ADVERTISEMENT

ಹೃದ್ರೋಗ ತಪಾಸಣೆ– ಭಾಗ 3: ಹೃದಯಕ್ಕೆ ಬೇಕಾಗಬಹುದು ‘ಸ್ಟೆಂಟ್‌’

ಪ್ರಜಾವಾಣಿ ವಿಶೇಷ
Published 31 ಮಾರ್ಚ್ 2025, 23:30 IST
Last Updated 31 ಮಾರ್ಚ್ 2025, 23:30 IST
   

ಕರೋನರಿ ಅಥಿರೋಸ್ಕ್ಲಿರೋಸಿಸ್ ಚಿಕಿತ್ಸೆಯ ಪ್ರಮುಖ ಉದ್ದೇಶಗಳು: ಹೃದಯದ ಮಾಂಸಖಂಡಗಳಿಗೆ ರಕ್ತದ ಹರಿವಿನ ಕೊರತೆಯನ್ನು ನೀಗಿಸುವುದು ಮತ್ತು ಹೃದಯಾಘಾತದಿಂದ ಆಗಬಹುದಾದ ಸಾವು-ನೋವುಗಳನ್ನು ತಡೆಗಟ್ಟುವುದು. ಇದಕ್ಕೆ ಔಷಧಗಳು, ಆಂಜಿಯೋಪ್ಲಾಸ್ಟಿ ಮೂಲಕ ಸ್ಟೆಂಟ್ ಸೇರ್ಪಡಿಕೆ, ಹಾಗೂ ಶಸ್ತ್ರಚಿಕಿತ್ಸೆ ಎಂಬ ಮೂರು ಮಾರ್ಗಗಳಿವೆ. ರೋಗಿಗೆ ಯಾವ ಚಿಕಿತ್ಸಾಮಾರ್ಗ ಸೂಕ್ತ ಎನ್ನುವುದನ್ನು ಹೃದ್ರೋಗತಜ್ಞರು ನಿರ್ಧರಿಸುತ್ತಾರೆ.

ಔಷಧಗಳು ಕರೋನರಿ ಅಥಿರೋಸ್ಕ್ಲಿರೋಸಿಸ್ ಕಾಯಿಲೆಯನ್ನು ನೇರವಾಗಿ ನಿವಾರಿಸುವುದಿಲ್ಲ; ಆದರೆ ಪರೋಕ್ಷವಾಗಿ ಸಹಕರಿಸುತ್ತವೆ. ರಕ್ತನಾಳಗಳಲ್ಲಿನ ಜಿಡ್ಡಿನ ಅಂಶ ಆಂತರಿಕ ವ್ಯಾಸವನ್ನು ಕಿರಿದಾಗಿಸುತ್ತವಷ್ಟೇ? ರಕ್ತದಲ್ಲಿನ ಕೊಲೆಸ್ಟ್ರಾಲ್ ಹತೋಟಿಯಲ್ಲಿ ಇಡುವ ಔಷಧಗಳನ್ನು ನೀಡುವುದರಿಂದ ಮತ್ತಷ್ಟು ಜಿಡ್ಡಿನ ಅಂಶ ಸೇರದಂತೆ ತಡೆಯಬಹುದು. ಕಿರಿದಾದ ರಕ್ತನಾಳಗಳಲ್ಲೂ ಸರಾಗವಾಗಿ ಸಂಚರಿಸುವಂತೆ ರಕ್ತವನ್ನು ತೆಳುವಾಗಿ ಮಾಡಬಲ್ಲ ಔಷಧಗಳನ್ನು ಬಳಸಬಹುದು. ನೈಟ್ರೇಟ್ ಅಂಶ ಇರುವ ಮಾತ್ರೆಗಳು ಹೃದಯದ ರಕ್ತನಾಳಗಳನ್ನು ತಾತ್ಕಾಲಿಕವಾಗಿ ಹಿಗ್ಗಿಸಿ, ರಕ್ತದ ಹರಿವನ್ನು ಹೆಚ್ಚಿಸಿ, ಸ್ವಲ್ಪ ಸಮಯದವರೆಗೆ ಪ್ರಯೋಜನಕಾರಿಯಾಗುತ್ತವೆ. ಕೆಲವು ಔಷಧಗಳು ಹೃದಯದ ಆಕ್ಸಿಜನ್ನಿನ ಅವಶ್ಯಕತೆಯನ್ನು ಕಡಿಮೆಯಾಗಿಸಿ ಪರಿಹಾರ ನೀಡುತ್ತವೆ. ಆರಂಭಿಕ ಮಟ್ಟದ ಕರೋನರಿ ಅಥಿರೋಸ್ಕ್ಲಿರೋಸಿಸ್ ಇರುವವರು ನಿಯಮಿತ ಔಷಧ ಬಳಕೆ, ಪೋಷಕಾಂಶಯುಕ್ತ ಆಹಾರಸೇವನೆ, ದೈಹಿಕ ವ್ಯಾಯಾಮ, ತಂಬಾಕು ತ್ಯಜಿಸುವಿಕೆ, ಅಧಿಕ-ರಕ್ತದೊತ್ತಡ ಹಾಗೂ ಮಧುಮೇಹಗಳ ಹತೋಟಿಯಲ್ಲಿಡುವಿಕೆ, ಮತ್ತು ಸಕಾಲಿಕ ವೈದ್ಯಕೀಯ ತಪಾಸಣೆಗಳನ್ನು ಜೀವನಪರ್ಯಂತ ತಪ್ಪದೇ ಪಾಲಿಸಿದಲ್ಲಿ, ಹೃದಯ-ಸಂಬಂಧಿ ಸಾವು-ನೋವುಗಳನ್ನು ತಡೆಗಟ್ಟಬಹುದು. ಒಂದು ವೇಳೆ ಔಷಧ ಮತ್ತು ಜೀವನಶೈಲಿಯ ಬದಲಾವಣೆಗಳಿಂದ ಪರಿಹಾರ ಕಂಡುಬಾರದಿದ್ದಲ್ಲಿ, ಮುಂದಿನ ಹಂತಗಳ ಚಿಕಿತ್ಸೆ ಬೇಕಾಗುತ್ತದೆ.

ಆಂಜಿಯೋಗ್ರಾಮ್ ಮೊದಲಾದ ಪರೀಕ್ಷೆಗಳು ಕರೋನರಿ ರಕ್ತನಾಳಗಳ ಯಾವ ಭಾಗದಲ್ಲಿ ರಕ್ತದ ಹರಿವಿನ ಕೊರತೆಯಿದೆ ಮತ್ತು ಅದು ಎಷ್ಟು ತೀವ್ರವಾಗಿದೆ ಎಂಬ ಮಾಹಿತಿ ನೀಡುತ್ತವೆ. ಒಂದು ವೇಳೆ ರಕ್ತನಾಳಗಳು ಇಡಿಯಾಗಿ ಮುಚ್ಚಿಹೋಗಿದ್ದರೆ ರಕ್ತದ ಹರಿವು ಸಂಪೂರ್ಣವಾಗಿ ನಿಂತುಹೋಗಿ ಹೃದಯದ ಸ್ನಾಯುಗಳಿಗೆ ಶಾಶ್ವತ ಹಾನಿಯಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಯಾವ ಚಿಕಿತ್ಸೆಯೂ ಫಲಕಾರಿಯಾಗುವುದಿಲ್ಲ. ಆದರೆ ರಕ್ತನಾಳಗಳಲ್ಲಿ ರಕ್ತದ ಹರಿವು ಅಲ್ಪ-ಸ್ವಲ್ಪ ಆಗುತ್ತಿದೆ; ಹೃದಯದ ಸ್ನಾಯುಗಳಿಗೆ ಶಾಶ್ವತ ಹಾನಿ ಆಗಿಲ್ಲ ಎಂದಾದರೆ ಕೊರೋನರಿ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಯನ್ನು ಮಾಡಬಹುದು. ಈ ಪ್ರಕ್ರಿಯೆಗೆ ಮುನ್ನ ರಕ್ತವನ್ನು ತೆಳುವಾಗಿಸುವ ಮಾತ್ರೆಗಳನ್ನು ನೀಡಬೇಕು. ಆ್ಯಂಜಿಯೋಗ್ರಾಮ್ ಪರೀಕ್ಷೆಯಲ್ಲಿ ರಕ್ತದ ಹರಿವಿನ ಅಡ್ಡಿ ರಕ್ತನಾಳದ ಯಾವ ಭಾಗದಲ್ಲಿ, ಶೇಕಡಾವಾರು ಎಷ್ಟು ಪ್ರಮಾಣದಲ್ಲಿ, ಎಷ್ಟು ಉದ್ದವಿದೆ; ಅದರೊಳಗಿನ ಕ್ಯಾಲ್ಸಿಯಂ ಪ್ರಮಾಣವೇನು ಎನ್ನುವ ವಿವರಗಳನ್ನು ಪಡೆಯಲಾಗುತ್ತದೆ. ರಕ್ತನಾಳದ ಮೂಲಕ ಹಾಯಿಸಿರುವ ತೂರ್ನಳಿಕೆಯ ಒಳಗೆ ಸಪೂರವಾದ, ನವಿರಾದ ತಂತಿಯನ್ನು ‘ಅಥಿರೋಸ್ಕ್ಲಿರೋಸಿಸ್’ ಆಗಿರುವ ಭಾಗದ ಮೂಲಕ ತೂರಿಸಲಾಗುತ್ತದೆ. ರಕ್ತದ ಹರಿವಿಗೆ ಅಡ್ಡಿಯಾಗಿರುವ ಭಾಗದ ಉದ್ದ ಮತ್ತು ಅಗಲಗಳಿಗೆ ಅನುಗುಣವಾಗಿ ಸರಿಯಾದ ಗಾತ್ರದ ಬಲೂನ್ ಒಂದನ್ನು ತಂತಿಯ ಮೇಲೆ ಹಾಯಿಸಿ, ಅಥಿರೋಸ್ಕ್ಲಿರೋಸಿಸ್ ಆಗಿರುವ ಭಾಗದಲ್ಲಿ ಇರಿಸಿ, ಬಲೂನನ್ನು ಹಿಗ್ಗಿಸಲಾಗುತ್ತದೆ. ಇದರಿಂದ ರಕ್ತನಾಳದಲ್ಲಿ ಕಟ್ಟಿಕೊಂಡಿದ್ದ ಕೊಬ್ಬಿನ ಅಂಶ ಚದುರಿಹೋಗಿ, ಒಳವ್ಯಾಸ ಹೆಚ್ಚಾಗಿ, ರಕ್ತದ ಹರಿವು ಉತ್ತಮಗೊಳ್ಳುತ್ತದೆ. ಆದರೆ ಬಲೂನನ್ನು ತೆಗೆದ ನಂತರ ರಕ್ತನಾಳ ಮತ್ತೊಮ್ಮೆ ಸಂಕುಚಿಸಬಹುದು. ಇದನ್ನು ತಡೆಯಲು ಆ ಭಾಗದಲ್ಲಿ ನವಿರಾದ ಲೋಹದ ಜಾಲರಿಯನ್ನು ಬಲೂನಿನ ಸಹಾಯದಿಂದ ಕೂರಿಸಬಹುದು. ಇದನ್ನು ‘ಸ್ಟೆಂಟ್’ ಎನ್ನುತ್ತಾರೆ. ಅಥಿರೋಸ್ಕ್ಲಿರೋಸಿಸ್ ಭಾಗದಲ್ಲಿರುವ ಅಧಿಕ ಕ್ಯಾಲ್ಸಿಯಂ ಮತ್ತು ಹೆಪ್ಪುಗಟ್ಟಿದ ರಕ್ತವನ್ನು ಈಗ ಲಭ್ಯವಿರುವ ಅತ್ಯಾಧುನಿಕ ಸಲಕರಣೆಗಳ ನೆರವಿನಿಂದ ನಿವಾರಿಸಿ, ಸ್ಟೆಂಟ್ ಅನ್ನು ಕೂರಿಸಬಹುದು. ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಪ್ರಜ್ಞೆ ತಪ್ಪಿಸುವಂತಹ ಅರಿವಳಿಕೆ ಬೇಕಿಲ್ಲ; ಚಿಕಿತ್ಸೆಯ ಮರುದಿನ ರೋಗಿಯನ್ನು ಮನೆಗೆ ಕಳುಹಿಸಲಾಗುತ್ತದೆ; ವಾರದೊಳಗೆ ರೋಗಿಯು ತನ್ನ ದೈನಂದಿನ ಕಾರ್ಯಗಳಲ್ಲಿ ತೊಡಗಬಹುದು.

ADVERTISEMENT

ಕರೋನರಿ ರಕ್ತನಾಳಗಳ ಕೆಲವು ನಾಜೂಕಾದ ಭಾಗಗಳಲ್ಲಿ ಇರಬಹುದಾದ ಅಥಿರೋಸ್ಕ್ಲಿರೋಸಿಸ್‌ಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಸಾಧ್ಯವಾಗುವುದಿಲ್ಲ. ಆಗ ಪ್ರಜ್ಞೆ ತಪ್ಪಿಸುವಂತಹ ಅರಿವಳಿಕೆ ಬಳಸಿ ಮಾಡುವ ಬೈಪಾಸ್ ಶಸ್ತ್ರಚಿಕಿತ್ಸೆ ಬೇಕಾಗುತ್ತದೆ. ರಕ್ತನಾಳದಲ್ಲಿ ಅಡ್ಡಿ ಇರುವ ಭಾಗದ ಹಿಂದೆ ಮತ್ತು ಮುಂದೆ ಇರುವ ಆರೋಗ್ಯಕರ ಭಾಗಗಳನ್ನು ಬೇರೊಂದು ರಕ್ತನಾಳ ಬಳಸಿ ಪರಸ್ಪರ ಜೋಡಿಸಬಹುದು. ಹೀಗೆ ಜೋಡಿಸಲು ರಕ್ತನಾಳದ ಗಾತ್ರದ ಆವಶ್ಯಕತೆಗೆ ಅನುಗುಣವಾಗಿ ಎದೆಯಲ್ಲಿ, ಕೈಯಲ್ಲಿ, ಅಥವಾ ಕಾಲಿನಲ್ಲಿರುವ ಕೆಲವು ಆರೋಗ್ಯವಂತ ಧಮನಿಗಳನ್ನು ಬಳಸಬಹುದು. ಈ ಶಸ್ತ್ರಚಿಕಿತ್ಸೆಯ ವೇಳೆ ಹೃದಯದಲ್ಲಿ ಬೇರಾವುದೇ ಸಮಸ್ಯೆ ಇದ್ದರೂ ಸರಿಪಡಿಸಬಹುದು; ಐದರಿಂದ ಏಳು ದಿನಗಳ ನಂತರ ರೋಗಿಯ ಬಿಡುಗಡೆ; ನಾಲ್ಕಾರು ವಾರಗಳಲ್ಲಿ ತಮ್ಮ ಕೆಲಸಗಳಲ್ಲಿ ತೊಡಗಬಹುದು. ಇತ್ತೀಚೆಗೆ ವಿಶೇಷ ದುರ್ಬೀನುಗಳನ್ನು ಬಳಸಿ ರೊಬೊಟಿಕ್ ಯಂತ್ರಗಳ ನೆರವಿನಿಂದ ಮಾಡುವ ಬೈಪಾಸ್ ಶಸ್ತ್ರಚಿಕಿತ್ಸೆಯಿಂದ ರೋಗಿಗಳು ಮತ್ತೂ ಶೀಘ್ರವಾಗಿ ಗುಣಮುಖರಾಗುತ್ತಿದ್ದಾರೆ.

ಆ್ಯಂಜಿಯೋಪ್ಲಾಸ್ಟಿ ಮತ್ತು ಬೈಪಾಸ್ ಶಸ್ತ್ರಚಿಕಿತ್ಸೆಗಳು ಎಷ್ಟೇ ಸುರಕ್ಷಿತ ಹಾಗೂ ಸುಲಭ ಲಭ್ಯವಿದ್ದರೂ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು ಹೃದಯಾಘಾತವಾಗದಂತೆ ತಡೆಗಟ್ಟುವುದೇ ಜಾಣತನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.