ADVERTISEMENT

ಆಳ –ಅಗಲ | ಎಲ್ಲಿದ್ದರೂ ನಿತೀಶ್‌ ಅವರೇ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
<div class="paragraphs"><p>ನಿತೀಶ್‌ ಕುಮಾರ್‌&nbsp;</p></div>

ನಿತೀಶ್‌ ಕುಮಾರ್‌ 

   

ಜಾತಿ ಸಮೀಕರಣ ಕೇಂದ್ರಿತ ಚುನಾವಣಾ ರಾಜಕೀಯದಿಂದ ‘ಅಭಿವೃದ್ಧಿ’ ಕೇಂದ್ರಿತ ರಾಜಕಾರಣಕ್ಕೆ ಬಿಹಾರ ರಾಜಕೀಯ ಚಿತ್ರಣವನ್ನು ನಿತೀಶ್‌ ಕುಮಾರ್‌ ಅವರು ಹೊರಳಿಸಿದರು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಕಳೆದ 16 ವರ್ಷಗಳಿಂದ ನಿತೀಶ್‌ ಕುಮಾರ್‌ ಅವರು ಯಾವ ಪಕ್ಷದ ಜೊತೆಯಲ್ಲಿಯೇ ಮೈತ್ರಿ ಮಾಡಿಕೊಂಡಿದ್ದರು, ಬಿಹಾರದ ಮುಖ್ಯಮಂತ್ರಿ ಗಾದಿಯಲ್ಲಿ ಮಾತ್ರ ಅವರೇ ವಿರಾಜಮಾನ. ಒಮ್ಮೆ ಪಕ್ಷದ ಸಿದ್ಧಾಂತಕ್ಕೆ, ಒಮ್ಮೆ ಬಿಜೆಪಿಯ ಕೈ ಮೇಲಾಯಿತು ಎಂದು ಎನ್‌ಡಿಎಯೊಂದಿಗಿನ ಮೈತ್ರಿ ಕಡಿದುಕೊಂಡಿದ್ದಾರೆ. ನಮ್ಮದು ಜಾತ್ಯತೀತ ಪಕ್ಷ ಎಂದು, 2024ರಲ್ಲಿ ಮೋದಿ ಅವರು ಮತ್ತೊಮ್ಮೆ ಆಯ್ಕೆ ಆಗುತ್ತಾರೆಯೇ ನೋಡೋಣವೆಂದು ಕಾಂಗ್ರೆಸ್‌ ಹಾಗೂ ಆರ್‌ಜೆಡಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಇದಕ್ಕಾಗಿಯೇ ಅವರನ್ನು ‘ಪಲ್ಟು ಕುಮಾರ್‌’ ಎಂದೂ ಕರೆಯಲಾಗುತ್ತದೆ. ಈ ಎಲ್ಲದರ ಮಧ್ಯೆ, ಜೆಡಿಯು ಮಾತ್ರ ಬಿಹಾರದಲ್ಲಿ ತನ್ನ ಸ್ಥಾನಗಳನ್ನು ಕಳೆದುಕೊಳ್ಳುತ್ತಲೇ ಇದೆ. ಆದರೂ, ನಿತೀಶ್‌ ಅವರೇ ಮುಖ್ಯಮಂತ್ರಿ ಆಗುತ್ತಿದ್ದಾರೆ. ಈಗ ಮತ್ತೊಮ್ಮೆ ಲೋಕಸಭೆ ಚುನಾವಣೆಯ ಹೊಸ್ತಿನಲ್ಲಿ, ನಿತೀಶ್‌ ಕುಮಾರ್‌ ಅವರು ಎನ್‌ಡಿಎ ತೆಕ್ಕೆಗೆ ಜಾರಿದ್ದಾರೆ

2013: ತನ್ನ 17 ವರ್ಷದ ಸ್ನೇಹವನ್ನು ಕಿತ್ತೆಸೆದು, ಎನ್‌ಡಿಎ ಮೈತ್ರಿಕೂಟದಿಂದ ಜೆಡಿಯು ಹೊರಬಂದಿತು. 2014ರಲ್ಲಿ ನಡೆದ ಲೋಕಸಭೆ ಚುನಾವಣೆಗೆ ಅಂದಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಯಿತು. ಈ ಬಳಿಕ ಜೆಡಿಯು ಮೈತ್ರಿ ಕಡಿದುಕೊಂಡಿತು. ‘16.4ರಷ್ಟಿರುವ ಮುಸ್ಲಿಂ ಮತಬ್ಯಾಂಕ್‌ ಅನ್ನು ಓಲೈಸಲು ನಿತೀಶ್‌ ಅವರು ಎನ್‌ಡಿಎ ಮೈತ್ರಿಕೂಟ ತೊರೆದಿದ್ದಾರೆ’ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಅವರು ದೂರಿದ್ದರು. ಇದೇ ಮಾತನ್ನು ರಾಜಕೀಯ ವಿಶ್ಲೇಷಕರೂ ಆಡಿದ್ದರು. 

ADVERTISEMENT

ನಿತೀಶ್‌ ಹೇಳಿದ್ದು: ಮೈತ್ರಿಕೂಟವನ್ನು ತೊರೆಯಲು ನಾವು ಕಾರಣರಲ್ಲ. ನಮಗೆ ಬೇರೆ ದಾರಿ ಇರಲಿಲ್ಲ. ಪಕ್ಷದ ಮೂಲ ಸಿದ್ಧಾಂತದ ವಿಚಾರವಾಗಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಬಿಜೆಪಿಯಲ್ಲಿ ‘ಹೊಸ ಯುಗ’ ಆರಂಭವಾಗಿದೆ. ಅಡ್ವಾಣಿ ಅವರಂಥ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ

* ಎನ್‌ಡಿಎ ಮೈತ್ರಿಕೂಟವನ್ನು ತೊರೆದು ನಿತೀಶ್‌ ಕುಮಾರ್‌ ಅವರು ಮೋಸ ಮಾಡಿದರು ಎಂದು ಬಿಜೆಪಿ ಆರೋಪಿಸಿತ್ತು

––––

2014: ಎನ್‌ಡಿಎ ಜೊತೆಗಿನ ಮೈತ್ರಿಯನ್ನು ತೊರೆದ ಬಳಿಕ, ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಪಕ್ಷವು ಬಿಹಾರದಲ್ಲಿ ಕಡಿಮೆ ಸ್ಥಾನಗಳನ್ನು ಗೆದ್ದಿತು. ಇದರ ಹೊಣೆಹೊತ್ತು ನಿತೀಶ್‌ ಕುಮಾರ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಜಿತಿನ್‌ ರಾಮ್‌ ಮಾಂಝಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ಆರ್‌ಜೆಡಿಯ ಬೆಂಬಲದೊಂದಿಗೆ ಮಾಂಝಿ ಅವರು ಬಹುಮತ ಸಾಬೀತು ಪಡಿಸಿದರು. ಇದೇ ವೇಳೆ, ಆರ್‌ಜೆಡಿ ಹಾಗೂ ಕಾಂಗ್ರೆಸ್‌ನೊಂದಿಗೆ ಜೆಡಿಯು ‘ಮಹಾಘಟಬಂಧನ’ ಮಾಡಿಕೊಂಡಿತು. ನಂತರ, 2015ರಲ್ಲಿ ನಡೆದ ಚುನಾವಣೆಯಲ್ಲಿ ಈ ಮೈತ್ರಿಯು ಭಾರಿ ಸಂಖ್ಯೆಯೊಂದಿಗೆ ಬಹುಮತಗಳಿಸಿತು. 

ನಿತೀಶ್‌ ಹೇಳಿದ್ದು: ಜೆಡಿಯು ಒಂದು ಜಾತ್ಯತೀತ ಪಕ್ಷವಾಗಿದೆ. ಎಲ್ಲ ಒಳ್ಳೆಯ ಜನರಿಗೆ ಜೆಡಿಯುನ ಬಾಗಿಲು ಸದಾ ತೆರೆದೇ ಇರುತ್ತದೆ.

––––

2017: ಪ್ರಧಾನಿ ನರೇಂದ್ರ ಮೋದಿ ಅವರು ನೋಡು ರದ್ದತಿಯನ್ನು ಘೋಷಿಸಿದ್ದರು. ಇದೇ ವರ್ಷದಲ್ಲಿ ಜಿಎಸ್‌ಟಿಯನ್ನೂ ಜಾರಿಗೆ ತಂದರು. ಪ್ರಧಾನಿ ಮೋದಿ ಅವರು ಈ ನಡೆಗಳನ್ನು ನಿತೀಶ್‌ ಕುಮಾರ್‌ ಅವರು ಹೊಗಳಿದರು. ಆರ್‌ಜೆಡಿ ಜೊತೆಯಲ್ಲಿ  ಅಸಮಾಧಾನವೂ ಹೆಚ್ಚುತ್ತಲೇ ಹೋಯಿತು. ಇದೇ ಹೊತ್ತಿನಲ್ಲಿ ಲಾಲು ಪ್ರಸಾದ್‌ ಹಾಗೂ ತೇಜಸ್ವಿ ಯಾದವ್‌ ಅವರಿಗೆ ಜಾರಿ ನಿರ್ದೇಶನಾಲಯವು ನೋಟಿಸ್‌ ನೀಡಿತು. ಈ ಎಲ್ಲದರಿಂದ ತಾನು ದೂರ ಇದ್ದೇನೆ ಹಾಗೂ ಜೊತೆಗೆ ತನ್ನದು ‘ಸ್ವಚ್ಛ’ ಚರಿತ್ರೆ ಎಂದು ಸಾಬೀತು ಪಡಿಸಿಕೊಳ್ಳಲು, ನಿತೀಶ್‌ ಅವರು ಮಹಾಘಟಬಂಧನದಿಂದ ಹೊರಬಂದರು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ನಿತೀಶ್‌ ಹೇಳಿದ್ದು: ಭ್ರಷ್ಟಾಚಾರದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಕೇಂದ್ರ ಸರ್ಕಾರದ ಸಹಯೋಗದಲ್ಲಿ ರಾಜ್ಯವು ಅಭಿವೃದ್ಧಿ ಕಾಣಲಿದೆ

––––

2022: ಕಳೆದ (2020) ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳು ಬಂದಿದ್ದವು. ಜೆಡಿಯು–ಬಿಜೆಪಿ ಒಟ್ಟಾಗಿ ಚುನಾವಣೆ ಎದುರಿಸಿದ್ದವು. ಆದರೆ, ನಿತೀಶ್‌ ಕುಮಾರ್‌ ಅವರೇ ಮುಖ್ಯಮಂತ್ರಿ ಆಗಿದ್ದರು. ಬಿಜೆಪಿಗೆ ಹೆಚ್ಚು ಸ್ಥಾನ ಬಂದ ಕಾರಣ, ಬಿಜೆಪಿಯ ಇಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ರಾಜ್ಯದಲ್ಲಿ ಬಿಜೆಪಿಯ ಖ್ಯಾತಿಯು ಹೆಚ್ಚಾಗ ತೊಡಗಿತ್ತು, ಇದು ಇದು ನಿತೀಶ್‌ ಕುಮಾರ್‌ ಅವರಿಗೆ ಹಿಡಿಸಲಿಲ್ಲ ಎನ್ನುವುದು ವಿಶ್ಲೇಷಕರ ಅಭಿಪ್ರಾಯ. 2019ರಲ್ಲಿ ಕೇಂದ್ರ ಸರ್ಕಾರವು ಸಿಎಎ ಹಾಗೂ ಎನ್‌ಆರ್‌ಸಿ ಜಾರಿಗೆ ತರುವ ಚರ್ಚೆ ಆರಂಭಿಸಿತು. ಎನ್‌ಆರ್‌ಸಿ ಕುರಿತು ನಿತೀಶ್‌ ಅವರು ವಿರೋಧವಿತ್ತು. ‘ಪಕ್ಷವನ್ನು ಒಡೆಯಲು ಬಿಜೆಪಿ ಯತ್ನಿಸುತ್ತಿದೆ’ ಎಂದು ಜೆಡಿಯು ಆರೋಪಸಿತ್ತು. ಈ ಎಲ್ಲದ ಹಿನ್ನೆಲೆಯಲ್ಲಿ ನಿತೀಶ್‌ ಕುಮಾರ್‌ ಅವರು ಬಿಜೆಪಿಯೊಂದಿಗಿನ ತಮ್ಮ ಮೈತ್ರಿಯನ್ನು ಕಡಿದುಕೊಂಡರು. 

ನಿತೀಶ್‌ ಹೇಳಿದ್ದು: ‘ನನಗೆ ಹಲವಾರು ಕರೆಗಳು ಬರುತ್ತಿವೆ. ಎಲ್ಲರನ್ನೂ (ವಿರೋಧ ಪಕ್ಷಗಳನ್ನು) ಒಟ್ಟುಗೂಡಿಸುವ ಕೆಲಸ ಮಾಡುತ್ತೇವೆ’ ಎಂದರು. ನೀವು ಪ್ರಧಾನಮಂತ್ರಿ ಸ್ಥಾನ ಆಕಾಂಕ್ಷಿಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ‘ಪ್ರಶ್ನೆ ಇರುವುದು; 2014ರಲ್ಲಿ ಗೆದ್ದವರು (ಮೋದಿ), 2024ರಲ್ಲಿಯೂ ಗೆಲ್ಲುತ್ತಾರೆಯೇ? ಎಂದು’ ಎಂದು ಉತ್ತರಿಸಿದರು.

––––

2024: ಬಿಜೆಪಿಯೊಂದಿಗಿನ ಮೈತ್ರಿಯನ್ನು ಮತ್ತೊಮ್ಮೆ ಕಡಿದುಕೊಂಡ ಬಳಿಕ, ನಿತೀಶ್‌ ಅವರು ವಿರೋಧ ಪಕ್ಷವನ್ನು ಒಂದುಗೂಡಿಸುವ ಕಾರ್ಯದಲ್ಲಿ ತೊಡಗಿದರು. ಕಾಂಗ್ರೆಸ್‌, ಟಿಎಂಸಿ, ಎಎಪಿ, ಜೆಡಿಯು, ಶಿವಸೇನಾ (ಉದ್ಧವ್‌ ಬಣ) ಹೀಗೆ ಒಟ್ಟು 28 ವಿರೋಧ ಪಕ್ಷಗಳು ಸೇರಿ ‘ಇಂಡಿಯಾ’ ಮೈತ್ರಿಕೂಟವನ್ನು ರಚಿಸಿಕೊಂಡವು. ಈ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲಾಯಿತು. ಇದು ನಿತೀಶ್‌ ಅವರ ಮುನಿಸಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಬಿಜೆಪಿಯೊಂದಿಗೆ ಮೈತ್ರಿ ಬೆಳೆಸಿ, 9ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣವಚನ ಸ್ವೀಕರಿಸಿದರು.

ನಿತೀಶ್‌ ಹೇಳಿದ್ದು: ನಾನು ಹೇಗೆ ಈ ‘ಮಹಾಮೈತ್ರಿಕೂಟ’ದ ಒಳಗೆ ಬಂದೆ ಎಂದು ನಿಮಗೆಲ್ಲಾ ತಿಳಿದೇ ಇದೆ. ಎಲ್ಲ ಪಕ್ಷಗಳನ್ನು ಒಟ್ಟುಗೂಡಿಸಲು ಹೇಗೆಲ್ಲಾ ಕೆಲಸ ಮಾಡಿದೆ ಎಂದೂ ನಿಮಗೆ ಗೊತ್ತಿದೆ. ಆದರೆ, ಇಲ್ಲಿ ಯಾವುದೂ ಸರಿಯಿಲ್ಲ. ಇದು ನನ್ನ ಪಕ್ಷದವರಿಗೆ ಒಳ್ಳೆಯದನ್ನು ಮಾಡುವುದಿಲ್ಲ. ಬಿಜೆಪಿ ಹಾಗೂ ಜೆಡಿಯು ಇನ್ನು ಜೊತೆಯಲ್ಲಿಯೇ ಇರಲಿದೆ

* ‘ಊಸರವಳ್ಳಿಗೂ ಸ್ಪರ್ಧೆ ನೀಡುತ್ತಿದ್ದಾರೆ’ ಎಂದು ನಿತೀಶ್‌ ಕುಮಾರ್‌ ಅವರನ್ನು ಕುರಿತು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು ಹೇಳಿಕೆ ನೀಡಿದ್ದಾರೆ.

ಆಧಾರ: ಪಿಟಿಐ, ‘ಎಕನಾಮಿಕ್‌ ಆ್ಯಂಡ್‌ ಪೊಲಿಟಿಕಲ್‌ ವೀಕ್ಲಿ’ ವರದಿ

ಆಧಾರ: ಪಿಟಿಐ, ಚುನಾವಣಾ ಆಯೋಗದ ಚುನಾವಣಾ ವರದಿಗಳು 9ನೇ ಬಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.