
ಎಐ ಚಿತ್ರ: ಕಣಕಾಲಮಠ
ಮಂಗಳೂರು: ‘ಈ ಒಂದುವರೆ ಎಕರೆ ಜಮೀನನ್ನು ನಂಬಿಕೊಂಡೇ ಐದು ದಶಕಗಳಿಂದ ಜೀವನ ನಡೆಸಿದ್ದೇವೆ. ಇಬ್ಬರು ಮಕ್ಕಳ ಎಂಜಿನಿಯರಿಂಗ್‌ವರೆಗಿನ ಶಿಕ್ಷಣದ ಖರ್ಚು, ಮಕ್ಕಳ ಮದುವೆ– ಮುಂಜಿ, ಮನೆಯ ಖರ್ಚುವೆಚ್ಚ... ನಂಬಿದ ಭೂಮಿ ಜೀವನಕ್ಕೆ ಕೊರತೆ ಆಗದಂತೆ ನೋಡಿಕೊಂಡಿದೆ. ಆದರೆ, ಈಗ ಮನೆಯಲ್ಲಿ ಇಬ್ಬರೇ ಇದ್ದರೂ ಜೀವನ ಕಷ್ಟ ಅನ್ನಿಸುತ್ತದೆ. ಮಕ್ಕಳ ಮುಂದೆ ಕೈ ಒಡ್ಡಬೇಕಾಗಬಹುದೇನೋ ಎಂಬ ಆತಂಕ ಮೂಡುತ್ತಿದೆ’ ಎಂದು ಪುತ್ತೂರು ತಾಲ್ಲೂಕಿನ ಅಡಿಕೆ ಬೆಳೆಗಾರ ರಾಮಚಂದ್ರ ಆತಂಕ ಬಿಚ್ಚಿಟ್ಟರು.
‘ಕೃಷಿಯಲ್ಲಿ ಕಷ್ಟ ನಷ್ಟಗಳನ್ನು ಅನುಭವಿಸದ ರೈತರು ಇರಲಾರದು. ನಾವೂ ಅನುಭವಿಸಿದ್ದೇವೆ. ಈ ವರ್ಷ ಬೆಳೆ ಚೆನ್ನಾಗಿದ್ದರೆ ಮುಂದಿನ ವರ್ಷ ಶೇ 10ರಿಂದ ಶೇ 20ರಷ್ಟು ಇಳುವರಿ ಕಡಿಮೆ ಇರುತ್ತದೆ, ಇದು ನಮ್ಮ ಅನುಭವ. ಆದರೆ ದಕ್ಷಿಣ ಕನ್ನಡ, ನೆರೆಯ ಕೇರಳದ ಕಾಸರಗೋಡು ಹಾಗೂ ಉಡುಪಿ ಜಿಲ್ಲೆಯ ರೈತರ ಸಂಕಷ್ಟ ಬೇರೆ ರೀತಿಯದ್ದು. ಕಾಡಾನೆ ಹಾವಳಿಯಿಂದಾದ ಬೆಳೆನಷ್ಟಕ್ಕೆ ಸರ್ಕಾರದಿಂದ ಅಲ್ಪಸ್ವಲ್ಪ ಪರಿಹಾರ ಅಥವಾ ಬೆಳೆ ವಿಮೆ ಪಡೆಯಬಹುದು. ಆದರೆ, ನಮ್ಮ ಭಾಗದಲ್ಲಿ ಕಾಡು ಪ್ರಾಣಿಗಳು ಕೊಡುವ ಒಳ ಏಟು ಅತ್ತ ಪರಿಹಾರವೂ ಇಲ್ಲ, ಇತ್ತ ಆದಾಯವೂ ಇಲ್ಲ ಎನ್ನುವಂತೆ ಮಾಡುತ್ತಿದೆ’ಎಂದು ಈ ಭಾಗದ ರೈತರು ಹೇಳುತ್ತಾರೆ.
‘ಆನೆ ದೊಡ್ಡ ಪ್ರಾಣಿ, ಆದ್ದರಿಂದ ಆನೆ ದಾಳಿ ಮಾಡಿದರೆ ದೊಡ್ಡದಾಗಿ ಬಿಂಬಿತ ವಾಗುತ್ತಿದೆ. ಇತರ ಸಣ್ಣ ಕಾಡು ಪ್ರಾಣಿಗಳು ಅಷ್ಟೇ ಪ್ರಮಾಣದಲ್ಲಿ, ಕೆಲವೊಮ್ಮೆ ಅದಕ್ಕೂ ಹೆಚ್ಚಿನ ಪ್ರಮಾಣದ ಹಾನಿ ಮಾಡಿದರೂ ಸುದ್ದಿಯಾಗುವುದಿಲ್ಲ’ ಎಂಬುದು ಈ ರೈತರ ಬೇಸರ.
‘ಹಿರಿಯ ಮಗ ಬೆಂಗಳೂರಿನಲ್ಲಿ ಇದ್ದಾನೆ, ಕಿರಿಯವ ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದಾನೆ. ಮಗಳಿಗೆ ಮದುವೆಯಾಗಿದೆ, ಅವರೂ ಚೆನ್ನಾಗಿದ್ದಾರೆ. ಹಳ್ಳಿಯ ಈ ಮನೆಯಲ್ಲಿ ಇರುವುದು ನಾನು ಮತ್ತು ನನ್ನ ಪತ್ನಿ ಮಾತ್ರ. ಹಿಂದೆ ಇಡೀ ಕುಟುಂಬದ ಖರ್ಚು ವೆಚ್ಚಗಳನ್ನು ನಿಭಾಯಿಸಿದ್ದ ಈ ಜಮೀನಿನಿಂದ, ಈಗ ಬರುವ ಆದಾಯ ನಮ್ಮಿಬ್ಬರ ಖರ್ಚಿಗೂ ಅಲ್ಲಿಂದಲ್ಲಿಗೆ ಆಗುತ್ತಿದೆ. ಅನಿರೀಕ್ಷಿತವಾಗಿ ದೊಡ್ಡ ಖರ್ಚು– ವೆಚ್ಚ ಬಂದರೆ ಮಕ್ಕಳನ್ನು ಅವಲಂಬಿಸಬೇಕಾಗುತ್ತದೆ’ ಎಂದು 70 ವರ್ಷ ವಯಸ್ಸು ಮೀರಿದ ರಾಮಚಂದ್ರ ಹೇಳುತ್ತಾರೆ.
‘ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಈ ಭಾಗದಲ್ಲಿ, ವಿಶೇಷವಾಗಿ ಅಡಿಕೆ ಬೆಳೆಯುವ ರೈತರ ಸ್ಥಿತಿ ಗಂಭಿರವಾಗಿದೆ. ಆನೆ ದಾಳಿಯಾದರೆ ಪರಿಹಾರ ಪಡೆಯಬಹುದು, ಕಾಡುಹಂದಿ, ಮುಳ್ಳುಹಂದಿ, ಕೋತಿಗಳು ಮಾಡುವ ಹಾನಿ, ಬೆಳೆ ನಷ್ಟಕ್ಕೆ ಪರಿಹಾರ ನೀಡುವವರು ಯಾರು? ಹೀಗೆ ಪರಿಹಾರ ನೀಡಲು ತೋಟಗಾರಿಕೆ ಇಲಾಖೆಯಲ್ಲಾಗಲಿ, ಅರಣ್ಯ ಇಲಾಖೆಯಲ್ಲಾಗಲಿ ನಿಯಮಗಳೇ ಇಲ್ಲ.
ಅಡಿಕೆ ಅಥವಾ ತೆಂಗಿನ ಮರವನ್ನು ಪ್ರಾಣಿಗಳು ಮುರಿದುಹಾಕಿದರೆ ಪರಿಹಾರ ಇದೆ. ತೆಂಗಿನ ಕಾಯಿ, ಬಾಳೆಗೊನೆ ನಾಶ ಮಾಡಿದರೆ ಪರಿಹಾರ ಸಿಗುವುದಿಲ್ಲ’ ಎನ್ನುತ್ತಾರೆ ರೈತರು.
ರಾಮಚಂದ್ರ ಅವರದ್ದೂ ಇದೇ ಕತೆ. ಸುಮಾರು ಒಂದು ಎಕರೆಯಷ್ಟು ಅಡಿಕೆ ತೋಟವಿದೆ. ತೋಟದ ಸುತ್ತಲಿನ ಗಡಿಯಲ್ಲಿ ತೆಂಗು ಇದ್ದರೆ, ಮನೆಯ ಮುಂದಿನ ಸ್ವಲ್ಪ ಖಾಲಿ ಜಾಗದಲ್ಲಿ ಅಲ್ಪಸ್ವಲ್ಪ ತರಕಾರಿ ಬೆಳೆಯುತ್ತಾರೆ. ಈಚಿನ ಕೆಲವು ವರ್ಷಗಳಿಂದ ಬೆಳೆಯಲ್ಲಿ ಅರ್ಧ ಭಾಗವೂ ಕೈಗೆ ಸಿಗುತ್ತಿಲ್ಲ ಎನ್ನುವಂತಾಗಿದೆ.
ಎಲೆಚುಕ್ಕಿ ರೋಗದಿಂದ ಅಡಿಕೆ ಇಳುವರಿ ಕಡಿಮೆಯಾಗಿದೆ. ಈ ಬಾರಿ ವಿಪರೀತ ಮಳೆಯಿಂದಾಗಿ ಕೊಳೆರೋಗವು ಅರ್ಧದಷ್ಟು ಅಡಿಕೆಯನ್ನು ನಾಶಮಾಡಿದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ಕೋತಿಗಳು ತೋಟಕ್ಕೆ ಲಗ್ಗೆ ಇಡುತ್ತವೆ. ತೆಂಗು, ಕೊಕ್ಕೊ, ಹಲಸು ಎಲ್ಲವನ್ನೂ ಅವು ಆಪೋಶನ ತೆಗೆದುಕೊಳ್ಳುತ್ತವೆ. ಏನೂ ಸಿಗದಿದ್ದಾಗ, ಅರೆಬರೆ ಹಣ್ಣಾದ ಅಡಿಕೆಗಳನ್ನೂ ಕಿತ್ತು, ಸಿಪ್ಪೆಯಲ್ಲಿರುವ ನೀರನ್ನು ಹೀರಿ ಎಸೆದುಬಿಡುತ್ತವೆ.
‘ಮರಗಳ ಮೇಲೆ ಕೋತಿಗಳ ಕಾಟವಾದರೆ ತೋಟದ ನೆಲದಲ್ಲಿ ಹಾಡುಹಂದಿಗಳ ನಿತ್ಯದ ಹೋರಾಟವಿರುತ್ತದೆ. ಮರದಿಂದ ಬಿದ್ದ ತೆಂಗಿನ ಕಾಯಿಯನ್ನು ಕಾಡು ಹಂದಿಗಳು ತಿಂದುಹಾಕುತ್ತವೆ. ಅವುಗಳೂ ಬಿಟ್ಟರೆ ಮುಳ್ಳು ಹಂದಿಗಳಿವೆ. ಒಟ್ಟಿನಲ್ಲಿ ನಮ್ಮ ಕೈಗೆ ಬರುವುದು ಚಿಪ್ಪು ಮಾತ್ರ’ ಎನ್ನುತ್ತಾರೆ ಸುಳ್ಯದ ರೈತ ಗಣೇಶ ಎಂ.
ಕೋತಿಗಳಷ್ಟೇ ಅಲ್ಲ, ಈಚಿನ ಒಂದೆರಡು ವರ್ಷಗಳಲ್ಲಿ ಕೆಂಚಳಿಲುಗಳ ಕಾಟವೂ ಆರಂಭವಾಗಿದೆ. ಅವು ತೆಂಗಿನ ಕಾಯಿಗೆ ಸುಂದರ ರಂಧ್ರ ಕೊರೆದು, ಎಳನೀರು ಹೀರಿ ಹೋಗಿರುತ್ತವೆ. ಕಾಯಿ ಹಾಳಾಗಿದೆ ಎಂಬುದು ನಮ್ಮ ಗಮನಕ್ಕೆ ಬರುವುದು ಅದು ನೆಲಕ್ಕೆ ಬಿದ್ದಾಗಲೇ ಎನ್ನುತ್ತಾರೆ ಅವರು.
‘ಎರಡು ಎಕರೆ ತೋಟದಲ್ಲಿ ಸಾಂಪ್ರದಾಯಿಕ ಉಪಬೆಳೆಯಾಗಿ ಬಾಳೆ ಬೆಳೆದಿದ್ದೇನೆ. ಸರಿಯಾಗಿ ಬೆಳೆ ಬಂದರೆ ಒಂದೆರಡು ಕ್ವಿಂಟಲ್ ಬಾಳೆ ಗೊನೆಗಳನ್ನಾದರೂ ಮಾರಬಹುದು. ಆದರೆ ಕಳೆದ ವರ್ಷ ನಾವು ಮಕ್ಕಳಿಗೆ ಕೊಡಲು ಸಹ ಸಂಬಂಧಿಕರ ಮನೆಯಿಂದ ಬಾಳೆ ಗೊನೆ ತರಬೇಕಾಯಿತು. ಕೋತಿಗಳ ಕಾಟದಿಂದ ಒಂದೇ ಒಂದು ಬಾಳೆ ಗೊನೆಯೂ ನಮಗೆ ಸಿಕ್ಕಿಲ್ಲ’ ಎಂದು ಮುಂಡಾಜೆಯ ರೈತ ಹರ್ಷ ಹೇಳಿದರು.
ಹಿಂಡುಹಿಂಡಾಗಿ ತೋಟಕ್ಕೆ ಬರುವ ಕೋತಿಗಳು ಒಂದೇ ದಿನದಲ್ಲಿ ತೋಟವನ್ನು ರಣಾಂಗಣದಂತೆ ಮಾಡಿಬಿಡುತ್ತವೆ. ಮೊದಮೊದಲು ಪಟಾಕಿ ಅಥವಾ ಮಂಕಿ ಗನ್‌ಗೆ ಹೆದರಿ ಓಡುತ್ತಿದ್ದವು. ಈಗ ಅವುಗಳಿಗೆ ಭಯ ಇಲ್ಲ. ಬಂದರೆ, ನಾಲ್ಕಾರು ದಿನಗಳ ಕಾಲ ತೋಟದಲ್ಲೇ ಇದ್ದು ಹೋಗುತ್ತವೆ ಎಂದು ಪುತ್ತೂರು ತಾಲ್ಲೂಕು ಈಶ್ವರಮಂಗಲ ಭಾಗದ ರೈತರು ಹೇಳುತ್ತಾರೆ.
‘ಐದು ವರ್ಷಗಳ ಹಿಂದೆ ಮನೆಯ ಖರ್ಚುವೆಚ್ಚಕ್ಕೆ ಬೇಕಾದಷ್ಟು ಬಳಸಿ, ನೂರು ಲೀಟರ್‌ನಷ್ಟು ಕೊಬ್ಬರಿ ಎಣ್ಣೆಯನ್ನೂ ಮಾಡಿಸಿ, ಸುಮಾರು ಎಂಟು ಸಾವಿರದಷ್ಟು ತೆಂಗಿನ ಕಾಯಿ ಮಾರಾಟ ಮಾಡಿದ್ದೆ. ತೋಟ, ತೆಂಗಿನ ಮರಗಳು ಈಗಲೂ ಅಷ್ಟೇ ಇವೆ. ಆದರೆ ಈಚಿನ ಎರಡು ವರ್ಷಗಳಿಂದ ತೆಂಗಿನ ಕಾಯಿ ಮಾರಾಟ ದೂರದ ಮಾತು, ಮನೆಯ ಖರ್ಚಿಗೆ ಬೇಕಾದಷ್ಟು ಕೊಬ್ಬರಿ ಎಣ್ಣೆ ಮಾಡಿಸಲೂ ಆಗುತ್ತಿಲ್ಲ’ ಎನ್ನುತ್ತಾರೆ ಈಶ್ವರಮಂಗಲದ ರೈತ ಶಿವಪ್ರಸಾದ್.
ಎಐ ಚಿತ್ರ: ಕಣಕಾಲಮಠ
ಪ್ರತಿ ವರ್ಷ ಮುಂಗಾರಿನ ಗಾಳಿ ಮಳೆಗೆ ಹಳೆಯ ತೋಟದಲ್ಲಿ ಐದಾರು ಅಡಿಕೆ ಗಿಡಗಳಾದರೂ ಮುರಿದು ಬೀಳುವುದು ಸಾಮಾನ್ಯ. ಹೀಗೆ ಮುರಿದ ಗಿಡದ ಜಾಗದಲ್ಲಿ ಹೊಸ ಗಿಡಗಳನ್ನು ನಾಟಿ ಮಾಡಲೂ ಸಾಧ್ಯವಾಗುತ್ತಿಲ್ಲ. ನಾಟಿ ಮಾಡಿದ ವಾರದೊಳಗೆ ಹಂದಿಗಳು ಅವುಗಳನ್ನು ‘ಅಡಿಮೇಲು’ ಮಾಡಿರುತ್ತವೆ. ಅಡಿಕೆಗೆ ಮಾತ್ರವಲ್ಲ, ಅಡಿಕೆ ತೋಟದ ಉಪ ಬೆಳೆಗಳಿಗೂ ಈ ಸಮಸ್ಯೆ ಇದೆ. ಹಂದಿಗಳಿಗೆ ಏನೂ ಸಿಗದಿದ್ದರೆ, ಇರುವ ಬಾಳೆ ಗಿಡಗಳನ್ನೂ ಉರುಳಿಸುತ್ತವೆ. ಹೊಸದಾಗಿ ಬಾಳೆ ನೆಟ್ಟರೆ ಉಳಿಸಿಕೊಳ್ಳಲು ಹರಸಾಹಸ ಮಾಡಬೇಕು ಎನ್ನುತ್ತಾರೆ ಹರ್ಷ.
ಅಡಿಕೆ, ತೆಂಗಿನ ಗಿಡದ ಬುಡಕ್ಕೆ ಹಾಕಿದ ಗೊಬ್ಬರವನ್ನು ಹಂದಿಗಳು ರಾತ್ರಿ ಬೆಳಗಾಗುವಷ್ಟರಲ್ಲಿ ಚಲ್ಲಾಪಿಲ್ಲಿ ಮಾಡಿರುತ್ತವೆ. ಅಡಿಕೆ ತೋಟದಲ್ಲಿ ಉಪ ಬೆಳೆಯಾಗಿ ಕೊಕ್ಕೊ ಬೆಳೆವವರ ಸಂಖ್ಯೆ ಒಂದು ಕಾಲದಲ್ಲಿ ಬಹಳಷ್ಟಿತ್ತು. ದರ ಕುಸಿತ ಹಾಗೂ ಇತರ ವಿವಿಧ ಕಾರಣಗಳಿಂದ ಅನೇಕರು ಈ ಬೆಳೆಯನ್ನು ಕೈಬಿಟ್ಟಿದ್ದಾರೆ. ‘ಬಂದಷ್ಟು ಬರಲಿ’ ಎಂಬ ಕಾರಣಕ್ಕೆ ಕೆಲವರು ಗಿಡಗಳನ್ನು ಕಡಿಯದೆ ಬಿಟ್ಟಿದ್ದಾರೆ. ಈಚಿನ ದಿನಗಳಲ್ಲಿ ಕೊಕ್ಕೊಗೆ ಉತ್ತಮ ದರ ಲಭಿಸುತ್ತಿದೆ. ಆದರೆ ಅಳಿಲುಗಳಿಂದ ಹಣ್ಣುಗಳನ್ನು ರಕ್ಷಿಸುವುದು ಕಷ್ಟವಾಗುತ್ತಿದೆ. ಹಣ್ಣುಗಳಿಗೆ ರಂಧ್ರ ಕೊರೆಯುವ ಅಳಿಲುಗಳು, ಒಳಗಿನ ತಿರುಳು ತಿಂದು ನಾಶಮಾಡುತ್ತಿವೆ. ಗಿಡದಲ್ಲಿ ಉಳಿಯುವುದು ಸಿಪ್ಪೆ ಮಾತ್ರ. ಶೇ 15ರಿಂದ 20ರಷ್ಟು ಹಣ್ಣುಗಳು ಹೀಗೆ ನಾಶವಾಗುತ್ತಿವೆ ಎಂದು ರೈತರು ಹೇಳುತ್ತಾರೆ.
ನವಿಲಿನ ರುದ್ರ ನರ್ತನ: ಕಾರ್ಕಳ, ಸುಬ್ರಹ್ಮಣ್ಯ, ಕಡಬ, ಸುಳ್ಯ ಮುಂತಾದ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ನಿತ್ಯವೂ ನವಿಲುಗಳು ಕಾಣಿಸುವುದು ಸಾಮಾನ್ಯ. ಈಚಿನ ಕೆಲವು ವರ್ಷಗಳಿಂದ ಅವುಗಳ ಸಂಖ್ಯೆ ಹಲವು ಪಟ್ಟು ಹೆಚ್ಚಿದೆ. ಮುಂಜಾನೆ ಎದ್ದು ಮನೆಯ ಬಾಗಿಲು ತೆರೆದರೆ ಅಂಗಳದಲ್ಲಿ ನವಿಲುಗಳು ನರ್ತಿಸುವುದನ್ನು ರೈತರು ನೋಡುತ್ತಿದ್ದಾರೆ. ಕಾಳುಜೋಳ, ಮುಸುಕಿನ ಜೋಳ ಬೆಳೆಯುವ ಮಧ್ಯ ಕರ್ನಾಟಕದ ಹೊಲಗಳಲ್ಲೂ ನವಿಲಿನ ಹಾವಳಿ ಹೆಚ್ಚಾಗಿದೆ.
ಆರಂಭದಲ್ಲಿ ಈ ದೃಶ್ಯದಿಂದ ಪುಳಕಿತರಾಗಿದ್ದ ರೈತರಿಗೆ ಈಗ ನವಿಲುಗಳ ನರ್ತನ ಖುಷಿ ಕೊಡುತ್ತಿಲ್ಲ. ನವಿಲುಗಳ ಸಂತತಿ ಹೆಚ್ಚಾಗಿರುವುದರಿಂದ ತರಕಾರಿ ಬೆಳೆ ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ ರೈತರು. ಬೆಳೆ ಮಾತ್ರವಲ್ಲ, ಗಿಡಗಳ ಚಿಗುರನ್ನೇ ನವಿಲುಗಳು ತಿಂದು ನಾಶಮಾಡುತ್ತಿವೆ. ಅವರೆ, ತೊಗರಿ, ಮೆಣಸಿನಕಾಯಿ, ಟೊಮೆಟೊ… ಹೀಗೆ ನವಿಲುಗಳು ತಿನ್ನದ ಅಥವಾ ಹಾಳು ಮಾಡದೆ ಇರುವ ಬೆಳೆಯೇ ಇಲ್ಲ. ಮುಸುಕಿನ ಜೋಳ ಬಿತ್ತನೆ ಮಾಡಿ ಕಾಳು ಮೊಳಕೆಯೊಡೆದು ಪೈರು ಆಗುವವರೆಗೂ ಒಂದು ವಾರ ರೈತರು ಹೊಲದಲ್ಲೇ ಕಾವಲು ನಿಂತರಷ್ಟೇ ಜೋಳ ಬೆಳೆಯಲು ಸಾಧ್ಯ. ಜನರ ಓಡಾಟ ಹೆಚ್ಚಾಗಿ ಇಲ್ಲದ ಪ್ರದೇಶದಲ್ಲಿ ಹಿಂಡು ಹಿಂಡಾಗಿ ಬರುವ ನವಿಲುಗಳು ರಾಗಿ ತೆನೆಗಳನ್ನು ತಿಂದು ಹಾಕುತ್ತಿವೆ.
ಪ್ರಾಣಕ್ಕೂ ಎರವಾಗುವ ಕಾಡುಕೋಣ: ಚಿಕ್ಕಮಗಳೂರು ಜಿಲ್ಲೆಯ ವಿವಿಧ ಭಾಗಗಳು, ಹಾಸನ ಜಿಲ್ಲೆಯ ಆಲೂರು, ಸಕಲೇಶಪುರ ಭಾಗ, ದಕ್ಷಿಣ ಕನ್ನಡದ ಕಡಬ, ಸುಳ್ಯ, ಸುಬ್ರಹ್ಮಣ್ಯ ಭಾಗದಲ್ಲಿ ಕಾಡುಕೋಣಗಳ ಕಾಟವೂ ಇದೆ. ಇವು ಕೃಷಿಗೆ ಹಾನಿ ಮಾಡುವುದರ ಜೊತೆಗೆ ರೈತರ ಪ್ರಾಣಕ್ಕೂ ಎರವಾಗುತ್ತಿವೆ.
ಜೋಡಿಯಾಗಿ ನಾಡಿಗೆ ಬರುವ ಕಾಡುಕೋಣಗಳು ರೈತರ ತೋಟಗಳಲ್ಲೇ ಓಡಾಡುತ್ತಿರುತ್ತವೆ. ಅಕಸ್ಮಾತ್ ಮನುಷ್ಯರು ಎದುರಾದರೆ ಅವರ ಮೇಲೆ ದಾಳಿ ನಡೆಸುತ್ತವೆ. ಕಾಡುಕೋಣದ ದಾಳಿಗೆ ಕಾಫಿ ಬೆಳೆಗಾರ ಮೃತಪಟ್ಟ ಘಟನೆ ಮೂಡಿಗೆರೆ ತಾಲ್ಲೂಕು ದುರ್ಗದಹಳ್ಳಿ ಗ್ರಾಮದಲ್ಲಿ ತಿಂಗಳ ಹಿಂದೆಯಷ್ಟೇ ಸಂಭವಿಸಿದೆ. ಈ ಹಿಂದೆಯೂ ಹಲವರು ಸತ್ತಿದ್ದಾರೆ, ಅನೇಕ ಮಂದಿ ಗಾಯಗೊಂಡಿದ್ದಾರೆ.
‘ತೆಂಗು ಬೆಳೆಯಲ್ಲಿ ಕಾಲು ಭಾಗದಷ್ಟೂ ಕೈ ಸೇರುವುದಿಲ್ಲ. ಅಡಿಕೆಯಲ್ಲಿ ಬಹುಪಾಲು ರೋಗ ರುಜಿನದಿಂದ ಹಾಗೂ ಒಂದಿಷ್ಟು ಪಾಲು ಕೋತಿಗಳ ದಾಳಿಯಿಂದ ಹಾಳಾಗುತ್ತಿದೆ, ಅಡಿಕೆ ತೋಟದ ಉಪ ಬೆಳೆಗಳಿಗೆ ಕಾಡುಹಂದಿ, ಮುಳ್ಳುಹಂದಿ, ಅಳಿಲುಗಳ ಕಾಟ. ತರಕಾರಿಯನ್ನು ನವಿಲುಗಳು ಉಣ್ಣುತ್ತವೆ... ಹೀಗಿರುವಾಗ ನಾವು ಮಾಡುವುದಾದರೂ ಏನು’ ಎಂಬುದು ರೈತರ ಪ್ರಶ್ನೆಯಾಗಿದೆ.
ತೋಟದೊಳಗೆ ಕಾಡುಕೋಣಗಳ ಓಡಾಟ
‘ಕಾಡಿನಲ್ಲಿ ಪ್ರಾಣಿಗಳಿಗೆ ಆಹಾರ ಸಿಗದ ಕಾರಣ ಅವು ಆಹಾರ ಅರಸಿಕೊಂಡು ನಾಡಿಗೆ ಬರುತ್ತಿವೆ, ಬೆಳೆ ಹಾನಿ ಮಾಡುತ್ತಿವೆ’ ಎಂಬುದು ಸಾಮಾನ್ಯ ಗ್ರಹಿಕೆ. ಕೋತಿಗಳು ಮತ್ತು ಆನೆಗಳ ವಿಚಾರದಲ್ಲಿ ನಿಜ ಇರಬಹುದು. ಆದರೆ ನಮ್ಮ ಭಾಗದಲ್ಲಿ ಅಡಿಕೆ ತೋಟಗಳ ಸುತ್ತ ಕಾಡು ಬೆಳೆದಿರುವುದೇ ಪ್ರಾಣಿಗಳ ಹಾವಳಿಗೆ ಕಾರಣ ಎನ್ನುತ್ತಾರೆ ಕಾಸರಗೋಡಿನ ರೈತ ವೆಂಕಟರಮಣ ಭಟ್.
ಹಿಂದೆ ಅಡಿಕೆ ಮರಗಳಿಗೆ ವರ್ಷ– ಎರಡು ವರ್ಷಕ್ಕೊಮ್ಮೆ ಹಸಿ ಸೊಪ್ಪನ್ನು ಗೊಬ್ಬರವಾಗಿ ಕೊಡುವ ಸಂಪ್ರದಾಯವಿತ್ತು. ತೋಟದ ಸುತ್ತಮುತ್ತಲಿನ ಕುಮ್ಕಿ ಜಾಗದಲ್ಲಿದ್ದ ಪೊದೆ, ಮರಗಳನ್ನು ಸವರಿ ಸೊಪ್ಪನ್ನು ಅಡಿಕೆ, ತೆಂಗಿನ ಮರದ ಬುಡಕ್ಕೆ ಹಾಕಲಾಗುತ್ತಿತ್ತು. ಇದರಿಂದಾಗಿ ಎರಡು ಮೂರು ವರ್ಷಕ್ಕೊಮ್ಮೆ ಕಾಡು ಸ್ವಚ್ಛವಾಗುತ್ತಿತ್ತು.
ಅಲ್ಲದೆ, ಕಾಡುಗಳಲ್ಲಿ ಗೇರು ಬೀಜ (ಗೋಡಂಬಿ) ಬೆಳೆಯುತ್ತಿದ್ದುದರಿಂದ ಜನರ ಓಡಾಟ ನಿತ್ಯ ನಿರಂತರವಾಗಿರುತ್ತಿತ್ತು. ಆದರೆ ಈಗ ಕಾರ್ಮಿಕರ ಕೊರತೆಯಿಂದ ಸೊಪ್ಪು ಕಡಿದು ತೋಟದವರೆಗೆ ತರುವುದೇ ದುಬಾರಿಯಾಗುತ್ತದೆ. ಇದಕ್ಕಿಂದ ಅಗ್ಗದ ದರಕ್ಕೆ ರಸಗೊಬ್ಬರ, ಕೋಳಿ, ಕುರಿ ಗೊಬ್ಬರ ಲಭಿಸುವುದರಿಂದ ಅಡಿಕೆ– ತೆಂಗಿಗೆ ಹಸಿ ಸೊಪ್ಪು ಕೊಡುವುದನ್ನೇ ರೈತರು ಬಿಟ್ಟಿದ್ದಾರೆ. ಗೋಡಂಬಿ ಕೃಷಿಯೂ ಬಹುತೇಕ ನಾಶವಾಗಿರುವುದರಿಂದ ತೋಟಗಳ ಅಕ್ಕಪಕ್ಕದ ಕುರುಚಲು ಕಾಡಿನಲ್ಲಿ ಮನುಷ್ಯ ಸಂಚಾರ ಇಲ್ಲದಂತಾಗಿದೆ. ಪರಿಣಾಮ, ಕಾಡುಹಂದಿ ಸೇರಿದಂತೆ ಎಲ್ಲಾ ಪ್ರಾಣಿಗಳಿಗೆ ಅವು ಆಶ್ರಯ ತಾಣಗಳಾಗಿವೆ. ಆಶ್ರಯಕ್ಕೆ ಕಾಡು, ಹೊಟ್ಟೆಪಾಡಿಗೆ ತೋಟಗಳು... ಅವುಗಳ ಬದುಕು ಈಗ ನಮಗಿಂತ ಸುಲಭವಾಗಿದೆ ಎನ್ನುತ್ತಾರೆ ರೈತರು.
ಇದನ್ನು ತೋಟಗಾರಿಕಾ ಇಲಾಖೆಯವರು ಒಪ್ಪುವುದಿಲ್ಲ. ‘ಕುಮ್ಕಿ ಜಮೀನಿನಲ್ಲಿ ಕೃಷಿಗೆ ಪೂರಕವಾಗುವ ಮತ್ತು ಹಣ್ಣುಗಳನ್ನು ಕೊಡುವ ಗಿಡಗಳನ್ನು ಬೆಳೆಸಬೇಕು ಎಂಬುದು ಉದ್ದೇಶ. ಹೀಗೆ ಮಾಡಿದರೆ ಕಾಡು ಪ್ರಾಣಿಗಳು ತೋಟಗಳಿಗೆ ಬರುವುದಿಲ್ಲ. ಕಾಡಿನಲ್ಲಿ ಆಹಾರ ಸಿಕ್ಕರೆ ಯಾವುದೇ ಕಾಡು ಪ್ರಾಣಿ ತೋಟಗಳಿಗೆ ಬಂದು ಹಾನಿ ಮಾಡುವುದಿಲ್ಲ. ಆದರೆ ರೈತರು ಕುಮ್ಕಿ ಜಮೀನಿನಲ್ಲೂ ಕಾಡು ಕಡಿದು ಅಡಿಕೆ, ರಬ್ಬರ್ ತೋಟ ಮಾಡಿದ್ದಾರೆ. ಇತ್ತ ಅರಣ್ಯದಲ್ಲೂ ಹಣ್ಣಿನ ಗಿಡಗಳು ಇಲ್ಲದಿರುವುದರಿಂದ ಆಹಾರಕ್ಕಾಗಿ ಪ್ರಾಣಿಗಳು ತೋಟಗಳಿಗೆ ಬರುತ್ತಿವೆ’ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
‘ಆನೆ ಹಾವಳಿ ಬಿಟ್ಟು ಬೇರೆ ಕಾಡು ಪ್ರಾಣಿಗಳು ಮಾಡುವ ಹಾನಿಗೆ ಪರಿಹಾರ ಇಲ್ಲ ಎಂಬುದು ತಪ್ಪು ಕಲ್ಪನೆ. ಈ ವರೆಗೆ ಒಂದು ಕೋಟಿ ರೂಪಾಯಿಗೂ ಹೆಚ್ಚಿನ ಪರಿಹಾರವನ್ನು ಅರಣ್ಯ ಇಲಾಖೆಯಿಂದ ರೈತರಿಗೆ ನೀಡಲಾಗಿದೆ’ ಎಂದು ದಕ್ಷಿಣ ಕನ್ನಡ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಆ್ಯಂಟನಿ ಮರಿಯಪ್ಪ ಹೇಳುತ್ತಾರೆ.
ಯಾವುದೇ ಕಾಡು ಪ್ರಾಣಿ ಗಿಡಗಳಿಗೆ ಹಾನಿ ಮಾಡಿದರೆ, ಬಾಳೆ ಗಿಡಗಳನ್ನು ನಾಶ ಮಾಡಿದ್ದರೆ ರೈತರು ಇಲಾಖೆಗೆ ಮಾಹಿತಿ ನೀಡಿ ಪರಿಹಾರ ಪಡೆಯಬಹುದು. ಅವರು ಕಚೇರಿಗೂ ಬರಬೇಕಿಲ್ಲ, ಮಾಹಿತಿ ಕೊಟ್ಟರೆ ಇಲಾಖೆಯ ಅಧಿಕಾರಿಗಳೇ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ, ಕೃಷಿ ಭೂಮಿಯ ದಾಖಲೆಗಳನ್ನು ಪಡೆದು ಪರಿಹಾರ ಒದಗಿಸುತ್ತಾರೆ. ಅಗತ್ಯ ದಾಖಲೆಗಳನ್ನು ಕೊಟ್ಟು, ಡಿಜಿಟಲ್ ರೂಪದಲ್ಲಿ ಹಾನಿಯ ವರದಿ ಮಾಡಿದ ನಾಲ್ಕು ತಿಂಗಳೊಳಗೆ ಪರಿಹಾರ ಮೊತ್ತ ನೇರವಾಗಿ ರೈತರ ಖಾತೆಗೆ ಬರುತ್ತದೆ.
‘ಹಣ್ಣುಗಳು ನಾಶವಾದರೆ ಪರಿಹಾರಕ್ಕೆ ಅವಕಾಶ ಇರುವುದಿಲ್ಲ. ಆದ್ದರಿಂದ ಕೋತಿಗಳು ಉಂಟುಮಾಡುವ ಹಾನಿಗೆ ಪರಿಹಾರ ಪಡೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಆ್ಯಂಟನಿ.
ಕೃಷಿಗೆ ಹಾನಿ ಮಾಡುವ ಕಾಡು ಹಂದಿಗಳನ್ನು ಕೊಲ್ಲಲು ಕೇರಳದಲ್ಲಿ ಕೆಲವು ನಿಬಂಧನೆಗಳಡಿ ಪರವಾನಗಿ ನೀಡಲಾಗಿದೆ. ಅದೇ ರೀತಿ ಇಲ್ಲಿಯೂ ಅವಕಾಶ ನೀಡಬೇಕು ಎಂದು ಈ ಭಾಗದ ರೈತರು ಹಲವು ಬಾರಿ ಒತ್ತಾಯಿಸಿದ್ದಾರೆ.
‘ಕೇರಳ ಮಾದರಿ’ ಇಲ್ಲಿ ಅವಕಾಶ ಇಲ್ಲದಿದ್ದರೂ ಹಂದಿಗಳನ್ನು ಕೊಲ್ಲಲು ಅವಕಾಶವಿದೆ ಎನ್ನುತ್ತಾರೆ ಡಿಸಿಎಫ್‌ಒ ಆ್ಯಂಟನಿ.
‘ಸತತವಾಗಿ ಕಾಡುಹಂದಿಗಳು ಬಂದು ಬೆಳೆ ನಾಶ ಮಾಡುತ್ತಿದ್ದರೆ, ಅರಣ್ಯ ಇಲಾಖೆಗೆ ರೈತರು ಮಾಹಿತಿ ನೀಡಬೇಕು. ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತಾರೆ. ಹಂದಿಗಳು ನಿಜವಾಗಿಯೂ ಅಪಾಯಕಾರಿ, ಭಾರಿ ಪ್ರಮಾಣದಲ್ಲಿ ಬೆಳೆ ನಾಶ ಮಾಡುತ್ತವೆ ಎಂಬುದು ಖಚಿತವಾದರೆ ಅವುಗಳ ಹತ್ಯೆಗೆ ಪರವಾನಗಿ ನೀಡಲಾಗುತ್ತದೆ. ಆದರೆ ಸೂಚಿಸಿದ ಹಂದಿಗಳನ್ನಷ್ಟೇ ಕೊಲ್ಲಬಹುದು. ಬೇರೆ ಹಂದಿಗಳ ಬೇಟೆಗೆ ಅವಕಾಶ ಇರುವುದಿಲ್ಲ’ ಎಂದು ಅವರು ತಿಳಿಸಿದರು.
ಕೃಷಿಗೆ ಹಾನಿ ಉಂಟುಮಾಡುವ ಕೋತಿ ಅಥವಾ ಇನ್ನಿತರ ಪ್ರಾಣಿಗಳನ್ನು ಹಿಡಿದು ಸ್ಥಳಾಂತರಿಸುವುದು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುತ್ತದೆ. ಕೆಲವು ನಿಯಮಾವಳಿಗಳಿಗೆ ಒಳಪಟ್ಟು ಅವರು ಆ ಕಾರ್ಯ ಮಾಡಬಹುದು. ಆದರೆ ಅಂಥ ಪರಿಣಿತರು ಮತ್ತು ಅದಕ್ಕೆ ಬೇಕಾದಷ್ಟು ಸಂಪನ್ಮೂಲ ಗ್ರಾಮ ಪಂಚಾಯಿತಿಯವರಲ್ಲಿ ಇರುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಅಡಿಕೆ ಮರದ ಬುಡವನ್ನು ಹಂದಿಗಳು ಬಗೆದಿಟ್ಟಿವೆ
ಒಂದೆರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಭಾಗದಲ್ಲಿ ಕೃಷಿಗೆ ಹಾನಿ ಉಂಟುಮಾಡುವ ಕೋತಿಗಳನ್ನು ಹಿಡಿದು ಸ್ಥಳಾಂತರಿಸುವ ಅಕ್ರಮ ದಂಧೆ ಆರಂಭವಾಗಿತ್ತು. ರೈತರಿಂದ ₹ 8–10 ಸಾವಿರ ಪಡೆದು, ಕೋತಿಗಳನ್ನು ಬೋನಿನಲ್ಲಿ ಸೆರೆಹಿಡಿದು ಚಾರ್ಮಾಡಿ ಘಾಟಿಗೆ ಒಯ್ದು ಬಿಡಲಾಗಿತ್ತು (‘ಘಾಟಿಯಲ್ಲಿ ಬಿಟ್ಟಿದ್ದೇವೆ’ ಎಂದು ಹಿಡಿದವರು ನಂಬಿಸಿದ್ದರು). ಹೀಗೆ ಹಣ ಕೊಟ್ಟು ಕೋತಿಗಳನ್ನು ಸಾಗಿಸಿದರೂ, ಕೆಲವೇ ದಿನಗಳಲ್ಲಿ ಅಷ್ಟೇ ಕೋತಿಗಳು ಮತ್ತೆ ತೋಟಕ್ಕೆ ಲಗ್ಗೆ ಇಡುತ್ತಿದ್ದವು. ಇದರಿಂದಾಗಿ ಕೋತಿಗಳನ್ನು ಹಿಡಿದವರು ಸ್ವಲ್ಪವೇ ದೂರದಲ್ಲಿ ಅವುಗಳನ್ನು ಬಿಟ್ಟಿರಬಹುದು ಎಂಬ ಶಂಕೆ ರೈತರಲ್ಲಿ ಮೂಡಿದ್ದರಿಂದ ಇಂಥವರಿಗೆ ಹಣ ಕೊಡುವುದನ್ನು ರೈತರು ನಿಲ್ಲಿಸಿದ್ದಾರೆ.
ಇದರ ಮಧ್ಯದಲ್ಲೇ ಕಡಬ ತಾಲ್ಲೂಕಿನ ನೆಟ್ಟಣ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ‘ಮಂಕಿ ಪಾರ್ಕ್’ ಮಾಡುವ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಚಿಂತನೆ ನಡೆದಿತ್ತು. ರಕ್ಷಿತ ಅರಣ್ಯದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸುವುದೇ ಈ ಯೋಜನೆ. ಅರಣ್ಯದಲ್ಲೇ ಆಹಾರ ಸಿಕ್ಕರೆ ಕೋತಿಗಳು ತೋಟಕ್ಕೆ ಬರುವುದಿಲ್ಲ ಎಂಬುದು ನಂಬಿಕೆ.
ಶಿವಮೊಗ್ಗ ಜಿಲ್ಲೆಯಲ್ಲಿ ₹6.25 ಕೋಟಿ ವೆಚ್ಚದಲ್ಲಿ ‘ಮಂಕಿ ಪಾರ್ಕ್’ ನಿರ್ಮಿಸಲು ಸರ್ಕಾರ ಉದ್ದೇಶಿಸಿತ್ತು. ಅದಕ್ಕಾಗಿ ಸಾಗರ ತಾಲ್ಲೂಕಿನ ತಲಕಳಲೆ, ಹೊಸನಗರ ತಾಲ್ಲೂಕಿನ ನಿಟ್ಟೂರು– ನಾಗೋಡಿ, ಸಂಪೇಕಟ್ಟೆ– ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಿಕೈ ಭಾಗದ 170 ಎಕರೆ, ಮಾಸ್ತಿಕಟ್ಟೆಯ ವಾರಾಹಿ ಯೋಜನಾ ಪ್ರದೇಶ ಹಾಗೂ ಶರಾವತಿ ಹಿನ್ನೀರಿನ ನಡುಗಡ್ಡೆಗಳಲ್ಲಿ ಜಾಗ ಗುರುತಿಸಲಾಗಿತ್ತು.
ಆದರೆ, ಮಂಗಗಳನ್ನು ಒಂದೆಡೆ ಹಿಡಿದಿಡಲು ಸಾಧ್ಯವಿಲ್ಲ. ಯೋಜನೆ ಅವಾಸ್ತವಿಕ ಎಂಬ ಟೀಕೆಗಳು ಎದುರಾದವು. ಹೀಗಾಗಿ ಅರಣ್ಯ ಇಲಾಖೆ ಮಂಕಿಪಾರ್ಕ್ ಯೋಜನೆಯನ್ನು ಕೈಬಿಟ್ಟಿದೆ.
ವನ್ಯಜೀವಿಗಳ ಹಾವಳಿಯಿಂದ ಬೆಳೆ ನಷ್ಟವಾದರೆ ರೈತರಿಗೆ ಪರಿಹಾರ ವಿತರಿಸಬೇಕು. ಬೇರೆ ವಿಷಯದಲ್ಲಿ ಮಂಗಗಳನ್ನು ವನ್ಯಜೀವಿ ಎಂದು ಪರಿಗಣಿಸುವ ಅರಣ್ಯ ಇಲಾಖೆ ಪರಿಹಾರ ನೀಡಿಕೆ ವಿಷಯದಲ್ಲಿ ಮಾತ್ರ ಮೌನವಾಗಿರುವುದು ಯಾಕೆ?-ಲೋಕೇಶ್ ಎಂ., ನೆರಿಯ, ಬೆಳ್ತಂಗಡಿ ತಾಲ್ಲೂಕು
ಕಾಡುಪ್ರಾಣಿ ಉಪಟಳದಿಂದ ಅಡಿಕೆ ಮತ್ತು ತೆಂಗು ಫಸಲು ಹಾನಿಗೊಳಗಾದರೆ ಪರಿಹಾರ ನೀಡಲು ಅವಕಾಶ ಇಲ್ಲ. ಆನೆ ದಾಳಿಯಿಂದ ಅಡಿಕೆ ಅಥವಾ ತೆಂಗಿನ ಮರ ಧ್ವಂಸವಾದರೆ ಮಾತ್ರ ಪರಿಹಾರ ನೀಡಲು ಅವಕಾಶವಿದೆ.-ಆ್ಯಂಟನಿ ಮರಿಯಪ್ಪ, ದ.ಕ. ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ
ಬೆಟ್ಟದ ತಪ್ಪಲು, ಕೆರೆ ಅಂಚಿಗಷ್ಟೇ ಸೀಮಿತವಾಗಿದ್ದ ನವಿಲುಗಳು ಈಗ ಗ್ರಾಮದ ಅರಳಿ ಕಟ್ಟೆವರೆಗೂ ಬರುತ್ತಿವೆ. ನವಿಲುಗಳ ಹಾವಳಿಯಿಂದ ಬೆಳೆಗಳನ್ನು ಯಾವ ರೀತಿ ರಕ್ಷಣೆ ಮಾಡಿಕೊಳ್ಳಬೇಕು ಎನ್ನುವುದೇ ಈಗ ಬಯಲುಸೀಮೆ ಜಿಲ್ಲೆಗಳ ರೈತರಿಗೆ ಸವಾಲಾಗಿದೆ. ರೈತರ ತಾಳ್ಮೆಯ ಕಟ್ಟೆ ಒಡೆಯುವ ಮುನ್ನ ಅರಣ್ಯ ಇಲಾಖೆ ಕ್ರಮಕ್ಕೆ ಮುಂದಾಗಬೇಕು.-ಮುತ್ತೇಗೌಡ, ರೈತ, ತಿಪ್ಪೂರು ಗ್ರಾಮ, ದೊಡ್ಡಬಳ್ಳಾಪುರ ತಾಲ್ಲೂಕು
ಕಾಡಿನಲ್ಲಿ ರಾತ್ರಿ ಹೊತ್ತು ಮಂಗಗಳ ಬೇಟೆಯಾಡುವ ಚಿರತೆ, ಗಿಡುಗ, ಹೆಬ್ಬಾವುಗಳ ಸಂಖ್ಯೆ ಕಡಿಮೆ ಆಗಿದೆ. ಹೀಗಾಗಿ ಮಂಗಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಾಡಿನಲ್ಲಿ ಹಣ್ಣು, ಕಾಯಿ, ಎಲೆ, ಚಿಗುರು, ತೊಗಟೆಯ ಸಸ್ಯ ವೈವಿಧ್ಯ ಇಲ್ಲದೇ ಅಕೇಶಿಯಾ, ನೀಲಗಿರಿ ನೆಡುತೋಪು ಹೆಚ್ಚುತ್ತಿರುವುದು ಮಂಗಗಳು ತೋಟಗಳಿಗೆ ನುಗ್ಗಲು ಕಾರಣ.-ಅಖಿಲೇಶ್ ಚಿಪ್ಪಳಿ, ಪರಿಸರವಾದಿ
ಮಲೆನಾಡಿನಲ್ಲಿ ಮಂಗಗಳ ಉಪಟಳ ತಪ್ಪಿಸಲು ಮಂಕಿ ಪಾರ್ಕ್ ಸ್ಥಾಪಿಸಲು ಸಾಗರ ಹಾಗೂ ಹೊಸನಗರ ತಾಲ್ಲೂಕುಗಳಲ್ಲಿ ಐದು ಕಡೆ ಜಾಗ ಗುರುತಿಸಿದ್ದೆವು. ಸ್ಥಳೀಯವಾಗಿ ವಿರೋಧ ವ್ಯಕ್ತವಾದ ಕಾರಣ ಯೋಜನೆ ಕೈಬಿಟ್ಟಿದ್ದೇವೆ.-ಮೋಹನ್‌ಕುಮಾರ್, ಸಾಗರ ವಿಭಾಗದ ಡಿಸಿಎಫ್
ಹಿಂದೆ ಪ್ರತಿ ಹಳ್ಳಿಯಲ್ಲೂ ಒಂದಷ್ಟು ಬಯಲು ಪ್ರದೇಶ ಇರುತ್ತಿತ್ತು. ಅಲ್ಲಿ ಬೇರೆಬೇರೆ ಹಣ್ಣಿನ ಗಿಡಗಳಿರುತ್ತಿದ್ದವು. ಆ ಪ್ರದೇಶಗಳೆಲ್ಲ ಈಗ ಅಡಿಕೆ, ತೆಂಗಿನ ತೋಟಗಳಾಗಿವೆ. ಕಾಡುಪ್ರಾಣಿಗಳ ಸಂತತಿಯೂ ಹಲವು ಪಟ್ಟು ಹೆಚ್ಚಿದೆ. ಇದರಿಂದ ಅವುಗಳನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ.-ಕೆ. ಪ್ರವೀಣ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ, ಮಂಗಳೂರು
ಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ. ಪೂರಕ ಮಾಹಿತಿ: ಜಿ.ಎಚ್. ವೆಂಕಟೇಶ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.