ADVERTISEMENT

Bihar Polls 2025 | ಎನ್‌ಡಿಎ ಸೀಟು ಹಂಚಿಕೆ ಅಂತಿಮ: ಬಿಜೆಪಿ–ಜೆಡಿಯು ಸಮ–ಸಮ!

ಪಿಟಿಐ
Published 12 ಅಕ್ಟೋಬರ್ 2025, 13:53 IST
Last Updated 12 ಅಕ್ಟೋಬರ್ 2025, 13:53 IST
<div class="paragraphs"><p>ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್</p></div>

ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್

   

–ಪಿಟಿಐ ಚಿತ್ರ

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಎನ್‌ಡಿಎ ಭಾನುವಾರ ಅಂತಿಮಗೊಳಿಸಿದೆ. 243 ಸ್ಥಾನಗಳ ಪೈಕಿ ತಲಾ 101 ಸ್ಥಾನಗಳಲ್ಲಿ ಬಿಜೆಪಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್‌ ಅವರ ಜೆಡಿಯು ಸ್ಪರ್ಧಿಸಲಿವೆ. ಇನ್ನುಳಿದ ಸ್ಥಾನಗಳನ್ನು ಇತರೆ ಸಣ್ಣ ಮೈತ್ರಿ ಪಕ್ಷಗಳಿಗೆ ಹಂಚಿಕೆ ಮಾಡಲಾಗಿದೆ. 

ADVERTISEMENT

ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮಗೊಂಡಿರುವುದನ್ನು ಜೆಡಿಯು ಕಾರ್ಯಾಧ್ಯಕ್ಷ ಸಂಜಯ್‌ ಕುಮಾರ್‌ ಝಾ, ಬಿಜೆಪಿ ಮುಖಂಡ ಸಾಮ್ರಾಟ್‌ ಚೌಧರಿ ಎಕ್ಸ್‌ ಪೋಸ್ಟ್‌ನಲ್ಲಿ ಖಚಿತಪಡಿಸಿದ್ದಾರೆ. ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌ ಅವರ ಲೋಕ ಜನಶಕ್ತಿ ಪಕ್ಷವು (ರಾಮ್‌ ವಿಲಾಸ್‌) 29 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.  

ಕನಿಷ್ಠ 15 ಸ್ಥಾನಗಳಾದರೂ ಬೇಕು ಎಂದು ಪಟ್ಟು ಹಿಡಿದಿದ್ದ, ಕೇಂದ್ರ ಸಚಿವ ಜಿತನ್‌ ರಾಮ್‌ ಮಾಂಝಿ ಅವರ ಎಚ್‌ಎಎಂ ಪಕ್ಷಕ್ಕೆ 6 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. ರಾಜ್ಯಸಭಾ ಸದಸ್ಯ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ಪಕ್ಷವು  6 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

ನಾಲ್ವರು ಹಾಲಿ ಶಾಸಕರ ಕೈಬಿಟ್ಟ ಜೆಡಿಯು: ಜಿಡಿಯುಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ್ದು, ನಾಲ್ವರು ಹಾಲಿ ಶಾಸಕರನ್ನು ಕೈಬಿಡಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.

‘ಆಯಾ ಕ್ಷೇತ್ರಗಳ ಮತದಾರರ ಅಭಿಪ್ರಾಯವನ್ನು ಸಂಗ್ರಹಿಸಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  

ಸೀಟು ಹಂಚಿಕೆಯಲ್ಲಿ ಗೊಂದಲ ಇಲ್ಲ’

ರಾಂಚಿ:‘ಬಿಹಾರದಲ್ಲಿ ಸೀಟು ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಮಹಾಘಟಬಂಧನ್‌ ಒಟ್ಟಾಗಿ ಚುನಾವಣೆ ಎದುರಿಸಲಿದೆ’ ಎಂದು ಕಾಂಗ್ರೆಸ್‌ ಮುಖಂಡ ಪವನ್‌ ಖೇರಾ ಹೇಳಿದ್ದಾರೆ. 

‘ಇಂಡಿಯಾ ಕೂಟವು ಅಕ್ಟೋಬರ್‌ 14ರ ಒಳಗೆ ಬಿಹಾರ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪಕ್ಷವು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ಜಾರ್ಖಂಡ್‌ ಮುಕ್ತಿ ಮೋರ್ಚಾದ (ಜೆಎಂಎಂ) ಪ್ರಧಾನ ಕಾರ್ಯದರ್ಶಿ ಸುಪ್ರಿಯೊ ಭಟ್ಟಾಚಾರ್ಯ ಶನಿವಾರ ಹೇಳಿದ್ದರು. ಇದರ ಬೆನ್ನಲ್ಲೇ ಪವನ್‌ ಖೇರಾ ಅವರ ಹೇಳಿಕೆ ಹೊರಬಿದ್ದಿದೆ.

‘ಸೀಟು ಹಂಚಿಕೆಯಲ್ಲಿ ಗೌರವಯುತ ಸಂಖ್ಯೆ ಸಿಗದಿದ್ದಲ್ಲಿ, ಪಕ್ಷವು ತನ್ನದೇ ಆದ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ಜೆಎಂಎಂ ಎಚ್ಚರಿಸಿದೆ. ಇಂಡಿಯಾ ಕೂಟದ ಮೈತ್ರಿಯಲ್ಲಿ ಕನಿಷ್ಠ 12 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಫರ್ಧಿಸುವ ಉದ್ದೇಶವನ್ನು ಜೆಎಂಎಂ ಹೊಂದಿದೆ.   

‘ಬಿಹಾರ ಚುನಾವಣೆಗೂ ಮುನ್ನ ನಡೆಯಲಿರುವ ‘ಮತ ಕಳ್ಳರೇ ಗದ್ದುಗೆ ತೊರೆಯಿರಿ’ ಅಭಿಯಾನವು ಪ್ರಜಾಪ್ರಭುತ್ವವನ್ನು ಉಳಿಸಲಿದೆ’ ಎಂದು ಪವನ್‌ ಖೇರಾ ಹೇಳಿದ್ದಾರೆ.

ದೆಹಲಿಗೆ ಲಾಲು ದೌಡು

ಬಿಹಾರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಇಂಡಿಯಾ ಕೂಟದ ಸೀಟು ಹಂಚಿಕೆ ಗೊಂದಲ ಇನ್ನಷ್ಟು ದಿನ ಮುಂದುವರಿಯುವ ಲಕ್ಷ್ಮಣಗಳು ಕಾಣುತ್ತಿವೆ. ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ತಮ್ಮ ಪುತ್ರ ಮತ್ತು ಉತ್ತರಾಧಿಕಾರಿ ತೇಜಸ್ವಿ ಯಾದವ್‌ ಮತ್ತು ಪತ್ನಿ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರೊಂದಿಗೆ ಭಾನುವಾರ ದೆಹಲಿಗೆ ಧಾವಿಸಿದ್ದಾರೆ. 

‘ಉದ್ಯೋಗಕ್ಕಾಗಿ ಜಮೀನು ಹಗರಣ’ದ ವಿಚಾರಣೆ ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ. ಇದರ ಜತೆಗೆ ಲಾಲು ಅವರು ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ಮುಖಂಡರನ್ನು ಭೇಟಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ’ ಎಂದು ಮೂಲಗಳು ತಿಳಿಸಿವೆ. 

ಆರ್‌ಜೆಡಿ ಕಾಂಗ್ರೆಸ್‌ ಮತ್ತು ಎಡ ಪಕ್ಷಗಳ ಮೈತ್ರಿಯಾದ ‘ಮಹಾಘಟಬಂಧನ್‌’ನಲ್ಲಿ ಸೀಟು ಹಂಚಿಕೆ ಮತ್ತು ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಲಾಲು ಪ್ರಸಾದ್ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.  ದೆಹಲಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ಲಾಲು ಮತ್ತು ರಾಬ್ಡಿ ದೇವಿ ನಿರಾಕರಿಸಿದರು.

ಆದರೆ ತೇಜಸ್ವಿ ಯಾದವ್‌ ‘ಎಲ್ಲವೂ ಚೆನ್ನಾಗಿದೆ’ ಎಂದಷ್ಟೇ ಚುಟುಕಾಗಿ ಉತ್ತರಿಸಿದರು.   ಬಿಹಾರ ವಿಧಾನಸಭೆ ಚುನಾವಣೆಯು ನವೆಂಬರ್‌ 6 ಮತ್ತು 11ರಂದು ನಡೆಯಲಿದೆ. ನವೆಂಬರ್‌ 14ರಂದು ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.