
ಚಿತ್ರ: ಗೆಟ್ಟಿ
ಚಳಿಗಾಲದಲ್ಲಿ ಗಾಳಿಯಲ್ಲಿನ ತೇವಾಂಶದ ಕೊರತೆಯಿಂದಾಗಿ ಒಣ ಹವೆ ಉಂಟಾಗುತ್ತದೆ. ಇದು ಚರ್ಮ ಹಾಗೂ ಕೂದಲಿನ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವೈದ್ಯರು ಹೇಳುತ್ತಾರೆ. ಚಳಿಗಾಲದಲ್ಲಿ ದೇಹದಲ್ಲಿನ ತೇವಾಂಶ ಕೂದಲು ಹಾಗೂ ಚರ್ಮದ ಮೂಲಕ ಹೊರಹೊಗುತ್ತದೆ. ಇದರಿಂದಾಗಿ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ತುಟಿ ಮತ್ತು ಕಾಲಿನ ಹಿಮ್ಮಡಿಗಳು ಒಡೆಯುತ್ತವೆ. ಅಲ್ಲದೇ ಸೋರಿಯಾಸಿಸ್ ಮತ್ತು ಇಸುಬಿನಂತಹ ಸಮಸ್ಯೆ ಉಂಟಾಗಬಹುದು ಎಂದು ವೈದ್ಯರು ಹೇಳುತ್ತಾರೆ.
ಹೀಗಾಗಿ ಚಳಿಗಾಲದಲ್ಲಿ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಚಳಿಗಾಲದಲ್ಲಿ ಚರ್ಮ ಹಾಗೂ ಕೂದಲ ಆರೈಕೆ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.
ಕೂದಲ ಆರೈಕೆ ಹೀಗಿರಲಿ:
ದಟ್ಟವಾಗಿ ಕೂದಲು ಬೀಡುವುದು ಚಳಿಗಾಲದಲ್ಲಿ ಒಳ್ಳೆಯದಲ್ಲ. ತಲೆಗೆ ಬಳಸುವ ವಿವಿಧ ರಾಸಾಯನಿಕಯುಕ್ತ ಶಾಂಪೂ ಹಾಗೂ ಹೇರ್ ಡ್ರಯರ್‌ಗಳನ್ನು ಚಳಿಗಾಲ ಮುಗಿಯುವವರೆಗೆ ಅತಿಯಾಗಿ ಬಳಸಬೇಡಿ.
ತಲೆಗೆ ಬಿಗಿಯಾದ ಟೋಪಿ ಅಥವಾ ಬಟ್ಟೆ ಕಟ್ಟಬೇಡಿ. ಸಾಧ್ಯವಾದಷ್ಟು ಸಡಿಲವಾದ ಬಟ್ಟೆ ಸುತ್ತಿಕೊಳ್ಳುವುದರಿಂದ ಕೂದಲಿನ ಭಾಗಕ್ಕೆ ರಕ್ತಸಂಚಲನ ಸರಾಗವಾಗಿ ಆಗುತ್ತದೆ.
ಹೆಚ್ಚು ಬಿಸಿ ಇರುವ ನೀರಿನಿಂದ ಸ್ನಾನ ಮಾಡಬೇಡಿ. ಸಾಧ್ಯವಾದಷ್ಟು ತಂಪಾದ ನೀರಿನಿಂದ ತಲೆ ತೊಳೆಯುವುದು ಉತ್ತಮ.
ಒದ್ದೆಯಾದ ಕೂದಲಲ್ಲಿ ಹೊರಗಡೆ ಹೋಗುವುದನ್ನು ತಪ್ಪಿಸಿ. ಹೊರಗಿನ ಧೂಳು ಕೂದಲ ಸಮಸ್ಯೆಗೆ ಕಾರಣವಾಗಬಹುದು.
ಹೆಚ್ಚು ನೀರನ್ನು ಕುಡಿಯುವುದರಿಂದ ಚಳಿಗಾಲದಲ್ಲಿ ಕೂದಲಿನ ಆರೈಕೆ ಮಾಡಬಹುದು.
ಚರ್ಮದ ಆರೈಕೆ ಹೀಗಿರಲಿ:
ಚಳಿಗಾಲದಲ್ಲಿ ಹೆಚ್ಚು ತೀಕ್ಷ್ಣವಾದ ಫೇಸ್‌ವಾಶ್ ಬಳಕೆಯನ್ನು ಕಡಿಮೆ ಮಾಡಿ. ಮುಖ್ಯವಾಗಿ ‘ಗ್ಲೈಕೋಲಿಕ್’ ಆಮ್ಲ ಮತ್ತು ‘ಸ್ಯಾಲಿಸಿಲಿಕ್’ ಆಮ್ಲ ಇರುವ ಫೇಸ್‌ವಾಶ್‌ಗಳನ್ನು ಬಳಸಿ.
ಒರಟಾದ ‘ಸ್ಕ್ರಬರ್’ ಬಳಕೆಯನ್ನು ಕಡಿಮೆ ಮಾಡಿ, ‘ಮೈಕ್ರೋಡರ್ಮಾಬ್ರೇಷನ್’ ಮಾಡಿಸಿ.
ತೀರಾ ಶುಷ್ಕ ಚರ್ಮ ಇರುವವರು ದಿನಕ್ಕೆ ಎರಡು ಭಾರಿ ‘ಮಾಯಿಶ್ಚರೈಸಿಂಗ್’ ಹಾಗೂ ‘ಸೀರಮ್’ಗಳನ್ನು ಬಳಸುವುದು ಸೂಕ್ತ.
ಚಳಿಗಾಲದಲ್ಲಿ ಎಸ್‌ಪಿಎಫ್ (ಸನ್ ಪ್ರೊಟೆಕ್ಷನ್ ಫ್ಯಾಕ್ಟರ್) ಬಳಕೆ ಮಾಡುವುದನ್ನು ಮರೆಯಬೇಡಿ. ಚಳಿಗಾಲದ ಸೂರ್ಯ ಬೇಸಿಗೆಯ ಸೂರ್ಯನಿಗಿಂತ ಹೆಚ್ಚು ಅಪಾಯಕಾರಿ.
ಚಳಿಗಾಲದಲ್ಲಿ ಲಿಪ್ ಸ್ಟಿಕ್ ಬಳಕೆ ಮಾಡುವ ಬದಲು ಲಿಪ್ ಬಾಮ್ ಬಳಸುವುದು ಸೂಕ್ತ.
ಚಳಿಗಾಲದಲ್ಲಿ ಆಗಾಗ ಚರ್ಮರೋಗ ತಜ್ಞರನ್ನು ಸಂಪರ್ಕಿಸಿ ಸಲಹೆ ಸೂಚನೆ ಪಡೆಯುವುದು ಒಳ್ಳೆಯದು.
(ಡಾ. ಶೋಭಾ ಸುದೀಪ್, ಚರ್ಮರೋಗತಜ್ಞೆ, ಅಪೋಲೊ ಆಸ್ಪತ್ರೆ, ಶೇಷಾದ್ರಿಪುರಂ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.