ನೆರವು ನಿಲ್ಲಿಸಿದ ಅಮೆರಿಕದ ವಿರುದ್ಧ ಜನರ ಆಕ್ರೋಶ
ರಾಯಿಟರ್ಸ್ ಚಿತ್ರ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ನೆರವು ಸ್ಥಗಿತ’ ಆದೇಶವು ಜಗತ್ತಿನ 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಅಸ್ಥಿರತೆ ಸೃಷ್ಟಿಸಿದೆ. ಹಿಂಸಾಚಾರದ ಕರಿನೆರಳು ಮತ್ತೆ ಆವರಿಸಿದೆ. ಅಭಿವೃದ್ಧಿ ಹಿಂದಕ್ಕೆ ಸರಿದು, ಭಯೋತ್ಪಾದನೆ ಮತ್ತೆ ಮುನ್ನೆಲೆಗೆ ಬರುತ್ತಿರುವುದು ಇಲ್ಲಿನ ಜನರ ನೆಮ್ಮದಿ ಕೆಡಿಸಿದೆ.
ಬೆಂಗಳೂರು: ಆಫ್ರಿಕಾ ಖಂಡದಲ್ಲಿರುವ ಪುನರ್ವಸತಿ ಕೇಂದ್ರಗಳಲ್ಲಿ ಕೆಲಸ ಮಾಡುವ ನೂರಾರು ಸಿಬ್ಬಂದಿಗೆ ಕಳೆದ ವಾರ ಆಘಾತ ಕಾದಿತ್ತು. ‘ನಾಳೆಯಿಂದ ನೀವು ಕೆಲಸಕ್ಕೆ ಬರುವುದು ಬೇಡ’ ಎಂಬ ಒಕ್ಕಣೆ ಅವರ ಭವಿಷ್ಯದ ಮೇಲೆ ಮಂಕು ಕವಿಯುವಂತೆ ಮಾಡಿತ್ತು. ಇಸ್ಲಾಮಿಕ್ ಸ್ಟೇಟ್ (ISIS) ಭಯೋತ್ಪಾದಕರಿಂದ ಪಾರಾಗಿ ನೆರವಿನ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದವರು ಈಗ ಮತ್ತೆ ಬೀದಿಗೆ ಬಿದ್ದಂತಾಗಿದೆ.
ಅಷ್ಟಕ್ಕೂ ಇವೆಲ್ಲದಕ್ಕೂ ಕಾರಣವಾಗಿದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ನೆರವು ಸ್ಥಗಿತ’ ಆದೇಶ. ಸಿರಿಯಾ, ಉಗಾಂಡ ಒಳಗೊಂಡಂತೆ ಆಫ್ರಿಕಾದ ಹಲವೆಡೆ ಅಸ್ಥಿರತೆ ಸೃಷ್ಟಿಸಿದೆ. ಹಿಂಸಾಚಾರದ ಕರಿನೆರಳು ಮತ್ತೆ ಆವರಿಸಿದೆ. ಐಎಸ್‌ಐಎಸ್ ಭಯೋತ್ಪಾದಕರು ಮತ್ತೆ ಮುನ್ನೆಲೆಗೆ ಬರುತ್ತಿರುವುದು ಇಲ್ಲಿನ ಜನರ ನೆಮ್ಮದಿ ಕೆಡಿಸಿದೆ.
ಬಡ ಹಾಗೂ ಅಭಿವೃದ್ಧಿಯಿಂದ ಹಿಂದುಳಿದ ರಾಷ್ಟ್ರಗಳಿಗೆ ಅಮೆರಿಕ ಇಷ್ಟು ವರ್ಷಗಳ ಕಾಲ ನೆರವಿನ ಹಸ್ತ ಚಾಚಿತ್ತು. ಆದರೆ, ಟ್ರಂಪ್ ಆಡಳಿತದಲ್ಲಿ ‘ಅಮೆರಿಕ ಮೊದಲು’ ಎಂಬ ಪರಿಕಲ್ಪನೆ ಜಾರಿಗೆ ಬಂದಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಕೆಲ ದಿನಗಳ ಹಿಂದೆ ಒಂದು ಆದೇಶ ಹೊರಡಿಸಿ, ಹಾಲಿ ಅಸ್ತಿತ್ವದಲ್ಲಿರುವ ಎಲ್ಲಾ ರೀತಿಯ ನೆರವನ್ನೂ 90 ದಿನಗಳ ಅವಧಿಗೆ ಸ್ಥಗಿತಗೊಳಿಸುವಂತೆ ಆದೇಶಿಸಿದರು. ಆದರೆ ಇಸ್ರೇಲ್ ಮತ್ತು ಈಜಿಪ್ಟ್‌ಗೆ ಸೇನೆ ಮತ್ತು ಆಹಾರ ನೆರವು ಮುಂದುವರಿದಿದೆ.
ಹೀಗೆ ಸ್ಥಗಿತಗೊಂಡ ಕಾರ್ಯಕ್ರಮಗಳಲ್ಲಿ ನೀರು, ನೈರ್ಮಲ್ಯ ಮತ್ತು ಲಸಿಕೆ ಅಭಿಯಾನಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ನೆರವು ಸ್ಥಗಿತಗೊಳಿಸುವ ಅಮೆರಿಕದ ಈ ನಿರ್ಧಾರದಿಂದ ಸುಮಾರು 35 ಲಕ್ಷ ಜನರು ತೊಂದರೆಗೆ ಸಿಲುಕಲಿದ್ದಾರೆ ಎಂದು ಬಿಆರ್‌ಎಸಿ ಎಂಬ ಸ್ವಯಂ ಸೇವಾ ಸಂಸ್ಥೆಯು ಹೇಳಿದೆ ಎಂದು ಬಿಬಿಸಿ ವರದಿ ಮಾಡಿದೆ. ಸದ್ಯ ಈ ಸಂಸ್ಥೆಯು ನಾಲ್ಕು ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿದೆ.
‘ನೆರವು ಸ್ಥಗಿತ ಆದೇಶವನ್ನು ಆಲಿಸಿ ಭೂಕಂಪಿಸಿದ ಅನುಭವವಾಯಿತು. ಜೀವರಕ್ಷಕ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ. ಮುಂದೆ ಏನು ಮಾಡಬೇಕೋ ತಿಳಿಯದಾಗಿದೆ’ ಎಂದ ಇಂಥ ಕೇಂದ್ರಗಳಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಆದರೆ ಮತ್ತೊಂದೆಡೆ ಅಮೆರಿಕದ ನಿರ್ಧಾರವನ್ನು ಸಮರ್ಥಿಸಿಕೊಳ್ಳುವವರೂ ಇದ್ದಾರೆ. ನೆರವಿನ ಯೋಜನೆಗಾಗಿ ಅಮೆರಿಕ ಪ್ರತಿದಿನ ವಿನಿಯೋಗಿಸುತ್ತಿರುವ ಹಣದ ಪ್ರಮಾಣ ವಾರ್ಷಿಕ ₹6 ಲಕ್ಷ ಕೋಟಿ. ಬೇರೆ ಯಾವ ರಾಷ್ಟ್ರಗಳೂ ಅಗತ್ಯ ಇರುವ ದೇಶಗಳ ನೆರವಿಗೆ ಇಷ್ಟೊಂದು ಹಣ ಖರ್ಚು ಮಾಡುತ್ತಿಲ್ಲ. ಬೇರೆಯವರಿಗೆ ನೆರವಾಗುತ್ತಲೇ ಅಮೆರಿಕ ಮೇಲಿನ ಹೊರೆ ಹೆಚ್ಚಾಗುತ್ತಿದೆ. ವಿದೇಶಗಳಿಗೆ ಇಷ್ಟೊಂದು ಹಣ ಖರ್ಚು ಮಾಡುವ ಬದಲು, ಅಮೆರಿಕದಲ್ಲೇ ಸಮಸ್ಯೆಯಲ್ಲಿರುವವರಿಗೆ ನೆರವಾಗುವುದು ಒಳಿತು ಎಂದಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳು, ಕುಟುಂಬ ಕಲ್ಯಾಣ, ಗರ್ಭಪಾತಕ್ಕೆ ಅವಕಾಶ ಹಾಗೂ ಇನ್ನಿತರ ವಿಷಯಗಳಲ್ಲಿ ಎಲ್ಲರನ್ನೂ ಒಳಗೊಳ್ಳುವ ಮತ್ತು ವೈವಿಧ್ಯತೆ ಹೊಂದುವ ಅಗತ್ಯವಿದೆ. ಹೀಗಾಗಿ ಇವುಗಳಿಗೆ ಬೆಂಬಲ ನೀಡದಿರುವ ತನ್ನ ನಿಲುವನ್ನು ಟ್ರಂಪ್ ಆಡಳಿತ ಸ್ಪಷ್ಟಪಡಿಸಿದೆ. ಈ ವಿಷಯಗಳ ಕುರಿತು ರಿಪಬ್ಲಿಕನ್ ಪಕ್ಷದ ಆಡಳಿತವು ಬಹುಕಾಲದಿಂದಲೂ ಭಿನ್ನಾಭಿಪ್ರಾಯ ಹೊಂದಿತ್ತು. ವ್ಯರ್ಥವಾಗಿ ಖರ್ಚು ಮಾಡಲಾಗುತ್ತಿದ್ದುದನ್ನು ಬೇರು ಸಹಿತ ಕಿತ್ತುಹಾಕಿ, ಹೊಸ ಅವಕಾಶಗಳನ್ನು ಸೃಷ್ಟಿಸುವ ಕೆಲಸಕ್ಕೆ ಕೈಹಾಕಲಾಗಿದೆ ಎಂದು ಅಮೆರಿಕ ಆಡಳಿತ ಹೇಳಿದೆ.
ಈ ನಿರ್ಧಾರದಿಂದಾಗಿ ಎಚ್‌ಐವಿ ಕಾರ್ಯಕ್ರಮಗಳಿಗೆ ಅಮೆರಿಕದ ನೆರವಿನೊಂದಿಗೆ ಜಾಗತಿಕ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದವರು ತಮ್ಮ ಕಂಪ್ಯೂಟರ್‌ಗಳಿಗೆ ಲಾಗಿನ್ ಆಗಲು ಸಾಧ್ಯವಾಗಲಿಲ್ಲ ಎಂದು ಯುಎಸ್‌ಏಡ್ ಜಾಗತಿಕ ಆರೋಗ್ಯ ಕಾರ್ಯಕ್ರಮದ ಸಹಾಯಕ ಆಡಳಿತಾಧಿಕಾರಿ ಡಾ. ಅತುಲ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಮತ್ತು ಮಾರ್ಕೊ ರುಬಿಯೊ
2003ರ ಸಂದರ್ಭದಲ್ಲಿ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲೂ. ಬುಷ್ ಅವರು ‘ಅಧ್ಯಕ್ಷರ ತುರ್ತು ಯೋಜನೆ ನಿಧಿ’ಯನ್ನು ಆರಂಭಿಸಿದರು. ಈ ನಿಧಿಯನ್ನು ನಿರ್ವಹಿಸಲು ಸದ್ಯ 2.5 ಲಕ್ಷ ಸಿಬ್ಬಂದಿ ಇದ್ದಾರೆ. ಇವರಲ್ಲಿ ವೈದ್ಯರು, ಶುಶ್ರೂಷಕರು ಹಾಗೂ ಇತರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. 55 ರಾಷ್ಟ್ರಗಳಲ್ಲಿ ವೈರಾಣು ಸೋಂಕು ನಿವಾರಕ ಲಸಿಕೆಯನ್ನು ವಿತರಿಸುವುದರ ಜತೆಗೆ, ಅತ್ಯಂತ ಕ್ಲಿಷ್ಟಕರ ಸನ್ನಿವೇಶಗಳನ್ನು ಈ ತಂಡ ನಿಭಾಯಿಸುತ್ತಿದೆ. ಎಚ್‌ಐವಿ ತಡೆಯುವ ನಿಟ್ಟಿನಲ್ಲೂ ಈ ಯೋಜನೆ ನೆರವಾಗುತ್ತಿತ್ತು. ಈ ಕಾರ್ಯಕ್ರಮ ಇದೀಗ ಸ್ಥಗಿತಗೊಂಡಿದೆ. ಇದರಿಂದ ಅಮೆರಿಕದ ನೆರವು ಪಡೆಯುತ್ತಿದ್ದ ಸುಮಾರು 2 ಕೋಟಿ ಎಚ್‌ಐವಿ ಸೋಂಕಿತರ ಬದುಕಿನ ಕುರಿತೇ ಪ್ರಶ್ನೆಗಳು ಮೂಡಿವೆ.
ತನ್ನ ನಿರ್ಧಾರದಿಂದ ಅಮೆರಿಕ ಹಿಂದೆ ಸರಿಯಬೇಕು. ಹಿಂದಿನಂತೆಯೇ ಅನುದಾನ ಮುಂದುವರಿಸಬೇಕು ಎಂಬ ಬೇಡಿಕೆಗಳನ್ನು ಹಲವು ರಾಷ್ಟ್ರಗಳು ಮುಂದಿಟ್ಟಿವೆ. ಜೀವ ರಕ್ಷಕ ಔಷಧಗಳು, ವೈದ್ಯಕೀಯ ನೆರವು, ಆಹಾರ, ಆಶ್ರಯದಂಥ ಯೋಜನೆಗಳನ್ನು ಹಿಂದಿನಂತೆಯೇ ಮುಂದುವರಿಸುವಂತೆ ಆಗ್ರಹಿಸಿವೆ.
ಎಂ–ಪಾಕ್ಸ್ ಹರಡುವಿಕೆ, ಹಕ್ಕಿ ಜ್ವರ ನಿರ್ವಹಣೆ ಹಾಗೂ ನರವ್ಯೂಹದ ಮೇಲೆ ಪ್ರಭಾವ ಬೀರುವ ಫೆಂಟನಿಲ್ ಸಮಸ್ಯೆ ಪರಿಹಾರಕ್ಕೆ ಅಮೆರಿಕ ನೀಡುತ್ತಿದ್ದ ನೆರವು ಮುಂದುವರಿಯಲಿದೆ. ಆದರೆ ಉಳಿದ ನೆರವು ಸ್ಥಗಿತಗೊಳಿಸಿದ್ದು ದುರಂತವೇ ಸರಿ ಎಂದು ಯುಎಸ್‌ಏಡ್‌ಗೆ ಬೈಡನ್ ಆಡಳಿತದಲ್ಲಿ ನೇಮಕಗೊಂಡ ಡಾ. ಗವಾಂಡೆ ತಿಳಿಸಿದ್ದಾರೆ.
‘ನಾವು ಖರ್ಚು ಮಾಡುವ ಪ್ರತಿಯೊಂದು ಡಾಲರ್, ನೆರವು ನೀಡುವ ಪ್ರತಿಯೊಂದು ಕಾರ್ಯಕ್ರಮಗಳು ಹಾಗೂ ನಾವು ಮುಂದುವರಿಸುವ ಪ್ರತಿಯೊಂದು ನೀತಿಗಳನ್ನೂ ನಾವು ಸಮರ್ಥಿಸಿಕೊಳ್ಳುವಂತಿರಬೇಕು. ಈ ಕಾರ್ಯಕ್ರಮಗಳನ್ನು ಬೆಂಬಲಿಸುವ ಮೊದಲು ಇದು ಅಮೆರಿಕಕ್ಕೆ ಸುರಕ್ಷಿತವೇ? ಅಮೆರಿಕವನ್ನು ಮತ್ತಷ್ಟು ಬಲಶಾಲಿಯನ್ನಾಗಿಸುವುದೇ? ಕಾರ್ಯಕ್ರಮಗಳು ಅಮೆರಿಕವನ್ನು ಹೆಚ್ಚು ಶ್ರೀಮಂತಗೊಳಿಸುವುದೇ? ಎಂಬ ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು ಎಂದಿದ್ದಾರೆ.ಮಾರ್ಕೊ ರೂಬಿಯೊ, ಅಮೆರಿಕ ವಿದೇಶಾಂಗ ಕಾರ್ಯದರ್ಶಿ
ಅಮೆರಿಕದಿಂದ ಅತಿ ಹೆಚ್ಚು ನೆರವು ಪಡೆಯುತ್ತಿರುವುದು ಉಕ್ರೇನ್. 2023ರ ದಾಖಲೆ ಪ್ರಕಾರ ಸುಮಾರು 16 ಶತಕೋಟಿ ಅಮೆರಿಕನ್ ಡಾಲರ್ ಈ ದೇಶಕ್ಕೆ ನೀಡಲಾಗುತ್ತಿದೆ. ನಂತರದ ಸ್ಥಾನದಲ್ಲಿ ಇಸ್ರೇಲ್ ಇದೆ. ಈ ದೇಶವು 3.31 ಶತಕೋಟಿ ಡಾಲರ್ ನೆರವು ಪಡೆಯುತ್ತಿದೆ.
ಇಥಿಯೊಪಿಯಾ– 1.77 ಶತಕೋಟಿ ಡಾಲರ್, ಜೋರ್ಡಾನ್– 1.72 ಶತಕೋಟಿ, ಈಜಿಪ್ಟ್– 1.4 ಶತಕೋಟಿ, ಆಫ್ಗಾನಿಸ್ತಾನ– 1.27 ಶತಕೋಟಿ, ಸೊಮಾಲಿಯಾ– 1.21 ಶತಕೋಟಿ, ನೈಜೀರಿಯಾ– 1.01 ಶತಕೋಟಿ, ಡಿಆರ್‌ಸಿ– 0.98 ಶತಕೋಟಿ, ಸಿರಿಯಾ– 0.9 ಶತಕೋಟಿ, ಕೆನ್ಯಾ– 0.89 ಶತಕೋಟಿ, ಯೆಮನ್– 0.83 ಶತಕೋಟಿ, ದಕ್ಷಿಣ ಸುಡಾನ್– 0.79 ಶತಕೋಟಿ, ಉಗಾಂಡ– 0.71 ಶತಕೋಟಿ, ಕೊಲಂಬಿಯಾ– 0.71 ಶತಕೋಟಿ, ಮೊಜಾಂಬಿಕ್– 0.66 ಶತಕೋಟಿ, ತಾಂಜೇನಿಯಾ– 0.65 ಶತಕೋಟಿ, ಲೆಬನಾನ್– 0.64 ಶತಕೋಟಿ, ಇರಾಕ್– 0.59 ಶತಕೋಟಿ, ಬಾಂಗ್ಲಾದೇಶಕ್ಕೆ 0.55 ಶತಕೋಟಿ ಡಾಲರ್ ನೆರವನ್ನು ಅಮೆರಿಕ ನೀಡುತ್ತಿತ್ತು ಎಂದು ಅಲ್ ಝಜೀರಾ ವರದಿ ಮಾಡಿದೆ.
ಈಜಿಪ್ಟ್ ಪ್ರವಾಸೋದ್ಯಮ ಇಲಾಖೆ ಮತ್ತು ಅಮೆರಿಕದ ಅಂತರರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ (USAID) ಸಹಯೋಗದಲ್ಲಿ ಈಜಿಪ್ಟ್‌ನ ಬಿಮಾರಿಸ್ತಾನ್ ಅಲ್ ಮುಯ್ಯಾದ್ ಶೇಖ್ ಪಾರಂಪರಿಕ ತಾಣದ ಪುನರುತ್ತಾನ ಯೋಜನೆಗೆ ಯುಎಸ್‌ಏಡ್ ಬೆಂಬಲ
ಅಮೆರಿಕ ನೀಡುವ ನೆರವಿನ ಮೊತ್ತದಲ್ಲಿ ಅತಿ ಹೆಚ್ಚು ಹಂಚಿಕೆಯಾಗಿರುವುದು ಏಡ್ಸ್ ನಿಯಂತ್ರಣಕ್ಕಾಗಿ. 2003ರಿಂದ ಇದಕ್ಕೆ ಒಟ್ಟು ಹಂಚಿಕೆಯಾಗಿರುವುದು 120 ಶತಕೋಟಿ ಅಮೆರಕನ್ ಡಾಲರ್‌ನಷ್ಟು. ಈ ನೆರವಿನ ಯೋಜನೆಯಿಂದಾಗಿ 55 ಲಕ್ಷ ಮಕ್ಕಳೂ ಸೇರಿದಂತೆ 50 ರಾಷ್ಟ್ರಗಳಲ್ಲಿ 2.5 ಕೋಟಿ ಜನರ ಜೀವ ಉಳಿದಿವೆ ಎಂದು ವರದಿಯಾಗಿದೆ. ಈ ಯೋಜನೆಗೂ ಅಮೆರಿಕ ನೆರವು ಸ್ಥಗಿತಗೊಳಿಸಿದ್ದು, ಎಚ್‌ಐವಿ ಚಿಕಿತ್ಸೆ ಪಡೆಯುತ್ತಿರುವವರ ಬದುಕು ಅಂಧಕಾರದಲ್ಲಿ ಮುಳುಗಿದಂತಾಗಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಅಮೆರಿಕ ನೆರವು ನೀಡಲು ಆರಂಭಿಸಿತು. ಇದು ಸಾಲ, ತಾಂತ್ರಿಕ ನೆರವು ಮತ್ತು ಆಯವ್ಯಯಕ್ಕೆ ಆರ್ಥಿಕ ನೆರವನ್ನು ನೀಡುತ್ತಾ ಬಂದಿತು.
ಆದರೆ ವಿದೇಶಾಂಗ ವ್ಯವಹಾರಗಳ ಮಂಡಳಿಯು 2023ರಲ್ಲಿ ವರದಿಯೊಂದನ್ನು ಸಲ್ಲಿಸಿ, ‘ತಾನು ನೀಡುತ್ತಿರುವ ನೆರವನ್ನೇ ಅಮೆರಿಕ ಅಸ್ತ್ರವನ್ನಾಗಿಸಿಕೊಂಡಿದೆ’ ಎಂದು ಆರೋಪಿಸಲಾಗಿತ್ತು.
ಇದಕ್ಕೆ ಪೂರಕವಾಗಿ, 2ನೇ ವಿಶ್ವ ಯುದ್ಧದ ನಂತರ 1948ರಲ್ಲಿ ಆರಂಭವಾದ ಮಾರ್ಷಲ್ ಕಾನೂನಿನ್ವಯ ಪಶ್ಚಿಮ ಐರೋಪ್ಯ ರಾಷ್ಟ್ರಗಳ ಆರ್ಥಿಕ ಪುನಶ್ಚೇತನಕ್ಕಾಗಿ ಅಮೆರಿಕ ₹13 ಶತಕೋಟಿ ಡಾಲರ್ ನೀಡಿದೆ. ಇದೇ ವಿಶ್ವಯುದ್ಧದಲ್ಲಿ ಟೊಕಿಯೊ ಪರಾಭವಗೊಂಡ ನಂತರ ಜಪಾನ್‌ಗೂ ಅಮೆರಿಕ ನೆರವು ನೀಡಿದೆ.
ಕೋವಿಡ್–19ರ ಸಂದರ್ಭದಲ್ಲಿ ಮಾನವೀಯ ನೆಲಗಟ್ಟಿನಲ್ಲಿ ಕಡಿಮೆ ಆದಾಯವಿರುವ 92 ರಾಷ್ಟ್ರಗಳಿಗೆ 4 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಲಸಿಕೆಯನ್ನು ಕಳುಹಿಸಿತ್ತು. ಈಗ ಅದರ ಮೇಲೂ ಪರಿಣಾಮ ಬೀರಲಿದೆ.
ಶೇಖ್ ಹಸೀನಾ ಪದಚ್ಯುತಗೊಂಡ ನಂತರ ಬಾಂಗ್ಲಾದೇಶದಲ್ಲಿ ರಾಜಕೀಯ ಸಂಘರ್ಷ ತೀವ್ರಗೊಂಡಿದೆ. ಇದರಿಂದ ಅಲ್ಲಿನ ಆರ್ಥಿಕ ಪರಿಸ್ಥಿತಿಯೂ ಕುಸಿತಗೊಂಡಿದೆ. ಇದೇ ಸಂದರ್ಭದಲ್ಲಿ ಅಮೆರಿಕ ನೆರವು ಸ್ಥಗಿತಗೊಳಿಸಿದ್ದೂ ಆ ರಾಷ್ಟ್ರವನ್ನು ತೀವ್ರವಾಗಿ ಭಾದಿಸಲಿದೆ ಎಂದೇ ಅಂದಾಜು ಮಾಡಲಾಗಿದೆ.
ಜಾರ್ಜಿಯಾಗೆ 95 ದಶಲಕ್ಷ ಅಮೆರಿಕನ್ ಡಾಲರ್ ಸ್ಥಗಿತಗೊಂಡಿದೆ. ಈ ಎಲ್ಲದರ ಪರಿಣಾಮದಿಂದಾಗಿ ನೆರವು ಪಡೆಯುತ್ತಿದ್ದ ರಾಷ್ಟ್ರಗಳೊಂದಿಗೆ ಅಮೆರಿಕದ ಸಂಬಂಧ ಹಳಸುವ ಸಾಧ್ಯತೆಯೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.