
ರಾಹುಲ್ ಗಾಂಧಿ- ನಿತೀಶ್ ಕುಮಾರ್
ನವದೆಹಲಿ: ಮೋದಿ–ನಿತೀಶ್ ನೇತೃತ್ವದ ಸರ್ಕಾರ ಬಿಹಾರ ಯುವ ಜನರ ಆಕಾಂಕ್ಷೆಗಳನ್ನು ಕತ್ತು ಹಿಸುಕಿ ಕೊಂದಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಬಿಹಾರದ ಅಭಿವೃದ್ಧಿಯನ್ನು ಡಬಲ್ ಎಂಜಿನ್ ಸರ್ಕಾರ ಪ್ರಪಾತಕ್ಕೆ ತಳ್ಳಿದೆ ಎಂದು ಕಿಡಿಕಾರಿದ್ದಾರೆ.
ಇತ್ತೀಚೆಗೆ ಬಿಹಾರದ ಯುವ ಜನರ ಜತೆ ನಡೆಸಿದ ಸಂವಾದದ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ರಾಹುಲ್, ಇಲ್ಲಿನ ಯುವಕರು ಪ್ರತಿಭಾನ್ವಿತರು ಹಾಗೂ ಬುದ್ಧಿವಂತರು. ಅವರ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮದಿಂದ ಅವರು ಯಾವ ಕ್ಷೇತ್ರದಲ್ಲಾದರೂ ಮಿಂಚಬಹುದು. ಆದರೆ ಅವರಿಗೆ ಅವಕಾಶಗಳು ಸಿಗುತ್ತಿಲ್ಲ. ನಿರುದ್ಯೋಗದಿಂದಾಗಿ ಅವರು ಹತಾಶೆಗೆ ಒಳಾಗಾಗಿದ್ದಾರೆ ಎಂದು ತಿಳಿಸಿದ್ದಾರೆ.
9 ರಿಂದ 10ನೇ ತರಗತಿಗಳಲ್ಲಿ ಶಾಲೆ ಬಿಡುವ ಪ್ರಮಾಣದಲ್ಲಿ 29 ರಾಜ್ಯಗಳ ಪೈಕಿ ಬಿಹಾರ 27ನೇ ಸ್ಥಾನದಲ್ಲಿದೆ. 11 ಮತ್ತು 12ನೇ ತರಗತಿಗಳಿಗೆ ದಾಖಲಾಗುವ ಪ್ರಮಾಣ 28 ನೇ ಸ್ಥಾನದಲ್ಲಿದೆ. ಮಹಿಳಾ ಸಾಕ್ಷರತೆಯಲ್ಲಿ 28ನೇ ಸ್ಥಾನದಲ್ಲಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಬಿಹಾರ 27ನೇ ಸ್ಥಾನದಲ್ಲಿದೆ ಮತ್ತು ತಲಾ ಆದಾಯದಲ್ಲಿ 25ನೇ ಸ್ಥಾನದಲ್ಲಿದೆ ಎಂದು ರಾಹುಲ್ ಮಾಹಿತಿ ನೀಡಿದ್ದಾರೆ.
ಇದು ಸಂಖ್ಯೆಗಳಲ್ಲ, ಡಬಲ್ ಎಂಜಿನ್ ಸರ್ಕಾರದಲ್ಲಿ ಬಿಹಾರದ ಅಭಿವೃದ್ಧಿ ಎಷ್ಟಿದೆ ಎಂಬುವುದರ ಕೈಗನ್ನಡಿ. ರಾಜ್ಯದಲ್ಲಿ ಮತ್ತೆ ಅಭಿವೃದ್ಧಿಯ ದೀಪ ಬೆಳಗಲು ಮಹಾಘಟಬಂಧನ್ ಅಧಿಕಾರಕ್ಕೆ ಬರಲು ಇದು ಸೂಕ್ತ ಸಮಯ ಎಂದು ರಾಹುಲ್ ಹೇಳಿದ್ದಾರೆ.
243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು ನವೆಂಬರ್ 11ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14ರಂದು ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.