
ಸುಪ್ರಿಯಾ ಸುಳೆ ಮತ್ತು ರೋಹಿತ್ ಪವಾರ್
ಮುಂಬೈ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಉಪ ಮುಖ್ಯಮಂತ್ರಿ, ಎನ್‌ಸಿಪಿ ಅಧ್ಯಕ್ಷ ಅಜಿತ್ ಪವಾರ್ ಅವರು ಮೃತಪಟ್ಟು ಇಂದಿಗೆ 22 ದಿನಗಳು ಕಳೆದಿವೆ. ಆದಾಗ್ಯೂ, ಹಲವರು ಅಜಿತ್ ಸಾವಿನ ಕುರಿತು ಕಳವಳ, ಅನುಮಾನಗಳು ವ್ಯಕ್ತಪಡಿಸುತ್ತಲೇ ಇದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಅಜಿತ್ ಅವರ ಸಹೋದರಿ, ಸಂಸದೆ ಸುಪ್ರಿಯಾ ಸುಳೆ ಅವರು (ಎನ್‌ಸಿಪಿ ಶರದ್ ಪವಾರ್ ಬಣ) ತಮ್ಮ ಪಕ್ಷದ ಶಾಸಕ ರೋಹಿತ್ ಪವಾರ್ ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನೇತೃತ್ವದ ಸರ್ಕಾರವನ್ನು ಒತ್ತಾಯಿಸಿದ್ದಾರೆ.
‘ಅಜಿತ್ ದಾದಾ’ ನಿಧನದ ನಂತರ ಮಹಾರಾಷ್ಟ್ರ ಆಘಾತಕ್ಕೊಳಗಾಗಿದೆ. ದುರಂತದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳು ಎದ್ದಿವೆ. ಸಾರ್ವಜನಿಕರ ಭಾವನೆ ಬಹಳ ಪ್ರಬಲವಾಗಿದ್ದು, ಜಗತ್ತು ಇನ್ನೂ ಶೋಕಾಚರಣೆಯಲ್ಲಿದೆ. ರೋಹಿತ್ ಪವಾರ್ ಅವರು ಸಾರ್ವಜನಿಕ ಭಾವನೆಗಳನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಸತ್ಯ ಮತ್ತು ಪ್ರಶ್ನೆಗಳನ್ನು ಮುಂದಿಡುತ್ತಿದ್ದಾರೆ. ಜನರು ಅಧಿಕಾರಿಗಳಿಂದ ಸ್ಪಷ್ಟ ಉತ್ತರವನ್ನು ಬಯಸುತ್ತಿದ್ದಾರೆ ಎಂದು ಸುಪ್ರಿಯಾ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಅಧಿಕಾರಿಗಳು ಉತ್ತರ ನೀಡುವಲ್ಲಿ ವಿಳಂಬ ಮಾಡಿದರೆ, ಜನರ ಅಸಮಾಧಾನ ಇನ್ನಷ್ಟು ಹೆಚ್ಚಾಗುತ್ತದೆ. ಇದು ಉಲ್ಬಣಗೊಳ್ಳದಂತೆ ತಡೆಯಲು, ಘಟನೆಯ ಸತ್ಯಾಸತ್ಯತೆಯನ್ನು ಪಾರದರ್ಶಕ ರೀತಿಯಲ್ಲಿ ಜನರಿಗೆ ತಿಳಿಸುವುದು ಅತ್ಯಗತ್ಯ’ ಎಂದೂ ಅವರು ಹೇಳಿದ್ದಾರೆ.
‘ವ್ಯವಸ್ಥೆಯನ್ನು ಪ್ರಶ್ನಿಸುವುದು ದೇಶದ ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕು. ರೋಹಿತ್ ಪವಾರ್ ಜನರ ಮನಸ್ಸಿನಲ್ಲಿರುವ ಅನುಮಾನ ಮತ್ತು ಕಳವಳವನ್ನು ಅಧಿಕಾರಿಗಳ ಮುಂದೆ ವ್ಯಕ್ತಪಡಿಸುತ್ತಿದ್ದಾರೆ. ರೋಹಿತ್‌ಗೆ ಸೂಕ್ತ ಭದ್ರತೆ ಒದಗಿಸುವುದು ಅತ್ಯಂತ ಮುಖ್ಯ. ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕು’ ಎಂದಿದ್ದಾರೆ.
ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರೋಹಿತ್ ಪವಾರ್ ಅವರು ಸುಪ್ರಿಯಾ ಮತ್ತು ದಿವಂಗತ ಅಜಿತ್ ಪವಾರ್ ಅವರ ಸೋದರಳಿ. ರೋಹಿತ್ ಇತ್ತೀಚೆಗೆ ಎರಡು ಬಾರಿ ಪತ್ರಿಕಾಗೋಷ್ಠಿ ನಡೆಸಿ, ಅಜಿತ್ ಪವಾರ್ ವಿಮಾನ ದುರಂತವು ‘ಪಿತೂರಿ’ಯ ಭಾಗವಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು.
ಜನವರಿ 28ರಂದು ಮಹರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದ ವಿಮಾನ ದುರಂತದಲ್ಲಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಮೃತಪಟ್ಟಿದ್ದರು. ವಿಮಾನ ದುರಂತದ ತನಿಖೆ ಪೂರ್ಣಗೊಳ್ಳುವವರೆಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕೆಂದು ರೋಹಿತ್ ಒತ್ತಾಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.