
ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಯುದ್ಧ, ರಾಜಕೀಯ ಅಸ್ಥಿರತೆಯಂತಹ ಸಮಸ್ಯೆಗಳು ಇದ್ದಾಗ ಹೂಡಿಕೆದಾರರಿಗೆ ಚಿನ್ನ, ಬೆಳ್ಳಿ ಹೆಚ್ಚು ಸುರಕ್ಷಿತವಾಗಿ ಕಾಣುತ್ತವೆ. ಅಂತಹ ಸಂದರ್ಭಗಳಲ್ಲಿ ಅವರು ಷೇರುಗಳಿಗಿಂತ ಹೆಚ್ಚಾಗಿ ಚಿನ್ನ ಮತ್ತು ಬೆಳ್ಳಿಯ ಮೇಲೆ ಹಣ ತೊಡಗಿಸುತ್ತಾರೆ ಎಂಬುದು ತಜ್ಞರ ಮಾತು.
ಅಂಕಿ–ಅಂಶಗಳು ಈ ಮಾತಿಗೆ ಪೂರಕವಾಗಿ ಇವೆ. 2022ರಲ್ಲಿ ಉಕ್ರೇನ್–ರಷ್ಯಾ ಯುದ್ಧ, 2023ರಲ್ಲಿ ಇಸ್ರೇಲ್–ಹಮಾಸ್ ಕದನ, 2024ರಲ್ಲಿ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಎರಡನೆಯ ಬಾರಿಗೆ ಅಧ್ಯಕ್ಷರಾಗಿ ಚುನಾಯಿತರಾದ ನಂತರದಲ್ಲಿ ಜಾಗತಿಕ ಮಟ್ಟದಲ್ಲಿನ ಅನಿಶ್ಚಿತತೆಗಳು ತೀವ್ರಗೊಂಡಿವೆ. ಸುಂಕವನ್ನು ಅಸ್ತ್ರವನ್ನಾಗಿಸಿಕೊಂಡ ವ್ಯಾಪಾರ ಸಮರವೂ ಜೋರಾಗಿದೆ.
ಡಿಸೆಂಬರ್ 31ಕ್ಕೆ ಕೊನೆಗೊಂಡ ಕ್ಯಾಲೆಂಡರ್ ವರ್ಷದಲ್ಲಿ ಚಿನ್ನದ ಬೆಲೆಯು ಬೆಂಗಳೂರಿನ ಮಾರುಕಟ್ಟೆಯಲ್ಲಿ ಶೇಕಡ 73.98ರಷ್ಟು ಏರಿಕೆ ದಾಖಲಿಸಿದೆ. ಇದೇ ಅವಧಿಯಲ್ಲಿ ಬೆಳ್ಳಿಯ ಬೆಲೆಯು ಬೆಂಗಳೂರಿನಲ್ಲಿ ಶೇ 170.54ರಷ್ಟು ಏರಿಕೆ ಕಂಡಿದೆ.
2022ರಲ್ಲಿ ಬೆಳ್ಳಿ ಮತ್ತು ಚಿನ್ನ ಕ್ರಮವಾಗಿ ಶೇ 14ರಷ್ಟು ಹಾಗೂ ಶೇ 11ರಷ್ಟು ಲಾಭ ತಂದುಕೊಟ್ಟಿವೆ. ಆ ವರ್ಷದಲ್ಲಿ ಷೇರುಪೇಟೆಯಲ್ಲಿ ಹಾಗೂ ಸುರಕ್ಷಿತವಾದ ಸಾಲಪತ್ರಗಳಲ್ಲಿನ ಹೂಡಿಕೆಯಿಂದ ಸಿಕ್ಕ ಲಾಭ ಕ್ರಮವಾಗಿ ಶೇ 6ರಷ್ಟು ಹಾಗೂ ಶೇ 2ರಷ್ಟು ಮಾತ್ರ.
2024ರಲ್ಲಿ ಕೂಡ ಚಿನ್ನ ಹಾಗೂ ಬೆಳ್ಳಿ ಕ್ರಮವಾಗಿ ಶೇ 31ರಷ್ಟು ಮತ್ತು ಶೇ 25ರಷ್ಟು ಲಾಭ ನೀಡಿವೆ. ಈ ಪ್ರಮಾಣವು ಷೇರುಪೇಟೆ (ನಿಫ್ಟಿ–50 ಸೂಚ್ಯಂಕ) ಹಾಗೂ ಸಾಲಪತ್ರಗಳು (ನಿಫ್ಟಿ ಕಾಂಪೊಸಿಟ್ ಜಿ–ಸೆಕ್ ಸೂಚ್ಯಂಕ) ನೀಡಿದ ಲಾಭದ ಪ್ರಮಾಣಕ್ಕಿಂತ ಹೆಚ್ಚು. 2025ರ ಗಳಿಕೆಯನ್ನು ಬರಹದ ಆರಂಭದಲ್ಲಿಯೇ ನೀಡಲಾಗಿದೆ.
‘ಡಾಲರ್ ದುರ್ಬಲ ಆಗುತ್ತಿರುವುದು, ಜಾಗತಿಕ ಮಟ್ಟದಲ್ಲಿನ ಅನಿಶ್ಚಿತತೆಗಳು ಹಾಗೂ ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡಬೇಕು ಎಂಬ ಬಲವಾದ ತುಡಿತ ಚಿನ್ನದ ಮೇಲೆ ಹಣ ತೊಡಗಿಸುವುದು ಜಾಸ್ತಿ ಆಗಿರುವುದಕ್ಕೆ ಕಾರಣ’ ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ನ ಸರಕುಗಳ ಸಂಶೋಧನಾ ವಿಭಾಗದ ಮುಖ್ಯಸ್ಥ ಹರೀಶ್ ವಿ. ಅವರು ‘ಪ್ರಜಾವಾಣಿ’ ಜೊತೆ ಅಭಿಪ್ರಾಯ ಹಂಚಿಕೊಂಡರು.
ಇದೇ ಬಗೆಯ ಅನಿಸಿಕೆಯನ್ನು ವೆಲ್ತ್ ಕಂಪನಿ ಮ್ಯೂಚುವಲ್ ಫಂಡ್‌ನ ಉಪ ಸಿಇಒ ಪ್ರಸನ್ನ ಪಾಠಕ್ ಅವರೂ ವ್ಯಕ್ತಪಡಿಸಿದರು. ‘ಹಣದುಬ್ಬರ ಹೆಚ್ಚಿರುವಾಗ, ಅರ್ಥವ್ಯವಸ್ಥೆಯಲ್ಲಿ ಅನಿಶ್ಚಿತತೆ ಇರುವಾಗ, ಷೇರುಪೇಟೆಯಲ್ಲಿ ಕುಸಿತ ಸಾಮಾನ್ಯವಾಗಿರುವಾಗ ಬೆಳ್ಳಿ ಮತ್ತು ಚಿನ್ನದ ಮೇಲಿನ ಹೂಡಿಕೆಯು ಸ್ಥಿರತೆಯನ್ನು ನೀಡಬಲ್ಲದು ಎಂಬುದನ್ನು ಭಾರತದ ಕುಟುಂಬಗಳು ಅರ್ಥ ಮಾಡಿಕೊಂಡಿವೆ’ ಎಂದು ಪಾಠಕ್ ವಿವರಿಸಿದರು.
‘ಚಿನ್ನ, ಬೆಳ್ಳಿ ಮೇಲಿನ ಹೂಡಿಕೆಯನ್ನು ರಿಸ್ಕ್‌ಗಳಿಂದ ರಕ್ಷಿಸಿಕೊಳ್ಳಲು ಬಳಸಿಕೊಳ್ಳಲಾಗುತ್ತಿದೆ; ಹೆಚ್ಚು ಬೆಳವಣಿಗೆ ಕಾಣಬಹುದಾದ ಆಸ್ತಿಗಳ ಮೇಲಿನ ಹೂಡಿಕೆಗೆ ಪರ್ಯಾಯವಾಗಿ ಅಲ್ಲ... ಚಿನ್ನ ಮತ್ತು ಬೆಳ್ಳಿಯ ಮೇಲಿನ ಹೂಡಿಕೆಯು ಅಸಲು ಮೊತ್ತವನ್ನು ಕಾಪಾಡಿಕೊಳ್ಳುವ ಸಾಧನವಾಗಿ ಬಳಕೆ ಆಗುತ್ತಿದೆ’ ಎಂದು ಪಾಠಕ್ ಅವರು ತಿಳಿಸಿದರು.
ಕೈಗಾರಿಕೆಗಳಿಂದ ಬರುತ್ತಿರುವ ಬೇಡಿಕೆ, ಹೂಡಿಕೆದಾರರು ಇಟಿಎಫ್‌ಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಹಣ ತೊಡಗಿಸುತ್ತಿರುವುದು, ಬೇಡಿಕೆಗೆ ಅನುಗುಣವಾಗಿ ಪೂರೈಕೆ ಇಲ್ಲದಿರುವ ಕಾರಣದಿಂದಾಗಿ ಕಳೆದ ಆರು ತಿಂಗಳ ಅವಧಿಯಲ್ಲಿ ಬೆಳ್ಳಿಯ ಬೆಲೆ ಕೂಡ ತೀವ್ರವಾಗಿ ಹೆಚ್ಚಳ ಕಂಡಿದೆ. ಬೆಳ್ಳಿಯ ಬಳಕೆ ಸೌರವಿದ್ಯುತ್ ಉತ್ಫಾದನೆ ಹಾಗೂ ಇ.ವಿ. ಉದ್ಯಮ ವಲಯದಲ್ಲಿ ಹೆಚ್ಚಾಗಿರುವುದು ಬೆಲೆ ಹೆಚ್ಚಳಕ್ಕೆ ಪೂರಕವಾಗಿವೆ ಎಂದು ಹರೀಶ್ ಅವರು ವಿವರಿಸಿದರು.
ಚಿನ್ನ, ಬೆಳ್ಳಿಯ ಬೆಲೆ ಏರಿಕೆ ಹಾಗೂ ಜಾಗತಿಕ ಮಟ್ಟದಲ್ಲಿನ ಅನಿಶ್ಚಿತತೆಗಳ ನಡುವಿನ ಸಂಬಂಧವನ್ನು ಈಚೆಗೆ ಸಂಸತ್ತಿನಲ್ಲಿ ಮಂಡನೆಯಾಗಿರುವ ಆರ್ಥಿಕ ಸಮೀಕ್ಷೆ ವರದಿಯು ದಾಖಲಿಸಿದೆ.
‘ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆಗಳು ಮುಂದುವರಿದಿರುವ ಕಾರಣದಿಂದಾಗಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯು ಹೆಚ್ಚಿನ ಮಟ್ಟದಲ್ಲಿಯೇ ಇರುವ ನಿರೀಕ್ಷೆ ಇದೆ. ವಿಶ್ವ ಮಟ್ಟದಲ್ಲಿ ಬಹುಕಾಲ ಉಳಿಯುವಂತಹ ಶಾಂತಿ ಸ್ಥಾಪನೆ ಆಗದೆ ಇದ್ದರೆ, ವ್ಯಾಪಾರ ಸಮರಕ್ಕೆ ಪರಿಹಾರ ಕಂಡುಕೊಳ್ಳದೆ ಇದ್ದರೆ ಚಿನ್ನ ಮತ್ತು ಬೆಳ್ಳಿಯ ಬೆಲೆಯು ಕಡಿಮೆ ಆಗದು’ ಎಂದು ಆರ್ಥಿಕ ಸಮೀಕ್ಷೆ ವರದಿ ಹೇಳಿದೆ.
ಚಿನ್ನ ಮತ್ತು ಬೆಳ್ಳಿಯ ಬೆಲೆಯು ಏರುಹಾದಿಯಲ್ಲಿ ಇದೆ. ಇವುಗಳ ಬೆಲೆ ಏರಿಕೆಯು ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಹೆಚ್ಚಾಗಿರುವುದನ್ನು, ಸುರಕ್ಷಿತ ಹೂಡಿಕೆಗಳಿಗೆ ಬೇಡಿಕೆ ಹೆಚ್ಚಾಗಿರುವುದನ್ನು ತೋರಿಸುತ್ತಿದೆ ಎಂದು ಸಮೀಕ್ಷೆ ವರದಿಯು ಉಲ್ಲೇಖಿಸಿದೆ.
ಹೂಡಿಕೆದಾರರು ತಮ್ಮ ಹಣವನ್ನು ವಿನಿಯೋಗ ಮಾಡುವುದರಲ್ಲಿ ರಾಚನಿಕ ಬದಲಾವಣೆ ಆಗುತ್ತಿದೆ. ಮೊದಲ ಬಾರಿಗೆ ದುಡಿಮೆ ಆರಂಭಿಸಿರುವವರು ತಮ್ಮ ಹೂಡಿಕೆ ಹಣದಲ್ಲಿ ಶೇ 5ರಷ್ಟನ್ನು ಚಿನ್ನ, ಬೆಳ್ಳಿ ಮೇಲೆ ತೊಡಗಿಸುತ್ತಿದ್ದಾರೆ. ವೃತ್ತಿಬದುಕಿನ ನಡುವಿನಲ್ಲಿರುವವರು ಶೇ 8–10ರಷ್ಟನ್ನು, ಅತಿಶ್ರೀಮಂತ ಕುಟುಂಬಗಳು ಶೇ 10–15ರಷ್ಟನ್ನು ಇವುಗಳ ಮೇಲೆ ತೊಡಗಿಸುತ್ತಿವೆ ಎಂದು ಪಾಠಕ್ ಮಾಹಿತಿ ನೀಡಿದರು. ‘ಇದು ಶಿಸ್ತುಬದ್ಧವಾಗಿ ಮಾಡುತ್ತಿರುವ ಹೂಡಿಕೆ, ಊಹೆಗಳ ಆಧಾರದ ಮೇಲೆ ಮಾಡುತ್ತಿರುವ ಹೂಡಿಕೆ ಅಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.