ಇತ್ತೀಚಿಗೆ ಹಳ್ಳಿಯೊಂದಕ್ಕೆ ಹೋದಾಗ ಅಜ್ಜಿಯೊಬ್ಬರ ಕೈಮೇಲೆ ಹಚ್ಚೆ ಕಂಡು ಅಚ್ಚರಿಯಾಯಿತು. ಎಷ್ಟು ವರ್ಷಗಳಾಯಿತು ಎಂದು ಕೇಳಿದ್ದಕ್ಕೆ ಅವರು, ಚಿಕ್ಕಂದಿನಲ್ಲಿ ಹಾಕಿದ್ದು, ಸುಮಾರು 50 ವರ್ಷಗಳ ಹಿಂದೆ ಎಂದರು. ಆಭರಣವೇ ಇಲ್ಲದ ಕಾಲದಲ್ಲಿ ಹಚ್ಚೆಗಳೇ ಸೌಂದರ್ಯವನ್ನು ಇಮ್ಮಡಿಗೊಳಿಸುವ ಸೂತ್ರವಾಗಿದ್ದವು. ಈ ಅರ್ಧ ಶತಮಾನದಲ್ಲಿ ಹಚ್ಚೆ ಎಷ್ಟೆಲ್ಲಾ ಬದಲಾವಣೆ ಕಂಡಿದೆ ಎಂದು ಯೋಚಿಸಿದಾಗ ಕಣ್ಣೆದುರು ಬಂದಿದ್ದು ವಿಚಿತ್ರವಾದ ಚಿತ್ರಗಳು, ಮೈ ಮೇಲೆ ಮೂಡಿದ ಟ್ಯಾಟೂಗಳು.
ಈಗ ಕಾಲ ಬದಲಾಗಿದೆ, ಪ್ಯಾಷನ್ ಲೋಕ ಹಚ್ಚೆಯನ್ನು ಟ್ಯಾಟೂವಾಗಿ ಬದಲಾಯಿಸಿಕೊಂಡು ಸುಂದರವಾಗಿ ಕಾಣಲು ಬಳಸಿಕೊಳ್ಳುತ್ತಿದೆ. ಕಾಲೇಜು ಹುಡುಗ, ಹುಡುಗಿಯರ ಹಾಟ್ ಪೇವರೇಟ್ ಆಗಿವೆ ಈ ಟ್ಯಾಟೂಗಳು.
ಟ್ಯಾಟೂ ಯಂತ್ರ, ಸೂಜಿಗಳು, ಬಣ್ಣದ ಶಾಯಿ, ಸ್ಟೆನ್ಸಿಲ್ ಪೇಪರ್, ಆ್ಯಂಟಿಸೆಪ್ಟಿಕ್ ದ್ರಾವಣಗಳನ್ನು ಬಳಸಿ ಟ್ಯಾಟೂಗಳನ್ನು ಹಾಕಲಾಗುತ್ತದೆ.
ಕೈ, ಕಾಲು, ಎದೆಯ ಮೇಲೆ, ಬೆನ್ನಿನ ಹಿಂದೆ, ಕುತ್ತಿಗೆ ಬದಿಯಲ್ಲಿ, ಭುಜದ ಮೇಲೆ, ಬೆರಳುಗಳ ಸಂಧಿಯಲ್ಲಿ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ.
ಪ್ರೇಯಸಿ, ಸಂಗಾತಿ, ನಟನ ಹೆಸರು ಅಥವಾ ಭಾವಚಿತ್ರ, ಹೆಸರಿನ ಮೊದಲಕ್ಷರ, ಗರುಡ ಚಿತ್ರ, ಚಿಟ್ಟೆ, ತಮ್ಮಿಷ್ಟದ ಚಿತ್ರಗಳು, ಒಡೆದ ಹೃದಯ ಹೀಗೆ ನಾನಾರೀತಿಯ ಟ್ಯಾಟೂಗಳು ಟ್ರೆಂಡಿಂಗ್‌ನಲ್ಲಿವೆ.
ಕೆಲವರು ಅಲಂಕಾರಕ್ಕಾಗಿ, ಇನ್ನೂ ಕೆಲವರು ತಮ್ಮ ನೆಚ್ಚಿನ ವ್ಯಕ್ತಿಯ ಮೇಲಿನ ಪ್ರೀತಿ, ಗೆಳೆತನದ ಸಂಕೇತವಾಗಿ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ.
ಟ್ಯಾಟೂ ಹಾಕಲೆಂದು ಚರ್ಮದ ಮೇಲೆ ಸೂಜಿ ಚುಚ್ಚಿದಾಗ ಟ್ಯಾಟೂ ಅಂದವಾಗಿ ಕಾಣಲೆಂದು ಬಳಸುವ ರಾಸಾಯನಿಕ ಬಣ್ಣವು ದೇಹವನ್ನು ಸೇರುತ್ತದೆ. ಆ ಕ್ಷಣಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಕ್ರಮೇಣ ಆರೋಗ್ಯದ ಮೇಲೆ ಹಲವು ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ. ಅದರ ಬಗ್ಗೆ ಆಯುರ್ವೇದ ವೈದ್ಯ, ಉಪನ್ಯಾಸಕ ಹಾಗೂ ಸಂಶೋಧನಾ ಸಲಹೆಗಾರ ಡಾ. ರವೀಶ ಎನ್. ನೀಡಿದ ಮಾಹಿತಿ ಇಲ್ಲಿದೆ.
ಟ್ಯಾಟೂದಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು
ಚರ್ಮದ ಮೇಲೆ ಪರಿಣಾಮ: ಟ್ಯಾಟೂ ಹಾಕುವ ಸಂದರ್ಭದಲ್ಲಿ ಚರ್ಮದ ಮೇಲೆ ಇಂಕ್ ಬಳಸಿ ಸೂಜಿ ಮೂಲಕ ಚುಚ್ಚುವುದರಿಂದ ಗಾಯಗಳಾಗಿ, ಉರಿಯೂತ, ತುರಿಕೆ, ಗುಳ್ಳೆಗಳು ಆಗುವ ಸಾಧ್ಯತೆ ಇರುತ್ತದೆ.
ಏಡ್ಸ್ ಅಥವಾ ಸಾಂಕ್ರಾಮಿಕ ರೋಗ ತಗುಲುವಿಕೆ: ಟ್ಯಾಟೂ ಸ್ಟುಡಿಯೊ ಶುಚಿ ಇಲ್ಲದೇ ಇದ್ದರೆ, ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸಿ ಸಂಕ್ರಾಮಿಕ ರೋಗ ಹರಡುವಿಕೆಗೂ ಕಾರಣವಾಗುತ್ತದೆ. ಯಾರೋ ಒಬ್ಬರಿಗೆ ಏಡ್ಸ್ ಇದ್ದರೆ, ಅವರಿಗೆ ಟ್ಯಾಟೂ ಹಾಕಲು ಬಳಸಿದ್ದ ಸೂಜಿಯನ್ನೇ ಮತ್ತೊಬ್ಬರಿಗೆ ಬಳಸುವುದರಿಂದ ಹೆಪಟೈಟಿಸ್ B/C ಅಥವಾ HIV ಸೋಂಕುಗಳು ಬರುವ ಸಾಧ್ಯತೆ ಇರುತ್ತದೆ.
ಟ್ಯಾಟೂ ಪ್ರಿಯರು ಟ್ಯಾಟೂಗೆ ಬಳಸುವ ಸಾಮಾಗ್ರಿಗಳ ಬಗ್ಗೆ ಗಮನವಹಿಸುವುದು ಮುಖ್ಯವಾಗಿರುತ್ತದೆ.
ಚರ್ಮ ಕಪ್ಪಾಗುವಿಕೆ: ‘ಹೆನ್ನಾ ಟ್ಯಾಟೂ’ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿದೆ. ಆದರೆ ಇದರಲ್ಲಿರುವ PPD (ಪ್ಯಾರಾ–ಫೆನೈಲೀನ್ಡೈಅಮಿನ್) ರಾಸಾಯನಿಕದಿಂದ ಚರ್ಮ ಕಪ್ಪಾಗುವಿಕೆ, ತೀವ್ರ ಅಲರ್ಜಿ ಉಂಟಾಗಿ ಅನಾಫಿಲ್ಯಾಕ್ಸಿಸ್ ಎಂಬ ಮಾರಣಾಂತಿಕ ರೋಗಕ್ಕೆ ಕಾರಣವಾಗಬಹುದು.
ಉಸಿರಾಟದ ತೊಂದರೆ: ಟ್ಯಾಟೂ ಹಾಕಿಸಿಕೊಂಡ ಮೇಲೆ ಕೆಲವರಿಗೆ ಜ್ವರ, ಕೀವು, ತೀವ್ರ ಬಾವು, ಗುಳ್ಳೆಗಳು ಅಥವಾ ಉಸಿರಾಟದ ತೊಂದರೆ ಆಗುವ ಸಾಧ್ಯತೆ ಇರುತ್ತದೆ.
ಟ್ಯೂಟೂಗಳ ನೋವು/ ಗಾಯ ನಿವಾರಿಸಲು ಇಲ್ಲಿವೆ ಪರಿಹಾರ ಮಾರ್ಗಗಳು
ಟ್ಯೂಟೂ ಉರಿ ನಿವಾರಣೆ: ಆಯುರ್ವೇದದಲ್ಲಿ ಸಿಗುವ ಮಂಜಿಷ್ಠ ಸರಿವ, ಮಂಜಿಷ್ಠ ಚಂದನ, ಉಶೀರ ಪುಡಿಗಳನ್ನು ಹಚ್ಚಿಕೊಳ್ಳಬಹದು.
ಸೋಂಕು ನಿವಾರಣೆ: ಹರಿದ್ರಾ, ದಾರುಹರಿದ್ರಾ, ತ್ರಿಫಲವನ್ನು ಹಚ್ಚುವುದರಿಂದ ಟ್ಯೂಟೂಗಳಿಂದ ಆಗುವ ಸೋಂಕುಗಳನ್ನು ತಡೆಗಟ್ಟಬಹುದು.
ಚರ್ಮ ಕಪ್ಪಾಗುವುದನ್ನು ನಿಯಂತ್ರಿಸಲು: ಟ್ಯೂಟೂ ಹಾಕಿಸಿದ ಮೇಲೆ ಕೆಲವರಿಗೆ ಚರ್ಮ ಕಪ್ಪಾಗುತ್ತದೆ. ಅಂತಹ ಸಂದರ್ಭದಲ್ಲಿ ಯಷ್ಟಿಮಧು, ಲೋಧ್ರ, ಅಮಲಕಿಯನ್ನು ಹಚ್ಚುವುದರಿಂದ ಟ್ಯೂಟೂದಿಂದ ಚರ್ಮದ ಮೇಲಾಗುವ ಸಮಸ್ಯೆಯನ್ನು ನಿಯಂತ್ರಿಸಬಹುದು.
ಟ್ಯಾಟೂ ಹಾಕಿಸಿದ ತಕ್ಷಣ ಯಾವುದೇ ಲೇಪ ಅಥವಾ ತೈಲವನ್ನು ಸ್ವಯಂ ಇಚ್ಛೆಯಿಂದ ಬಳಸುವುದು ಸೋಂಕಿನ ಅಪಾಯ ಹೆಚ್ಚಿಸಬಹುದು. ಆದ್ದರಿಂದ ವೈದ್ಯರ ಸಲಹೆ ಅತ್ಯಗತ್ಯ. ಟ್ಯಾಟೂ ಭಾಗದಲ್ಲಿ ಕೀವು, ತೀವ್ರ ಬಾವು, ಜ್ವರ, ಗುಳ್ಳೆಗಳು ಅಥವಾ ಉಸಿರಾಟದ ತೊಂದರೆ ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆಯಬೇಕು. ಟ್ಯಾಟೂ ಕೆಲವರಿಗೆ ಮಾತ್ರ ಅಡ್ಡ ಪರಿಣಾಮ ಉಂಟುಮಾಡಬಹುದು. ಆದ್ದರಿಂದ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಸುರಕ್ಷತೆ, ಸ್ವಚ್ಛತೆ, ಸೂಕ್ತ ಆರೈಕೆ ಅತ್ಯಂತ ಮುಖ್ಯ ಎನ್ನುತ್ತಾರೆ ತಜ್ಞರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.