ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿ
–ಪಿಟಿಐ ಚಿತ್ರ
ನವದೆಹಲಿ: ಕೇರಳದ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಂದು (ಶುಕ್ರವಾರ) ಲೋಕಸಭೆಯಲ್ಲಿ ಮೊದಲ ಬಾರಿಗೆ ಭಾಷಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ತಮ್ಮ ಚೊಚ್ಚಲ ಭಾಷಣದಲ್ಲಿ ಉದ್ಯಮಿ ಗೌತಮ್ ಅದಾನಿ ಲಂಚ ಹಗರಣ, ಮಣಿಪುರ ಗಲಭೆ ಮತ್ತು ಸಂಭಲ್ ಹಿಂಸಾಚಾರದ ಬಗ್ಗೆ ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರಿಯಾಂಕಾ ವಾಗ್ದಾಳಿ ನಡೆಸಿದ್ದಾರೆ.
ಪ್ರಿಯಾಂಕಾ ಭಾಷಣ ಕುರಿತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ಸೇರಿದಂತೆ ‘ಇಂಡಿಯಾ’ ಮೈತ್ರಿಕೂಟದ ಹಲವು ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಅದ್ಭುತ ಭಾಷಣ... ನನ್ನ ಚೊಚ್ಚಲ ಭಾಷಣಕ್ಕಿಂತ ಉತ್ತಮವಾಗಿದೆ. ಅದನ್ನು ಹಾಗೆ ಮುಂದುವರಿಸೋಣ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರ ಚೊಚ್ಚಲ ಭಾಷಣ ‘ಅತ್ಯುತ್ತಮ’ವಾಗಿತ್ತು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
‘ಉತ್ತಮ ಭಾಷಣ... ತುಂಬಾ ಚೆನ್ನಾಗಿದೆ. ಅವರು ಎಲ್ಲಾ ಸಂಗತಿಗಳನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ. ಸಂವಿಧಾನವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ದೇಶದ ಮಹಿಳೆಯರು ಮತ್ತು ಜನರ ರಕ್ಷಣೆ ಬಗ್ಗೆ ಮೊದಲ ಭಾಷಣದಲ್ಲಿಯೇ ಪ್ರಸ್ತಾಪಿಸಿದ್ದಾರೆ. ಅವರ ಕಾರ್ಯವೈಖರಿ ಬಗ್ಗೆ ನಮಗೆ ತುಂಬಾ ಸಂತೋಷವಾಗಿದೆ’ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
‘ಇದು ಒಳ್ಳೆಯ ಚೊಚ್ಚಲ ಭಾಷಣ ಎಂದು ನಾನು ಭಾವಿಸುತ್ತೇನೆ. ಅವರು ಮೊದಲ ಬಾರಿಗೆ ಸಂಸದರಂತೆ ಮಾತನಾಡಲಿಲ್ಲ. ಅವರು ಪ್ರಬುದ್ಧತೆ ಮತ್ತು ಬುದ್ಧಿವಂತಿಕೆಯಿಂದ ಮಾತನಾಡಿದ್ದಾರೆ. ಪ್ರಿಯಾಂಕಾ ಭಾಷಣದಿಂದ ನಾನು ತುಂಬಾ ಪ್ರಭಾವಿತನಾಗಿದ್ದೆ. ಎಲ್ಲಾ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಕೊಂಡಾಡಿದ್ದಾರೆ.
‘ಪ್ರಿಯಾಂಕಾ ಗಾಂಧಿ ಅವರ ಸ್ಕ್ರಿಪ್ಟ್ ತುಂಬಾ ದುರ್ಬಲವಾಗಿತ್ತು. ಅದರಲ್ಲಿ ಸಾಕಷ್ಟು ದೋಷಗಳಿವೆ. ಸತ್ಯವನ್ನು ಸತ್ಯ ಎಂದು ಬೆಂಬಲಿಸದಿದ್ದಾಗ, ಈ ರೀತಿಯ ಪರಿಸ್ಥಿತಿ ಉದ್ಭವಿಸುತ್ತದೆ. ಮೊದಲ ಬಾರಿಗೆ ಸಂಸತ್ತಿನಲ್ಲಿ ಮಾತನಾಡಿದ ಅವರಿಗೆ (ಪ್ರಿಯಾಂಕಾ) ಶುಭ ಹಾರೈಸುತ್ತೇನೆ. ನಾಳೆ ಎಲ್ಲಾ ವಿರೋಧ ಪಕ್ಷದ ನಾಯಕರಿಗೆ ಪ್ರಧಾನಿ ಮೋದಿ ಉತ್ತರ ನೀಡಲಿದ್ದಾರೆ’ ಎಂದು ಬಿಜೆಪಿ ಸಂಸದ ರವಿ ಕಿಶನ್ ತಿರುಗೇಟು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.