
ಬಾಗಲಕೋಟೆ: ‘ಬೆಳಿಗ್ಗೆಯಿಂದ ರಾತ್ರಿಯವರೆಗೆ ಕೈಯಲ್ಲಿ ಚಿನ್ನ, ಬೆಳ್ಳಿ ಇರುತ್ತಿತ್ತು. ಆದರೀಗ ಚಿನ್ನ, ಬೆಳ್ಳಿ ಬೆಲೆ ಏರಿಳಿತದಿಂದ ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಿದೆ. ತಿಂಗಳ ದಿನಸಿ ಖರೀದಿಗೆ ಬೇಕಾದಷ್ಟೂ ಆದಾಯ ಬರುತ್ತಿಲ್ಲ. ಎಷ್ಟೋ ಅಕ್ಕಸಾಲಿಗರು ಬೇರೆ ಕೆಲಸ ಹುಡುಕಿಕೊಂಡು ಹೋಗಿದ್ದಾರೆ’.
ಹೀಗೆ ಸಂಕಷ್ಟವನ್ನು ತೋಡಿಕೊಂಡ ವರು ಬಾಗಲಕೋಟೆಯ ಅಕ್ಕಸಾಲಿಗ ಶ್ರೀಕಾಂತ ಪತ್ತಾರ. ಎರಡು ದಶಕಗಳಿಂದ ಅವರದ್ದು ಇದೇ ಕಸುಬು. ‘ಇಷ್ಟು ವರ್ಷ ಹೊಟ್ಟೆ, ಬಟ್ಟೆಗೆ ಯಾವತ್ತೂ ತೊಂದರೆ ಆಗಿರಲಿಲ್ಲ. ಮೊದಲ ಬಾರಿಗೆ ಕಷ್ಟ ಅನುಭವಿಸ್ತಿದ್ದೇವೆ. ಬೆಳಿಗ್ಗೆಯಿಂದ ರಾತ್ರಿವರೆಗೆ ಅಂಗಡಿ ತೆಗೆದರೂ, ಬರಿಗೈಯಲ್ಲಿ ಮನೆಗೆ ಹೋಗಬೇಕು. ಬದುಕಲು ಸಾಲ ಮಾಡಬೇಕಿದೆ’ ಎಂದು ನೊಂದು ನುಡಿದರು. ಇದು ಅವರೊಬ್ಬರ ವ್ಯಥೆಯಲ್ಲ. ರಾಜ್ಯದಲ್ಲಿರುವ ಲಕ್ಷಾಂತರ ಅಕ್ಕಸಾಲಿಗರ ದಯನೀಯ ಸ್ಥಿತಿ.
‘ಮಕ್ಕಳ ಶಿಕ್ಷಣದ ಶುಲ್ಕ, ಮನೆ ಬಾಡಿಗೆ, ಅಂಗಡಿಗಳ ಬಾಡಿಗೆ ಕಟ್ಟಲೂ ಆಗದ ಸ್ಥಿತಿ ಇದೆ. ಅಂಗಡಿ ಬಾಡಿಗೆ ಕಟ್ಟಲಾಗದೇ ಕೆಲವರು ಅಂಗಡಿ ಮುಚ್ಚಿ ದ್ದಾರೆ. ಹೋಟೆಲ್ ಮತ್ತು ಗಾರೆ ಕೆಲಸದಲ್ಲಿ ತೊಡಗಿದ್ದಾರೆ. ಇನ್ನೂ ಕೆಲವರು ಆಟೊ ಓಡಿಸುತ್ತಾರೆ. ಹೀಗೆ ಹಲವಾರು ಅಕ್ಕಸಾಲಿಗರು ತಮ್ಮ ಕಸುಬನ್ನೇ ಬಿಟ್ಟು ಬೇರೆ ಕೆಲಸಗಳಲ್ಲಿ ನಿರತರಾಗಿದ್ದಾರೆ’ ಎಂದು ಕರ್ನಾಟಕ ಸ್ವರ್ಣಕಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಆರ್. ರಾಮಮೂರ್ತಿ ಸತ್ಯವನ್ನು ಬಿಚ್ಚಿಡುತ್ತಾರೆ.
ರಾಜ್ಯದ ಪ್ರತಿ ಗ್ರಾಮದಲ್ಲೂ ಒಂದೆರಡು ಅಕ್ಕಸಾಲಿಗರ ಕುಟುಂಬ ಗಳಿವೆ. ನೋಂದಣಿ ಮಾಡಿಕೊಳ್ಳದವರ ಸಂಖ್ಯೆಯೇ ಹೆಚ್ಚಿದೆ. ಕಡಿಮೆ ಎಂದರೂ ಎಲ್ಲ ಖರ್ಚುಗಳನ್ನು ಕಳೆದು ನಿತ್ಯ ₹500 ರಿಂದ ₹700 ಕೂಲಿ ಸಿಗುತಿತ್ತು. ಈಗ ಕೆಲಸವೇ ಕಡಿಮೆಯಾಗಿದೆ.
ಬೆಲೆ ಹೆಚ್ಚಳದ ಬಿಸಿ: ಮನೆಯಲ್ಲಿ ಪೂಜೆಗಾಗಿ 200ರಿಂದ 300 ಗ್ರಾಂ ತೂಕದ ದೇವರ ಮೂರ್ತಿಗಳನ್ನು ಗ್ರಾಹಕರು ಮಾಡಿಸುತ್ತಿದ್ದರು. ಕೆ.ಜಿ ಲೆಕ್ಕದಲ್ಲಿ ಮೂರ್ತಿಗಳನ್ನು ದೇವಸ್ಥಾನದವರು ಮಾಡಿಸುತ್ತಿದ್ದರು. ಮನೆಗಳಿಗೆ ₹30 ಸಾವಿರ ವೆಚ್ಚದಲ್ಲಿ ಮಾಡುತ್ತಿದ್ದ ಮೂರ್ತಿಯ ವೆಚ್ಚ ಈಗ ₹1 ಲಕ್ಷ ದಾಟಿದೆ. ಬೆಲೆ ಇಂದು, ನಾಳೆ ಇಳಿಕೆ ಆಗಬಹುದು ಎಂಬ ನಿರೀಕ್ಷೆ ಕೊಳ್ಳುವವರದ್ದು.
ಬೆಳ್ಳಿ ಗ್ಲಾಸು, ತಟ್ಟೆ, ಚಮಚ ಮಾಡಿಸುವವರ ಸಂಖ್ಯೆಯೂ ಕುಸಿದಿದೆ. ₹700ಕ್ಕೆ ಸಿದ್ಧವಾಗುತ್ತಿದ್ದ ಕಾಲುಂಗುರದ ಬೆಲೆ ಈಗ ₹3,500ಕ್ಕೆ ಜಿಗಿದಿದೆ. ಅದೇ ರೀತಿ ₹3 ಸಾವಿರವಿದ್ದ ಕಾಲು ಚೈನಿನ ಬೆಲೆ ₹12 ಸಾವಿರಕ್ಕೆ ಹೆಚ್ಚಾಗಿದೆ. ಹೀಗೆ ಆಭರಣದ ಬೆಲೆ ಮೂರು, ನಾಲ್ಕು ಪಟ್ಟು ಬೆಲೆ ಹೆಚ್ಚಳವಾಗಿದ್ದು ಕೊಳ್ಳುವವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
‘ಹೊಸ ಆಭರಣಗಳು ಇಲ್ಲದಿದ್ದರೂ ಬೆಳ್ಳಿ, ಚಿನ್ನಾಭರಣಗಳ ದುರಸ್ತಿಗಾದರೂ ಜನ ಬರುತ್ತಿದ್ದರು. ಬೆಳ್ಳಿ ಚೈನು, ಕಾಲುಂಗರದ ಕೊಂಡಿ ಹಾಕಲು, ಒಂದು ಗ್ರಾಂ ಬೇಕು.
ಬೆಳ್ಳಿ ಕೆಲಸವಾದರೆ ₹100, ಬಂಗಾರದ ಕೆಲಸವಾದರೆ ₹600 ದರದಲ್ಲಿ ಮಾಡಿಕೊಡುತ್ತಿದ್ದೆವು. ಈಗ ಅದೇ ಕೆಲಸವನ್ನು ಬೆಳ್ಳಿಯದ್ದು ₹350 ಮತ್ತು ಬಂಗಾರದ್ದು ₹1,600 ದರದಲ್ಲಿ ಮಾಡಿಕೊಡಬೇಕಿದೆ. ಹೀಗಾಗಿ ಗ್ರಾಹಕರೇ ಕಡಿಮೆಯಾಗಿದ್ದಾರೆ’ ಎಂದು ಅಕ್ಕಸಾಲಿಗರು ಹೇಳುತ್ತಾರೆ.
ಬೆಳಗಾವಿಯ ಸರಾಫ್ ಬಜಾರ್‌ನಲ್ಲಿ ಸ್ಥಗಿತಗೊಂಡ ಬೆಳ್ಳಿ ಸಾಮಗ್ರಿಗಳ ತಯಾರಿಕಾ ಘಟಕ
ಮೈಸೂರು ಶೈಲಿಗೂ ಸಂಕಷ್ಟ: ಸಾಂಸ್ಕೃತಿಕ ನಗರಿಯ ಅಕ್ಕಸಾಲಿಗರ ಚಿನ್ನದ ಕುಸುರಿಗೆ ವಿದೇಶಿಗರೂ ಮಾರು ಹೋಗಿದ್ದ ಕಾಲವಿತ್ತು. ‘ಮೈಸೂರು ಶೈಲಿ’ ಆಭರಣ ತಯಾರಿಕೆಯು ರಾಜಮನೆತನದ ಪರಂಪರೆಯಿಂದ ಪ್ರೇರಿತವಾಗಿತ್ತು. ಲಕ್ಷ್ಮಿ ದೇವಿ ಚಿತ್ರಣವುಳ್ಳ ಹಾರಗಳು (ನೆಕ್ಲೇಸ್) ಮತ್ತು ಪೆಂಡೆಂಟ್‌ಗಳಲ್ಲಿ ಹವಳ, ಪಚ್ಚೆ, ಮುತ್ತು ಕೂರಿಸಿ ಅದ್ಭುತ ವಿನ್ಯಾಸ ಮಾಡುತ್ತಿದ್ದ ನುರಿತ ಅಕ್ಕಸಾಲಿಗರು ಮೈಸೂರಿನಲ್ಲಿದ್ದರು. ಅವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗಿದೆ.
‘ಮೊದಲೆಲ್ಲ ಗ್ರಾಮೀಣ ಜನ ನಂಬಿಕಸ್ಥ ಅಕ್ಕಸಾಲಿಗರಲ್ಲಿ ಆಭರಣ ತಯಾರಿಕೆಗೆ ನೀಡುತ್ತಿದ್ದರು. ಅವರಿಗೆ ಈಗ ತಾಳಿ ಮಾಡಿಸಲೂ ಸಹ ಕಷ್ಟವಾಗಿದೆ. ಗ್ರಾಹಕರು ದೊಡ್ಡ ಚಿನ್ನಾಭರಣ ಅಂಗಡಿಗಳತ್ತ ಮುಖ ಮಾಡಿದ್ದಾರೆ. ಈಗ ಅವರು ನೀಡುವ ಕೆಲಸವನ್ನೇ ಮಾಡಬೇಕಾಗಿದೆ’ ಎಂದು ಮೈಸೂರಿನ ಇರ್ವಿನ್ ರಸ್ತೆಯ ದೀಪಾ ಜ್ಯುವೆಲ್ಲರಿ ವರ್ಕ್ಸ್‌ನ ಪ್ರಕಾಶ್ ಹೇಳುತ್ತಾರೆ.
‘ಮೈಸೂರಿನಲ್ಲಿ ಒಂದು ಕಾಲದಲ್ಲಿ 10 ಸಾವಿರಕ್ಕೂ ಹೆಚ್ಚು ಇದ್ದ ಅಕ್ಕಸಾಲಿಗರ ಸಂಖ್ಯೆ ಈಗ 4 ಸಾವಿರಕ್ಕೆ ಇಳಿದಿದೆ. ಎಷ್ಟೋ ಮಂದಿ ಬೇರೆ ಕೆಲಸದತ್ತ ಮುಖ ಮಾಡಿದ್ದಾರೆ. ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣ ಎನ್ನುವವರು ಸಾಲದ ಸುಳಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡರು. ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ಎಲ್ಲರ ಮನೆಯದ್ದೂ ಒಂದೊಂದು ಕಥೆ’ ಎಂದು ಕಣ್ಣೀರಾದರು.
‘10 ವರ್ಷಗಳ ಹಿಂದೆ ಚಿನ್ನಾಭರಣ ಮಾಡಿಸಲು ಹೆಚ್ಚು ಜನ ಬರುತ್ತಿದ್ದರು. ಬಂಗಾಳ, ಗುಜರಾತ್, ರಾಜಸ್ಥಾನ, ಕೇರಳದ ಜ್ಯುವೆಲ್ಲರಿ ಕಂಪನಿಗಳು ಮಳಿಗೆ ತೆರೆದ ನಂತರ ನಮ್ಮತ್ತ ಯಾರೂ ಬರುತ್ತಿಲ್ಲ. ಎಷ್ಟೋ ಸಲ ಕೆಲಸ ಇಲ್ಲದಿದ್ದರೂ ಅಂಗಡಿ ತೆರೆದು ಕುಳಿತಿರುತ್ತೇವೆ’ ಎಂದು ಕೆ.ಟಿ.ಸ್ಟ್ರೀಟ್‌ನಲ್ಲಿರುವ ಅಕ್ಕಸಾಲಿಗ ಜಗದೀಶ್ ಬೇಸರ ವ್ಯಕ್ತಪಡಿಸಿದರು.
ಚಾಮರಾಜನಗರದ ದೊಡ್ಡಂಗಡಿ ಬೀದಿ, ಹಾಸನ, ಮಂಡ್ಯ, ಮಡಿಕೇರಿಯ ಅಕ್ಕಸಾಲಿಗರೂ ಬೇರೆ ಕೆಲಸದತ್ತ ಮುಖ ಮಾಡಿದ್ದಾರೆ. ಗ್ರಾಹಕರಿಂದ ಮುಂಗಡ ಹಣ ಪಡೆದು ಕೆಲಸ ಮಾಡುತ್ತಿರುವ ಅಕ್ಕಸಾಲಿಗರು, ಚಿನ್ನದ ದರ ಹೆಚ್ಚಾದಂತೆ ನಷ್ಟ ಅನುಭವಿಸುತ್ತಿದ್ದಾರೆ. ಬೆಲೆ ಹೆಚ್ಚಳವಾದಾಗ ಕೈಯಿಂದಲೇ ಹಣ ಹಾಕಿ ಖರೀದಿಸುವ ಕಷ್ಟ ಅವರದ್ದಾಗಿದೆ.
ಚಿನ್ನ– ಬೆಳ್ಳಿ ಮಳಿಗೆಗಳೇ ಹೆಚ್ಚಾಗಿರುವ ಬೆಳಗಾವಿ ನಗರದ ಶಹಾಪುರದ ‘ಸರಾಫ್ ಬಜಾರ್’ನಲ್ಲಿ ಈಗ ಗ್ರಾಹಕರ ಕೊರತೆ ಕಾಣುತ್ತಿದೆ
ವೃತ್ತಿಯಿಂದ ಯುವಜನತೆ ವಿಮುಖ
ದೊಡ್ಡ, ದೊಡ್ಡ ಶೋ ರೂಂಗಳ ಭರಾಟೆ, ಯಂತ್ರೋಪಕರಣಗಳ ಬಳಕೆಯಿಂದ ಅಕ್ಕಸಾಲಿಗ ವೃತ್ತಿ ಅಪಾಯದಲ್ಲಿದೆ. ಕೆಲವೇ ವರ್ಷಗಳಲ್ಲಿ ಈ ಕುಲಕಸುಬು ಇಲ್ಲವಾದರೂ ಆಶ್ಚರ್ಯವಿಲ್ಲ. ಕಂಬಾರ, ಕುಂಬಾರ ಸೇರಿ ಹಲವು ಕುಲಕಸಬುದಾರರಿಗೆ ಕೆಲಸವೇ ಇಲ್ಲ. ಈಗ ಅದೇ ಸಾಲಿನಲ್ಲಿ ಅಕ್ಕಸಾಲಿಗ ವೃತ್ತಿಯೂ ಸೇರ್ಪಡೆಯಾಗುವ ಭೀತಿ ಎದುರಾಗಿದೆ.
‘ಶೇ 50ರಷ್ಟು ಜನರು ಈಗ ಕುಲಕಸುಬು ಬಿಟ್ಟು ಬೇರೆ ಕೆಲಸಗಳನ್ನು ಹುಡುಕಿಕೊಂಡು ಹೊರಟಿದ್ದಾರೆ. ಬೆಲೆ ಏರಿಕೆ ಬಳಿಕ ಆಭರಣಕ್ಕಿಂತ ಹೂಡಿಕೆ ದೃಷ್ಟಿಯಿಂದ ಗಟ್ಟಿ ಬಂಗಾರ ಮಾತ್ರ ಖರೀದಿಸುತ್ತಿದ್ದಾರೆ’ ಎಂದು ಮಂಗಳೂರಿನ ರಾಘವೇಂದ್ರ ಮಠ ಸಮೀಪದ ಶ್ರೀ ಶಾರದಾ ಜುವೆಲ್ಲರಿ ವರ್ಕ್ಸ್ ಮಾಲೀಕ ಗಣೇಶ ಆಚಾರ್ಯ, ಕಲಬುರಗಿಯ ದೇವಿಂದ್ರ ದೇಸಾಯಿಕಲ್ಲೂರ ತಿಳಿಸಿದರು.
‘ತಾತ, ತಂದೆ ಕಾಲದಿಂದ ಬಂದಿದೆ ಎಂದು ನಾವೂ ಇದೇ ವೃತ್ತಿಯನ್ನು ಮುಂದುವರೆಸಿದ್ದೇವೆ. ಆದರೆ, ಮಕ್ಕಳಿಗೆ ಈ ಕೆಲಸದಲ್ಲಿ ಆಸಕ್ತಿ ಇಲ್ಲ. ಕೆಲಸವೂ ಕಡಿಮೆ ಆಗುತ್ತಿದೆ. ಅದಕ್ಕೆ ಓದಿ, ನೌಕರಿ ಸೇರಲಿ ಎಂದು ವಿದ್ಯಾಭ್ಯಾಸ ಪಡೆಯಲು ಪ್ರೋತ್ಸಾಹಿಸುತ್ತಿದ್ದೇವೆ’ ಎಂದು ಗಣೇಶ್ ಆಚಾರ್ಯ ಹೇಳಿದರು.
‘ಬೀದರ್‌ನ ಹಳ್ಳಿಖೇಡ ಗ್ರಾಮದಲ್ಲಿ 17 ವರ್ಷಗಳಿಂದ ಚಿನ್ನಾಭರಣಗಳನ್ನು ತಯಾರಿಸಿ ಮಾರುತ್ತಿದ್ದೆ. ಮಳಿಗೆಯ ಬಾಡಿಗೆ ಕಟ್ಟಲು ಆಗದೆ 15 ದಿನಗಳ ಹಿಂದೆ ಬಾಗಿಲು ಹಾಕಿಕೊಂಡು ಬಂದು ಸ್ವಗ್ರಾಮದಲ್ಲಿದ್ದೇನೆ’ ಎಂದು ಯಾದಗಿರಿ ತಾಲ್ಲೂಕಿನ ಬಾಡಿಯಾಳ ಗ್ರಾಮದ ಬಸವರಾಜ ವಿಶ್ವಕರ್ಮ ತಿಳಿಸಿದರು. ದಾವಣಗೆರೆ, ಕೊಪ್ಪಳ, ರಾಯಚೂರು ಜಿಲ್ಲೆಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.
ಹಿಂದೆಲ್ಲ ತಿಂಗಳಿಗೊಮ್ಮೆ ಬೆಲೆ ಏರುಪೇರಾದರೆ ದೊಡ್ಡ ವಿಷಯವಾಗುತ್ತಿತ್ತು. ಈಗ ದಿನದಲ್ಲಿ ಮೂರರಿಂದ ನಾಲ್ಕು ಬಾರಿ ಏರಿಳಿತ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೆಲಸ ಒಪ್ಪಿಕೊಳ್ಳಲು ಯಾರಿಗೂ ಭರವಸೆ ಇಲ್ಲ.– ಪ್ರಕಾಶ್ ಆಚಾರ್ ಹಲೆಜಿ, ಕಾರ್ಯದರ್ಶಿ, ದಕ್ಷಿಣ ಕನ್ನಡ ಚಿನ್ನ–ಬೆಳ್ಳಿ ಆಭರಣ ತಯಾರಕರ ಸಂಘ
ಮೇಕಿಂಗ್ ಚಾರ್ಜ್ ನಷ್ಟದ ಭಯ: ಚಿನ್ನದ ಗಟ್ಟಿಯತ್ತ ಗ್ರಾಹಕರು ಆಕರ್ಷಿತರಾಗಲು ಕಾರಣವಿದೆ. ಆಭರಣ ತಯಾರಿಕೆ ವೇಳೆ ಪ್ರತಿ 10 ಗ್ರಾಂಗೆ ಇಂತಿಷ್ಟು ಎಂದು ಮೇಕಿಂಗ್ ಚಾರ್ಜ್ ವಿಧಿಸಲಾಗುತ್ತದೆ. ಚಿನ್ನದ ಬೆಲೆ ಕಮ್ಮಿ ಇದ್ದಾಗ ಪ್ರತಿ 10 ಗ್ರಾಂ ಚಿನ್ನಕ್ಕೆ ₹ 6 ಸಾವಿರದಿಂದ ₹ 7500 ಮೊತ್ತ ಆಗುತ್ತಿತ್ತು. ಈಗ ಆ ಮೇಕಿಂಗ್ ಚಾರ್ಜ್ ಮೊತ್ತವೇ ₹20 ಸಾವಿರದಿಂದ ₹30 ಸಾವಿರ ಆಗುತ್ತಿದೆ. ಇದು ಆಭರಣದಿಂದ ಆಭರಣಕ್ಕೆ ಬದಲಾಗುತ್ತದೆ. ಇದರಿಂದ ಆಭರಣ ಖರೀದಿಸುವವರು ಕಡಿಮೆಯಾಗುತ್ತಿದ್ದಾರೆ.
‘ಬೆಳ್ಳಿಯ ಬೆಲೆಯೂ ಹೆಚ್ಚಾಗುತ್ತಿರುವುದರಿಂದ ಕುಂಕುಮ ಹಾಕುವ ಆಭರಣ, ಬೆಳ್ಳಿಯ ಸಮೆ, ಕಾಲ್ಗಡುಗ ಖರೀದಿಸುವ ಬದಲು ಸಭೆ, ಸಮಾರಂಭಗಳಲ್ಲಿ ಹಣವನ್ನೇ ಉಡುಗೊರೆಯಾಗಿ ಕೊಡುತ್ತಿದ್ದಾರೆ. ಬೆಳ್ಳಿ ಆಭರಣಗಳನ್ನು ಉಡುಗೊರೆಯಾಗಿ ಕೊಡುತ್ತಿಲ್ಲ. ಇದು ಖರೀದಿ ಪ್ರಮಾಣ ಕುಸಿತಕ್ಕೆ ಕಾರಣವಾಗಿದೆ’ ಎಂದು ಕಲಬುರಗಿ ಜ್ಯುವೆಲ್ಲರಿ ಮಾಲೀಕ ವಜ್ರಕುಮಾರ್ ಟೆಂಗಳಿ.
ಚಿನ್ನದ ಆಭರಣಗಳನ್ನು ಮಾಡುವಾಗ ಅಂಗಡಿಗಳವರು ಪ್ರತಿ 10 ಗ್ರಾಂ ಚಿನ್ನಕ್ಕೆ ಐದು ಗುಂಜಿಯವರೆಗೆ ವೇಸ್ಟೇಜ್ ಎಂದು ಅಕ್ಕಸಾಲಿಗರಿಗೆ ನೀಡುತ್ತಾರೆ. ಅದರಲ್ಲಿ ಆಭರಣಕ್ಕಾಗಿ ಕರಗಿಸಿದಾಗ ಕೈಗೆ ಸಿಗದೇ ಒಂದರಿಂದ ಎರಡು ಗುಂಜಿಯಷ್ಟು ಅಕ್ಕಸಾಲಿಗರಿಗೆ ಉಳಿಯುತ್ತಿತ್ತು. ಈಗ ಕೆಲಸವೇ ಇಲ್ಲದ್ದರಿಂದ ವೇಸ್ಟೇಜ್ ಸಹ ಉಳಿಯುತ್ತಿಲ್ಲ.
ಬೆಳ್ಳಿ, ಬಂಗಾರದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಖರೀದಿ ಮತ್ತು ದುರಸ್ತಿಗೆಂದು ಬರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಗ್ರಾಹಕರು ಬಾರದ ಕಾರಣ ನಮಗೂ ಕೆಲಸ ಇಲ್ಲದಂತಾಗಿದೆ.– ಶ್ರೀಕಾಂತ ಪತ್ತಾರ, ಜಿಲ್ಲಾ ಘಟಕದ ಅಧ್ಯಕ್ಷ, ಕರ್ನಾಟಕ ಸ್ವರ್ಣಕಾರರ ಸಂಘ, ಬಾಗಲಕೋಟೆ
ಶೋ ರೂಂಗಳಿಗೂ ಸಂಕಷ್ಟ
ಮದುವೆ ಸೀಸನ್ ಶುರುವಾದ ಕೂಡಲೇ ಗ್ರಾಹಕರು ಭಾರಿ ಸಂಖ್ಯೆಯಲ್ಲಿ ಚಿನ್ನಾಭರಣ ಶೋರೂಮ್‌ಗಳಿಗೆ ಲಗ್ಗೆ ಇಡುತ್ತಿದ್ದರು. ಆದರೆ, ಈಗ ಅವರ ಸಂಖ್ಯೆ ಕುಸಿದಿದೆ. ಅಳೆದು–ತೂಗಿ ಅನಿವಾರ್ಯವಿದ್ದಷ್ಟೇ ಬಂಗಾರ ಖರೀದಿ ನಡೆದಿದೆ. ಶೋರೂಂಗಳ ವೆಚ್ಚ ನಿರ್ವಹಣೆಗೂ ಆದಾಯ ಸಾಲುತ್ತಿಲ್ಲ.
ಬಂಗಾರ, ಬೆಳ್ಳಿ ಆಭರಣ ಮಾಡುತ್ತಿರುವ ಅಕ್ಕಸಾಲಿಗರಷ್ಟೇ ಅಲ್ಲ, ಅವುಗಳನ್ನು ಮಾರಾಟ ಮಾಡಲು ದೊಡ್ಡ, ದೊಡ್ಡ ಶೋ ರೂಂ ಗಳನ್ನು ತೆರೆದ ಅಂಗಡಿಗಳ ಮಾಲೀಕರಿಗೂ ಬೆಲೆ ಏರಿಕೆ ಹೊಡೆತ ನೀಡಿದೆ.
‘ಬೆಲೆ ಏರಿಕೆಯಿಂದ ಜನರು ಆಭರಣಗಳಿಗಾಗಿ ಚಿನ್ನ ಖರೀದಿಸುತ್ತಿಲ್ಲ. ಹೂಡಿಕೆ ದೃಷ್ಟಿಯಿಂದ ಖರೀದಿಸುತ್ತಿದ್ದಾರೆ. ಅದನ್ನೂ ಆನ್‌ಲೈನ್ ಮೂಲಕವೇ ಬಂಗಾರ, ಬೆಳ್ಳಿ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ’ ಎಂದು ಉದ್ಯಮಿ ಕೆ.ಪಿ. ನಂಜುಂಡಿ ತಿಳಿಸಿದರು.
‘ಗ್ರಾಹಕರೇ ಇಲ್ಲದಂತಾಗಿದೆ. ಬೆಲೆ ಇಳಿಯುವ ನಿರೀಕ್ಷೆಯಲ್ಲಿಯೇ ಕಾದು ಕುಳಿತಿದ್ದಾರೆ. ಶೇ 60 ರಷ್ಟು ವ್ಯಾಪಾರ ಕಡಿಮೆಯಾಗಿದೆ. ವರ್ಷದಿಂದ ಕಡಿಮೆಯಾಗುತ್ತಾ ಬಂದಿದ್ದ ವ್ಯಾಪಾರ ನಾಲ್ಕು ತಿಂಗಳಿನಿಂದ ಪೂರ್ತಿ ಕಡಿಮೆಯಾಗಿದೆ’ ಎನ್ನುತ್ತಾರೆ ಬಾಗಲಕೋಟೆ ಭಗವಾನದಾಸ ಬಾರ್ಶಿ ಜ್ಯುವೆಲ್ಲರ್ಸ್ ದಿನೇಶ ಬಾರ್ಶಿ.
‘ಈಚೆಗೆ ದಿನದಲ್ಲಿ ಮೂರು ಬಾರಿ ಬೆಲೆ ಏರಿಕೆ ಆಗುತ್ತಿದೆ. ಮಧ್ಯಾಹ್ನ ಇದ್ದ ಬೆಲೆ ಸಂಜೆ ಇರುವುದಿಲ್ಲ. ಆಭರಣ ಆರ್ಡರ್ ತೆಗೆದುಕೊಳ್ಳುವಾಗ ಯಾವ ಬೆಲೆ ಹೇಳಬೇಕು ಎಂಬ ಗೊಂದಲ ಕೆಲಸಗಾರರನ್ನು ಕಾಡುತ್ತದೆ. ಈಗ ಬೆಲೆ ಏರಿಳಿತ ಕಾಣುತ್ತಿರುವುದರಿಂದ ಅಂಗಡಿ ನಡೆಸುವುದೇ ಕಷ್ಟವಾಗಿದೆ’ ಎಂದು ಮಂಗಳೂರಿನ ಸ್ವರ್ಣೋದ್ಯಮ ಹಿತರಕ್ಷಣಾ ವೇದಿಕೆಯ ಹಳೆಯಂಗಡಿ ವಲಯ ಅಧ್ಯಕ್ಷ ಜಗದೀಶ್ ಪಿ ಹೇಳಿದರು.
ಚಿನ್ನ, ಬೆಳ್ಳಿ ವ್ಯಾಪಾರಸ್ಥರು ಈಗ ರೆಡಿಮೇಡ್ ಒಡವೆಗಳಿಗೆ ಒತ್ತು ನೀಡುತ್ತಿದ್ದಾರೆ. ಅಕ್ಕಸಾಲಿಗರ ಕೈಯಲ್ಲಿ ಮಾಡಿಸುವುದಕ್ಕಿಂತ ಕಡಿಮೆ ವೆಚ್ಚದಲ್ಲಿ ಈ ಒಡವೆಗಳು ಸಿಗುತ್ತಿವೆ. ಸರ್ಕಾರವು ಅಕ್ಕಸಾಲಿಗರಿಗರ ಭದ್ರತೆಗಾಗಿ ಯೋಜನೆ ರೂಪಿಸಬೇಕು ಎಂದು ಬೆಂಗಳೂರಿನ ಶ್ರೀ ವಿಶ್ವಕರ್ಮ ಸೇವಾ ಸಮಿತಿ ಚಿನ್ನ, ಬೆಳ್ಳಿ ಕೆಲಸಗಾರರ ಘಟಕದ ಅಧ್ಯಕ್ಷ ಆರ್. ಮಧುಸೂದನ್ ಮನವಿ ಮಾಡಿದ್ದಾರೆ.
ಬೆಲೆ ಏರಿಳಿತ ಮತ್ತು ಗಟ್ಟಿ ಬಂಗಾರ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡುವವರು ಹೆಚ್ಚಾಗುತ್ತಿರುವ ಕಾರಣದಿಂದ ಬಂಗಾರವಾಗಿದ್ದ ಅಕ್ಕಸಾಲಿಕರ ಬದುಕು ಸಂಕಷ್ಟದತ್ತ ತಿರುಗಿದೆ.
ಬೆಳಗಾವಿಯ ಅಕ್ಕಸಾಲಿಗ ಆನಂದ ಹಾವನೂರ ಅವರ ಕಾರ್ಖಾನೆಯಲ್ಲಿ ಸಿದ್ಧಗೊಂಡ ಬೆಳ್ಳಿ ಮೂರ್ತಿಗಳು
ಬೆಲೆ ಏರಿಕೆ ಕಾರಣದಿಂದ ಚಿನ್ನ, ಬೆಳ್ಳಿ ಖರೀದಿಸುವವರ ಸಂಖ್ಯೆ ತೀವ್ರವಾಗಿ ಕುಸಿದಿದೆ. ಪರಿಣಾಮ ಅಕ್ಕಸಾಲಿಗರಿಗೂ ಕೆಲಸ ನೀಡಲು ಸಾಧ್ಯವಾಗುತ್ತಿಲ್ಲ.– ಚೇತನ್‌ಕುಮಾರ್ ಮೆಹ್ತಾ, ಅಧ್ಯಕ್ಷ,ಕರ್ನಾಟಕ ಜುವೆಲರ್ಸ್ ಅಸೋಸಿಯೇಷನ್
ಬೆಳಗಾವಿ, ಬೆಂಗಳೂರಿನಲ್ಲೂ ಸಂಕಷ್ಟ
ಬೆಳಗಾವಿ ನಗರದ ವಡಗಾವಿ ಹಾಗೂ ಶಹಾಪುರ ಪ್ರದೇಶದಲ್ಲಿ ಸುಮಾರು 100ಕ್ಕೂ ಹೆಚ್ಚು ಚಿನ್ನ– ಬೆಳ್ಳಿ ಸಾಮಗ್ರಿಗಳನ್ನು ತಯಾರು ಮಾಡುವ ಯೂನಿಟ್‌ಗಳಿವೆ. ‘ಸರಾಫ್ ಬಜಾರ್’ ಎಂಬ ಮಾರುಕಟ್ಟೆಯೇ ಇಲ್ಲಿದೆ. ದರ ಏರಿಕೆ ಆದಾಗಿನಿಂದ ವ್ಯಾಪಾರಿಗಳು, ಕಾರ್ಮಿಕರು, ಸರಬರಾಜುದಾರರೂ ಕೆಲಸವಿಲ್ಲದೇ ಕುಳಿತಿದ್ದಾರೆ.
‘ದೀಪಾವಳಿಗೂ ಮುನ್ನ ಒಂದು ದಿನಕ್ಕೆ ಮಾರುತ್ತಿದ್ದ ಆಭರಣಗಳು ಈಗ ಒಂದು ತಿಂಗಳಿಗೂ ಮಾರುತ್ತಿಲ್ಲ. ಚಿನ್ನ– ಬೆಳ್ಳಿ ದರಗಳು ಈ ಮಟ್ಟಕ್ಕೆ ಏರಬಹುದು ಎಂದು ನಾವು ಊಹಿಸಲೂ ಇಲ್ಲ. ಕೆಲಸಗಾರರನ್ನು ಬಿಡಿಸಿದ್ದೇವೆ. ₹20 ಲಕ್ಷ ಅವರ ಬಳಿ ಮುಂಗಡ ಇದೆ. ಈಗ ಅದನ್ನು ಕೇಳಲೂ ಆಗುತ್ತಿಲ್ಲ, ಕೆಲಸವನ್ನೂ ನೀಡಲು ಆಗತ್ತಿಲ್ಲ’ ಎಂದು ವಡಗಾವಿಯ ಆನಂದ ಹಾವನೂರ ಸಂಕಷ್ಟ ಬಿಚ್ಚಿಟ್ಟರು.
ಬೆಂಗಳೂರು ನಗರ ವ್ಯಾಪ್ತಿಯಲ್ಲೇ ಚಿನ್ನ, ಬೆಳ್ಳಿ ಕೆಲಸ ಮಾಡುವವರ ಸಂಖ್ಯೆ 2 ಲಕ್ಷವಿದೆ. ಇದರಲ್ಲಿ ಚಿಕ್ಕಪೇಟೆ ಸುತ್ತಮುತ್ತಲಲ್ಲೇ 50 ಸಾವಿರ ಜನರು ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆರು ತಿಂಗಳಿನಿಂದ ಅಕ್ಕಸಾಲಿ ಕೆಲಸಕ್ಕೇ ಬೇಡಿಕೆಯೇ ಇಲ್ಲವಾಗಿದೆ ಎಂದು ಶ್ರೀ ವಿಶ್ವಕರ್ಮ ಸೇವಾ ಸಮಿತಿ ಚಿನ್ನ, ಬೆಳ್ಳಿ ಕೆಲಸಗಾರರ ಘಟಕದ ಅಧ್ಯಕ್ಷ ಆರ್. ಮಧುಸೂದನ್ ಆತಂಕ ವ್ಯಕ್ತಪಡಿಸಿದರು.
ಅಕ್ಕಸಾಲಿಗರು ಅಸಂಘಟಿತ ವಲಯದಲ್ಲಿ ಬರುತ್ತಾರೆ. ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಣಿ ಮಾಡಿದರೆ ಅಪಘಾತದಲ್ಲಿ ತೀರಿಕೊಂಡರೆ ₹1 ಲಕ್ಷ, ಗಾಯಗೊಂಡರೆ ₹50 ಸಾವಿರ, ಸಹಜ ಸಾವಿಗೆ ₹10 ಸಾವಿರ ಸಹಾಯಧನ ಸಿಗುತ್ತದೆ.– ರಮೇಶ ಸುಂಬಡ, ಜಿಲ್ಲಾ ಕಾರ್ಮಿಕ ಅಧಿಕಾರಿ, ಕಾರ್ಮಿಕ ಇಲಾಖೆ, ಬಾಗಲಕೋಟೆ ಜಿಲ್ಲೆ
ಬಾಗಲಕೋಟೆಯ ಚಿನ್ನ, ಬೆಳ್ಳಿ ದುರಸ್ತಿ ಅಂಗಡಿಯಲ್ಲಿ ಗ್ರಾಹಕರಿಗಾಗಿ ಕಾಯುತ್ತಿರುವ ಅಕ್ಕಸಾಲಿಗ
ಮುಚ್ಚುವ ಸ್ಥಿತಿಯಲ್ಲಿ ಬೆಳಗಾವಿಯ ಬೆಳ್ಳಿ, ಚಿನ್ನ ಆಭರಣ ಕಾರ್ಖಾನೆಗಳು
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಮಾಂಗೂರು ಗ್ರಾಮವು ಬೆಳ್ಳಿ ಸಾಮಗ್ರಿಗಳ ತಯಾರಿಕೆಯನ್ನೇ ನಂಬಿಕೊಂಡ ಊರು. 10 ಸಾವಿರ ಜನಸಂಖ್ಯೆ ಇರುವ ಈ ಊರಿನಲ್ಲಿ ಶೇ 80ಕ್ಕೂ ಹೆಚ್ಚು ಕುಟುಂಬಗಳು ಬೆಳ್ಳಿ ಕೆಲಸವನ್ನೇ ನಂಬಿವೆ. 200ಕ್ಕೂ ಹೆಚ್ಚು ಯೂನಿಟ್ (ಚಿಕ್ಕ ಕಾರ್ಖಾನೆ) ಇಲ್ಲಿವೆ. ಬೆಳ್ಳಿ ದರ ಗಗನಕ್ಕೇರಿದ್ದರಿಂದ ಊರಿನ ಜನರು ಕೆಲಸವಿಲ್ಲದೇ ಕಂಗಾಲಾಗಿದ್ದಾರೆ.
ಮಾಂಗೂರು ಮಾತ್ರವಲ್ಲ; ಸುತ್ತಮುತ್ತಲಿನ ಕಾರದಗಾ, ಬಾರವಾಡ, ಕುನ್ನೂರ ಗ್ರಾಮಗಳದ್ದೂ ಇದೇ ಕಥೆ. ಈ ಹಳ್ಳಿಗಳು ಮಹಾರಾಷ್ಟ್ರದ ಗಡಿಗೆ ಅಂಟಿಕೊಂಡಿವೆ. ಮುಂಬೈ, ಪುಣೆ, ಕೊಲ್ಹಾಪುರ, ಸೊಲ್ಲಾಪುರ, ಮೀರಜ್ ಬಹುಪಾಲು ಚಿನ್ನ– ಬೆಳ್ಳಿ ವ್ಯಾಪಾರಿಗಳು ಈ ಊರುಗಳ ಕಾರ್ಮಿಕರನ್ನೇ ಅವಲಂಬಿಸಿದ್ದಾರೆ. ಇವರಿಗೆ ಬೇಡಿಕೆ ಬರುವುದೂ ಮಹಾರಾಷ್ಟ್ರದಿಂದ, ಸರಬರಾಜು ಆಗುವುದೂ ಅಲ್ಲಿಗೇ.
ಮಾಂಗೂರಿನ ಪ್ರತಿ ಮನೆಯಲ್ಲಿ ಬೆಳ್ಳಿಯ ಸಾಮಗ್ರಿ ತಯಾರು ಮಾಡುವ ಸಣ್ಣ ಘಟಕಗಳಿವೆ. ಕುಟುಂಬದ ಸದಸ್ಯರ ಜತೆಗೆ, ಐದಾರು ಕೆಲಸಗಾರರನ್ನು ಇಟ್ಟುಕೊಂಡು ಪುಟ್ಟ ಕಾರ್ಖಾನೆಗಳನ್ನು ನಡೆಸುತ್ತಿದ್ದರು. ಕಳೆದ ದೀಪಾವಳಿಯ ನಂತರ ಬೆಳ್ಳಿ ದರ ಊಹೆಗೂ ಮೀರಿ ಹೆಚ್ಚಾಗಿದೆ. ಇದರಿಂದ ‘ಆರ್ಡರ್’ಗಳು ಬಂದ್ ಆಗಿವೆ. ಮೂರು ತಿಂಗಳಿಂದ ಅಕ್ಕಸಾಲಿಗರಿಗೆ ಕೆಲಸವಿಲ್ಲ.
ಕೆಲವರು ಮುಂಬೈ, ಪುಣೆ ಕಡೆಗೆ ಬೇರೆ ಉದ್ಯೋಗ ಅರಸಿ ವಲಸೆ ಹೋದರೆ, ಮತ್ತೆ ಕೆಲವರು ಹೊಲಗಳತ್ತ ಮುಖ ಮಾಡಿದ್ದಾರೆ. ಬೇರೆ ಯಾವುದೂ ಕೆಲಸ ಬಾರದವರು ದಿನದೂಡುವುದೇ ದುಸ್ತರವಾಗಿದೆ ಎನ್ನುತ್ತಾರೆ ಮಾಂಗೂರಿನ ವಿನೋದ ಪಾಟೀಲ.
ಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ | ಪೂರಕ ಮಾಹಿತಿ: ಸಂತೋಷ ಈ. ಚಿನಗುಡಿ, ವಿಕ್ರಂ ಕಾಂತಿಕೆರೆ, ಪ್ರದೀಪ ಕುಂದಣಗಾರ, ಮೋಹನ್ ಕುಮಾರ ಸಿ, ಮನೋಜಕುಮಾರ್ ಗುದ್ದಿ, ಬಾಲಕೃಷ್ಣ ಪಿ.ಎಚ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.