
ನಟ ಶಿವರಾಜ್‌ಕುಮಾರ್
ಅದು 2024ರ ಕೊನೆಯ ತಿಂಗಳು ಡಿಸೆಂಬರ್. ನಟ ಶಿವರಾಜ್ ಕುಮಾರ್ ಅವರು ಅನಾರೋಗ್ಯಕ್ಕೀಡಾಗಿದ್ದು, ಚಿಕಿತ್ಸೆಗೆ ಅಮೆರಿಕಕ್ಕೆ ತೆರಳುತ್ತಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಲ್ಲಿ ದಿಗಿಲು ಹುಟ್ಟಿಸಿತ್ತು.
ವರ್ಷಗಳು ಕಳೆದಿದ್ದರೂ ದೊಡ್ಮನೆ ಕುಡಿ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡು ದುಃಖದಲ್ಲಿದ್ದ ಕನ್ನಡಿಗರು, ಶಿವರಾಜ್‌ಕುಮಾರ್‌ಗೆ ಏನಾಯಿತು ಎಂದು ಗಾಬರಿಯಾಗಿದ್ದರು. ನಂತರ ಹೊರಬಂದ ವಿಚಾರ ಅವರಿಗೆ ಕ್ಯಾನ್ಸರ್ ಇದೆ ಎನ್ನುವುದು. ಕರುನಾಡ ಚಕ್ರವರ್ತಿ ಎಂದೇ ಹೆಸರಾದ, ಅಭಿಮಾನಿಗಳ ಪ್ರೀತಿಯ ಶಿವಣ್ಣನಿಗೆ ಕ್ಯಾನ್ಸರ್ ಇರುವುದು ತಿಳಿದು ಇಡೀ ಕರ್ನಾಟಕ ಆಘಾತಕ್ಕೆ ಒಳಗಾಗಿತ್ತು.
ಅಮೆರಿಕಕ್ಕೆ ತೆರಳಿದ್ದ ಶಿವರಾಜ್‌ಕುಮಾರ್ ದಂಪತಿ ಅಲ್ಲಿಂದಲೇ ವಿಡಿಯೊ ಮಾಡಿ ಹಂಚಿಕೊಂಡು ‘ಗಾಬರಿ ಪಡುವ ಅಗತ್ಯವಿಲ್ಲ’ ಎಂದು ಭರವಸೆ ಮೂಡಿಸಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ತಾಯ್ನಾಡಿಗೆ ಶಿವಣ್ಣ ಮರಳಿ ಬಂದಾಗ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದರು.
ಕ್ಯಾನ್ಸರ್ ಎಂದರೆ ಮಾರಣಾಂತಿಕ ಕಾಯಿಲೆ, ಪ್ರಾಣಕ್ಕೇ ಕುತ್ತು ಎಂದು ಆತಂಕಕ್ಕೀಡಾಗುವವರೇ ಹೆಚ್ಚು. ಅಂತಹದರಲ್ಲಿ 60ರ ಹರೆಯದಲ್ಲೂ ಎದೆಗುಂದದೆ ಕ್ಯಾನ್ಸರ್ ಗೆದ್ದು ಹೊಸ ಚೈತನ್ಯ ಕಂಡವರು ಶಿವಣ್ಣ.
ಶಿವರಾಜ್‌ಕುಮಾರ್ ಅವರಿಗೆ ಮೂತ್ರಕೋಶದ ಕ್ಯಾನ್ಸರ್ ಪತ್ತೆಯಾಗಿತ್ತು. 2024ರ ಡಿಸೆಂಬರ್‌ನಲ್ಲಿ ಅಮೆರಿಕದ ಮಯಾಮಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 2025ರಲ್ಲಿ ಹೊಸವರ್ಷಕ್ಕೆ ಸಿಹಿ ಸುದ್ದಿ ಕೊಟ್ಟಿದ್ದ ಶಿವಣ್ಣ, ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಗುಣಮುಖರಾಗಿರುವುದಾಗಿ ಹೇಳುವ ಮೂಲಕ ಕ್ಯಾನ್ಸರ್ ರೋಗಿಗಳಲ್ಲಿ ಭರವಸೆ ಮೂಡಿಸಿದರು.
ಕ್ಯಾನ್ಸರ್ ಬಗೆಗಿನ ಭಯ ಹೋಗಲಾಡಿಸಿ, ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಫೆಬ್ರುವರಿ 04ರಂದು ‘ವಿಶ್ವ ಕ್ಯಾನ್ಸರ್ ದಿನ’ ಆಚರಿಸಲಾಗುತ್ತದೆ.
ತನ್ನಿಮಿತ್ತ ಕ್ಯಾನ್ಸರ್‌ನಿಂದ ಗುಣಮುಖರಾಗಿರುವ ನಟ ಶಿವಣ್ಣ, ‘ಪ್ರಜಾವಾಣಿ ಡಿಜಿಟಲ್’ ಜತೆಗೆ ಮಾತನಾಡಿ, ಕ್ಯಾನ್ಸರ್ ಕಾಣಿಸಿಕೊಂಡ ನಂತರ ಆರೋಗ್ಯದಲ್ಲಿ ಉಂಟಾದ ಬದಲಾವಣೆ, ಚಿಕಿತ್ಸೆ ಹೇಗಿತ್ತು, ಕ್ಯಾನ್ಸರ್ ಇದ್ದವರು ಯಾವ ಮನಸ್ಥಿತಿಯಲ್ಲಿ ಇರಬೇಕು ಎನ್ನುವ ಬಗ್ಗೆ ಸಂಕ್ಷಿಪ್ತವಾಗಿ ಹಂಚಿಕೊಂಡಿದ್ದಾರೆ.
ಆರಂಭದಲ್ಲಿ…
‘ಆರಂಭದಲ್ಲಿ ಬೆನ್ನು, ಹೊಟ್ಟೆಯಲ್ಲಿ ಅಲ್ಪ ಪ್ರಮಾಣದ ನೋವು ಕಾಣಿಸಿಕೊಂಡಿತ್ತು. ನಂತರ ಮೂತ್ರದಲ್ಲಿ ರಕ್ತ ಕಾಣಿಸಿಕೊಂಡಾಗ ಸ್ವಲ್ಪ ಭಯವಾಗಿತ್ತು. ನಂತರ ವೈದ್ಯರ ಬಳಿ ತೋರಿಸಿದಾಗ ಮೂತ್ರಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು’.
ಚಿಕಿತ್ಸೆ ಎಂದರೆ…
‘ಕ್ಯಾನ್ಸರ್ ಯಾವ ಹಂತದಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳಬೇಕೆನಿಸಲಿಲ್ಲ. ಆರಂಭದಲ್ಲಿ 5 ಬಾರಿ ಕಿಮೋಥೆರಪಿಗೆ ಒಳಗಾಗಿದ್ದೆ. ನಂತರ ಶಸ್ತ್ರ ಚಿಕಿತ್ಸೆ ಅಗತ್ಯವಾದ್ದರಿಂದ ಅಮೆರಿಕಕ್ಕೆ ತೆರಳಿದ್ದೆ. ಶಸ್ತ್ರ ಚಿಕಿತ್ಸೆ ವೇಳೆ ಕ್ಯಾನ್ಸರ್ ಗೆಡ್ಡೆಯನ್ನು ಹೊರತೆಗೆಯಲಾಗಿದೆ. ಸುಮಾರು ಐದು ವಾರಗಳ ಕಾಲ ಅಮೆರಿಕದಲ್ಲಿ ತಂಗಿದ್ದೆ. ಈಗ ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ’.
ಕ್ಯಾನ್ಸರ್ ಎಂದರೆ ಭಯ ಬೇಡ…
‘ನನಗೆ ಎಲ್ಲರಿಂದಲೂ ಬೆಂಬಲ ಸಿಕ್ಕಿತ್ತು. ಆದರೆ ಇತರರ ಬೆಂಬಲ ಎಷ್ಟು ಸಿಕ್ಕರೂ ನಮ್ಮೊಳಗೆ ನಾವು ಗಟ್ಟಿಯಾಗಿರಬೇಕು. ನಾವು ಬದುಕಬೇಕು ಎನ್ನುವ ಆಶಾಭಾವ ಇರಬೇಕು. ಆಗ ಮಾತ್ರ ಎಂತಹ ಸಮಸ್ಯೆಯನ್ನಾದರೂ ಗೆಲ್ಲಲು ಸಾಧ್ಯ. ಇತರರು ಧೈರ್ಯತುಂಬುವಾಗ ಭಾವನಾತ್ಮಕವಾಗಿ ಮಾತ್ರ ತೆಗೆದುಕೊಳ್ಳದೆ, ಬದುಕಬೇಕೆನ್ನುವ ಪ್ರೇರಣೆ ಬೆಳೆಸಿಕೊಳ್ಳಬೇಕು. ಏಕೆಂದರೆ ಯಾವ ಸಮಸ್ಯೆಯಾಗಲೀ ಅಥವಾ, ಅನಾರೋಗ್ಯವಾಗಲೀ ಯಾಕೆ, ಹೇಗೆ ಬಂತು ಎನ್ನುವುದು ತಿಳಿಯುವುದಿಲ್ಲ. ಕ್ಯಾನ್ಸರ್ ಇದೆ ಎಂದಾಗ ಅಯ್ಯೋ ಜೀವನ ಇಷ್ಟೇನಾ, ಮುಗಿಯಿತಾ ಎಂದುಕೊಳ್ಳುವ ಬದಲು, ಜೀವನ ಇದೆ, ಹೊಸ ದಾರಿ ಇದೆ, ಬದುಕಬಹುದು ಎನ್ನುವ ಒಂದು ಸಕಾರಾತ್ಮಕ ಯೋಚನೆ ಹೊಸ ಭರವಸೆ ಚಿಗುರಿಸಬಲ್ಲದು. ಅದುವೇ ಬದುಕಿಗೆ ದೊಡ್ಡ ಶಕ್ತಿಯಾಗುತ್ತದೆ’ ಎಂದು ವಿವರಿಸಿದರು.
2025ರ ಡಿಸೆಂಬರ್‌ನಲ್ಲಿ ಶಿವಣ್ಣ ಕ್ಯಾನ್ಸರ್‌ನಿಂದ ಗೆದ್ದು ಬಂದು ವರ್ಷವಾದ ಹಿನ್ನೆಲೆ ಅಭಿಮಾನಿಗಳಿಗೆ ಪತ್ರ ಬರೆದು, ಧನ್ಯವಾದ ಹೇಳಿದ್ದರು. ಜತೆಗೆ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರಾದ ಡಾ. ಮನೋಹರನ್ ಮುರುಗೇಶನ್ ಮತ್ತು ತಂಡ, ಡಾ. ದಿಲೀಪ್, ಡಾ. ಶಶಿಧರ್, ಡಾ. ವಿ.ಕೆ ಶ್ರೀನಿವಾಸ್, ಡಾ. ಯೋಗಿತಾ, ಮತ್ತು ಡಾ ಅನಿತಾ ಧರ್ಮಲಿಂಗಂ ಅವರಿಗೆ ಧನ್ಯವಾದ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.