ವಿಜಯನಗರ (ಆಂಧ್ರಪ್ರದೇಶ): ಹೈದರಾಬಾದ್ ಮತ್ತು ದೇಶದ ಇತರ ಭಾಗಗಳಲ್ಲಿ ಬಾಂಬ್ ದಾಳಿಗೆ ಸಂಚು ರೂಪಿಸಿದ್ದ ಶಂಕೆಯ ಮೇಲೆ ಬಂಧನಕ್ಕೊಳಗಾಗಿರುವ ಇಬ್ಬರು ಭಯೋತ್ಪಾದಕರನ್ನು ನ್ಯಾಯಾಲಯವು 7 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣ ಪೊಲೀಸರು ಈಚೆಗೆ ಜಂಟಿ ಕಾರ್ಯಾಚರಣೆ ನಡೆಸಿ ಹೈದರಾಬಾದ್‌ನ ವಾರಸಿಗುಡದ ಸೈಯದ್ ಸಮೀರ್ (28) ಮತ್ತು ವಿಜಯನಗರದ ಸಿರಾಜ್–ಉರ್–ರೆಹಮಾನ್‌ನನ್ನು (29) ಬಂಧಿಸಿದ್ದರು.
ನ್ಯಾಯಾಲಯವು ರೆಹಮಾನ್ ಮತ್ತು ಸಮೀರ್‌ರನ್ನು 7 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಪ್ರಸ್ತುತ ಇವರಿಬ್ಬರನ್ನು ವಿಶಾಖಪಟ್ಟಣದ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ ಎಂದು ವಿಜಯನಗರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸೌಮ್ಯ ಲತಾ ಮಾಹಿತಿ ನೀಡಿದ್ದಾರೆ.
ಗೃಹ ಸಚಿವಾಲಯದಿಂದ ನಮಗೆ ಆದೇಶ ಬಂದರೆ, ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಾಗುವುದು. ಅಲ್ಲಿಯವರೆಗೆ, ಪೊಲೀಸರು ಕಸ್ಟಡಿಯಲ್ಲಿ ಅವರನ್ನು ವಿಚಾರಣೆ ನಡೆಸಲಾಗುತ್ತದೆ ಎಂದು ಸೌಮ್ಯ ಲತಾ ತಿಳಿಸಿದ್ದಾರೆ.
ರೆಹಮಾನ್ ಮತ್ತು ಸಮೀರ್ ಸೌದಿ ಅರೇಬಿಯಾ ಮೂಲದ ಇಸ್ಲಾಮಿಕ್ ಸ್ಟೇಟ್ ನಿರ್ವಾಹಕರಿಂದ ನಿರ್ದೇಶನಗಳನ್ನು ಪಡೆಯುತ್ತಿದ್ದರು ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ.
ಹೈದರಾಬಾದ್‌ನಲ್ಲಿ ಸ್ಫೋಟಕವನ್ನು ಇಡುವ ಯೋಜನೆ ಹೊಂದಿದ್ದ ಶಂಕಿತರು, ಅಮೋನಿಯಂ ಸಲ್ಫೇಟ್ ಮತ್ತು ಅಲ್ಯೂಮಿನಿಯಂ ಪೌಡರ್ ಸೇರಿದಂತೆ ಬಾಂಬ್ ತಯಾರಿಕೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿ ಮಾಡಿದ್ದರು. ಕಚ್ಚಾ ಬಾಂಬ್ ಪರೀಕ್ಷೆಗಾಗಿ ಸ್ಥಳವನ್ನೂ ಆಯ್ಕೆ ಮಾಡಿಕೊಂಡಿದ್ದರು ಎಂಬುದಾಗಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿರಾಜ್‌ನ ತಂದೆ ಮತ್ತು ಸಹೋದರ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿ.ಟೆಕ್ ಪೂರ್ಣಗೊಳಿಸಿರುವ ಸಿರಾಜ್ ಹೈದರಾಬಾದ್‌ನ ಹಲವೆಡೆ ಕೆಲಸ ಮಾಡುತ್ತಿದ್ದ. ಬಾಂಬ್ ತಯಾರಿಕೆಗೆ ಅಗತ್ಯವಿರುವ ವಸ್ತುಗಳನ್ನು ಆನ್‌ಲೈನ್ ಮೂಲಕ ತರಿಸಿಕೊಳ್ಳುತ್ತಿದ್ದ ಎಂಬುದನ್ನು ಸಾಕ್ಷ್ಯಗಳು ದೃಢಪಡಿಸಿವೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.