
ನರೇಂದ್ರ ಮೋದಿ
ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಗುರುವಾರ) ನಡೆಯುತ್ತಿದ್ದು, ಮತದಾರರು ಉತ್ಸಾಹದಿಂದ ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.
‘ಬಿಹಾರದಲ್ಲಿ ಇಂದು ಪ್ರಜಾಪ್ರಭುತ್ವ ಹಬ್ಬದ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಈ ಹಂತದಲ್ಲಿ ಎಲ್ಲಾ ಮತದಾರರು ಉತ್ಸಾಹದಿಂದ ಮತ ಚಲಾಯಿಸುವಂತೆ ನಾನು ಕೋರುತ್ತೇನೆ. ಜತೆಗೆ, ಮೊದಲ ಬಾರಿಗೆ ಮತ ಚಲಾಯಿಸಲಿರುವ ರಾಜ್ಯದ ನನ್ನ ಎಲ್ಲಾ ಯುವ ಸ್ನೇಹಿತರಿಗೆ ನನ್ನ ವಿಶೇಷ ಶುಭಾಶಯಗಳು’ ಎಂದು ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜ್ಯದ 243 ಕ್ಷೇತ್ರಗಳ ಪೈಕಿ 121 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಈ ಹಂತದಲ್ಲಿ 1,314 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಆರ್‌ಜೆಡಿ ನಾಯಕ ಮತ್ತು ‘ಇಂಡಿಯಾ’ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್, ಬಿಹಾರದ ಉಪ ಮುಖ್ಯಮಂತ್ರಿಗಳಾದ ಬಿಜೆಪಿಯ ಸಾಮ್ರಾಟ್ ಚೌಧರಿ, ವಿಜಯ್ ಕುಮಾರ್ ಸಿನ್ಹಾ ಅವರು ಈ ಹಂತದಲ್ಲಿ ಕಣದಲ್ಲಿರುವ ಪ್ರಮುಖರು.
ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಮತದಾನ ನಡೆಯಲಿದೆ. ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.