ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿಹೋಗಿರುವ ಪ್ಲಾಸ್ಟಿಕ್ ಈಗ ಭೂಮಿ, ಸಾಗರ, ನಾವು ಸೇವಿಸುವ ಆಹಾರ, ನಮ್ಮ ಮಿದುಳು, ದೇಹದಲ್ಲಿ ಹರಿದಾಡುವ ರಕ್ತ, ಅಷ್ಟೇ ಏಕೆ, ನವಜಾತ ಶಿಶುಗಳ ಮಾಸುವಿನಲ್ಲಿಯೂ ಸೇರಿಕೊಂಡಿದೆ. ಕನಿಷ್ಠ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಸುವವನೂ ಪ್ಲಾಸ್ಟಿಕ್ ಉಂಟುಮಾಡುತ್ತಿರುವ ಪರಿಣಾಮವನ್ನು ಅನುಭವಿಸುವಂತಾಗಿದೆ. ನಮ್ಮ ನಡುವೆ ಇರುವ ಹೆಚ್ಚು ಸವಲತ್ತು ಹೊಂದಿರುವವರು ಪ್ಲಾಸ್ಟಿಕ್ ತರಲಿರುವ ವಿಪತ್ತನ್ನು ತಪ್ಪಿಸಲು ಮುಂದಾಗುತ್ತಾರೆಯೇ ಎನ್ನುವ ಪ್ರಶ್ನೆ ಈಗ ಮುಖ್ಯವಾಗಿದೆ. ಪ್ಲಾಸ್ಟಿಕ್ ತಂದೊಡ್ಡಿರುವ ವಿಪತ್ತನ್ನು ನಿವಾರಿಸಲು ನಮಗೆ ಪ್ರಾಯೋಗಿಕ ಪರಿಹಾರಗಳ ಅಗತ್ಯವಿದೆ
ಬೆಂಗಳೂರಿನ ಜನದಟ್ಟಣೆಯ ರಸ್ತೆಯಲ್ಲಿ ಬೀದಿ ವ್ಯಾಪಾರಿಯೊಬ್ಬರು ಎಂದಿನಂತೆ ರುಚಿಕರವಾದ ಚಾಟ್ ಅನ್ನು ಉದ್ದದ ಸಾಲಿನಲ್ಲಿ ನಿಂತಿರುವ ಗ್ರಾಹಕರಿಗೆ ಸರಬರಾಜು ಮಾಡುವುದನ್ನು ಊಹಿಸಿಕೊಳ್ಳಿ. ಅಲ್ಲಿ ಪರಿಚಿತ ವಸ್ತುವೊಂದನ್ನು ಹಿಂದಿನಂತೆ ಮುಕ್ತವಾಗಿ ಬಳಸಲಾಗುತ್ತಿಲ್ಲ ಎನ್ನುವುದು ಕಾಣುತ್ತದೆ. ಪ್ಲಾಸ್ಟಿಕ್ ಚಮಚಗಳ ಬದಲಿಗೆ ಮಣ್ಣಿನಲ್ಲಿ ಕೊಳೆಯುವ ಗುಣವುಳ್ಳ ಚಮಚಗಳನ್ನು ಬಳಸಲಾಗುತ್ತಿದೆ. ಏಕಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸುವ ಸರ್ಕಾರದ ನಿರ್ಧಾರವೇ ಈ ಬದಲಾವಣೆಗೆ ಕಾರಣ.
ಆದರೆ, ಈ ಬದಲಾವಣೆಯಿಂದ ಬೀದಿ ವ್ಯಾಪಾರಿಯ ಜೇಬಿಗೆ ಹೆಚ್ಚು ಹೊರೆಯಾಗುತ್ತಿದೆ. ಈ ಹಿಂದೆ ಒಂದು ಚಮಚಕ್ಕೆ 20 ಪೈಸೆ ಖರ್ಚು ಮಾಡುತ್ತಿದ್ದ ಜಾಗದಲ್ಲಿ ಈಗ ₹1 ಖರ್ಚು ಮಾಡಬೇಕಾಗಿದೆ. ಇದರಿಂದ ದಿನಕ್ಕೆ ₹100ಯಂತೆ ತಿಂಗಳಿಗೆ ₹3,000 ಹೆಚ್ಚುವರಿ ವೆಚ್ಚ ಭರಿಸಬೇಕಾಗಿದೆ. ಸೂಕ್ತ ಸಾಂಸ್ಥಿಕ ನೆರವು ಒದಗಿಸದೇ ಈ ಬದಲಾವಣೆ ತಂದಿರುವುದರಿಂದ ಒಬ್ಬ ಸಣ್ಣ ವ್ಯಾಪಾರಿಗೆ ಇದು ಸುಸ್ಥಿರತೆಯೆಡೆಗಿನ ಹೆಜ್ಜೆ ಎನ್ನುವುದಕ್ಕಿಂತಲೂ ಆರ್ಥಿಕ ಹೊರೆಯಾಗಿಯೇ ಕಾಣುತ್ತದೆ.
ಪ್ಲಾಸ್ಟಿಕ್ ಮಾಲಿನ್ಯ ಎನ್ನುವುದು ಇಂದು ಬಹುತೇಕ ಜಾಗತಿಕ ಸಮಸ್ಯೆಯಾಗಿದೆ. ಜಾಗತಿಕವಾಗಿ ಪ್ರತಿವರ್ಷ 40 ಕೋಟಿ ಟನ್ ಪ್ಲಾಸ್ಟಿಕ್ ತ್ಯಾಜ್ಯವು ಸೃಷ್ಟಿಯಾಗುತ್ತಿದೆ ಮತ್ತು 2050ರ ವೇಳೆಗೆ ಮೂಲ ಪ್ಲಾಸ್ಟಿಕ್ ಉತ್ಪಾದನೆಯ ಪ್ರಮಾಣವು 110 ಕೋಟಿ ಟನ್‌ಗಳಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣವನ್ನು ಅಲ್ಪಾವಧಿಯ ಬಳಕೆಗೆ ತಕ್ಕಂತೆ ವಿನ್ಯಾಸಗೊಳಿಸಲಾಗುತ್ತಿರುವುದರಿಂದ ಕೆಲವೇ ವಾರಗಳಲ್ಲಿ ಅದೆಲ್ಲವೂ ತ್ಯಾಜ್ಯವಾಗಿ ಸಮುದ್ರ ಸೇರುತ್ತಿದೆ ಇಲ್ಲವೇ ಅದನ್ನು ಸುಡಲಾಗುತ್ತಿದೆ. ಮೈಕ್ರೊಪ್ಲಾಸ್ಟಿಕ್‌ಗಳು ಇಂದು ಕುಡಿಯುವ ನೀರು, ಮನುಷ್ಯನ ರಕ್ತ ಮತ್ತು ನವಜಾತ ಶಿಶುಗಳ ಮಾಸಿನಲ್ಲೂ ಕಂಡುಬಂದಿವೆ.
ಭಾರತವೂ ಇಂಥದ್ದೇ ಬಿಕ್ಕಟ್ಟನ್ನು ಎದುರಿಸುತ್ತಿದೆ. ದೇಶದಲ್ಲಿ ಪ್ಲಾಸ್ಟಿಕ್ ಬಳಕೆಯ ಪ್ರಮಾಣವು ವರ್ಷದಿಂದ ವರ್ಷಕ್ಕೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಲೇ ಇದ್ದು, ಪ್ರಸ್ತುತ ಈ ಪ್ರಮಾಣವು 2 ಕೋಟಿ ಟನ್‌ಗಳಷ್ಟಿದೆ. ಇದಕ್ಕೆ ತಕ್ಕಂತೆ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣವೂ ಹೆಚ್ಚಾಗಿದೆ. ದೇಶದಲ್ಲಿ 2023ರಲ್ಲಿ 35 ಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯ ಸೃಷ್ಟಿಯಾಗಿದೆ; ಈ ಪೈಕಿ, ಚಿಂದಿ ಆಯುವವರಿಂದ ಮತ್ತು ತ್ಯಾಜ್ಯ ವಿಂಗಡಿಸುವವರಂಥ ಅಸಂಘಟಿತ ವಲಯಗಳಿಂದ ಕೇವಲ ಶೇ 30ರಷ್ಟು ಮಾತ್ರ ಮರುಬಳಕೆಯಾಗಿದೆ.
ಪ್ಲಾಸ್ಟಿಕ್ ಮಾಲಿನ್ಯದ ಬಿಕ್ಕಟ್ಟು ತೀವ್ರಗೊಂಡ ಪರಿಣಾಮ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವಾಲಯವು 2022ರಲ್ಲಿ ಕಡಿಮೆ ಉಪಯೋಗ ಮತ್ತು ಹೆಚ್ಚು ತ್ಯಾಜ್ಯ ಸೃಷ್ಟಿ ಸಾಮರ್ಥ್ಯದ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಿತು. 140 ಕೋಟಿ ಜನಸಂಖ್ಯೆಯ ದೇಶದಲ್ಲಿ ಇದು ಮಹತ್ವಾಕಾಂಕ್ಷಿ ಹೆಜ್ಜೆಯಾಗಿತ್ತು. ಇದಾದ ಮೂರು ವರ್ಷದ ನಂತರ ವಾಸ್ತವವು ಸಂಕೀರ್ಣವಾಗಿಯೇ ಇದೆ. ನಿಷೇಧದ ಹೊರತಾಗಿಯೂ ಜಾರಿಯಲ್ಲಿನ ಸವಾಲುಗಳು, ಪ್ರಭಾವದಲ್ಲಿನ ವ್ಯತ್ಯಾಸಗಳು ಮತ್ತು ಮೂಲಸೌಕರ್ಯಗಳ ಕೊರತೆಯಿಂದ ಅದು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ.
ದಿನನಿತ್ಯ ಅಲ್ಪಾವಧಿಗೆ ಬಳಸಿ ಎಸೆಯಲಾಗುತ್ತಿದ್ದ, ಪರಿಸರದ ಮೇಲೆ ಶಾಶ್ವತ ಪರಿಣಾಮ ಬೀರುವ ಪ್ಲಾಸ್ಟಿಕ್ ವಸ್ತುಗಳನ್ನು ಗಮನದಲ್ಲಿಟ್ಟುಕೊಂಡು 2022ರಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಲಾಗಿತ್ತು. ನಮ್ಮ ಬೀದಿಗಳು ಚೊಕ್ಕವಾಗುವುದಷ್ಟೇ ಅಲ್ಲದೇ, ದೇಶದಲ್ಲಿ ಹೆಚ್ಚುತ್ತಿದ್ದ ಪ್ಲಾಸ್ಟಿಕ್ ಬಿಕ್ಕಟ್ಟನ್ನು ಎದುರಿಸುವ ವಿಚಾರದಲ್ಲಿ ಈ ನಿಷೇಧ ನಿರ್ಣಾಯಕ ಹೆಜ್ಜೆ ಎಂದೇ ಪರಿಗಣಿಸಲಾಗಿತ್ತು.
ಕೇಂದ್ರ ಸರ್ಕಾರವು ಪ್ಲಾಸ್ಟಿಕ್ ನಿಷೇಧವನ್ನು ಅನುಷ್ಠಾನಕ್ಕೆ ತರುವ ದಿಸೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸ್ಥಳೀಯ ನಗರಾಡಳಿತಗಳು ಸೇರಿದಂತೆ ವಿವಿಧ ಸಹಭಾಗಿ ಸಂಸ್ಥೆಗಳ ಪಾತ್ರವನ್ನು ಕೇಂದ್ರೀಕರಿಸಿ, ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಿತು.
ಆರಂಭದಲ್ಲಿ ನಿಯಮದ ಬಗ್ಗೆ ಅತ್ಯುತ್ಸಾಹ ಇತ್ತು. 2022ರ ಜುಲೈನಲ್ಲಿ ತಿಂಗಳು ಪೂರ್ತಿ ಏಕಬಳಕೆಯ ಪ್ಲಾಸ್ಟಿಕ್ ‘ಉತ್ಪಾದನೆ, ಆಮದು, ದಾಸ್ತಾನು, ವಿತರಣೆ, ಮಾರಾಟ ಮತ್ತು ಬಳಕೆ’ ಅನ್ನು ಗುರಿಯಾಗಿಸಿಕೊಂಡು ಪ್ರಚಾರಾಂದೋಲನ ನಡೆಸಲಾಯಿತು. ಈ ವೇಳೆ, ಅಧಿಕಾರಿಗಳು 775 ಟನ್ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಜಪ್ತಿ ಮಾಡಿ, ನಿಯಮ ಉಲ್ಲಂಘಿಸಿದವರಿಗೆ ₹5.8 ಕೋಟಿ ದಂಡ ವಿಧಿಸಿದ್ದರು. ಮುಂಬೈ, ಬೆಂಗಳೂರು ಮತ್ತು ಚೆನ್ನೈನಲ್ಲಿ ಅಧಿಕಾರಿಗಳು ದಾಳಿಗಳನ್ನು ನಡೆಸಿ, ಪ್ಲಾಸ್ಟಿಕ್ ದಾಸ್ತಾನನ್ನು ಜಪ್ತಿ ಮಾಡಿ, ಅರಿವು ಮೂಡಿಸುವ ಕಾರ್ಯಕ್ರಮಗಳನ್ನೂ ನಡೆಸಿದ್ದರು. ಕೆಲ ಕಾಲ ಹತ್ತಿಯ ಬ್ಯಾಗ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದವು.
ಕಾಲ ಸರಿದಂತೆ, ಪ್ಲಾಸ್ಟಿಕ್ ನಿಷೇಧದ ಅನುಷ್ಠಾನದಲ್ಲಿನ ಬಿಗಿ ಸಡಿಲವಾಗತೊಡಗಿತು. ಇಂದು, ವಿಶೇಷವಾಗಿ ಸಣ್ಣ ಪಟ್ಟಣಗಳಲ್ಲಿ ಮತ್ತು ಸರ್ಕಾರದ ನಿಯಂತ್ರಣ ಅಷ್ಟಾಗಿ ಇಲ್ಲದ ಮಾರುಕಟ್ಟೆಗಳಲ್ಲಿ, ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್‌ನ ಅನೇಕ ವಸ್ತುಗಳನ್ನು ಮತ್ತೆ ಬಳಸಲಾಗುತ್ತಿದೆ. ದೊಡ್ಡ ನಗರಗಳಲ್ಲಿಯೂ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳು ಪ್ಯಾಕೇಜಿಂಗ್, ಚಿಲ್ಲರೆ ಅಂಗಡಿ ಮತ್ತು ಡೆಲಿವರಿ ಸೇವೆಗಳಲ್ಲಿ ಬಳಸಲಾಗುತ್ತಿದೆ. ಸಂವಹನದಲ್ಲಿನ ಲೋಪ ಮತ್ತು ಅಸ್ಪಷ್ಟ ಪರ್ಯಾಯಗಳು ಈ ಕುರಿತ ಗೊಂದಲಕ್ಕೆ ಅರ್ಧ ಮಟ್ಟಿಗೆ ಕಾರಣವಾಗಿವೆ. ಕಾರ್ಪೊರೇಟ್‌ನಂಥ ಕೆಲವು ವಲಯಗಳಲ್ಲಿ ಬದಲಾವಣೆ ಆಗಿದ್ದರೂ, ಪ್ಲಾಸ್ಟಿಕ್ ಬಳಕೆಯ ವಿಚಾರದಲ್ಲಿ ಗ್ರಾಹಕರ ವರ್ತನೆ ಬಹುತೇಕ ಹಿಂದಿನಂತೆಯೇ ಇದೆ.
ಈ ಪೈಕಿ ದೊಡ್ಡ ಸವಾಲು ಎಂದರೆ, ವಿವಿಧ ರಾಜ್ಯಗಳಲ್ಲಿ ಮತ್ತು ನಗರಗಳಲ್ಲಿ ಇರುವ ಭಿನ್ನ ಭಿನ್ನ ಅನುಷ್ಠಾನ ವಿಧಾನಗಳು. ಮಹಾರಾಷ್ಟ್ರ ಮತ್ತು ತಮಿಳುನಾಡುನಂಥ ರಾಜ್ಯಗಳಲ್ಲಿ ಸುಸ್ಥಿರ ಮಾದರಿಗಳನ್ನು ಅನುಸರಿಸುತ್ತಿದ್ದರೆ, ಇತರ ಬಹುತೇಕ ರಾಜ್ಯಗಳು ನಿರ್ದಿಷ್ಟ ದಾಳಿಗಳಿಗೆ ಮಾತ್ರ ಸೀಮಿತವಾಗಿ, ನಂತರ ಅದರ ಪರಿಣಾಮಗಳತ್ತ ಗಮನಹರಿಸುತ್ತಿಲ್ಲ. ಮೇಲಾಗಿ, ನಿಯಮ ಉಲ್ಲಂಘನೆಯ ಪ್ರಕರಣಗಳು, ವಸೂಲಾದ ದಂಡಗಳು ಅಥವಾ ಪುನರಾವರ್ತಿತ ತಪ್ಪು ಎಸಗಿದವರಿಗೆ ವಿಧಿಸಲಾದ ಶಿಕ್ಷೆ ಇತ್ಯಾದಿ ಮಾಹಿತಿಯ ಕೇಂದ್ರೀಕೃತ ದತ್ತಾಂಶವೇ ಲಭ್ಯವಿಲ್ಲ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ನಾಗರಿಕರೇ ದೂರು ನೀಡಲು ಅನುಕೂಲವಾಗುವಂತೆ ಎಸ್‌ಯುಪಿ–ಸಿಪಿಸಿಬಿ ಮೊಬೈಲ್ ಆ್ಯಪ್ ರೂಪಿಸಿದ್ದರೂ, ಅದರ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ. ಹೀಗಾಗಿ, ತಂತ್ರಜ್ಞಾನದ ಬಳಕೆಯಲ್ಲಿ ಮುಂದಿರುವ ನಗರಗಳಲ್ಲೂ ಈ ಆ್ಯಪ್ ಬಳಕೆಯ ಪ್ರಮಾಣ ಸೀಮಿತವಾಗಿದೆ.
ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ವಿಶ್ವವ್ಯಾಪಿಯಾಗಿದ್ದರೂ, ನಗರಗಳಲ್ಲಿ ಅದರ ಪ್ರಭಾವ ಹೆಚ್ಚು. ನಗರಗಳಲ್ಲಿ ಜನಸಂಖ್ಯೆ ಮತ್ತು ವಸ್ತುಗಳ ಬಳಕೆ ಹೆಚ್ಚಿರುವುದರಿಂದ ದೇಶದ ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ಹೆಚ್ಚಿನ ಪಾಲು ನಗರಗಳಲ್ಲಿಯೇ ಸೃಷ್ಟಿಯಾಗುತ್ತಿದೆ. ಸಮಪರ್ಕ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಇಲ್ಲದಿರುವುದರಿಂದ ಪರಿಸ್ಥಿತಿ ಹದಗೆಟ್ಟಿದ್ದು, ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಸವಾಲಾಗಿ ಪರಿಣಮಿಸಿದೆ. ಭಾರತದಲ್ಲಿ 2030ರ ಹೊತ್ತಿಗೆ ನಗರಗಳ ಜನಸಂಖ್ಯೆ ಶೇ 40ಕ್ಕೂ ಹೆಚ್ಚಾಗಲಿದ್ದು, 2036ರ ಹೊತ್ತಿಗೆ 60 ಕೋಟಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯೂ ತೀವ್ರ ರೂಪ ತಾಳಲಿದೆ.
ಪ್ಲಾಸ್ಟಿಕ್ ನಿಷೇಧದ ವಿಚಾರದಲ್ಲಿ ಯಾರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎನ್ನುವ ವಿಚಾರದಲ್ಲಿನ ಅಸಮತೋಲನವು ಆತಂಕಕ್ಕೆ ಕಾರಣವಾಗಿದೆ. ಪ್ಲಾಸ್ಟಿಕ್ ನಿಷೇಧದಿಂದ ಅಸಂಘಟಿತ ವಲಯವು, ಮುಖ್ಯವಾಗಿ ಗ್ರಾಹಕರಿಗೆ ಸೇವೆ ನೀಡಲು ಕಡಿಮೆ ಬೆಲೆಯ ಪ್ಲಾಸ್ಟಿಕ್ ವಸ್ತುಗಳನ್ನು ಅವಲಂಬಿಸಿರುವ ಕಿರು ಉದ್ದಿಮೆದಾರರು, ಸಣ್ಣ ವ್ಯಾಪಾರಿಗಳು, ಬೀದಿ ವ್ಯಾಪಾರಿಗಳು ಮತ್ತು ಆಹಾರ ಮಳಿಗೆಗಳ ಮಾಲೀಕರು ಹೆಚ್ಚು ಹೊರೆ ಹೊರಬೇಕಾಗಿದೆ.
ಪ್ಲಾಸ್ಟಿಕ್ ಬದಲಿಗೆ ಸುಸ್ಥಿರವಾದ ಪರ್ಯಾಯಗಳ ಬಳಕೆಗೆ ಅಗತ್ಯವಾದ ಸಂಪನ್ಮೂಲಗಳು ಈ ವರ್ಗದ ಜನರಲ್ಲಿ ಇಲ್ಲ. ಇವರಿಗೆ ಪರಿಸರಸ್ನೇಹಿ ವಸ್ತುಗಳ ಬಳಕೆಯು ಆಯ್ಕೆಯ ಪ್ರಶ್ನೆಯಾಗಿರದೇ ವೆಚ್ಚದ ಪ್ರಶ್ನೆಯಾಗಿದೆ. ಸ್ಟಾರ್ಚ್ (ಪಿಷ್ಟ) ಆಧಾರಿತ ಪರ್ಯಾಯಗಳು ಪರಿಸರಸ್ನೇಹಿ ಆಗಿದ್ದರೂ, ಪ್ಲಾಸ್ಟಿಕ್‌ಗಿಂತ ಶೇ 30ರಷ್ಟು ದುಬಾರಿ ಮತ್ತು ಅವು ದೊಡ್ಡ ನಗರಗಳ ಸಗಟು ವ್ಯಾಪಾರಿಗಳ ಬಳಿ ಮಾತ್ರ ಸಿಗುತ್ತವೆ. ಸಣ್ಣಪಟ್ಟಣಗಳಲ್ಲಿರುವ ವ್ಯಾಪಾರಿಗಳಿಗೆ ಇವುಗಳ ಸಾಗಣೆಯೂ ಭಾರಿ ಪ್ರಯಾಸದ ಕೆಲಸವಾಗಿದೆ.
ಪ್ಲಾಸ್ಟಿಕ್ ಪೂರೈಕೆ ಸರಪಳಿಯಲ್ಲಿ ಪ್ರಮುಖ ಪಾಲುದಾರರಾದ ಉತ್ಪಾದಕರು, ವಿತರಕರು ಮತ್ತು ಎಫ್‌ಎಂಜಿಜಿ ಬ್ರ್ಯಾಂಡ್‌ಗಳು ಯಾವುದೇ ತೊಂದರೆ ಇಲ್ಲದೇ ಕಾರ್ಯಾಚರಣೆ ಮಾಡುತ್ತಿರುತ್ತವೆ. ಆದರೆ, ಅಧಿಕಾರಿಗಳು ಕೆಳಹಂತದ ಬಳಕೆದಾರರಾದ ಬೀದಿ ವ್ಯಾಪಾರಿಗಳು, ಸಣ್ಣ ಅಂಗಡಿಗಳು ಮತ್ತು ಅಸಂಘಟಿತ ವ್ಯಾಪಾರಿಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದು, ಅವರು ಸರ್ಕಾರದ ನಿಯಮಗಳ ಅಸಮಂಜಸ ಹಾಗೂ ಸ್ವೇಚ್ಛಾನುಸಾರ ಜಾರಿಗೆ ಗುರಿಯಾಗುತ್ತಿದ್ದಾರೆ.
ಈ ವ್ಯತ್ಯಾಸವು, ಸುಸ್ಥಿರತೆಯೆಡೆಗಿನ ಪ್ರಯತ್ನಗಳಲ್ಲಿ ನಾವು ನಿಷ್ಪಕ್ಷಪಾತವಾಗಿರುವುದು ಮತ್ತು ಜವಾಬ್ದಾರಿಯಿಂದಿರುವುದನ್ನು ಹೇಗೆ ಅರ್ಥಮಾಡಿಕೊಂಡಿದ್ದೇವೆ ಎನ್ನುವುದರ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಾಗೆಯೇ ಕಡಿಮೆ ಸಂಪನ್ಮೂಲಗಳಿರುವವರು ಕಠಿಣ ಪರಿಶೋಧನೆಗೆ ಒಳಗಾಗುವ, ಹೆಚ್ಚು ಪ್ರಭಾವ ಬೀರುವವರು ಕಡಿಮೆ ಪರಿಣಾಮ ಎದುರಿಸುತ್ತಿರುವ ವ್ಯವಸ್ಥೆಯಲ್ಲಿ ನ್ಯಾಯಸಮ್ಮತವಾದ ನಿಯಮಗಳ ರಚನೆಯ ಅಗತ್ಯದ ಬಗ್ಗೆ ಗಮನ ಸೆಳೆಯುತ್ತಿದೆ.
ಪ್ಲಾಸ್ಟಿಕ್
ಪ್ಲಾಸ್ಟಿಕ್‌ಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ನಡೆಯುತ್ತಿರುವ ಬಹುತೇಕ ಚರ್ಚೆಗಳು ನಾವು ಪ್ಲಾಸ್ಟಿಕ್ ಬಳಸುವುದು, ಎಸೆಯುವುದು ಅಥವಾ ಬಳಸದೇ ಇರುವಂತಹ, ನಮಗೆ ಕಾಣುವ ವಿಚಾರಗಳನ್ನೇ ಕೇಂದ್ರೀಕರಿಸಿವೆ. ಇದಷ್ಟೇ ಅಲ್ಲ, ಪ್ಲಾಸ್ಟಿಕ್ ತಯಾರಕರ ಕುರಿತೂ ಗಮನ ಹರಿಸುವುದು ಮುಖ್ಯ. ಪ್ಲಾಸ್ಟಿಕ್‌ನ ಜೀವನ ಚಕ್ರದಲ್ಲಿ ಬಹುಹಂತದ ಪ್ಯಾಕೇಜಿಂಗ್‌ಗೆ ಬಳಸುವ ಪ್ಲಾಸ್ಟಿಕ್ ಮತ್ತು ಹೆಚ್ಚು ಬೇಡಿಕೆ ಇರುವ ಸರಕುಗಳನ್ನು ತಯಾರಿಸುವ ಕಂಪನಿಗಳು ಪ್ರಮುಖ ಪಾತ್ರವಹಿಸುತ್ತವೆ. ಹೀಗಾಗಿ, ನಾವು ಪ್ಲಾಸ್ಟಿಕ್ ತಯಾರಕರ ಮೇಲೆ ಉತ್ತರದಾಯಿತ್ವ ನಿಗದಿ ಪಡಿಸುವ ಬಗ್ಗೆ ಆಳವಾದ ಚರ್ಚೆ ನಡೆಸಬಹುದು ಹಾಗೂ ಗ್ರಾಹಕರು ಪ್ಲಾಸ್ಟಿಕ್ ಬಳಸುತ್ತಿರುವುದರ ಬದಲು ಗ್ರಾಹಕರಿಗೆ ಪ್ಲಾಸ್ಟಿಕ್ ತಲುಪುವುದಕ್ಕೂ ಮೊದಲು ಏನೇನು ಆಗುತ್ತದೆ ಎಂಬುದರ ಬಗ್ಗೆ ನಮ್ಮ ಗಮನವನ್ನು ಹರಿಸಬಹುದು.
ಭಾರತದಲ್ಲಿ ತಯಾರಕರ ವಿಸ್ತೃತ ಜವಾಬ್ದಾರಿ (ಇಪಿಆರ್) ಚೌಕಟ್ಟು ಜಾರಿಯಲ್ಲಿದೆ. ಗ್ರಾಹಕರು ಬಳಸಿದ ಪ್ಲಾಸ್ಟಿಕ್ ಅನ್ನು ಸಂಗ್ರಹಿಸುವುದು ಮತ್ತು ಅದರ ಸಂಸ್ಕರಣೆ ಮಾಡುವ ಜವಾಬ್ದಾರಿಯನ್ನು ತಯಾರಿಕರಿಗೇ ವಹಿಸುವುದರ ಮೂಲಕ ಈಗಿರುವ ಅಸಮತೋಲನವನ್ನು ಸರಿಪಡಿಸುವ ಉದ್ದೇಶವನ್ನು ಇದು ಹೊಂದಿದೆ. ಇದೊಂದು ಭರವಸೆದಾಯಕ ಯೋಚನೆ. ಒಂದು ವೇಳೆ ಅದನ್ನು ಸಮರ್ಥವಾಗಿ ಜಾರಿಗೆ ತಂದರೆ ಉತ್ತರದಾಯಿತ್ವವು ಗ್ರಾಹಕರಿಗೆ ಸರಕು ಮತ್ತು ಸೇವೆಗಳನ್ನು ಪೂರೈಸುವ ವ್ಯವಸ್ಥೆಗೆ (ಕಂಪನಿಗಳಿಗೆ) ವರ್ಗಾವಣೆಯಾಗಲಿದೆ. ಆದರೆ, ವಾಸ್ತವದಲ್ಲಿ ‘ಇಪಿಆರ್’ ಹಲವು ಅಡೆತಡೆಗಳನ್ನು ಎದುರಿಸುತ್ತಿದೆ. ಇವುಗಳ ಮೇಲೆ ನಿಗಾ ವ್ಯವಸ್ಥೆ ಸಮರ್ಪಕವಾಗಿಲ್ಲ. ದತ್ತಾಂಶಗಳ ದಾಖಲೀಕರಣವೂ ಸರಿಯಾಗಿ ಆಗುತ್ತಿಲ್ಲ. ನಿಯಮಗಳ ಅನುಸರಣೆಯ ಬಗ್ಗೆ ಸ್ಪಷ್ಟತೆಯೇ ಇಲ್ಲ. ನೋಂದಾಯಿತ ಹಲವು ಪ್ಲಾಸ್ಟಿಕ್ ತಯಾರಕರು ಯಾವ ರೀತಿಯಲ್ಲಿ ಪ್ಲಾಸ್ಟಿಕ್ ಸಂಗ್ರಹ ಗುರಿಯನ್ನು ತಲುಪುತ್ತಿದ್ದಾರೆ ಮತ್ತು ಮೂರನೇ ವ್ಯಕ್ತಿ/ಸಂಸ್ಥೆಯಿಂದ ಲೆಕ್ಕಪರಿಶೋಧನೆ ನಡೆಸುತ್ತಿದ್ದಾರೆ ಎಂಬುದನ್ನು ಇನ್ನೂ ವಿವರಿಸಿಲ್ಲ.
ಇದರ ಜೊತೆಗೆ, ಅಗ್ಗದ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳು ಅನಧಿಕೃತ ಮಾರ್ಗಗಳು ಮತ್ತು ಸಮರ್ಪಕ ಮೇಲ್ವಿಚಾರಣೆ ಇಲ್ಲದ ಪೂರೈಕೆ ಸರಪಳಿಗಳ ಮೂಲಕ ಭಾರತಕ್ಕೆ ಬರುತ್ತಿರುವುದು ಮುಂದುವರಿದಿದೆ. ದೇಶಿಯವಾಗಿ ನಡೆಯುತ್ತಿರುವ ಪ್ಲಾಸ್ಟಿಕ್ ತಯಾರಿಕೆ ಮತ್ತು ಆಮದುಗಳ ಮೇಲೆ ನಿಯಂತ್ರಣ ಹೇರಲು ರಾಷ್ಟ್ರೀಯ ಮಟ್ಟದಲ್ಲಿ ಏಕರೂಪದ ರಾಷ್ಟ್ರೀಯ ಚೌಕಟ್ಟು ಇಲ್ಲದೇ ಇದ್ದರೆ ಪ್ಲಾಸ್ಟಿಕ್ ಮೇಲೆ ನಿಯಂತ್ರಣ ಹೇರುವ ಪ್ರಯತ್ನ ಅಪೂರ್ಣವಾಗಲಿದೆ.
ಅತ್ಯುತ್ತಮ ನೀತಿಗಳು ಯಶಸ್ವಿಯಾಗಬೇಕಾದರೆ ಅದಕ್ಕೆ ಪೂರಕವಾದ ವ್ಯವಸ್ಥೆ ಬೇಕು. ಭಾರತದ ಪ್ಲಾಸ್ಟಿಕ್ ನಿಷೇಧದ ವಿಚಾರದಲ್ಲಿ ಪೂರಕ ವ್ಯವಸ್ಥೆ ಎಂದರೆ, ತ್ಯಾಜ್ಯ ನಿರ್ವಹಣಾ ಮೂಲಸೌಕರ್ಯಗಳು. ಅಂದಾಜಿನ ಪ್ರಕಾರ, ದೇಶದಲ್ಲಿ ಬಳಸಲಾಗುವ ಒಟ್ಟು ಪ್ಲಾಸ್ಟಿಕ್‌ನಲ್ಲಿ ಶೇ 60ರಷ್ಟು ಪ್ಲಾಸ್ಟಿಕ್ ಸಂಗ್ರಹಿಸಲಾಗುತ್ತದೆ. ಆದರೆ, ಅದರಲ್ಲಿ ಮರುಬಳಕೆ ಮಾಡಲಾಗುತ್ತಿರುವ ಪ್ಲಾಸ್ಟಿಕ್ ಪ್ರಮಾಣ ಅರ್ಧಕ್ಕೂ ಕಡಿಮೆ. ಪ್ಲಾಸ್ಟಿಕ್ ಮರುಬಳಕೆ ಯತ್ನಕ್ಕೆ ಹೆಚ್ಚು ಕೊಡುಗೆ ನೀಡುತ್ತಿರುವರು ತ್ಯಾಜ್ಯ ಸಂಗ್ರಾಹಕರು ಮತ್ತು ಕಸ ಬೇರ್ಪಡಿಸುವಂತಹ ಅಸಂಘಟಿತ ಕಾರ್ಮಿಕರು. ಈ ವಿಚಾರದಲ್ಲಿ ಅವರು ನಿರ್ವಹಿಸುತ್ತಿರುವ ಪಾತ್ರ ನಿರ್ಣಾಯಕವಾದರೂ, ಅವರ ಕೆಲಸವನ್ನು ಕಡೆಗಣಿಸಲಾಗುತ್ತಿದೆ. ಅವರಿಗೆ ಬೆಂಬಲವೂ ಸಿಗುತ್ತಿಲ್ಲ.
ದೇಶದಲ್ಲಿ ತ್ಯಾಜ್ಯ ವಿಂಗಡಣೆ ಮತ್ತು ಸಂಸ್ಕರಣೆ ಸೌಲಭ್ಯಗಳಲ್ಲಿ ಕೊರತೆ ಇದೆ. ಇಂದೋರ್ ಮತ್ತು ಪುಣೆಯಂತಹ ನಗರಗಳು ಕಸ ಸಂಗ್ರಹಣೆಯಲ್ಲಿ ವಿಕೇಂದ್ರಿಕರಣ, ನಾಗರಿಕರ ತೊಡಗಿಸಿಕೊಳ್ಳುವಿಕೆ ಮತ್ತು ಜಾಗೃತಿ ಕಾರ್ಯಕ್ರಮಗಳಿಗೆ ಹೂಡಿಕೆ ಮಾಡುವ ಮೂಲಕ ಗಮನಾರ್ಹ ಸಾಧನೆ ಮಾಡಿವೆ. ಆದರೆ, ಇಂತಹ ಉದಾಹರಣೆಗಳು ಒಂದು ನಿಯಮವಾಗಿ ರೂಪುಗೊಳ್ಳುವುದರ ಬದಲು ಅಪವಾದವಾಗಿ ಉಳಿದಿವೆ. ದೇಶದ ಸಣ್ಣ ಪಟ್ಟಣಗಳು, ಅರೆ ನಗರ ಪ್ರದೇಶಗಳಲ್ಲಿ ಸ್ಥಳೀಯ ಆಡಳಿತಗಳು ಅನುದಾನದ ಕೊರತೆ, ಸಾಗಣೆ ಸವಾಲುಗಳು ಹಾಗೂ ತರಬೇತಿ ಮತ್ತು ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿವೆ.
ಇವುಗಳ ಪರಿಣಾಮವನ್ನು ನಾವು ದೇಶದಾದ್ಯಂತ ಕಾಣುತ್ತಿದ್ದೇವೆ. ನದಿಗೆ ಪ್ಲಾಸ್ಟಿಕ್ ಎಸೆಯುವುದು ಅಥವಾ ದಡದಲ್ಲಿ ಪ್ಲಾಸ್ಟಿಕ್‌ಗೆ ಬೆಂಕಿ ಹಚ್ಚುವುದನ್ನು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ನಿಷೇಧಿಸಿದ್ದರೂ ಸಮರ್ಪಕವಾಗಿ ನಿರ್ವಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಚೆನ್ನೈನ ಅಡ್ಯಾರ್ ನದಿ ತೀರದಲ್ಲಿ ಎಸೆಯುವುದು, ಬೆಂಕಿ ಹಚ್ಚುವುದನ್ನು ನಿರಂತರವಾಗಿ ಮಾಡಲಾಗುತ್ತಿದೆ. ಇದು ವಾಯು ಮತ್ತು ಜಲ ಮಾಲಿನ್ಯವನ್ನು ಉಂಟು ಮಾಡುವುದಲ್ಲದೆ, ಬೇರೆ ಸ್ಥಳಗಳಲ್ಲಿ ಮಾಡಲಾಗಿರುವ ಪರಿಸರ ಸಂರಕ್ಷಣೆಯನ್ನೂ ಹಾಳು ಮಾಡುತ್ತದೆ. ನಗರ ಪ್ರದೇಶಗಳ ಚರಂಡಿಗಳಲ್ಲಿ, ಖಾಲಿ ನಿವೇಶನಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳ ಅಂಚಿನಲ್ಲಿ ಇಂತಹುದೇ ಉದಾಹರಣೆಗಳು ಕಾಣಸಿಗುತ್ತವೆ.
ಈ ಎಲ್ಲ ಸಂಕೀರ್ಣತೆಗಳ ನಡುವೆಯೂ ದೇಶದಾದ್ಯಂತ ವಿವಿಧ ನಗರಗಳು ಮತ್ತು ಸಮುದಾಯಗಳಲ್ಲಿ ಸದ್ದುಗದ್ದಲಗಳಿಲ್ಲದೆ ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಆಶಾದಾಯಕ ಬೆಳವಣಿಗೆಗಳು ನಡೆಯುತ್ತಿವೆ.
ಗುಜರಾತ್‌ನ ವಡೋದರಾದಲ್ಲಿ ವಿಶ್ವಮಿತ್ರಿ ನದಿಯ ಪುನಶ್ಚೇತನ ಕಾರ್ಯ ನಡೆಯುತ್ತಿದೆ. ಈ ಪ್ರಯತ್ನದ ಭಾಗವಾಗಿ ನದಿಯಿಂದ ಪ್ಲಾಸ್ಟಿಕ್ ತೆರವುಗೊಳಿಸುವ ಕಾರ್ಯದಲ್ಲಿ ಸ್ಥಳೀಯ ಸ್ವಚ್ಛತಾ ಕಾರ್ಮಿಕರು ಮತ್ತು ಚಿಂದಿ ಆಯುವವರನ್ನು ಸೇರಿಸಿಕೊಳ್ಳಲಾಗಿದೆ. ತಳ್ಳಮಟ್ಟದ ಈ ಸಹಭಾಗಿತ್ವದ ನದಿಯ ಪರಿಸರ ವ್ಯವಸ್ಥೆಯನ್ನು ಪುನರ್‌ಸ್ಥಾಪಿಸುವುದರ ಜೊತೆಗೆ ಅಸಂಘಟಿತ ಕಾರ್ಮಿಕರಿಗೂ ಮನ್ನಣೆ ಮತ್ತು ಘನತೆಯನ್ನು ತಂದುಕೊಡುತ್ತದೆ. ಉತ್ಪಾದನೆಯಾಗುವ ತ್ಯಾಜ್ಯವನ್ನು ಸ್ಥಳೀಯವಾಗಿಯೇ ಸಂಸ್ಕರಣೆ ಮಾಡುವ ಉದ್ದೇಶದಿಂದ ಪಂಚಾಯಿತಿ ಮಟ್ಟದಲ್ಲಿ ಪ್ಲಾಸ್ಟಿಕ್ ಕತ್ತರಿಸುವ ಸರಳ ಸಾಧನಗಳನ್ನು ಕೇರಳದಲ್ಲಿ ಸಣ್ಣ ಗ್ರಾಮಗಳು ಅಳವಡಿಸಿಕೊಳ್ಳಲು ಆರಂಭಿಸಿವೆ.
ದೇಶದ ವಿವಿಧ ನಗರ ಪಾಲಿಕೆಗಳು ಕೂಡ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಭುವನೇಶ್ವರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಭಿನ್ನವಾದ ಮಾದರಿ ಕ್ರಮವೊಂದನ್ನು ಜಾರಿಗೆ ತರಲಾಗಿದೆ. ಪ್ಲಾಸ್ಟಿಕ್ ಬಳಕೆಗಾಗಿ ವ್ಯಾಪಾರಿಗಳಿಗೆ ದಂಡ ವಿಧಿಸಿದಾಗ, ಆ ದಂಡಕ್ಕೆ ಸರಿಸಮಾನದ ಮೌಲ್ಯದ ವಸ್ತ್ರದ ಚೀಲಗಳನ್ನು ವ್ಯಾಪಾರಿಗಳಿಗೆ ನೀಡಲಾಗುತ್ತಿದೆ. ಉದಾಹರಣೆಗೆ ವ್ಯಾಪಾರಿಯೊಬ್ಬರಿಗೆ ₹10 ಸಾವಿರ ದಂಡ ವಿಧಿಸಿದರೆ, ಅಷ್ಟೇ ಮೌಲ್ಯದ 312 ಮರು ಬಳಕೆಯ ಹತ್ತಿ ಚೀಲವನ್ನು ನೀಡಲಾಗುತ್ತದೆ. ಇದೊಂದು ಆಲೋಚನಾಶೀಲ ಮಾದರಿಯಾಗಿದ್ದು ಇಲ್ಲಿ ನಿಯಮ ಕೂಡ ಅವಕಾಶವಾಗಿ ಮಾರ್ಪಾಡಾಗಿದೆ. ಜೀವನೋಪಾಯಕ್ಕೆ ತೊಂದರೆಯಾಗದಂತೆಯೂ ಬದಲಾವಣೆಯನ್ನು ತರಬಹುದು ಎಂಬುದನ್ನೂ ಇದು ಸಂಕೇತಿಸುತ್ತದೆ.
ಪ್ಲಾಸ್ಟಿಕ್ ಮುಕ್ತ ದೇಶ ನಿರ್ಮಾಣದಲ್ಲಿ ತಂತ್ರಜ್ಞಾನವೂ ಪ್ರಮುಖ ಪಾತ್ರವಹಿಸಬಹುದು. ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ‘ಸಿಂಗಲ್ ಯೂಸ್ ಪ್ಲಾಸ್ಟಿಕ್’ (ಎಸ್‌ಯುಪಿ) ತಂತ್ರಾಂಶವು ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಚಿತ್ರಗಳನ್ನು ಜಿಯೊಟ್ಯಾಗ್ ಮೂಲಕ ಅಪ್‌ಲೋಡ್ ಮಾಡಲು ನಾಗರಿಕರಿಗೆ ಅವಕಾಶ ನೀಡುತ್ತದೆ. ಇದು ಸಣ್ಣ ಪ್ರಯತ್ನವಾಗಿದ್ದರೂ, ಜನರ ಭಾಗೀದಾರಿಕೆಯ ವಿಚಾರದಲ್ಲಿ ಮಹತ್ವದ ನಿರ್ಧಾರವಾಗಿದೆ. ನಿಯಮಗಳನ್ನು ಪಾಲಿಸುವಂತೆ ಜನರಿಗೆ ಸೂಚಿಸುವುದು ಮಾತ್ರವಲ್ಲದೆ, ಅವುಗಳನ್ನು ರೂಪಿಸುವುದು ಮತ್ತು ಅನುಷ್ಠಾನಗೊಳಿಸುವಲ್ಲೂ ನೆರವಾಗುವಂತೆ ಇದು ಕೇಳಿಕೊಳ್ಳುತ್ತದೆ.
ಈ ಸಮಸ್ಯೆಗೆ ಸರಳವಾದ, ಏಕ ಪರಿಹಾರದ ಮಾರ್ಗ ಇಲ್ಲ. ಸಂಬಂಧಿಸಿದ ಪಾಲುದಾರರೆಲ್ಲರೂ ಒಟ್ಟಾಗಿ, ಪರಸ್ಪರ ಸಮನ್ವಯದಿಂದ ಕ್ರಮ ಕೈಗೊಳ್ಳಬೇಕಿದೆ. ನಿಯಂತ್ರಣ ಕ್ರಮಗಳು ಗ್ರಾಹಕ ಬಳಕೆಗೆ ಸೀಮಿತವಾಗದೆ ಅದರ ಆಚೆಗೂ ಇರಬೇಕು ಎಂಬ ಅಭಿಪ್ರಾಯ ನೀತಿ ನಿರೂಪಣೆಯ ಹಂತದಲ್ಲಿ ಮನ್ನಣೆ ಗಳಿಸುತ್ತಿದೆ. ಪ್ಲಾಸ್ಟಿಕ್ ಅನ್ನು ಹೇಗೆ ತಯಾರಿಸಲಾಗುತ್ತದೆ? ಅದನ್ನು ಹೇಗೆ ಬಳಸಲಾಗುತ್ತದೆ ಮತ್ತು ಅತ್ಯಂತ ಮುಖ್ಯವಾಗಿ ಅದರ ವಿಲೇವಾರಿ ನಂತರ ಹೇಗೆ ನಿರ್ವಹಿಸಲಾಗುತ್ತದೆ ಎಂಬುದರ ಬಗ್ಗೆ ಗಮನಹರಿಸುವುದು ಅಗತ್ಯವಾಗಿದೆ. ತಯಾರಕರ ವಿಸ್ತೃತ ಜವಾಬ್ದಾರಿಗಳನ್ನು (ಇಪಿಆರ್) ಇನ್ನಷ್ಟು ಬಲಪಡಿಸುವುದು ಮತ್ತು ರಾಜ್ಯ ಮಟ್ಟದ ಕ್ರಮಗಳನ್ನು ರಾಷ್ಟ್ರೀಯ ಗುರಿಗಳೊಂದಿಗೆ ಜೋಡಿಸುವುದರಿಂದ ಹೆಚ್ಚಿನ ಉತ್ತರದಾಯಿತ್ವವನ್ನು ನಿಗದಿಪಡಿಸುವುದಕ್ಕೆ ಸಾಧ್ಯ.
ಭಾರತದ ಅರ್ಥವ್ಯವಸ್ಥೆಯ ಅಸಂಘಟಿತ ವಲಯದಲ್ಲಿ ತೊಡಗಿಕೊಂಡಿರುವ ಸಣ್ಣ ಉದ್ದಿಮೆಗಳು ಏಕ ಬಳಕೆ ಪ್ಲಾಸ್ಟಿಕ್ ರಹಿತವಾಗಿ ವಹಿವಾಟು ನಡೆಸುವುದನ್ನು ಹೆಚ್ಚು ಪ್ರಾಯೋಗಿಕವಾಗಿ ಜಾರಿಗೆ ತರಬೇಕು. ಆರ್ಥಿಕ ಪ್ರೋತ್ಸಾಹ, ಸುಸ್ಥಿರ ಪ್ಯಾಕೇಜಿಂಗ್ ವಸ್ತುಗಳ ಸಗಟು ಖರೀದಿ ಮತ್ತು ಪೂರೈಕೆ ಸರಪಳಿಗಳಲ್ಲಿ ಹೆಚ್ಚು ಬಂಡವಾಳ ಹೂಡಿಕೆ ಮಾಡುವುದು ಅಗತ್ಯವಾಗಿದೆ. ಮಧ್ಯಪ್ರದೇಶ ಮತ್ತು ಒಡಿಶಾದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿರುವ ಸಹಕಾರಿ ಮಾದರಿಗಳು ಸ್ಥಳೀಯ ವ್ಯವಸ್ಥೆಯಲ್ಲಿ ಈ ರೀತಿಯ ನೆರವನ್ನು ಹೇಗೆ ಸೃಷ್ಟಿಸಬಹುದು ಎಂಬುದನ್ನು ತೋರಿಸಿವೆ.
ನಡವಳಿಕೆಯಲ್ಲಿನ ಬದಲಾವಣೆಗಳು ಕೂಡ ಪ್ರಮುಖ ಪಾತ್ರ ವಹಿಸಲಿವೆ. ಅಲ್ಪಾವಧಿಯ ಜಾಗೃತಿ ಅಭಿಯಾನಗಳು ತಕ್ಷಣಕ್ಕೆ ಗಮನಸೆಳೆಯಬಹುದು. ಆದರೆ ಸ್ಥಿರವಾದ, ಶಾಲೆಗಳು, ನಾಗರಿಕ ಗುಂಪುಗಳು ಅಥವಾ ಸ್ಥಳೀಯವಾಗಿ ಪ್ರಭಾವ ಬೀರುವವರ ಮೂಲಕ ಬರುವ ಸಾಂಸ್ಕೃತಿಕವಾಗಿ ಪ್ರಸ್ತುತವಾದ ಸಂದೇಶಗಳಿಂದ ದೀರ್ಘಾವಧಿಯ ಬದಲಾವಣೆಗಳು ಆಗುತ್ತವೆ.
ಅಂತಿಮವಾಗಿ, ಭಾರತವು ಏಕಾಂಗಿಯಾಗಿ ಈ ದಾರಿಯಲ್ಲಿ ನಡೆಯಬೇಕಾಗಿಲ್ಲ. ಜಾಗತಿಕ ಪ್ಲಾಸ್ಟಿಕ್ ಒಪ್ಪಂದದ ಕುರಿತಾಗಿ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಚರ್ಚೆ ವೇಗ ಪಡೆಯುತ್ತಿರುವ ಈ ಹೊತ್ತಿನಲ್ಲಿ ಭಾರತವು ತನ್ನ ವಿಶಿಷ್ಟ ಅಭಿವೃದ್ಧಿಯ ಮಾದರಿ ಸೃಷ್ಟಿಸುವುದು, ಪರಿಸರಕ್ಕೆ ಸಂಬಂಧಿಸಿದ ನಾಯಕತ್ವ ವಹಿಸುವುದು, ದೇಶಿಯ ಪ್ರಯತ್ನಗಳನ್ನು ಅಂತರರಾಷ್ಟ್ರೀಯ ಸಹಕಾರದೊಂದಿಗೆ ಜೋಡಿಸುವುದರ ಮೂಲಕ ಈ ಚೌಕಟ್ಟುಗಳಿಗೆ ರೂಪ ನೀಡಲು ಭಾರತ ನೆರವಾಗಬಹುದು.
ಲೇಖಕರಾದ ವೆಂಕಟೇಶ್ ರಾಘವೇಂದ್ರ ಅವರ ಜಾಗತಿಕ ಮಟ್ಟದ ಸಾಮಾಜಿಕ ಉದ್ಯಮಿ. ಪ್ರಜ್ಞಾ ರಾಜ್ ಸಿಂಗ್ ಅವರು ನೀತಿ ನಿರೂಪಣೆ, ಸಮುದಾಯ ಆಧಾರಿತ ಚಟುವಟಿಕೆಗಳ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಅಭಿವೃದ್ಧಿ ವೃತ್ತಿಪರರಾಗಿದ್ದಾರೆ. ಶ್ರುತಕೀರ್ತಿ ಶ್ರೀರಾಮ್ ಅವರು ವಕೀಲರು ಮತ್ತು ಸಾರ್ವಜನಿಕ ನೀತಿ ನಿರೂಪಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.