ರಾವಿ ನದಿಗೆ ಭಾರತ ನಿರ್ಮಿಸುತ್ತಿರುವ ಶಾಹ್‌ಪುರ್–ಕಂಡಿ ಅಣೆಕಟ್ಟು
ಪಿಟಿಐ ಚಿತ್ರ
ಈಗಾಗಲೇ ‘ಸಿಂಧೂ ಜಲ ಒಪ್ಪಂದ’ವನ್ನು ಅಮಾನತುಗೊಳಿಸಿದ ಕಾರಣ ಸಿಂಧೂ ನದಿ ನೀರು ಸರಿಯಾಗಿ ಸಿಗದೆ ಪಾಕಿಸ್ತಾನ ಕಂಗೆಟ್ಟಿದೆ. ಈ ನಡುವೆ ಇನ್ನೇನು ಬೇಸಿಗೆ ಆರಂಭವಾಗುತ್ತಿದೆ. ಈಗ ಶಾಹ್‌ಪುರ್–ಕಂಡಿ ಅಣೆಕಟ್ಟೆ ನಿರ್ಮಾಣ ಪೂರ್ಣಗೊಂಡು ರಾವಿ ನದಿ ನೀರಿನ ಹರಿವೂ ಕಡಿಮೆಯಾದರೆ ಪಾಕಿಸ್ತಾನ ಇನ್ನಷ್ಟು ನೀರಿನ ಸಮಸ್ಯೆ ಎದುರಿಸಬೇಕಿದೆ.
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಕ್ಕೆ ತೆರಳಿದ್ದ 26 ಜನರ ಮೇಲೆ ಉಗ್ರರು ನಡೆಸಿದ ಭಯೋತ್ಪಾದಕ ದಾಳಿ ದೇಶವನ್ನಷ್ಟೇ ಅಲ್ಲ, ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಉಗ್ರರ ದಮನಕ್ಕೆ ವ್ಯಾಪಕ ಒತ್ತಡ ಕೇಳಿಬಂತು. ಆಪರೇಷನ್ ಸಿಂಧೂರ ಎಂಬ ಸೇನಾ ಕಾರ್ಯಾಚರಣೆ ಕೈಗೊಳ್ಳುವ ಮೊದಲು ಪಾಕ್ ನೆಲದಲ್ಲಿರುವ ಉಗ್ರರ ಸದೆಬಡಿಯುವಂತೆ ಭಾರತ ಒತ್ತಡ ಹೇರಿತು. ಇದರಲ್ಲಿ ರಾಜತಾಂತ್ರಿಕ ನಿರ್ಬಂಧಗಳೂ ಒಳಗೊಂಡಿದ್ದವು. ಅದರಲ್ಲೊಂದು ಸಿಂಧೂ ನದಿ ನೀರಿನ ಹರಿವಿಗೆ ನಿರ್ಬಂಧ.
ಈಗ ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿರುವ ಭಾರತ, ಅಣೆಕಟ್ಟೆ ನಿರ್ಮಿಸುವ ಮೂಲಕ ಪಾಕಿಸ್ತಾನಕ್ಕೆ ಹರಿಯುತ್ತಿದ್ದ ರಾವಿ ನದಿಯ ಹೆಚ್ಚುವರಿ ನೀರಿನ ಹರಿವಿಗೂ ತಡೆ ಹಾಕಲು ಭಾರತ ಮುಂದಾಗಿದೆ ಎಂದು ವರದಿಯಾಗಿದೆ.
ಪಂಜಾಬ್, ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ನಿರ್ಮಿಸುತ್ತಿರುವ ಶಾಹ್‌ಪುರ್–ಕಂಡಿ ಅಣೆಕಟ್ಟೆ ನಿರ್ಮಾಣ ಮಾರ್ಚ್ 31ರ ಹೊತ್ತಿಗೆ ಪೂರ್ಣಗೊಳ್ಳಲಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸಚಿವ ಜಾವೇದ ಅಹಮದ್ ಹೇಳಿದ್ದಾರೆ. ಈ ಮೂಲಕ ಸಿಂಧೂ ಜಲಾನಯನ ಪ್ರದೇಶದ ಪೂರ್ವ ನದಿ ನೀರು ಭಾರತದ ಬಳಕೆಗೆ ಹೆಚ್ಚು ಸಿಗಲಿದೆ.
ಈ ಯೋಜನೆ ಪಂಜಾಬ್‌ನ 5 ಸಾವಿರ ಹೆಕ್ಟೇರ್‌ಗೆ ಮತ್ತು ಜಮ್ಮು–ಕಾಶ್ಮೀರದ ಕಠುವಾ, ಸಾಂಬಾದ 32,173 ಹೆಕ್ಟೇರ್‌ಗೂ ಹೆಚ್ಚು ಭಾಗ ನೀರಾವರಿ ಒದಗಿಸಲಿದೆ. ಈ ಮೂಲಕ ಕಠುವಾ ಮತ್ತು ಸಾಂಬಾ ಜಿಲ್ಲೆಗಳು ಪ್ರತಿ ವರ್ಷ ಎದುರಿಸುತ್ತಿರುವ ಬರ ನೀಗಲಿದೆ. ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ ₹485.38 ಕೋಟಿ ನೆರವನ್ನು ನೀಡಲು ಅನುಮೋದಿಸಿದೆ.
ಭಾರತವು ರಾವಿ ನದಿಯ ಮೇಲೆ ವಿಶೇಷ ಹಕ್ಕುಗಳನ್ನು ಹೊಂದಿರುವುದರಿಂದ ಸಿಂಧೂ ನದಿ ನೀರು ಒಪ್ಪಂದವು ಅಣೆಕಟ್ಟಿನ ಕಾರ್ಯಾಚರಣೆಯನ್ನು ನಿಯಂತ್ರಿಸುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ನೀರಾವರಿ ಸಚಿವ ತಾಜ್ ಮೋಹಾದೀನ್ ಹೇಳಿದ್ದಾರೆ.
1960ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಆಗಿದ್ದ ಇಂಡಸ್ ಜಲ ಒಪ್ಪಂದದ (ಐಡಬ್ಲ್ಯೂಟಿ) ಪ್ರಕಾರ ರಾವಿ, ಸಟ್ಲೇಜ್, ಬಿಯಾಸ್ ನದಿಗಳ ನೀರಿನ ಮೇಲೆ ಭಾರತಕ್ಕೆ ವಿಶೇಷ ಹಕ್ಕಿದೆ. ಇಂಡಸ್, ಝೆಲುಂ, ಚೆನಾಬ್ ನದಿಗಳ ನೀರಿನ ಮೇಲೆ ಪಾಕಿಸ್ತಾನಕ್ಕೆ ಹಕ್ಕಿದೆ.
ಈ ಒಪ್ಪಂದದ ಅನುಸಾರ, ಭಾರತವು ರಾವಿ ನದಿ ನೀರಿನ ಪೂರ್ಣ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ಹೀಗಾಗಿ ಈಗ ನಿರ್ಮಾಣವಾಗುತ್ತಿರುವ ಶಾಹ್‌ಪುರ್–ಕಂಡಿ ಅಟೆಕಟ್ಟೆ ನೀರಾವರಿ ಮತ್ತು ಜಲವಿದ್ಯುತ್ ಉತ್ಪಾದನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ನೀರಿನ ಅಗತ್ಯವಿರುವುದರ ನಡುವೆಯೂ ರಾವಿ ನದಿಯ ನೀರು ಹಳೆಯ ಲಖಾನ್‌ಪುರ್ ಅಣೆಕಟ್ಟಿನ ಮೂಲಕ ಪಾಕಿಸ್ತಾನಕ್ಕೆ ಅಭಿಮುಖವಾಗಿ ಹರಿದು ಹೋಗುತ್ತಿತ್ತು. ಇದರಿಂದ ಭಾರತಕ್ಕೆ ಯಾವುದೇ ಪ್ರಯೋಜನಕ್ಕೂ ಸಿಗುತ್ತಿರಲಿಲ್ಲ. ಈ ರೀತಿ ಉಪಯೋಗಕ್ಕೆ ಸಿಗದೇ ಇರುವ ನೀರನ್ನು ಇನ್ನು ಈ ಅಣೆಕಟ್ಟು ತಡೆಯಲಿದೆ. ಜತೆಗೆ ನೀರನ್ನು ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗುವಂತೆ ಮಾಡುತ್ತದೆ. ಜತೆಗೆ 206 ಮೆಗಾವಾಟ್ ವಿದ್ಯುತ್ ಉತ್ಪಾದನೆಗೂ ಸಹಕಾರಿಯಾಗಲಿದೆ. ಉತ್ಪಾದನೆಯಾಗುವ ವಿದ್ಯುತ್‌ನ ಹೆಚ್ಚಿನ ಅನುಕೂಲ ಪಂಜಾಬ್‌ಗೆ ಸಿಗಲಿದೆ.
ಸುಮಾರು ಐದು ದಶಕಗಳ ಹಿಂದೆ 1979ರಲ್ಲೇ ಶಾಹ್‌ಪುರ್–ಕಂಡಿ ಅಣೆಕಟ್ಟು ನಿರ್ಮಿಸಿ ರಾವಿ ನದಿ ನೀರು ಪಾಕಿಸ್ತಾನಕ್ಕೆ ಹೋಗುವುದನ್ನು ತಡೆಯುವ ಯೋಜನೆ ಪ್ರಸ್ತಾಪಗೊಂಡಿತ್ತು. 1982ರಲ್ಲಿ ಮಾಜಿ ಪ್ರಧಾನಿ, ದಿ. ಇಂದಿರಾ ಗಾಂಧಿ ಅವರು ಅಡಿಗಲ್ಲು ಸ್ಥಾಪಿಸಿದ್ದರು. ಆದರೆ ಪಂಜಾಬ್ ಹಾಗೂ ಜಮ್ಮು–ಕಾಶ್ಮೀರ ಸರ್ಕಾರಗಳ ನಡುವಿನ ಮನಸ್ತಾಪದ ಕಾರಣದಿಂದ ಅಣೆಕಟ್ಟೆ ನಿರ್ಮಾಣ ನೆನೆಗುದಿಗೆ ಬಿದ್ದಿತ್ತು. ನಂತರ 1995ರಲ್ಲಿ ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಮತ್ತೆ ಶಂಕುಸ್ಥಾಪನೆ ನೆರವೇರಿಸಿದ್ದರು. 2008ರಲ್ಲಿ ಇದನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಣೆ ಮಾಡಲಾಯಿತು. 2018ರ ಡಿಸೆಂಬರ್‌ನಲ್ಲಿ ಕೇಂದ್ರದ ಸಮ್ಮತಿಯೊಂದಿಗೆ ಆಣೆಕಟ್ಟೆ ನಿರ್ಮಾಣ ಪುನರಾರಂಭವಾಗಿತ್ತು.
ಈ ಅಣೆಕಟ್ಟೆ ₹3,394.49 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಈ ಹಣದಲ್ಲಿ ಶೇ 80 ರಷ್ಟು ಅಂದರೆ, ₹2,694.02 ಕೋಟಿಯನ್ನು ಪಂಜಾಬ್ ಸರ್ಕಾರ ಮತ್ತು ಇನ್ನುಳಿದ ಶೇ 20ರಷ್ಟು ಅಂದರೆ, ₹ 700.45ಕೋಟಿಯನ್ನು ಭಾರತ ಸರ್ಕಾರ ನೀಡುತ್ತಿದೆ. 55.5 ಮೀಟರ್ ಎತ್ತರ ಇರುವ ಈ ಅಣೆಕಟ್ಟೆಯಿಂದ ಜಲ ವಿದ್ಯುತ್ ಉತ್ಪಾದನಾ ಘಟಕಕ್ಕೆ 7.7 ಕಿ.ಮೀ ಉದ್ದದ ಕಾಲುವೆಯನ್ನೂ ನಿರ್ಮಿಸಲಾಗಿದೆ.
ಈಗಾಗಲೇ ಸಿಂಧೂ ನದಿ ನೀರು ಸರಿಯಾಗಿ ಸಿಗದ ಕಾರಣ ಪಾಕಿಸ್ತಾನ ಕಂಗೆಟ್ಟಿದೆ. ಈ ನಡುವೆ ಇನ್ನೇನು ಬೇಸಿಗೆ ಆರಂಭವಾಗುತ್ತಿದೆ. ಈಗ ಶಾಹ್‌ಪುರ್–ಕಂಡಿ ಅಣೆಕಟ್ಟೆ ನಿರ್ಮಾಣ ಪೂರ್ಣಗೊಂಡು ರಾವಿ ನದಿ ನೀರಿನ ಹರಿವೂ ಕಡಿಮೆಯಾದರೆ ಪಾಕಿಸ್ತಾನ ಇನ್ನಷ್ಟು ಸಮಸ್ಯೆ ಬೇಕಾಗಬಹುದು.
ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಒಂದಾದ ಲಾಹೋರ್, ರಾವಿ ನದಿಯ ನೀರಿನ ಮೇಲೆ ಹೆಚ್ಚು ಅವಲಂಬಿತವಾಗಿದೆ. ಲಾಹೋರ್‌ನ ಅಂತರ್ಜಲ ಪೂರೈಕೆಗೆ ಈ ನದಿ ನಿರ್ಣಾಯಕವಾಗಿದೆ. ಇದಲ್ಲದೆ, ರಾವಿ ನದಿಯನ್ನು ಪುನರುಜ್ಜೀವನಗೊಳಿಸಲು ಮತ್ತು ಅದರ ದಡದಲ್ಲಿ ನಗರಾಭಿವೃದ್ಧಿಯನ್ನು ಉತ್ತೇಜಿಸಲು ಪ್ರಯತ್ನಿಸುವ ಪಾಕ್‌ನ ಯೋಜನೆಗಳಿಗೆ ಹಿನ್ನೆಡೆಯಾಗಲಿದೆ.
‘ಭಾರತವು ರಾವಿಯಿಂದ ಪಾಕಿಸ್ತಾನಕ್ಕೆ ಹರಿಯುವ ನೀರನ್ನು ನಿರ್ಬಂಧಿಸಿದರೆ, ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಜನ ಕುಡಿಯುವ ನೀರಿಗಾಗಿ ಸರತಿ ಸಾಲಿನಲ್ಲಿ ನಿಲ್ಲುವಂತೆ ಲಾಹೋರ್‌ನಲ್ಲೂ ಅಂತಹ ಸ್ಥಿತಿ ಎದುರಾಗಬಹುದು. ನೀರಿನ ಕೊರತೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಬಹುದು’ ಎಂದು ಸೌತ್ ಏಷ್ಯನ್ ವಾಯ್ಸ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.