮತ್ತು ಕಾರ್ಯಯೋಗ್ಯವಾದ ಒಳನೋಟಗಳನ್ನು ನೀಡಲಿದೆ. ಈ ವ್ಯಸನವು ಕಲಿಕೆ, ನಾಗರಿಕ ಸಹಭಾಗಿತ್ವದ ಮೇಲೆ ಪರಿಣಾಮ ಬೀರುತ್ತಿದ್ದು, ಮುಂದುವರಿದ ಹಂತದಲ್ಲಿ ಹಲವು ರೀತಿಯ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. 

ಎಥೆನಾಲ್‌ಗಾಗಿ ಮೆಕ್ಕೆಜೋಳ: ಆಹಾರ ಭದ್ರತೆಗೆ ಕುತ್ತು

ಭಾರತದಲ್ಲಿ ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಮಾಡುವ ಯೋಜನೆಯಿಂದ ₹1.44 ಲಕ್ಷ ಕೋಟಿಗೂ ಹೆಚ್ಚು ವಿದೇಶಿ ವಿನಿಮಯ ಉಳಿತಾಯವಾಗಿದ್ದು, ಆಗಸ್ಟ್ 2025ರ ವೇಳೆಗೆ 245 ಲಕ್ಷ ಟನ್‌ ಕಚ್ಚಾ ತೈಲಕ್ಕೆ ಪರ್ಯಾಯವಾಗಿ ಎಥೆನಾಲ್ ಅನ್ನು ಬಳಸಲಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. 

ಆದರೆ, ಇದರ ತ್ವರಿತ ವಿಸ್ತರಣೆಯು ಹಲವು ಅನಪೇಕ್ಷಿತ ಪರಿಣಾಮಗಳಿಗೆ ಕಾರಣವಾಗುತ್ತಿದೆ. ಸರ್ಕಾರವು ಮೆಕ್ಕೆಜೋಳ ಆಧಾರಿತ ಎಥೆನಾಲ್‌ ಉತ್ಪಾದನೆಯನ್ನು ಉತ್ತೇಜಿಸುತ್ತಿದ್ದು, ರೈತರು ಬೇಳೆ, ಎಣ್ಣೆಕಾಳುಗಳ ಬದಲಿಗೆ ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಇದರಿಂದ ದೇಶದಲ್ಲಿ ದೀರ್ಘಾವಧಿಯ ಆಹಾರ ಭದ್ರತೆ ಮತ್ತು ಪೌಷ್ಟಿಕತೆಯ ಸಮಸ್ಯೆಗಳು ಉಂಟಾಗಬಹುದು ಎಂದು ಸಮೀಕ್ಷೆ ಹೇಳಿದೆ. 

ಭಾರತವು ಪೆಟ್ರೋಲ್‌ಗೆ ಶೇ 20ರಷ್ಟು ಎಥೆನಾಲ್ ಅನ್ನು ಮಿಶ್ರಣ ಮಾಡುವ ಗುರಿಯತ್ತ ಸಾಗುತ್ತಿದ್ದು, ಈ ಗುರಿಸಾಧನೆಗಾಗಿ ಸಾಂಪ್ರದಾಯಿಕವಾದ ಸಕ್ಕರೆ ಆಧಾರಿತ ಕಚ್ಚಾ ಪದಾರ್ಥಗಳನ್ನೂ ಮೀರಿ ಆಹಾರ ಧಾನ್ಯಗಳಿಗೆ (ವಿಶೇಷವಾಗಿ ಮೆಕ್ಕೆಜೋಳ) ವಿಸ್ತರಿಸಿದೆ. ದೇಶದ ಹಲವೆಡೆ ಮೆಕ್ಕೆಜೋಳದ ಉತ್ಪಾದನೆ (ಶೇ 8.77) ಮತ್ತು ಬೆಳೆ ಬೆಳೆಯುವ ಪ್ರದೇಶ (ಶೇ 6.68)  ಹೆಚ್ಚಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಮೆಕ್ಕೆಜೋಳವು ಬೇಳೆಕಾಳು, ಎಣ್ಣೆಕಾಳು, ಸೋಯಾಬೀನ್, ಸಿರಿಧಾನ್ಯ ಮತ್ತು ಹತ್ತಿಯೊಂದಿಗೆ ಪೈಪೋಟಿ ನಡೆಸುತ್ತಿದೆ.

ಜಾಹೀರಾತು‌ ನಿರ್ಬಂಧಿಸಿ

ಉಪ್ಪು, ಸಕ್ಕರೆ, ಕೊಬ್ಬಿನ ಅಂಶ ಜಾಸ್ತಿ ಇರುವ ಹೆಚ್ಚು ಸಂಸ್ಕರಿತ ಆಹಾರ ಪದಾರ್ಥಗಳ ಬಳಕೆ ಹೆಚ್ಚುತ್ತಿದ್ದು, ಭಾರತದಲ್ಲಿ ಇಂತಹ ಆಹಾರ ಪದಾರ್ಥಗಳ ಮಾರುಕಟ್ಟೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ  ದಿಸೆಯಲ್ಲಿ, ಬೆಳಿಗ್ಗೆ 6ರಿಂದ ರಾತ್ರಿ 11 ಗಂಟೆಯವರೆಗೆ ಇಂಥ ಆಹಾರ ವಸ್ತುಗಳ ಜಾಹೀರಾತುಗಳನ್ನು ನಿರ್ಬಂಧಿಸಬೇಕು ಎಂದು  ಬಲವಾಗಿ ಪ್ರತಿಪಾದಿಸಿದೆ.      

ದೇಶದಲ್ಲಿ 2020ರಲ್ಲಿ 3.3 ಕೋಟಿ ಮಕ್ಕಳು ಸ್ಥೂಲಕಾಯದವರಾಗಿದ್ದರೆ, 2035ಕ್ಕೆ ಈ ಸಂಖ್ಯೆ 8.3 ಕೋಟಿಗೆ ಏರಲಿದೆ. 2019–21ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ, ದೇಶದ ಶೇ 24ರಷ್ಟು ಮಹಿಳೆಯರು ಮತ್ತು ಶೇ 23ರಷ್ಟು ಪುರುಷರು ಅಧಿಕ ತೂಕ ಮತ್ತು ಬೊಜ್ಜು ಹೊಂದಿದ್ದಾರೆ. ದೇಶದಲ್ಲಿ 2009 ಮತ್ತು 2023ರ ನಡುವೆ ಹೆಚ್ಚು ಸಂಸ್ಕರಿತ ಆಹಾರ ಪದಾರ್ಥಗಳ ಮಾರಾಟವು ಶೇ 150ರಷ್ಟು ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ಮಹಿಳೆಯರು ಮತ್ತು ಪುರುಷರಲ್ಲಿ ಬೊಜ್ಜು ಕೂಡ ದ್ವಿಗುಣಗೊಂಡಿದೆ. ಇವುಗಳ ಪರಿಹಾರಕ್ಕೆ ಗ್ರಾಹಕರ ಸ್ವಭಾವದಲ್ಲಿ ಬದಲಾವಣೆ ತರುವುದರ ಜತೆಗೆ ನಿಮಯ ರೂಪಿಸುವುದೂ ಅಗತ್ಯವಾಗಿದೆ. ಮಾಧ್ಯಮಗಳ ಜತೆಗೆ ಡಿಜಿಟಲ್ ಮಾಧ್ಯಮಗಳ ಜಾಹೀರಾತುಗಳ ಮೇಲೂ ನಿರ್ಬಂಧ ವಿಧಿಸುವ ಅಗತ್ಯವಿದೆ ಎಂದು ಸಮೀಕ್ಷೆ ಪ್ರತಿಪಾದಿಸಿದೆ.

ಕೃಷಿ ರಫ್ತು: ಸ್ಥಿರ ನೀತಿ ಅಗತ್ಯ

ಮುಂದಿನ ನಾಲ್ಕು ವರ್ಷಗಳಲ್ಲಿ ಕೃಷಿ, ಸಾಗರೋತ್ಪನ್ನ, ಆಹಾರ ಮತ್ತು ಪಾನೀಯಗಳ ರಫ್ತಿನ ಮೌಲ್ಯ ₹9.19 ಲಕ್ಷ ಕೋಟಿಗೆ (10,000 ಕೋಟಿ ಡಾಲರ್‌) ಹೆಚ್ಚಿಸುವ ಗುರಿಯನ್ನು ತಲುಪಲು ಭಾರತವು ತನ್ನ ಕೃಷಿ ರಫ್ತು ನೀತಿಗಳನ್ನು ಸರಿಪಡಿಸಬೇಕು. ಹೆಚ್ಚು ಸ್ಥಿರವಾದ ನೀತಿ ಬೇಕು ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಸರ್ಕಾರದ ತಾತ್ಕಾಲಿಕ ನೀತಿಗಳು, ವ್ಯಾಪಾರ ನಿರ್ಬಂಧಗಳು ಪೂರೈಕೆ ಸರಪಣಿಗೆ ಅಡಚಣೆ ಉಂಟುಮಾಡುತ್ತಿರುವುದಲ್ಲದೆ, ದೇಶವು ಹೊಂದಿರುವ ವಿಶ್ವಾಸಾರ್ಹ ಪೂರೈಕೆದಾರ ಎಂಬ ವರ್ಚಸ್ಸಿಗೆ ಧಕ್ಕೆ ತರುತ್ತಿದೆ.  2024–25ರಲ್ಲಿ ಭಾರತದ ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಉತ್ಪನ್ನಗಳ ರಫ್ತು ಮೌಲ್ಯ ₹4.70 ಲಕ್ಷ ಕೋಟಿಗಳಿಷ್ಟಿತ್ತು (5,110 ಕೋಟಿ ಡಾಲರ್‌). 

ಭಾರತವು ಜಗತ್ತಿನಲ್ಲೇ ಎರಡನೇ ಅತಿದೊಡ್ಡ ಕೃಷಿ ಉತ್ಪಾದಕ ರಾಷ್ಟ್ರವಾಗಿದ್ದರೂ ಜಾಗತಿಕ ಕೃಷಿ ಉತ್ಪನ್ನಗಳ ಒಟ್ಟು ರಫ್ತಿನಲ್ಲಿ ಭಾರತದ ಪಾಲು ಶೇ 2.2ರಷ್ಟು ಮಾತ್ರ ಇದೆ. 2019–20 ಮತ್ತು 2024–25ರ ನಡುವೆ ಕೃಷಿ ರಫ್ತಿನ ವಾರ್ಷಿಕ ಅಭಿವೃದ್ಧಿ ದರ ಶೇ 8.2ರಷ್ಟರಲ್ಲೇ ನಿಂತಿದೆ ಎಂದು ಸಮೀಕ್ಷೆ ಹೇಳಿದೆ. 

ಐದು ವರ್ಷಗಳಲ್ಲಿ ಕೃಷಿ ಕ್ಷೇತ್ರದ ವಾರ್ಷಿಕ ಸರಾಸರಿ ಅಭಿವೃದ್ಧಿ ದರ ಶೇ 4.4ರಷ್ಟಿದೆ ಎಂದು ಹೇಳಿರುವ ಸಮೀಕ್ಷೆ, ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಾಗಿದೆ. ತೋಟಗಾರಿಕಾ ಬೆಳೆಗಳ ಉತ್ಪಾದನೆಯಲ್ಲೂ ಗಣನೀಯ ಏರಿಕೆ ಕಂಡು ಬಂದಿದೆ ಎಂದೂ ವಿವರಿಸಿದೆ. 

ಕರ್ನಾಟಕದ ‘ಫ್ರೂಟ್ಸ್‌’ ತಂತ್ರಾಂಶ  ಸೇರಿದಂತೆ ಕೃಷಿ ಕ್ಷೇತ್ರದಲ್ಲಿ ಕೆಲವು ರಾಜ್ಯಗಳು ಅಳವಡಿಸಿಕೊಂಡಿರುವ ತಂತ್ರಜ್ಞಾನ ಆಧಾರಿತ ಸೇವೆಗಳನ್ನೂ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲಾದ ಈ ವಿನೂತನ ಪರಿಕಲ್ಪನೆಗಳು ಕೃಷಿ ಆಡಳಿತದಲ್ಲಿ ಪರಿಣಾಮಕಾರಿ ಬದಲಾವಣೆಯನ್ನು ತಂದಿವೆ ಮತ್ತು ಕೃಷಿಕರಿಗೆ ಉತ್ತಮ ಸೇವೆ ಒದಗಿಸಲು ನೆರವಾಗಿವೆ ಎಂದು ಹೇಳಿದೆ. 

ಆಂಧ್ರಪ್ರದೇಶದಲ್ಲಿ ಜಾರಿಯಲ್ಲಿರುವ ಡ್ರೋನ್‌ ಆಧಾರಿತ ಸಮೀಕ್ಷೆ, ಇ–ಫಾರ್ಮಾರ್ಕೆಟ್‌ ಪ್ಲಾಟ್‌ಫಾರ್ಮ್‌, ಬಿಹಾರದ ಮುಖ್ಯಮಂತ್ರಿ ಸಮೀಕ್ಷಿತ್‌ ಚೌರ್‌ (ಜೌಗು ಭೂಮಿ) ವಿಕಾಸ್‌ ಯೋಜನೆ, ಅಸ್ಸಾಂ ರಾಜ್ಯ ನೀರಾವರಿ ಯೋಜನೆ, ಉತ್ತರ ಪ್ರದೇಶದ ಅಂತರ್ಜಲ ನಿಯಮಗಳು, ಕರ್ನಾಟಕದ ಫ್ರೂಟ್ಸ್‌ ಪ್ಲಾಟ್‌ಫಾರ್ಮ್‌ ಜಾರ್ಖಂಡ್‌ನ ಜಿಐಎಸ್‌ ಆಧಾರಿತ ಕ್ಲೈಮೇಟ್‌ ಸ್ಮಾರ್ಟ್‌ ಅಗ್ರಿಕಲ್ಚರ್‌ ಆ್ಯಂಡ್‌ ಅಗ್ರಿ ಸ್ಟೇಕ್‌ ಸ್ಕೀಮ್‌, ಬಿಹಾರದ ನಾಲ್ಕನೇ ಕೃಷಿ ನೀಲ ನಕ್ಷೆಗಳನ್ನು ಸಮೀಕ್ಷೆ ಶ್ಲಾಘಿಸಿದೆ.

ಸ್ಥಿರ ಅಭಿವೃದ್ಧಿಗೆ ಒತ್ತು ಬೇಕು

ಜಗತ್ತಿನಲ್ಲಿರುವ ಭೌಗೋಳಿಕ ರಾಜಕೀಯ ಪ್ರಕ್ಷುಬ್ಧ ವಾತಾವರಣದ ನಡುವೆಯೇ ಭಾರತವು ದೀರ್ಘಾವಧಿಯ ಸ್ಥಿರ ಅಭಿವೃದ್ಧಿ ಸಾಧಿಸಬೇಕು. ಇದೇ ಹೊತ್ತಿನಲ್ಲಿ ತಕ್ಷಣದಲ್ಲಿ ಎದುರಾಗುವ ಪರಿಸ್ಥಿತಿಯನ್ನೂ ಸಮರ್ಥವಾಗಿ ನಿಭಾಯಿಸಬೇಕು ಎಂದು ಆರ್ಥಿಕ ಸಮೀಕ್ಷೆ ಸಲಹೆ ನೀಡಿದೆ. 

‘ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಏರಿಳಿತಕ್ಕೆ ಪ್ರತಿಯಾಗಿ ಭಾರತವು ಅಲ್ಪಾವಧಿಯ ಒತ್ತಡಗಳನ್ನು ನಿವಾರಿಸಲು ತಕ್ಷಣದ ಪರಿಹಾರಕ್ಕೆ ಒತ್ತು ನೀಡುವುದರ ಬದಲಿಗೆ ವಿಕಸಿತ ಭಾರತವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸ್ಥಿತಿಸ್ಥಾಪಕತ್ವವನ್ನು ಹೊಂದಿ, ನಿರಂತರವಾಗಿ ನವೀನ ಪರಿಕಲ್ಪನೆಗಳನ್ನು ಅಳವಡಿಸಿ ಕೊಳ್ಳುವುದಕ್ಕೆ ಹೆಚ್ಚಿನ ಗಮನ ನೀಡಬೇಕು’ ಎಂದು ಹೇಳಿದೆ. 

ಸುಂಕದ ಹೊರೆ : ಫಾರ್ಮಾ ಉದ್ದಿಮೆಯಿಂದ ಕಲಿಯಿರಿ

ಅನಿರೀಕ್ಷಿತ ಜಾಗತಿಕ ಸುಂಕ ಹೇರಿಕೆಯಿಂದ ಎದುರಾಗಿರುವ ಸವಾಲನ್ನು ನಿಭಾಯಿಸಲು ಭಾರತದ ಉದ್ದಿಮೆಗಳು ಫಾರ್ಮಾ ಉದ್ದಿಮೆಯಿಂದ ಸ್ಫೂರ್ತಿ ಪಡೆಯಬಹುದು ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. 

1995ರಲ್ಲಿ ಟಿಆರ್‌ಐಪಿಎಸ್‌ ಒಪ್ಪಂದದ ನಂತರ ಎದುರಾಗಿದ್ದ ಬಿಕ್ಕಟ್ಟನ್ನು ಫಾರ್ಮಾ ಉದ್ದಿಮೆಯು ಸ್ವತಃ ರೂಪಾಂತರಗೊಂಡು ಸಮರ್ಥವಾಗಿ ಎದುರಿಸಿತ್ತು. 1970ರ ಪೇಟೆಂಟ್‌ ಕಾಯ್ದೆಯ ಅಡಿಯಲ್ಲಿ 1995ರವರೆಗೂ ಔಷಧಿ ತಯಾರಿಕಾ ಪ್ರಕ್ರಿಯೆಗೆ ಪೇಟೆಂಟ್‌ ಪಡೆದು ಉದ್ಯಮವನ್ನು ವಿಸ್ತರಿಸಿಕೊಂಡಿತ್ತು. ಆದರೆ ಟಿಆರ್‌ಐಪಿಎಸ್‌ ಒಪ್ಪಂದದ ಪ್ರಕಾರ ಔಷಧ ಉತ್ಪನ್ನ ಪೇಟೆಂಟ್‌ ವ್ಯವಸ್ಥೆ ಜಾರಿಗೆ ಬಂದಾಗ ಕಂಪನಿಗಳು ತೀವ್ರ ಸವಾಲು ಎದುರಿಸಿದ್ದವು. ತಮ್ಮ ಆಂತರಿಕ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಮತ್ತು ಪೇಟೆಂಟ್‌ ಪಡೆದ ಔಷಧಗಳ ಉತ್ಪಾದನೆಗೆ ಪರ್ಯಾಯ ದಾರಿಗಳನ್ನು ಕಂಡುಕೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ಅಗ್ಗದ ಔಷಧ ಉತ್ಪಾದನಾ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದವು. 

ಆರ್‌ಟಿಐ ಕಾಯ್ದೆ ಮರುಪರಿಶೀಲಿಸಿ

 ಇಪ್ಪತ್ತು ವರ್ಷಗಳಷ್ಟು ಹಳೆಯದಾದ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯನ್ನು ಮರುಪರಿಶೀಲಿಸಬೇಕು ಎಂದು ಆರ್ಥಿಕ ಸಮೀಕ್ಷೆ ಪ್ರಬಲವಾಗಿ ಪ್ರತಿಪಾದಿಸಿದೆ. ಕಾಯ್ದೆಯ ಅಡಿಯಲ್ಲಿ ಗೋಪ್ಯ ವರದಿಗಳು ಮತ್ತು ಕರಡು ಅಭಿಪ್ರಾಯಗಳನ್ನು ಬಹಿರಂಗ ಪಡಿಸುವುದಕ್ಕೆ ಅವಕಾಶ ನೀಡಬಾರದು. ಅಂತಹ ನಿಯಮಗಳು ಆಡಳಿತವನ್ನು ನಿರ್ಬಂಧಕ್ಕೊಳಪಡಿಸುತ್ತವೆ ಎಂದು ಅದು ಹೇಳಿದೆ.

ಪ್ರಮುಖ ಅಂಶಗಳು

  • ಆಹಾರದಲ್ಲಿ ಸುಧಾರಣೆಯು ಸಾಂಕ್ರಾಮಿಕವಲ್ಲದ ರೋಗಗಳನ್ನು ಗುಣಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಆದರೆ, ಶಕ್ತಿವರ್ಧಕಗಳು, ಪೌಷ್ಟಿಕತೆಯ, ತೂಕ ಇಳಿಸುವ ಪೇಯಗಳನ್ನು ಸೇವಿಸುವುದು ವೈದ್ಯಕೀಯವಾಗಿ ನಿರೂಪಿತವಾದ ವಿಧಾನಗಳಲ್ಲ. ಈ ಕುರಿತು ಜನರಿಗೆ ತಿಳಿವಳಿಕೆ ಅಗತ್ಯ

  • ಸರ್ಕಾರದ ಗುರಿ ನಿರ್ದಿಷ್ಟವಾದ ಕಲ್ಯಾಣ ಕಾರ್ಯಕ್ರಮಗಳಿಂದ ದೇಶದಲ್ಲಿ ಬಡತನ ಕಡಿಮೆ ಆಗಿದ್ದು, ಆದಾಯ ಹಂಚಿಕೆಯಲ್ಲಿಯೂ ಉತ್ತಮಿಕೆ ಕಂಡುಬಂದಿದೆ. ಅಂಚಿನಲ್ಲಿರುವ ಶೇ 5–10ರಷ್ಟು ಜನರ ಬಳಕೆ ವೆಚ್ಚದಲ್ಲಿ ಏರಿಕೆ ಕಂಡುಬಂದಿದ್ದು, ಇದು ಸಬ್ಸಿಡಿಗಳು, ಪಿಂಚಣಿ, ನೇರ ಹಣ ವರ್ಗಾವಣೆ ಮತ್ತು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ವೆಚ್ಚದ ಫಲ

  • ರಫ್ತು ನಿಯಂತ್ರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಸ್ವದೇಶಿ ನಿಯಮಕ್ಕೆ ಒತ್ತು ನೀಡುವುದು ಅನಿವಾರ್ಯವಾಗಿದೆ. ರಫ್ತಿನ ಮೇಲೆ ನಿಯಂತ್ರಣ, ತಂತ್ರಜ್ಞಾನದ ನಿರಾಕರಣೆ, ಇಂಗಾಲ ಹೊರಸೂಸುವಿಕೆಗೆ ಸಂಬಂಧಿಸಿದ ತೆರಿಗೆ ನಿಯಮಗಳು, ಪೂರ್ವ ಮತ್ತು ಪಶ್ಚಿಮ ಎರಡೂ ಕಡೆ ಒಂದೇ ರೀತಿಯ ಕೈಗಾರಿಕಾ ನೀತಿಗಳನ್ನು ಅಳವಡಿಸಿಕೊಂಡಿರುವುದು ಜಾಗತೀಕರಣದ ಅಂತ್ಯವನ್ನು ಸೂಚಿಸುತ್ತಿವೆ

  • 15–29 ವಯೋಮಾನದ ಶೇ 4.9ರಷ್ಟು ಮಂದಿ ಮಾತ್ರ ಔಪಚಾರಿಕ ವೃತ್ತಿಪರ ಅಥವಾ ತಾಂತ್ರಿಕ ತರಬೇತಿ ಪಡೆದಿದ್ದು, ಕೌಶಲ ತರಬೇತಿ ಕಾರ್ಯಕ್ರಮಗಳನ್ನು ವಿಸ್ತರಿಸುವ ಅಗತ್ಯವಿದೆ

  • ಭಾರತವು ಕೃತಕ ಬುದ್ಧಿಮತ್ತೆ ಕ್ಷೇತ್ರಕ್ಕೆ ವಿಳಂಬವಾಗಿ ಕಾಲಿಟ್ಟಿದೆ. ಆದರೂ ಇದು ದೇಶಕ್ಕೆ ಅನುಕೂಲವನ್ನು ಕಲ್ಪಿಸಿದೆ. ಈ ಕ್ಷೇತ್ರದಲ್ಲಿ ಆರಂಭದಿಂದಲೂ ತೊಡಗಿಕೊಂಡಿರುವ ದೇಶಗಳು ಸಂಶೋಧನೆಗೆ ಹೆಚ್ಚು ಖರ್ಚು ಮಾಡಿವೆ.  ಆದರೆ, ಭಾರತವು ಈಗ ಇರುವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು. ದೇಶದಲ್ಲಿ ಎಐ ತಂತ್ರಜ್ಞಾನ ಅಳವಡಿಕೆಗಾಗಿ ಎಐ ಆರ್ಥಿಕ ಮಂಡಳಿ ಸ್ಥಾಪಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.