ADVERTISEMENT

ವಂದೇ ಭಾರತ್ ರೈಲು: ಬೆಂಗಳೂರು–ಎರ್ನಾಕುಳಂ ನಡುವಿನ ಪ್ರವಾಸಿ ತಾಣಗಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ನವೆಂಬರ್ 2025, 10:16 IST
Last Updated 8 ನವೆಂಬರ್ 2025, 10:16 IST
<div class="paragraphs"><p>ಚಿತ್ರ: ಎಐ</p></div>
   

ಚಿತ್ರ: ಎಐ

ಬೆಂಗಳೂರು ಹಾಗೂ ಎರ್ನಾಕುಳಂ ನಡುವೆ ಸಂಚರಿಸುವ ವಂದೇ ಭಾರತ ರೈಲಿಗೆ ಚಾಲನೆ ದೊರೆತಿದೆ. ಕೇರಳ ಹಾಗೂ ತಮಿಳುನಾಡಿನ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡುವವರು ಈ ರೈಲಿನಲ್ಲಿ ಪ್ರಯಾಣಿಸಬಹುದು. ಈ ರೈಲು ಮಾರ್ಗದಲ್ಲಿ ಭೇಟಿ ನೀಡಬಹುದಾದ ಪ್ರವಾಸಿ ತಾಣಗಳು ಯಾವುವು ಎಂಬ ಮಾಹಿತಿ ಇಲ್ಲಿದೆ. 

ಸೇಲಂ:

  • ಈ ಮಾರ್ಗದಲ್ಲಿ ಸೇಲಂ ರೈಲು ನಿಲ್ದಾಣವಿದೆ. ಸೇಲಂನಿಂದ 2 ಕಿ.ಮೀ. ದೂರವಿರುವ 400 ವರ್ಷ ಇತಿಹಾಸವಿರುವ ರಾಜಗಣಪತಿ ದೇವಾಲಯಕ್ಕೆ ಭೇಟಿ ನೀಡಬಹುದು.

    ADVERTISEMENT
  • ದ್ರಾವಿಡ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿರುವ ಸುಗವನೇಶ್ವರ ದೇವಾಲಯವು ರಾಜಗಣಪತಿ ದೇವಾಲಯದ ಪಕ್ಕದಲ್ಲಿಯೇ ಇದೆ. ಅಲ್ಲೇ ಸಮೀಪವಿರುವ ಸೇಲಂ ಮೃಗಾಲಯಕ್ಕೂ ಭೇಟಿ ನೀಡಬಹುದು.

  • ಸೇಲಂನಿಂದ 30 ಕಿ.ಮೀ. ದೂರದಲ್ಲಿರುವ ಗಿರಿಧಾಮವಾದ ಯೇರ್ಕಾಡ್‌ಗೆ ಭೇಟಿ ನೀಡಬಹುದು. ಇಲ್ಲಿ ಚಾರಣಕ್ಕೂ ಅವಕಾಶವಿದೆ. ಇಲ್ಲಿ ಜಿಂಕೆ ಪಾರ್ಕ್, ಕಿಲ್ಲಿಯೂರ್ ಜಲಪಾತ, ಮತ್ತು ಲೇಡಿ ಸೀಟ್‌ನಂತಹ ಸ್ಥಳಗಳನ್ನು ನೋಡಬಹುದು. 

ಈರೋಡ್: 

ಈರೋಡ್‌ನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳೆಂದರೆ, ಭವಾನಿ ಸಾಗರ್ ಅಣೆಕಟ್ಟು, ಕೋಡಿವೇರಿ ಡ್ಯಾಂ ಮತ್ತು ವೆಲ್ಲೋಡ್‌ ಪಕ್ಷಿಧಾಮಗಳಾಗಿವೆ. ಇವು ಈರೋಡ್ ರೈಲು ನಿಲ್ದಾಣದ ಸಮೀಪದಲ್ಲಿರುವ ಪ್ರವಾಸಿ ತಾಣಗಳಾಗಿವೆ.  

ವಾಣಿ ಸಾಗರ್ ಅಣೆಕಟ್ಟು: ಈರೋಡ್ ಜಂಕ್ಷನ್‌ನಿಂದ ಸುಮಾರು 30 ಕಿ‌.ಮೀ. ದೂರದಲ್ಲಿದೆ. ಕಾವೇರಿ ನದಿಯ ಪ್ರಮುಖ ಉಪನದಿಯಾದ ಭವಾನಿ ನದಿಗೆ ವಾಣಿ ಸಾಗರ್ ಅಣೆಕಟ್ಟನ್ನು ಕಟ್ಟಲಾಗಿದೆ. ಇದು ವಿಶ್ವದ 2 ನೇ ಅತಿದೊಡ್ಡ ಮಣ್ಣಿನಿಂದ ನಿರ್ಮಿಸಿರುವ ಅಣೆಕಟ್ಟಾಗಿದೆ. ದೋಣಿ ವಿಹಾರ, ರೈಲು ಸವಾರಿ, ಉಯ್ಯಾಲೆ ಮತ್ತು ಕೊಲಂಬಸ್ ಸವಾರಿಯ ಜೊತೆಗೆ ಮಕ್ಕಳಿಗೆ ಆಟವಾಡಲು ಉದ್ಯನವಿದೆ.

ಕೋಡಿವೇರಿ ಡ್ಯಾಂ: ಕೊಡಿವೇರಿ ಅಣೆಕಟ್ಟು ತಮಿಳುನಾಡಿನ ಸುಂದರವಾದ ಪ್ರವಾಸಿ ತಾಣವಾಗಿದೆ. ಇಲ್ಲಿನ ಕೃತಕ ಜಲಪಾತದಲ್ಲಿ ಸ್ನಾನ ಮಾಡಬಹುದು. ನೀವು ಇಲ್ಲಿ ಈಜಲು ಹೋಗಬಹುದು. ಇಲ್ಲಿನ ಮೀನು ಸಾರು ಹೆಚ್ಚು ಪ್ರಸಿದ್ದಿ ಪಡೆದಿದೆ. ಈರೋಡ್ ಜಂಕ್ಷನ್‌ನಿಂದ  ಸುಮಾರು 20 ಕಿ.ಮೀ. ದೂರದಲ್ಲಿದೆ.

ವೆಲ್ಲೋಡ್‌ ಪಕ್ಷಿಧಾಮ: ವನ್ಯಜೀವಿಗಳ ಧಾಮಕ್ಕೆ ಭೇಟಿ ನೀಡಲು ಬಯಸಿದರೆ, ವೆಲ್ಲೋಡ್ ಪಕ್ಷಿಧಾಮಕ್ಕೂ ಭೇಟಿ ನೀಡಬಹುದು. ಈ ಪಕ್ಷಿಧಾಮದಲ್ಲಿ ವಿವಿಧ ಪಕ್ಷಿ ಪ್ರಭೇದಗಳಿದ್ದು ಪ್ರವಾಸಿಗರಿಗೆ ಹಾಗೂ ಛಾಯಾಗ್ರಾಹಕರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿ ವೀಕ್ಷಣಾ ಗೋಪುರಗಳಿದ್ದು, ಅರಣ್ಯ ಇಲಾಖೆಯಿಂದ ಬೈನಾಕ್ಯುಲರ್ ಕೂಡಾ ಪಡೆಯಬಹುದು. ಈರೋಡ್ ಜಂಕ್ಷನ್ ಸುಮಾರು 12 ಕಿ.ಮೀ. ದೂರದಲ್ಲಿದೆ. ರೈಲ್ವೆ ನಿಲ್ದಾಣದಿಂದ ಟ್ಯಾಕ್ಸಿ ಅಥವಾ ಬಸ್‌ನಲ್ಲಿ ಪ್ರಯಾಣಿಸಬಹುದು.‌

ತಿರುಪ್ಪೂರು: 

ಅವಿನಾಶಿ ಲಿಂಗೇಶ್ವರರ ದೇವಾಲಯ: ತಿರುಪ್ಪೂರಿನಿಂದ 24 ಕಿ.ಮೀ. ದೂರದಲ್ಲಿದೆ. ಚೋಳ ರಾಜವಂಶಸ್ಥರು 16 ನೇ ಶತಮಾನದಲ್ಲಿ‌ ನಿರ್ಮಿಸಿದ ಶಿವನ ದೇವಾಲಯವಾಗಿದೆ. 7 ಹಂತದ ಭವ್ಯ ಗೋಪುರ, ಬೃಹತ್‌ ನಂದಿ ಹಾಗೂ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. 

ಚೆನ್ನಿಮಲೈ ಮುರುಗನ್ ದೇವಾಲಯ: ತಿರುಪ್ಪೂರಿನಿಂದ 30 ಕಿ.ಮೀ. ದೂರದಲ್ಲಿರುವ ಬೆಟ್ಟದ ತುದಿಯಲ್ಲಿರುವ ಚೆನ್ನಿಮಲೈ ಮುರುಗನ್ ದೇವಾಲಯವಿದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಅದ್ಭುತ ನೋಟವನ್ನು ಇಲ್ಲಿ ಕಣ್‌ತುಂಬಿಕೊಳ್ಳಬಹುದು. 

ನಂಜರಾಯನ ಟ್ಯಾಂಕ್ ಪಕ್ಷಿಧಾಮ: ಇದನ್ನು ಸರ್ಕಾರ್ ಪೆರಿಯಪಾಲಯಂ ಜಲಾಶಯ ಎಂತಲೂ ಕರೆಯುತ್ತಾರೆ. ಸುಂದರವಾದ ಪಕ್ಷಿಧಾಮವಾಗಿದೆ. ತಿರುಪ್ಪೂರದಿಂದ 8 ಕಿ.ಮೀ. ದೂರದಲ್ಲಿದೆ. ಇಲ್ಲಿ ವಿವಿಧ ಪ್ರಾಣಿ ಪಕ್ಷಿಗಳ ಚಲನವಲನಗಳನ್ನು ಗಮನಿಸಿಬಹುದು. 

ತಿರುಮೂರ್ತಿ ಜಲಪಾತ: ತಿರುಪ್ಪೂರದಿಂದ 55 ಕಿ.ಮೀ. ದೂರದಲ್ಲಿ ಅಣ್ಣಾಮಲೈ ಹುಲಿ ಅಭಯಾರಣ್ಯದೊಳಗೆ ಈ ಜಲಪಾತವಿದೆ. ಸುಂದರ ಜಲಪಾತವಾಗಿದ್ದು, ಈಜಲು ಅವಕಾಶವಿದೆ. ಕಾಡಿನ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಜಿಂಕೆ, ನವಿಲುಗಳ ಜೊತೆಯಲ್ಲಿಯೇ ಚಾರಣ ಮಾಡಬಹುದು. ಇಲ್ಲಿನ ಬುಡಕಟ್ಟು ಜನರೊಂದಿಗೆ ಕಾಲ ಕಳೆಯಬಹುದು. 

ಕೊಯಮತ್ತೂರು: 

ಆದಿಯೋಗಿ ಶಿವನ ಪ್ರತಿಮೆ: ಇಲ್ಲಿ ಮಹಾಶಿವನ 112 ಅಡಿ ಎತ್ತರದ ಪ್ರತಿಮೆ ಇದೆ. ಇಲ್ಲಿರುವ ಶಿವನ ಮೂರ್ತಿ ‘ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌‘ನಲ್ಲಿ ಸ್ಥಾನ ಪಡೆದಿದೆ. ಅಲ್ಲದೇ ಇದು ವಿಶ್ವದ ‘ಅತಿದೊಡ್ಡ ಬಸ್ಟ್ ಸ್ಕಲ್ಪ್ಚರ್’ ಎಂಬ ಖ್ಯಾತಿಗೆ ಪಾತ್ರವಾಗಿದೆ. ಕೊಯಮತ್ತೂರು‌ ರೈಲು ನಿಲ್ದಾಣದಿಂದ 30 ಕಿ.ಮೀ. ದೂರದಲ್ಲಿದೆ. ಟ್ಯಾಕ್ಸಿ, ಆಟೋ-ರಿಕ್ಷಾ ಅಥವಾ ಬಸ್‌ನಲ್ಲಿ ಪ್ರಯಾಣ ಮಾಡಬಹುದು. 

ಮಂಕಿ ಫಾಲ್ಸ್: ಜಲಪಾತ ನೋಡಲು ಬಯಸುವವರು ಮಂಕಿ ಫಾಲ್ಸ್‌ಗೆ ಭೇಟಿ ನೀಡಬಹುದು. ಅಣ್ಣಾಮಲೈ ಬೆಟ್ಟಗಳ ಶ್ರೇಣಿಯ ಪೊಲ್ಲಾಚಿ-ವಾಲ್ಪಾರೈ ಮಾರ್ಗದ ಮೇಲಿನ ಕಣಿವೆಯಲ್ಲಿನ ಈ ನೈಸರ್ಗಿಕ ಜಲಪಾತವಾಗಿದೆ. ಕೊಯಮತ್ತೂರು ನಿಲ್ದಾಣದಿಂದ ಕ್ಯಾಬ್‌, ಬಸ್‌ ಮತ್ತು ರಿಕ್ಷಾಗಳಿಂದ ತಲುಪಬಹುದು. 

ಪಾಲಕ್ಕಾಡ್ 

ಮಲಂಪುಳ: ಪಾಲಕ್ಕಾಡ್ ಪಟ್ಟಣದಿಂದ 13 ಕಿ.ಮೀ. ದೂರದಲ್ಲಿದೆ. ಮಲಂಪುಳನ ಉದ್ಯಾನಗಳು, ಮೀನಿನ ಆಕಾರದ ಸಿಹಿನೀರಿನ ಅಕ್ವೇರಿಯಂ, ಹಾವಿನ ಉದ್ಯಾನ, ಮಕ್ಕಳ ಉದ್ಯಾನ, ಜಲಾಶಯ, ಉದ್ಯಾನ ಮನೆ, ಜಪಾನೀಸ್ ಉದ್ಯಾನ, ತೂಗು ಸೇತುವೆ, ಯಕ್ಷಿಯ ಶಿಲ್ಪ, ರೋಪ್‌ವೇ, ರಸ್ತೆ ರೈಲು, ಟೆಲಿಸ್ಕೋಪಿಕ್ ಟವರ್, ರಾಕ್ ಗಾರ್ಡನ್ ಮತ್ತು ಫ್ಯಾಂಟಸಿ ಪಾರ್ಕ್‌ಗಳನ್ನು ನೋಡಬಹುದು. 

ಪಾಲಕ್ಕಾಡ್ ಕೋಟೆ: ನಗರದ ಹೃದಯಭಾಗದಲ್ಲಿರುವ ಈ ಕೋಟೆ ಅದ್ಭುತವಾಗಿದೆ. ವಾಸ್ತುಶಿಲ್ಪದ ಸೌಂದರ್ಯ ಮತ್ತು ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ಪ್ರವಾಸಿಗರಿಗೆ ಆಕರ್ಷಣೆಯಾಗಿದೆ. ಟಿಪ್ಪುವಿನ ಕುದುರೆ ಸೈನ್ಯವು ಬೀಡುಬಿಟ್ಟಿದ್ದ ಸ್ಥಳವೆಂದು ಪ್ರಸಿದ್ಧಿ ಪಡೆದಿದೆ.

ಪರಂಬಿಕುಲಂ ವನ್ಯಜೀವಿ ಅಭಯಾರಣ್ಯ: ಪಾಲಕ್ಕಾಡ್‌ನಿಂದ 125 ಕಿ.ಮೀ. ದೂರದಲ್ಲಿದ್ದು, ಪಶ್ಚಿಮ ಘಟ್ಟದ ತಪ್ಪಲಿನಲ್ಲಿದೆ. ಇಲ್ಲಿನ ಅಣೆಕಟ್ಟು ಮತ್ತು ವನ್ಯಜೀವಿ ಅಭಯಾರಣ್ಯ ಪ್ರಮುಖ ಆಕರ್ಷಣೆಯಾಗಿದೆ. ದೋಣಿ ವಿಹಾರ ಸಹ ಲಭ್ಯವಿದೆ. ಇಲ್ಲಿನ ರಾಷ್ಟ್ರೀಯ ಉದ್ಯಾನಕ್ಕೆ ಪಕ್ಷಿತಜ್ಞ ಸಲೀಂ ಅಲಿ ಅವರ ಹೆಸರನ್ನು ಇಡಲಾಗಿದೆ.

ಇದಲ್ಲದೇ ಚೆಲನ್ನೂರ್ ನವಿಲು ಸಂರಕ್ಷಣಾ ಕೇಂದ್ರ, ಸೀತಾರ್ಕುಂಡು, ಮೀನಕಾರ ಅಣೆಕಟ್ಟು, ಸಿರುವಾನಿ ಅಣೆಕಟ್ಟು, ಮಂಗಳಂ ಅಣೆಕಟ್ಟು ಹಾಗೂ ತುಂಚನ್ ಮಾಡೋಮ್ ಕೇಂದ್ರಗಳಿಗೂ ಭೇಟಿ ನೀಡಬಹುದು. 

ತ್ರಿಶೂರ್‌: 

ತ್ರಿಶೂರ್‌ನ ಪ್ರಮುಖ ಪ್ರವಾಸಿ ತಾಣಗಳಲ್ಲಿ ತ್ರಿಶೂರ್ ಮೃಗಾಲಯ, ವಸ್ತುಸಂಗ್ರಹಾಲಯ, ಮತ್ತು ಅತ್ತಿರಪಲ್ಲಿ ಜಲಪಾತ ಸೇರಿವೆ. ತ್ರಿಶೂರ್ ಮೃಗಾಲಯ ನಗರದ ಮಧ್ಯಭಾಗದಲ್ಲಿದೆ. ಇಲ್ಲಿ ಪ್ರಾಣಿ ಹಾಗೂ ಸಸ್ಯಗಳ ಸಂಗ್ರಹವಿದೆ. ಅತ್ತಿರಪಲ್ಲಿ ಜಲಪಾತ ತ್ರಿಶೂರ್‌ನಿಂದ ಸುಮಾರು 60 ಕಿ.ಮೀ. ದೂರದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.