ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಶಿವಪೇಟೆಯಲ್ಲಿ ತಗಡಿನ ಶೆಡ್‌ನಲ್ಲಿ ವಾಸವಿರುವ ಸಂತ್ರಸ್ತೆ ಫಾತಿಮಾ ಮುಲ್ಲಾ
ಪ್ರಜಾವಾಣಿ ಚಿತ್ರ: ಇಮಾಮ್ ಹುಸೇನ್ ಗೂಡುನವರ
ಕಲಬುರಗಿ: ಪುನರ್ವಸತಿ ಕೇಂದ್ರಗಳಾಗಿ ದಶಕಗಳಾದರೂ ದೊರೆಯದ ಮೂಲಸೌಕರ್ಯ. ಬಿಡದ ಹಳೆಯ ಊರಿನ ನಂಟು. ಹಿಡಿ ಉಪ್ಪು ತರಲೂ ಮೂಲ ಗ್ರಾಮಕ್ಕೆ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿರುವುದರಿಂದ ನೆರೆ ಹಾವಳಿಯ ಕಾರಣಕ್ಕೆ ಸ್ಥಳಾಂತರಗೊಂಡವರು ‘ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ’ ಎನ್ನುವಂತಾಗಿದೆ.
ರಾಜ್ಯದ ಪ್ರಮುಖ ನದಿಗಳಾದ ಕೃಷ್ಣಾ, ತುಂಗಭದ್ರಾ, ಭೀಮಾ, ಮಲಪ್ರಭಾ, ಘಟಪ್ರಭಾ ನದಿಗಳು ಹರಿಯುವ ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರ, ರಾಯಚೂರು, ಕಲಬುರಗಿ, ಯಾದಗಿರಿ, ಗದಗ ಸೇರಿದಂತೆ ನೆರೆ ಹಾವಳಿಗೆ ತುತ್ತಾಗುವ ಬಹುತೇಕ ಗ್ರಾಮಗಳಲ್ಲಿನ ಪುನರ್ವಸತಿ ಕೇಂದ್ರಗಳ ಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ.
ಹಿನ್ನೀರಿನಿಂದ ಆವೃತವಾಗುವ ಪ್ರದೇಶಗಳಲ್ಲಿ ಇಡೀ ಗ್ರಾಮಗಳನ್ನು ಸ್ಥಳಾಂತರಿಸಿದ್ದು ಸಮಸ್ಯೆಯಾಗಿಲ್ಲ. ಆದರೆ, ನದಿಯಂಚಿನ ಬಡಾವಣೆಗಳ ಜನರಿಗೆ ಮಾತ್ರ ಪುನರ್ವಸತಿ ಕಲ್ಪಿಸಿದ್ದರಿಂದ ಅವರು ಅಲ್ಲಿ ಇರಲೂ ಆಗದೇ ಇಲ್ಲಿಗೆ ಬರಲೂ ಆಗದೇ ಪರಿತಪಿಸುತ್ತಿದ್ದಾರೆ. ರಾಯಚೂರು ಜಿಲ್ಲೆಯ ಕೆಲವು ನಡುಗಡ್ಡೆಗಳಲ್ಲಿನ ಜನರನ್ನು ಅಲ್ಲಿಂದ ಸ್ಥಳಾಂತರಿಸುವ ಜಿಲ್ಲಾಡಳಿತದ ಯತ್ನವೂ ಕೈಗೂಡಿಲ್ಲ. ಇತ್ತೀಚೆಗೆ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಸಿದ ಪರಿಣಾಮ ಲಿಂಗಸುಗೂರು ತಾಲ್ಲೂಕಿನ ಕರಕಲಗಡ್ಡಿಯ ಸುತ್ತ ಕೃಷ್ಣಾ ನದಿಯ ನೀರು ಸುತ್ತುವರಿದಿದ್ದರಿಂದ ಅಲ್ಲಿನ ಜನರು ಸಂಪರ್ಕ ಕಳೆದುಕೊಂಡಿದ್ದರು. ವೈದ್ಯರು ನೀರಿನ ರಭಸ ಕಡಿಮೆಯಾದ ಬಳಿಕ ಬೋಟ್ ಮೂಲಕ ತೆರಳಿ ಅಲ್ಲಿನ ಜನರಿಗೆ ಆಹಾರ, ಔಷಧಗಳನ್ನು ವಿತರಿಸಿ ಬಂದರು. ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ನೀಲಕಂಠರಾಯನ ಗಡ್ಡಿಯನ್ನು ಕೃಷ್ಣೆ ಸುತ್ತುವರಿದ ಪರಿಣಾಮ ಹೊರಜಗತ್ತಿನ ಸಂಪರ್ಕ ಕಡಿದುಕೊಂಡಿತ್ತು. ಕೆಲ ವರ್ಷಗಳ ಹಿಂದೆ ಗರ್ಭಿಣಿಯೊಬ್ಬರು ಅಪಾಯಕಾರಿ ನೀರಿನ ಸೆಳೆತದಲ್ಲಿಯೇ ಈಜಿಕೊಂಡು ಗಡ್ಡಿಯಿಂದ ಹೊರಭಾಗಕ್ಕೆ ಬಂದಿದ್ದು ದೊಡ್ಡ ಸುದ್ದಿಯಾಗಿತ್ತು.
ಸಪ್ತ ನದಿಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯ ಜನರಿಗೆ ಪ್ರತಿವರ್ಷ ಪ್ರವಾಹದ ಆತಂಕ ತಪ್ಪಿಲ್ಲ. ಒಂದೆಡೆ ಬಿದ್ದ ಮನೆಗಳ ಪುನರ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ. ಮತ್ತೊಂದೆಡೆ ಪುನರ್ವಸತಿ ಕೇಂದ್ರಗಳಲ್ಲಿ ಮೂಲಸೌಕರ್ಯವಿಲ್ಲ. ಪ್ರತಿವರ್ಷ ನದಿ ಪ್ರವಾಹದಿಂದ ಅಥಣಿ ತಾಲ್ಲೂಕಿನ ಜನವಾಡ, ಮಹಿಷವಾಡಗಿ, ನಂದೇಶ್ವರ, ದೊಡವಾಡ, ನಾಗನೂರ ಪಿ.ಕೆ., ಖವಟೊಪ್ಪ, ಶೇಗುಣಸಿ, ಅವರಖೋಡ, ಹಲ್ಯಾಳ, ದರೂರ, ನದಿಇಂಗಳಗಾಂವ ಸೇರಿದಂತೆ 17 ಗ್ರಾಮಗಳು ಮುಳುಗಡೆಯಾಗುತ್ತವೆ. ತಮ್ಮೂರನ್ನು ಕೃಷ್ಣೆ ಪ್ರವೇಶಿಸುತ್ತಿದ್ದಂತೆ, ಗ್ರಾಮಸ್ಥರು ಕಾಳಜಿ ಕೇಂದ್ರಗಳತ್ತ ಮುಖಮಾಡುತ್ತಾರೆ. ನದಿಯಲ್ಲಿ ನೀರು ಇಳಿದ ನಂತರ ಮತ್ತೆ ಊರಿಗೆ ಬರುತ್ತಾರೆ.
ಪ್ರವಾಹ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಥಣಿ ತಾಲ್ಲೂಕಿನ ಆರು ಗ್ರಾಮಗಳ ಸಂತ್ರಸ್ತರಿಗೆ ಸತ್ತಿ ಬಳಿ ಇರುವ ಝೀರೋ ಪಾಯಿಂಟ್ ಹಾಗೂ ರಡ್ಡೇರಹಟ್ಟಿಯಲ್ಲಿ ಪುನರ್ವಸತಿ ಕೇಂದ್ರ ನಿರ್ಮಿಸಲಾಗಿದೆ. ಆದರೆ, ಅಲ್ಲಿಗೆ ಹೋಗಿ ವಾಸವಿರಲು ಜನರು ಸಿದ್ಧರಿಲ್ಲ.
ತಗಡಿನ ಶೆಡ್‌ನಲ್ಲೇ ವಾಸ: 2019ರಲ್ಲಿ ಭೀಕರ ಪ್ರವಾಹದಿಂದ ಬೆಳಗಾವಿ ಜಿಲ್ಲೆ ತತ್ತರಿಸಿತ್ತು. ಸಾವಿರಾರು ಮನೆ ಬಿದ್ದಿದ್ದವು. ಈ ಪೈಕಿ 21,452 ಮನೆಗಳಿಗೆ ‘ಎ’ ಗ್ರೇಡ್‌ನಡಿ ತಲಾ ₹ 5 ಲಕ್ಷ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ, ಹಲವರಿಗೆ ಆರು ವರ್ಷಗಳಾದರೂ ಇನ್ನೂ ಪೂರ್ಣ ಪರಿಹಾರ ಸಿಕ್ಕಿಲ್ಲ. ಇಂದೋ, ನಾಳೆಯೋ ಪರಿಹಾರ ಬರುತ್ತದೆ ಎಂಬ ನಿರೀಕ್ಷೆಯಲ್ಲೇ ಹಲವರು ಮನೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ಕಾಯುತ್ತಿದ್ದಾರೆ.
ರಾಮದುರ್ಗ ತಾಲ್ಲೂಕಿನ ಅವರಾದಿ, ಹಂಪಿಹೊಳಿ ಗ್ರಾಮಸ್ಥರು, ಶಿವಪೇಟೆಯ (ಹಳೇ ಊರು) ಸರ್ಕಾರಿ ಜಾಗದ ತಾತ್ಕಾಲಿಕ ಶೆಡ್‍ನಲ್ಲೇ ಐದು ವರ್ಷಗಳಿಂದ ವಾಸವಿದ್ದಾರೆ.
‘ನಾವಿದ್ದ ಮನಿ ಮಹಾಪೂರದಾಗ ಬಿತ್ತು. ಸರ್ಕಾರ ₹ 5 ಲಕ್ಷ ಕೊಡ್ತೇತಿ ಅನ್ನೋ ಆಸೆಕ್ ಇಡೀ ಮನಿ ನೆಲಸಮ ಮಾಡಿ ಕಟ್ಟಾಕ ಆರಂಭಿಸಿದ್ವಿ. ಆದ್ರ ಇನ್ನೂಮಟಾ ₹ 3 ಲಕ್ಷ ಅಷ್ಟ ಬಂದೇತ್ರಿ. ನಮ್ಮ ಕಡೆನೂ ರೊಕ್ಕ ಇಲ್ಲ. ಹಂಗಾಗಿ ಅರ್ಧಕ್ಕ ಮನೆ ಕಟ್ಟೋದು ನಿಲ್ಲಿಸಿ ತಗಡಿನ ಶೆಡ್‌ನ್ಯಾಗ ಬದುಕಾತೇವ್ರಿ’ ಎಂದು ಅವರಾದಿಯ ಮಕ್ತುಮ್‌ಸಾಬ್–ಫಾತಿಮಾ ಮುಲ್ಲಾ ದಂಪತಿ ಹೇಳುತ್ತ ಕಣ್ಣೀರಾದರು.
ಶೆಡ್‌ಗಳಿರುವ ಸ್ಥಳದಲ್ಲಿ ಶೌಚಗೃಹ ವ್ಯವಸ್ಥೆ ಇಲ್ಲ. ಹಾಗಾಗಿ ಸಂತ್ರಸ್ತರಿಗೆ ಶೌಚಕ್ಕಾಗಿ ಬಯಲೇ ಆಸರೆ. ಒಡೆದ ಸಿಮೆಂಟ್ ಶೀಟು, ತೆಂಗಿನ ಗರಿ, ಕಟ್ಟಿಗೆ ಮತ್ತು ಹಳೇ ಸೀರೆ ಬಳಸಿ ಮಾಡಿಕೊಂಡಿರುವ ಜಾಗವೇ ಸ್ನಾನಕ್ಕೆ ಆಧಾರ. ಸಂಜೆಯಷ್ಟೇ ವಿದ್ಯುತ್ ಸೌಕರ್ಯ. ವಿಷಜಂತುಗಳ ಹಾವಳಿ ಬೇರೆ.
ವಿಜಯಪುರ ಜಿಲ್ಲೆಯ ಆಲಮೇಲ ತಾಲ್ಲೂಕಿನ ತಾವರಖೇಡ ಪುನರ್ವಸತಿ ಕೇಂದ್ರದಲ್ಲಿ ಶಾಲಾ ಕಟ್ಟಡವಿದೆ, ಕಲಿಯಲು ಮಕ್ಕಳಿಲ್ಲ. ದೇವಸ್ಥಾನದ ಕಟ್ಟಲಾಗಿದೆ. ಆದರೆ, ಗಂಟೆ– ಜಾಗಟೆಗಳ ನಾದವಿಲ್ಲ. ಸಮುದಾಯ ಭವನಗಳಿವೆ, ಸದ್ದುಗದ್ದಲವಿಲ್ಲ. ಡಾಂಬರು ಬಳಿದ ರಸ್ತೆಗಳು ಇವೆ, ಒಂದೂ ವಾಹನ ಸಂಚರಿಸುವುದಿಲ್ಲ. ಅದೊಂದು ಹಾಳುಕೊಂಪೆ ತರಹ ಭಾಸವಾಗುತ್ತಿದೆ...
ಸೊನ್ನ ಹತ್ತಿರ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ಯಾರೇಜು ನೀರು ಸಂಗ್ರಹದಿಂದಾಗಿ ಹಿನ್ನೀರು ಈ ಗ್ರಾಮಕ್ಕೆ ಸುತ್ತುವರಿಯುತ್ತದೆ. ಇದರಿಂದಾಗುವ ತೊಂದರೆಯನ್ನು ಗಮನಿಸಿದ ಭೀಮಾ ಏತನೀರಾವರಿ ನಿಗಮವು ಕಡಣಿ ಸಮೀಪ 54 ಎಕರೆ ಭೂಮಿಯನ್ನು ಖರೀದಿಸಿ ಪುನರ್ವಸತಿ ಕೇಂದ್ರ ನಿರ್ಮಿಸಿದೆ. ಮೂಲಸೌಕರ್ಯಗಳನ್ನು, ಶಾಲೆ, ದೇಗುಲ, ರಸ್ತೆ ಇತ್ಯಾದಿಗಳನ್ನು ಮಾಡಿ ಎಲ್ಲರಿಗೂ ನಿವೇಶನ ಹಂಚಿಕೆ ಮಾಡಿತ್ತು. ಕಳೆದ ಎರಡು ವರ್ಷಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ದೊಡ್ಡ ಕಾರ್ಯಕ್ರಮ ಮಾಡಿ, ಎಲ್ಲರಿಗೂ ಹಕ್ಕುಪತ್ರಗಳನ್ನು ನೀಡಿ ಎಲ್ಲರೂ ಇಲ್ಲಿ ಬಂದು ನೆಲೆಸುವಂತೆ ಹೇಳಿದ್ದರು. ಹಂಚಿಕೆಯಾದ 500ಕ್ಕೂ ಹೆಚ್ಚು ನಿವೇಶನಗಳಲ್ಲಿ ಇದುವರೆಗೆ ಯಾರೂ ಮನೆ ಕಟ್ಟಿಸಿಲ್ಲ. ಅಲ್ಲಿಗೆ ಬಂದು ತಳವೂ ಊರಿಲ್ಲ, ಎಲ್ಲರೂ ಹಳೆ ತಾವರಖೇಡದಲ್ಲಿ ಹಾಗೂ ತೋಟದ ವಸ್ತಿಗಳಲ್ಲಿ ನೆಲೆಯೂರಿದ್ದಾರೆ.
‘ಎಲ್ಲ ಕಡೆಗೂ ಮುಳ್ಳಿನ ಗಿಡಗಳು ಆವರಿಸಿಕೊಂಡು ಬೆಳೆಯುತ್ತಿವೆ. ಸರ್ಕಾರಿ ಕಟ್ಟಡಗಳಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿವೆ. ಈ ಹೊಸ ಪ್ರದೇಶಕ್ಕೆ ತಾವರಖೇಡದ ಎಲ್ಲಾ ಕುಟುಂಬಗಳು ಬಂದು ನೆಲೆಸಿದರೆ ಮಾತ್ರ ಸರ್ಕಾರದ ಪುನರ್ವಸತಿ ಯೋಜನೆ ಸಾರ್ಥಕತೆ ಸಿಗುತ್ತದೆ’ ಎನ್ನುತ್ತಾರೆ ಕಡಣಿಯ ಉಮೇಶ ಕ್ಷತ್ರಿ.
ಈ ಕುರಿತು ಕಡಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸಲಿಂಗಪ್ಪ ಕತ್ತಿ ಅವರನ್ನು ವಿಚಾರಿಸಿದರೆ, ‘ಪಂಚಾಯಿತಿಯಿಂದ ಎಲ್ಲ ರೀತಿಯ ಸೌಲಭ್ಯಗಳನ್ನು ನಾವು ನೀಡಲು ಸಿದ್ಧರಿದ್ದೇವೆ. ಅಲ್ಲಿ ಒಂದಷ್ಟು ಕುಟುಂಬಗಳು ಬಂದು ನೆಲೆಸಲಿ, ಅವರಿಗೆ ತೊಂದರೆಯಾಗದಂತೆ ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ’ ಎನ್ನುತ್ತಾರೆ.
ಬಾಗಲಕೋಟೆ ಜಿಲ್ಲೆಯ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳು 2009ರಲ್ಲಿ ಉಕ್ಕಿ ಗ್ರಾಮಗಳಿಗೆ ನುಗ್ಗಿದಾಗ ಜಿಲ್ಲೆಯ 50 ಗ್ರಾಮಗಳ ಜನರನ್ನು ಸ್ಥಳಾಂತರಿಸಲು ನಿರ್ಧರಿಸಲಾಯಿತು. ಬಾದಾಮಿ ತಾಲ್ಲೂಕಿನ 27, ಹುನಗುಂದ ತಾಲ್ಲೂಕಿನ 12, ಮುಧೋಳ ತಾಲ್ಲೂಕಿನ 9, ಜಮಖಂಡಿ ತಾಲ್ಲೂಕಿನ ಎರಡು ಗ್ರಾಮಗಳ ಜನರಿಗಾಗಿ 12 ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ.
ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವು ದಾನಿಗಳ ನೆರವಿನಿಂದ ಮನೆಗಳ ನಿರ್ಮಾಣಕ್ಕೆ ಮುಂದಾಗಿತ್ತು. ಮನೆಗಳು ನಿರ್ಮಾಣವಾಗುವ ಹೊತ್ತಿಗೆ ಎರಡು ವರ್ಷಗಳು ಕಳೆದಿದ್ದವು. ಮತ್ತೆ ಪ್ರವಾಹ ಬಾರದ್ದರಿಂದ ಜನರು ಹೊಸ ಮನೆಗಳತ್ತ ಹೊರಳಿ ನೋಡಲಿಲ್ಲ.
‘ಇಲ್ಲಿ ಶಾಲೆ, ಆಸ್ಪತ್ರೆ, ಬಸ್ ಸಂಚಾರವಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ, ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಎರಡು ಕಿ.ಮೀ ನಡೆದುಕೊಂಡೇ ಬರಬೇಕು. ಮೂಲಸೌಲಭ್ಯಗಳು ಇಲ್ಲದ್ದರಿಂದ ಜೀವನ ನಡೆಸುವುದೇ ಕಷ್ಟವಾಗಿದೆ’ ಎಂಬುದು ಮಲಪ್ರಭಾ ನದಿ ತೀರದ ಹುನಗುಂದ ತಾಲ್ಲೂಕಿನ ಗಂಜಿಹಾಳ ಗ್ರಾಮದ ರಮೇಶ ಜಹಗೀರದಾರ ನೋವಿನ ನುಡಿ. ಈ ಗ್ರಾಮದವರಿಗಾಗಿ 500 ಮನೆಗಳನ್ನು ನಿರ್ಮಿಸಲಾಗಿದೆ. 200 ಮನೆಗಳಿಗೆ ಜನರು ಹೋಗಿದ್ದಾರೆ. ಉಳಿದ ಮನೆಗಳು ಪಾಳು ಬಿದ್ದಿವೆ.
‘ಜಾನುವಾರುಗಳಿಲ್ಲದ ರೈತ ಕುಟುಂಬ ಹೇಗಿರುತ್ತದೆ. ಕೊಟ್ಟಿಗೆ ನಿರ್ಮಾಣವಾಗಿಲ್ಲ. ಚಿಕ್ಕದಾದ ಅಡುಗೆ ಕೋಣೆ, ಹಾಲ್, ಸಣ್ಣದಾದ ಬೆಡ್ ರೂಂ ನಿರ್ಮಿಸಲಾಗಿದೆ. ಕೂಡುಕುಟುಂಬದ ರೈತರಿಗೆ ಸಾಲುತ್ತದೆಯೇ? ಕೋಳಿ ಗೂಡಿನಂತಹ ಮನೆಗೆ ಜನರು ಹೋಗಲಿಲ್ಲ. ಹಳ್ಳಿಯವರ ಮನೆ ಹೇಗಿರುತ್ತದೆ ಎಂದು ಗೊತ್ತಿಲ್ಲದೆ ಈ ತರ ಕಟ್ಟಿದ್ದಾರೆ’ ಎನ್ನುತ್ತಾರೆ ಅವರು.
2007 ಮತ್ತು 2009ರಲ್ಲಿ ರಾಜ್ಯದಲ್ಲಿ ಸುರಿದ ಕುಂಭದ್ರೋಣ ಮಳೆಗೆ ಮಲಪ್ರಭೆ ರೌದ್ರಾವತಾರ ತಾಳಿ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹೊಳೆಆಲೂರು, ಹೊಳೆಮಣ್ಣೂರು, ಗಾಡಗೋಳಿ, ಅಮರಗೋಳ, ಬಿ.ಎಸ್.ಬೇಲೇರಿ, ಮೆಣಸಗಿ, ಬಸರಕೋಡ, ಕುರುವಿನಿಕೊಪ್ಪ, ಮಾಳವಾಡ, ಯಾ.ಸ.ಹಡಗಲಿ ಸೇರಿದಂತೆ ಹಲವು ಗ್ರಾಮಗಳು ಜಲಾವೃತವಾಗಿ ತೀವ್ರ ಸಂಕಷ್ಟ ಎದುರಿಸಿದ್ದವು.
ಪ್ರವಾಹ ಪೀಡಿತ ಗ್ರಾಮಗಳನ್ನು ಸ್ಥಳಾಂತರಗೊಳಿಸಲು ಅಂದಿನ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಕ್ರಮ ಕೈಗೊಂಡು ಪ್ರವಾಹಬಾಧಿತವಾಗದ ಸ್ಥಳಗಳನ್ನು ಗುರುತಿಸಿ ಅಲ್ಲಿಗೆ ಹಳ್ಳಿಗಳನ್ನು ಸ್ಥಳಾಂತರಗೊಳಿಸಲು ಕ್ರಮವಹಿಸಿದ್ದರು.
ಸೇವಾ ಭಾರತಿಯ ಸಹಯೋಗದಲ್ಲಿ ಹೊಳೆಆಲೂರು ನವಗ್ರಾಮ ನಿರ್ಮಾಣ ಮಾಡಿದ್ದು, ಸೌಲಭ್ಯಗಳ ಕೊರತೆಯಿಂದಾಗಿ ಗ್ರಾಮಸ್ಥರು ಹಳೆಯ ಗ್ರಾಮ ಬಿಟ್ಟು ಹೊಸ ಗ್ರಾಮಕ್ಕೆ ತೆರಳುತ್ತಿಲ್ಲ. ಇದರಿಂದಾಗಿ ನವಗ್ರಾಮದಾದ್ಯಂತ ಮುಳ್ಳು ಕಂಟಿಗಳು ಬೆಳೆದು ನಿರ್ಮಿಸಿದ ಮನೆಗಳು ಶಿಥಿಲಾವಸ್ಥೆ ತಲುಪಿವೆ.
2009ರಲ್ಲಿ ಸುರಿದ ಭಾರಿ ಮಳೆಯಿಂದ ಉಕ್ಕಿ ಹರಿದ ಬೆಣ್ಣೆಹಳ್ಳದ ಪ್ರವಾಹಕ್ಕೆ ನರಗುಂದ ತಾಲ್ಲೂಕಿನ ಕುರ್ಲಗೇರಿ, ಸುರಕೋಡ ಗ್ರಾಮಗಳು ಹಾಗೂ ಮಲಪ್ರಭಾ ಪ್ರವಾಹಕ್ಕೆ ಬೂದಿಹಾಳ, ಲಕಮಾಪುರ ಗ್ರಾಮಗಳು ತೀವ್ರ ತೊಂದರೆಗೆ ಒಳಗಾಗಿದ್ದವು. ಇದನ್ನು ಅರಿತ ಅಂದಿನ ಬಿಜೆಪಿ ಸರ್ಕಾರ ತಾಲ್ಲೂಕಿನ ಸುರಕೋಡ, ಕುರ್ಲಗೇರಿ, ಬೂದಿಹಾಳ ಗ್ರಾಮಗಳನ್ನು ಸ್ಥಳಾಂತರ ಮಾಡುವ ನಿರ್ಣಯಕ್ಕೆ ಬಂದು, ನವಗ್ರಾಮ ನಿರ್ಣಯಕ್ಕೆ ಮುಂದಾಯಿತು.
ಬೆಣ್ಣಿ ಹಳ್ಳದ ಪ್ರವಾಹ ಸಮಸ್ಯೆಗೆ ಮುಕ್ತಿ ಕೊಡಿಸುವ ನಿಟ್ಟಿನಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕಿನ ಆರು ಗ್ರಾಮಗಳ ಕುಟುಂಬಗಳನ್ನು (ಮೂರು ಗ್ರಾಮಗಳ ಭಾಗಶಃ) 14 ವರ್ಷಗಳ ಹಿಂದೆ ಸ್ಥಳಾಂತರಿಸಲಾಗಿದೆ. ‘ಸ್ಥಳಾಂತರಿಸುವ ಎಲ್ಲ ಕುಟುಂಬಗಳಿಗೂ ಮನೆ ಕಲ್ಪಿಸಲಾಗಿದೆ. ಹಕ್ಕುಪತ್ರಗಳನ್ನೂ ವಿತರಿಸಲಾಗಿದೆ’ ಎಂದು ನವಲಗುಂದ ತಹಶೀಲ್ದಾರ್ ಸುಧೀರ್ ಸಾಹುಕಾರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸರ್ಕಾರದವರು ನೀಡಿರುವ ಮನೆಯಲ್ಲಿ 14 ವರ್ಷಗಳಿಂದ ವಾಸವಿದ್ದೇವೆ. ಆದರೆ ಈವರೆಗೆ ಹಕ್ಕುಪತ್ರ ನೀಡಿಲ್ಲ’ ಎಂದು ಗುಡಿಸಾಗರ ಗ್ರಾಮದ ಶಿವಯೋಗಿ ಸಿದ್ದಪ್ಪ ಪೂಜಾರ ಆರೋಪಿಸಿದರು.
ಬಿಡುಗಡೆಯಾಗದ ಹಣ: ಹಾವೇರಿ ತಾಲ್ಲೂಕಿನ ಹಂದಿಗನೂರು ಹಾಗೂ ಮೇಲ್ಮುರಿ ಗ್ರಾಮಗಳಲ್ಲಿ 2021ರಲ್ಲಿ ಎದುರಾದ ನೆರೆಯಿಂದಾಗಿ 90ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದವು. ನೆರೆ ಕಡಿಮೆಯಾದ ನಂತರ ಮನೆಗಳ ಮರು ನಿರ್ಮಾಣಕ್ಕಾಗಿ ಸರ್ಕಾರ ₹ 5 ಲಕ್ಷ ಯೋಜನೆ ಘೋಷಿಸಿತ್ತು.
ಮೊದಲ ಕಂತಿನಲ್ಲಿ ₹ 1.20 ಲಕ್ಷವನ್ನೂ ನೀಡಲಾಗಿತ್ತು. ಅದೇ ಹಣದಲ್ಲಿ ನೆರೆ ಸಂತ್ರಸ್ತರು ಮನೆಗೆ ಪಾಯ ಹಾಕಿದ್ದರು. ಇದಾದ ನಂತರ, ಸರ್ಕಾರ ಅನುದಾನವನ್ನು ಕಡಿತಗೊಳಿಸಿದೆ. ಇದರಿಂದಾಗಿ ಮನೆಗಳ ನಿರ್ಮಾಣ, ಪಾಯದ ಹಂತದಲ್ಲೇ ಉಳಿದುಕೊಂಡಿದೆ.
2021ರಿಂದ 2025ರ ಜುಲೈವರೆಗೆ ರಾಜ್ಯದಾದ್ಯಂತ ಮಳೆ ಸಂಬಂಧಿ ಅವಘಡಗಳಲ್ಲಿ 522 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮಳೆಯಿಂದ ಮನೆ ಕುಸಿದು, ಮರಬಿದ್ದು, ಸಿಡಿಲು ಬಡಿದು, ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟವರನ್ನು ಈ ದತ್ತಾಂಶ ಒಳಗೊಂಡಿದೆ.
ಮೃತರಿಗೆ ₹5 ಲಕ್ಷ, ದೊಡ್ಡ ಜಾನುವಾರುಗಳಿಗೆ ₹30 ಸಾವಿರ ಮತ್ತು ಕುರಿ–ಮೇಕೆಗಳಿಗೆ ₹5 ಸಾವಿರ ಪರಿಹಾರ ನಿಗದಿ ಮಾಡಲಾಗಿದೆ. ಮಳೆ ಸಂಬಂಧಿ ಅವಘಡದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದ್ದರೂ, ಪರಿಶೀಲನೆ ನಂತರ ಅನ್ಯ ಕಾರಣಗಳಿಂದ ಸಾವು ಸಂಭವಿಸಿದೆ ಎಂಬುದು ಪತ್ತೆಯಾಗಿದೆ. ಅಂತಹ ಪ್ರಕರಣಗಳಲ್ಲಿ ಪರಿಹಾರ ರದ್ದಾಗಿದೆ. ಇಲ್ಲವೇ ಪರಿಹಾರ ವಿತರಣೆ ವಿಳಂಬವಾಗಿದೆ.
ಅತಿವೃಷ್ಟಿಯಿಂದ ಮನೆಗಳಿಗೆ ಹಾನಿಯಾದರೆ, ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್) ಅಡಿ ನಿಗದಿ ಮಾಡಿರುವ ಪರಿಹಾರದ ಮೊತ್ತದ ಜತೆಗೆ ರಾಜ್ಯ ಸರ್ಕಾರದಿಂದಲೂ ಹೆಚ್ಚುವರಿ ಪರಿಹಾರ ನೀಡುತ್ತಿದೆ. ರಾಜ್ಯ ವಿಪತ್ತು ನಿರ್ವಹಣಾ ನಿಧಿಯಲ್ಲಿ, ಈ ಸಾಲಿನಲ್ಲಿ ₹1,000 ಕೋಟಿ ತೆಗೆದಿರಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿ ಕೃಷ್ಣಾ ಮಲಪ್ರಭಾ ತೀರದ ಇದ್ದಲಗಿ ಬಿಸನಾಳ ಬಿಸನಾಳ ಕೊಪ್ಪ ಕಮದತ್ತ ಅಡಿಹಾಳ ಎಮ್ಮೆಟ್ಟಿ ಅನಪಕಟ್ಟಿ ಸೇರಿದಂತೆ 12 ಗ್ರಾಮಗಳು 2012ರಲ್ಲಿಯೇ ಮುಳುಗಡೆಯಾಗಿದ್ದು ಕೆಲ ಗ್ರಾಮಗಳಲ್ಲಿ ಪುನರ್ವಸತಿಯೂ ಆಗಿದೆ. ಎಮ್ಮೆಟ್ಟಿ ಗ್ರಾಮದ ಪುನರ್ವಸತಿ ಕೇಂದ್ರಕ್ಕಾಗಿ ಸರ್ಕಾರ 70 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡು ರೈತರಿಗೆ ಪರಿಹಾರವನ್ನೂ ನೀಡಿದೆ. ಆದರೆ ಜಮೀನು ಕಳೆದುಕೊಂಡ ಕೆಲವರು ಪರಿಹಾರ ಕಡಿಮೆಯಾಗಿದೆ ಎಂದು ಕೋರ್ಟ್ ಮೊರೆಹೋಗಿದ್ದರಿಂದ ಪುನರ್ವಸತಿ ಪ್ರಕ್ರಿಯೆ ದಶಕದಿಂದ ನನೆಗುದಿಗೆ ಬಿದ್ದಿದೆ. ‘ಇದೀಗ ಮುಳುಗಡೆ ಸಂತ್ರಸ್ತರ ಕೈಯಲ್ಲಿ ಪರಿಹಾರದ ಬಿಡಿಗಾಸೂ ಇಲ್ಲ ಆಕಡೆ ಮನೆಯೂ ಇಲ್ಲದಂತಾಗಿ ಬೀದಿಗೆ ಬೀಳುವಂತಾಗಿದೆ’ ಎಂದು ಗ್ರಾಮದ ಮುಖಂಡ ಭೀಮಪ್ಪ ಅಡಿವೆಪ್ಪ ಗೌಡರ ಮಾಹಿತಿ ನೀಡಿದರು.
2019ರ ಪ್ರವಾಹದಲ್ಲಿ ಮನೆ ಕಳೆದುಕೊಂಡವರು ನಿಗದಿತ ಅವಧಿಯಲ್ಲೇ ಹೊಸ ಮನೆ ಕಟ್ಟಿಕೊಳ್ಳಬೇಕಿತ್ತು. ತಡ ಮಾಡಿದ್ದರಿಂದ ಹೆಚ್ಚಿನವರಿಗೆ ಪೂರ್ತಿ ₹ 5 ಲಕ್ಷ ಪರಿಹಾರ ಬಂದಿಲ್ಲ. ಈಗಿನ ಸರ್ಕಾರ ಹಿಂದಿನ ಸರ್ಕಾರದ ಯೋಜನೆ ರದ್ದುಪಡಿಸಿದೆ. ಹಾಗಾಗಿ ಮನೆ ಕಾಮಗಾರಿ ಪೂರ್ಣಗೊಳಿಸದವರು ಈಗ ಬೇರೆ ವಸತಿ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಕಾಮಗಾರಿ ಮುಗಿಸಬೇಕು.–ಮೊಹಮ್ಮದ್ ರೋಷನ್, ಬೆಳಗಾವಿ ಜಿಲ್ಲಾಧಿಕಾರಿ
ಅವೈಜ್ಞಾನಿಕವಾಗಿ ನಿರ್ಮಿಸಿದ ಪುನರ್ವಸತಿ ಕೇಂದ್ರಗಳಲ್ಲಿ ಕನಿಷ್ಠ ಮೂಲಸೌಕರ್ಯವಿಲ್ಲ. ಹಾಗಾಗಿ ಅಲ್ಲಿ ಹೋಗಿ ಸಂತ್ರಸ್ತರು ವಾಸಿಸುತ್ತಿಲ್ಲ. ಅಥಣಿ ತಾಲ್ಲೂಕಿನ 17 ಪ್ರವಾಹಪೀಡಿತ ಗ್ರಾಮಗಳ ಪುನರ್ವಸತಿಗೂ ಕ್ರಮ ವಹಿಸಬೇಕು.–ರಮೇಶ ಪಾಟೀಲ, ಹಿಪ್ಪರಗಿ ಆಣೆಕಟ್ಟೆಯ ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ
ಪೂರಕ ಮಾಹಿತಿ: ಚಂದ್ರಕಾಂತ ಮಸಾನಿ, ಬಸವರಾಜ ಹವಾಲ್ದಾರ್, ಬಸವರಾಜ್ ಸಂಪಳ್ಳಿ, ಜಯಸಿಂಹ ಆರ್., ಇಮಾಮ್ ಹುಸೇನ್ ಗೂಡುನವರ, ಕೆ.ಎಂ.ಸತೀಶ್ ಬೆಳ್ಳಕ್ಕಿ, ಬಿ.ಜೆ.ಧನ್ಯಪ್ರಸಾದ್, ಸಂತೋಷ ಜಿಗಳಿಕೊಪ್ಪ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಶಿವಪೇಟೆಯ ಸರ್ಕಾರಿ ಜಾಗದಲ್ಲಿ ಹಾಕಿರುವ ತಗಡಿನ ಶೆಡ್‌ನಲ್ಲಿ ಸಂತ್ರಸ್ತರು ವಾಸಿಸುತ್ತಿರುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.