ADVERTISEMENT

ಪುಲ್ವಾಮ ಉಗ್ರ ದಾಳಿ ನಂತರ ಬಿಜೆಪಿ 'ರಾಜಕೀಯ ನಡೆ' ಹೀಗಿತ್ತು!

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 18:15 IST
Last Updated 20 ಫೆಬ್ರುವರಿ 2019, 18:15 IST
   

ಬೆಂಗಳೂರು: ಫೆಬ್ರುವರಿ 14, ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಭಾರತದ ಸಿಆರ್‌ಪಿಎಫ್‍ನ 40ಯೋಧರು ಹುತಾತ್ಮರಾದರು. ದೇಶಕ್ಕೆ ದೇಶವನ್ನೇ ನಡುಗಿಸಿದ ಆತ್ಮಾಹುತಿ ಬಾಂಬ್ ದಾಳಿಯಾಗಿತ್ತು.ಈ ದಾಳಿಗೆ ಭಾರತದ ಭದ್ರತಾ ವೈಫಲ್ಯ ಕಾರಣ ಎಂದು ಒಂದೆಡೆ ದನಿಯೆದ್ದಾಗ, ಎಲ್ಲ ಪಕ್ಷಗಳು ಈ ಹೊತ್ತಲ್ಲಿ ಕೇಂದ್ರ ಸರ್ಕಾರದ ಪರವಾಗಿ ನಿಲ್ಲಬೇಕು.ಎಲ್ಲರೂ ಜತೆಯಾಗಿ ನಿಂತು ಭಯೋತ್ಪಾದನೆಯನ್ನು ಎದುರಿಸೋಣ ಎಂದು ವಿಪಕ್ಷಗಳು ಕರೆ ನೀಡಿದ್ದವು. ಪುಲ್ವಾಮ ದಾಳಿ ನಡೆದು ಒಂದು ವಾರವಾಗಿದೆ.ಈ ಹೊತ್ತಲ್ಲಿ ಬಿಜೆಪಿ ರಾಷ್ಟ್ರಪ್ರೇಮ ಮತ್ತುಭದ್ರತಾ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಂಡಿದೆ.

ದೇಶದ ಜನರು ಪಾಕ್ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರವನ್ನು ಒತ್ತಾಯಿಸುತ್ತಿರುವ ಈ ಹೊತ್ತಲ್ಲಿ ಬಿಜೆಪಿಯ ರಾಜಕೀಯ ನಡೆ ಬಗ್ಗೆ ಸ್ಕ್ರಾಲ್ ಡಾಟ್ ಇನ್ ವರದಿ ಮಾಡಿದೆ.

ಇದು ರಾಜಕೀಯ ನಡೆ
ಕಾಶ್ಮೀರದ ಹೆದ್ದಾರಿಯಲ್ಲಿ ಸ್ಫೋಟಕ ತುಂಬಿದ ಕಾರು ಬಂದು ಭಾರತೀಯ ಯೋಧರ ಮೇಲೆ ಆತ್ಮಾಹುತಿ ದಾಳಿ ಮಾಡಿರುವುದು ಭದ್ರತಾ ವೈಫಲ್ಯವನ್ನು ಸೂಚಿಸುತ್ತದೆ ಎಂದು ಪುಲ್ವಾಮ ದಾಳಿ ನಡೆದ ಮರುದಿನವೇ ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದರು.ಇತ್ತ ಬಿಜೆಪಿ, ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರ ಅಂತ್ಯ ಸಂಸ್ಕಾರ ಮುಗಿಯುವರೆಗೆ ಈಗಾಗಲೇ ನಿಗದಿಯಾಗಿದ್ದ ಎಲ್ಲ ರಾಜಕೀಯ ಚಟುವಟಿಕೆಗಳನ್ನು ರದ್ದು ಮಾಡುವುದಾಗಿ ಘೋಷಿಸಿತ್ತು.ಅದೇ ವೇಳೆ ಪಕ್ಷದ ನಾಯಕರು ಯುದ್ಧದ ಕರೆ ನೀಡುವುದಾಗಲೀ ದಾಳಿ ಬಗ್ಗೆ ರಾಜಕೀಯ ಹೇಳಿಕೆ ನೀಡುವುದನ್ನಾಗಲೀ ಮಾಡಬಾರದು.ಇದರ ಬದಲು ಹುತಾತ್ಮರ ಕುಟುಂಬದವರ ದುಃಖದಲ್ಲಿ ಭಾಗಿಯಾಗಿ. ಇಂಥಾ ಸಮಯದಲ್ಲಿ ತುಂಬಾ ಸಂಯಮದಿಂದ ವರ್ತಿಸಬೇಕು ಎಂದು ಬಿಜೆಪಿ ಹೇಳಿತ್ತು.

ಏತನ್ಮಧ್ಯೆ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಒಡಿಶಾ ಮತ್ತು ಚತ್ತೀಸ್‍ಗಢದಲ್ಲಿ ಶುಕ್ರವಾರ ನಿಗದಿಯಾಗಿದ್ದ ರ್‍ಯಾಲಿಯನ್ನು ರದ್ದು ಮಾಡಿದ್ದರು.ಪ್ರಧಾನಿ ನರೇಂದ್ರ ಮೋದಿಮಧ್ಯ ಪ್ರದೇಶದಇತಾರ್ಸಿಯಲ್ಲಿ ನಿಗದಿಯಾಗಿದ್ದ ರ್‍ಯಾಲಿಯನ್ನು ರದ್ದು ಮಾಡಿ ಅದೇ ದಿನ ಝಾನ್ಸಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದ್ದರು.ಈ ಸಭೆಯಲ್ಲಿ ಮಾತನಾಡಿದ ಮೋದಿ ಕೇಂದ್ರದಲ್ಲಿ ಬಲಿಷ್ಠ ಸರ್ಕಾರಕ್ಕಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಮತದಾರರಿಗೆ ಕರೆ ನೀಡಿದ್ದರು.

ADVERTISEMENT

ಮರುದಿನ ಶನಿವಾರ ಅಂದರೆ ಫೆಬ್ರುವರಿ 16ರಂದು ಮೋದಿಯವರು ಮಹಾರಾಷ್ಟ್ರದಲ್ಲಿ ಪಕ್ಷದ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಇದರಲ್ಲಿ ಮೋದಿ ತಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮತ್ತು ಪುಲ್ವಾಮ ದಾಳಿ ಬಗ್ಗೆ ಮಾತನಾಡಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಪುಲ್ವಾಮ ದಾಳಿಗೆ ತಕ್ಕ ಉತ್ತರ ನೀಡುವುದಾಗಿ ಹೇಳಿದ್ದು, ಕಣ್ಣೀರಿನ ಪ್ರತಿ ಹನಿಗೂ ಪ್ರತೀಕಾರ ತೀರಿಸದೆ ಬಿಡುವುದಿಲ್ಲ ಎಂದು ಗುಡುಗಿದ್ದರು.

ಭಾನುವಾರ (ಫೆಬ್ರುವರಿ17)ರಂದು ಅಮಿತ್ ಶಾ ಅಸ್ಸಾಂನಲ್ಲಿ ನಡೆದ ರ್‍ಯಾಲಿಯಲ್ಲಿ ಭಾಗವಹಿಸಿದ್ದರು.ಈ ರ್‍ಯಾಲಿಯಲ್ಲಿ ಶಾ,
ಸಿಆರ್‌ಪಿಎಫ್‍ನ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ. ಕೇಂದ್ರದಲ್ಲಿರುವುದು ಕಾಂಗ್ರೆಸ್ ಸರ್ಕಾರವಲ್ಲ, ಬಿಜೆಪಿ ಸರ್ಕಾರ ಎಂದಿದ್ದರು.

ಸೋಮವಾರ (ಫೆಬ್ರುವರಿ 18)ರಂದು ಗುಜರಾತ್‍ನ ವಡೋದರದಲ್ಲಿ ಬಿಜೆಪಿ ಬೂತ್ ಮಟ್ಟದ ಸಭೆಯಲ್ಲಿ ಭಾಗವಹಿಸಿದ ರಾಜ್ಯ ನಾಯಕ ಮತ್ತ ಬಿಜೆಪಿ ವಕ್ತಾರಭರತ್ಪಾಂಡ್ಯ ಪುಲ್ವಾಮ ದಾಳಿ ಬಗ್ಗೆ ಮಾತನಾಡಿದ್ದರು.ಈ ಹಿಂದೆ ಅಧಿಕಾರದಲ್ಲಿದ್ದ ಮನಮೋಹನ್ ಸಿಂಗ್ ಸರ್ಕಾರ ದೇಶದ ಭದ್ರತೆಯನ್ನು ಯಾವ ರೀತಿನಿರ್ವಹಿಸಿತ್ತು ಎಂದು ಹೇಳಿದ ಅವರು ದೇಶಪ್ರೇಮವನ್ನು ವೋಟ್ ಆಗಿ ಪರಿವರ್ತಿಸಿ ಎಂದು ಜನರಲ್ಲಿ ಮನವಿ ಮಾಡಿದ್ದರು. ದೇಶಪ್ರೇಮದ ವಿಷಯ ಬಂದಾಗ ದೇಶಕ್ಕೆ ದೇಶವೇ ಒಗ್ಗಟ್ಟಾಗಿ ನಿಲ್ಲುತ್ತದೆ, ಈ ಒಗ್ಗಟ್ಟನ್ನು ವೋಟ್ ಆಗಿ ಪರಿವರ್ತಿಸುವ ಜವಾಬ್ದಾರಿ ನಮ್ಮಲ್ಲಿದೆ ಎಂದಿದ್ದರು ಪಾಂಡ್ಯ.

ಘಟನಾ ಸ್ಥಳಕ್ಕೆ ಭೇಟಿ
ರಾಜಕೀಯ ಸಭೆಗಳಲ್ಲಿ ಭಾಗವಹಿಸುವುದರ ಜತೆಗೆ ಪುಲ್ವಾಮದ ಘಟನಾ ಸ್ಥಳದಲ್ಲಿಯೂ ಬಿಜೆಪಿ ನಾಯಕರ ಉಪಸ್ಥಿತಿ ಇರುವಂತೆ ಬಿಜೆಪಿ ನೋಡಿಕೊಂಡಿತು. ದಾಳಿ ನಡೆದ ಮರುದಿನ ಬಿಜೆಪಿ ಮುಖ್ಯಮಂತ್ರಿಗಳು, ಸಚಿವರು (ಕೇಂದ್ರ ಮತ್ತು ರಾಜ್ಯ ) ಹುತಾತ್ಮರ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಬೇಕೆಂದು ಬಿಜೆಪಿ ನಿರ್ದೇಶಿಸಿತ್ತು.

ಪುಲ್ವಾಮ ದಾಳಿ ಖಂಡಿಸಿ ಭಾನುವಾರ ದೇಶದಾದ್ಯಂತ ಪ್ರತಿಭಟನೆ ನಡೆಸಿದ ಬಿಜೆಪಿ, ದಾಳಿಯಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆಯನ್ನೂ ನಡೆಸಿತು.ಆ ಸಭೆಗಳಲ್ಲಿ ಬಿಜೆಪಿ ಬಾವುಟಗಳನ್ನು ಬಳಸಬೇಡಿ ಅದರ ಬದಲು ಪಕ್ಷದ ಚಿಹ್ನೆಯಾದ ತಾವರೆಯನ್ನು ಪ್ರದರ್ಶಿಸಿ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಮ್ಮ ಪಕ್ಷದ ನಾಯಕರಿಗೆ ಹೇಳಿದ್ದರು.

ಬಿಜೆಪಿ ಇಷ್ಟೊಂದು ಕಾರ್ಯಗಳನ್ನು ತರಾತುರಿಯಿಂದ ಮಾಡುತ್ತಿರುವಾಗ ವಿಪಕ್ಷ ಸಮ್ಮನಿತ್ತು. ಸರ್ಕಾರದ ಬಗ್ಗೆ ಪ್ರಶ್ನಿಸಿದಕ್ಕಾಗಿ ಆಡಳಿತರೂಡ ಬಿಜೆಪಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳನ್ನು ದೇಶದ್ರೋಹಿ ಎಂದು ಕರೆಯಿತು. ಇಲ್ಲಿಯವರೆಗೆ ತೃಣಮೂಲ ಕಾಂಗ್ರೆಸ್ ಮಾತ್ರ ಪುಲ್ವಾಮ ದಾಳಿಗೆ ಭದ್ರತಾ ವೈಫಲ್ಯ ಕಾರಣ. ದಾಳಿ ನಡೆಯುವ ಮುನ್ಸೂಚನೆ ಸಿಕ್ಕಿದ್ದರೂ ಮುಂಜಾಗ್ರತಾ ಕ್ರಮಗಳನ್ನು ಕೇಂದ್ರ ಸರ್ಕಾರ ಯಾಕೆ ಕೈಗೊಂಡಿಲ್ಲ ಎಂದು ಪ್ರಶ್ನಿಸಿದೆ.

ಎಡವಟ್ಟುಗಳೂ ಆಗಿತ್ತು

ಪುಲ್ವಾಮ ದಾಳಿಯ ನಂತರ ಬಿಜೆಪಿಯ ಕಾರ್ಯತಂತ್ರಗಳು ಬಹುತೇಕ ಯಶಸ್ವಿಯಾಗಿತ್ತು.ಇದರ ನಡುವೆ ಕೆಲವೊಂದು ಎಡವಟ್ಟುಗಳೂ ಆಗಿವೆ.ಉತ್ತರಪ್ರದೇಶದ ಉನ್ನಾವೊದಲ್ಲಿ ಹುತಾತ್ಮ ಯೋಧನ ಪಾರ್ಥೀವ ಶರೀರದ ಮೆರವಣಿಗೆ ವೇಳೆ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ನಗುತ್ತಾ ಕೈಬೀಸಿದ್ದು, ಟೀಕೆಗೊಳಗಾಗಿತ್ತು.

ಕೇರಳದಲ್ಲಿ ಯೋಧನ ಅಂತ್ಯ ಸಂಸ್ಕಾರದ ವೇಳೆ ಪಾರ್ಥೀವ ಶರೀರದ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿ ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತ್ತಾನಂ ಪೇಚಿಗೆ ಸಿಲುಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.