ಅಹಮದಾಬಾದ್: ನಗರದಿಂದ ಇಂಗ್ಲೆಂಡ್‌ನ ಲಂಡನ್‌ನ ಗ್ಯಾಟ್‌ವಿಕ್‌ಗೆ ಪ್ರಯಾಣ ಆರಂಭಿಸಿದ್ದ ಏರ್ ಇಂಡಿಯಾ ವಿಮಾನ AI–171, ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಪತನಗೊಂಡಿದೆ. ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 242 ಪ್ರಯಾಣಿಕರು ದುರಂತಕ್ಕೀಡಾದ ವಿಮಾನದಲ್ಲಿ ಇದ್ದರು ಎನ್ನಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಲಂಡನ್‌ಗೆ ಹೊರಟಿದ್ದ ಏರ್‌ಇಂಡಿಯಾ ವಿಮಾನವು ಗುಜರಾತ್‌ನ ಅಹಮದಾಬಾದ್‌ನಲ್ಲಿ ಪತನಗೊಂಡಿದ್ದಕ್ಕೆ ಗಣ್ಯರು ಆಘಾತ ವ್ಯಕ್ತಪಡಿಸಿದ್ದಾರೆ.
ಸುಮಾರು 200ಕ್ಕೂ ಅಧಿಕ ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಗುಜರಾತ್‌ನ ಅಹ್ಮದಾಬಾದ್ ನಗರದಲ್ಲಿ ಅಪಘಾತಕ್ಕೀಡಾದ ಸುದ್ದಿ ತಿಳಿದು ಆಘಾತವಾಗಿದೆ. ಇದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಕ್ಷಣವಾಗಿದೆ. ಈ ಅಪಘಾತದಿಂದ ಹೆಚ್ಚಿನ ಹಾನಿಯಾಗದಿರಲಿ, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸೋಣ.– ಸಿದ್ದರಾಮಯ್ಯ, ಕರ್ನಾಟಕ ಮುಖ್ಯಮಂತ್ರಿ
ವರದಿಯಿಂದ ತೀವ್ರ ಆತಂಕಕ್ಕೊಳಗಾಗಿದ್ಧೇನೆ. ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿ ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುತ್ತೇನೆ.– ಹಿಮಂತ್ ಬಿಸ್ವಾ ಶರ್ಮಾ, ಅಸ್ಸಾಂ ಮುಖ್ಯಮಂತ್ರಿ
1950ರಲ್ಲಿ ರೈಲು ಹಳಿತಪ್ಪಿ ದುರಂತ ಸಂಭವಿಸಿತ್ತು. ಅಂದು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಅದೇ ನೈತಿಕತೆಯ ಆಧಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ನಾಗರಿಕ ವಿಮಾನಯಾನ ಸಚಿವ ನಾಯ್ಡು ರಾಜೀನಾಮೆ ಸಲ್ಲಿಸಬೇಕು.– ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತವು ನಮ್ಮನ್ನು ದಿಗ್ಭ್ರಮೆಗೊಳಿಸಿದೆ. ಇದು ಪದಗಳಿಗೆ ಮೀರಿದ ಹೃದಯವಿದ್ರಾವಕ ಘಟನೆಯಾಗಿದೆ. ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವ ಬಗ್ಗೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ.– ನರೇಂದ್ರ ಮೋದಿ, ಪ್ರಧಾನಿ
ಗುಜರಾತ್‌ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.
ವಿಮಾನದಲ್ಲಿ 242 ಜನ ಪ್ರಯಾಣಿಕರಿದ್ದರು. ಇವರಲ್ಲಿ 169 ಜನ ಭಾರತೀಯ ಪ್ರಜೆಗಳು, 53 ಜನ ಬ್ರಿಟಿಷ್ ಪ್ರಜೆಗಳು, ಒಬ್ಬರು ಕೆನಡಾದವರು ಹಾಗೂ 7 ಮಂದಿ ಪೋರ್ಚುಗಲ್ ಪ್ರಜೆಗಳಿದ್ದರು ಎಂದು ಏರ್ ಇಂಡಿಯಾ ಸಂಸ್ಥೆ ಮಾಹಿತಿ ನೀಡಿದೆ.
ನೆರವು ಅಥವಾ ದುರಂತಕ್ಕೆ ಸಂಬಂಧಿಸಿದ ಮಾಹಿತಿಗಾಗಿ ವಿಮಾನ ನಿಲ್ದಾಣ ಅಧಿಕಾರಿಗಳು ತುರ್ತು ಸಹಾಯವಾಣಿ ಆರಂಭಿಸಿದ್ದಾರೆ.
Delhi Control Room: 011-24610843 | 9650391859
Operation Control Room – Ahmedabad: 9978405304 | 079-23251900
ದುರಂತಕ್ಕೀಡಾದ ವಿಮಾನದಲ್ಲಿ 169 ಮಂದಿ ಭಾರತೀಯರು, 53 ಜನ ಬ್ರಿಟಿಷ್ ಪ್ರಜೆಗಳು, ಕೆನಡಾದ ಒಬ್ಬರು ಹಾಗೂ 7 ಮಂದಿ ಪೋರ್ಚುಗಲ್ ಪ್ರಜೆಗಳಿದ್ದರು ಎನ್ನಲಾಗಿದೆ.
ಸ್ಥಳೀಯ ಆಡಳಿತದೊಂದಿಗೆ ನಿಕಟ ಸಂಪರ್ಕದಲ್ಲಿರುವುದಾಗಿ ಬ್ರಿಟಿಷ್ ಹೈಕಮಿಷನ್ ತಿಳಿಸಿದೆ.
ಏರ್ ಇಂಡಿಯಾ ವಿಮಾನ AI-171 ಪತನಗೊಂಡ ಬೆನ್ನಲ್ಲೇ, ಬೋಯಿಂಗ್ ಕಂಪನಿಯ ಷೇರುಗಳು ಶೇ 8ರಷ್ಟು ಕುಸಿತ ಕಂಡಿವೆ.
ನಿಯಮಿತ ವಿಮಾನಗಳ ಪ್ರಯಾಣದೊಂದಿಗೆ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ.
ಏರ್ ಇಂಡಿಯಾ ವಿಮಾನ AI-171 ಅಪಘಾತ ಕುರಿತು ವಿಮಾನ ಅಪಘಾತ ತನಿಖಾ ಸಂಸ್ಥೆ (ಎಎಐಬಿ) ತನಿಖೆ ಆರಂಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಜೀವಂತವಾಗಿ ಯಾರನ್ನೂ ನೋಡಿಲ್ಲ' ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಮಿಲಿಟರಿ ಅಧಿಕಾರಿಗಳು ಆಘಾತ ವ್ಯಕ್ತಪಡಿಸಿದ್ದಾರೆ.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರ ಕುಟುಂಬ ಸದಸ್ಯರು ಅಹಮದಾಬಾದ್ ಆಸ್ಪತ್ರೆಯ ಸಮೀಪ ಜಮಾಯಿಸಿದ್ದಾರೆ.
ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಮೃತಪಟ್ಟಿದ್ದಾರೆ.
ಗುಜರಾತ್‌ನ ಅಹಮದಾಬಾದ್‌ನಿಂದ ಇಂಗ್ಲೆಂಡ್‌ನತ್ತ ಪ್ರಯಾಣ ಹೊರಟ ಏರ್‌ಇಂಡಿಯಾ ವಿಮಾನ AI-171 ಗುರುವಾರ ಮಧ್ಯಾಹ್ನ ಕಟ್ಟಡಕ್ಕೆ ಡಿಕ್ಕಿ ಹೊಡೆದು ಪತನಗೊಂಡಿದೆ. ದುರಂತದಲ್ಲಿ ವಿಮಾನದೊಳಗಿದ್ದವರು ಬದುಕುಳಿದಿಲ್ಲ ಎಂದು ವರದಿಯಾಗಿರುವ ಬೆನ್ನಲ್ಲೇ, ಕಟ್ಟಡದಲ್ಲಿದ್ದ ಐವರು ವೈದ್ಯಕೀಯ ವಿದ್ಯಾರ್ಥಿಗಳೂ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಗುಜರಾತ್‌ನ ಅಹಮದಾಬಾದ್‌ನಲ್ಲಿ ವಿಮಾನ ದುರಂತ ಸಂಭವಿಸಿರುವುದು ಇದೇ ಮೊದಲಲ್ಲ. 37 ವರ್ಷಗಳ ಹಿಂದೆ ಮುಂಬೈನಿಂದ ಪ್ರಯಾಣ ಆರಂಭಿಸಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನವು, ಗುಜರಾತ್ ರಾಜಧಾನಿ (ಗಾಂಧೀ ನಗರ) ವಿಮಾನ ನಿಲ್ದಾಣದ ಸಮೀಪ ಪತನಗೊಂಡಿತ್ತು. ಸಿಬ್ಬಂದಿ ಸೇರಿದಂತೆ ಅದರಲ್ಲಿದ್ದ 135 ಜನರ ಪೈಕಿ 133 ಮಂದಿ ಮೃತಪಟ್ಟಿದ್ದರು.
ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾದ ಎಐ–171 ವಿಮಾನ ಇಂದು (ಗುರುವಾರ) ಪತನಗೊಂಡಿದೆ. ವಿಮಾನದ ತುರ್ತು ನಿರ್ಗಮನ ಬಾಗಿಲು ಬಳಿಯ ಆಸನ ಸಂಖ್ಯೆ 11ಎರಲ್ಲಿ ಕುಳಿತಿದ್ದ ರಾಣಾ ಆನಂದಿಬೆನ್ ಎಂಬಾತ ಬದುಕುಳಿದಿದ್ದಾನೆ ಎಂದು ಅಹಮದಾಬಾದ್ ಪೊಲೀಸ್ ಕಮಿಷನರ್ ಜಿ.ಎಸ್. ಮಲಿಕ್ ತಿಳಿಸಿದ್ದಾರೆ.
ಅಹಮದಾಬಾದ್‌ನ ಸರ್ಧಾರ್ ವಲಭಭಾಯಿ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಪತನಗೊಂಡಿದ್ದು ನಗರದ ಬಿಜೆ ವೈದ್ಯಕೀಯ ಕಾಲೇಜಿನ ವೈದ್ಯರ ವಸತಿ ಸಮುಚ್ಚಯದ ಮೇಲೆ.
ಗುಜರಾತ್‌ನ ಅಹಮದಾಬಾದ್‌ನಲ್ಲಿ ಗುರುವಾರ ಮದ್ಯಾಹ್ನ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ 2 ಗಂಟೆ ಮೊದಲು ಪ್ರಯಾಣಿಸಿದ್ದೆ. ಅಲ್ಲಿನ ಅವ್ಯವಸ್ಥೆಯ ದೃಶ್ಯಗಳನ್ನು ಸೆರೆಹಿಡಿದು ಏರ್ ಇಂಡಿಯಾಗೆ ಕಳುಹಿಸಬೇಕೆಂದಿದ್ದೆ. ಅಷ್ಟರಲ್ಲೇ ಈ ದುರ್ಘಟನೆ ನಡೆದಿದೆ ಎಂದು ಪ್ರಯಾಣಿಕರೊಬ್ಬರು ಆಘಾತ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.