ADVERTISEMENT

ಕೋಲ್ಕತ್ತ | ಮೆಸ್ಸಿ ಕಾರ್ಯಕ್ರಮದಲ್ಲಿ ಗದ್ದಲ: ಕ್ಷಮೆ ಕೋರಿದ ಮಮತಾ; ತನಿಖೆಗೆ ಆದೇಶ

ಪಿಟಿಐ
Published 13 ಡಿಸೆಂಬರ್ 2025, 8:31 IST
Last Updated 13 ಡಿಸೆಂಬರ್ 2025, 8:31 IST
<div class="paragraphs"><p>ಮೈದಾನದಲ್ಲಿ ನೆರೆದ ಅಭಿಮಾನಿಗಳು</p></div>

ಮೈದಾನದಲ್ಲಿ ನೆರೆದ ಅಭಿಮಾನಿಗಳು

   

– ಪಿಟಿಐ

ಕೋಲ್ಕತ್ತ: ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಅವರ ಕಾರ್ಯಕ್ರಮ ಆಯೋಜನೆಯಾಗಿದ್ದ ಮೈದಾನದಲ್ಲಿ ಉಂಟಾದ ಅವ್ಯವಸ್ಥೆ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಿದ್ದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ADVERTISEMENT

ಮೈದಾನದಿಂದ ಮೆಸ್ಸಿ ನಿರ್ಗಮಿಸಿದ ಬಳಿಕ, ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿದ್ದರು. ಕುರ್ಚಿ, ಬಾಟಲಿಗಳನ್ನು ಮೈದಾನಕ್ಕೆ ತೂರಿದ್ದರು. ಆಕ್ರೋಶಿತ ಅಭಿಮಾನಿಗಳು ಕ್ರೀಡಾಂಗಣದ ಸ್ವತ್ತುಗಳನ್ನು ಧ್ವಂಸ ಮಾಡಿದ್ದರು.

ಮೆಸ್ಸಿ ಭಾಗಿಯಾಗಿದ್ದ ಕಾರ್ಯಕ್ರಮ ಅವ್ಯವಸ್ಥೆಯಿಂದ ಕೂಡಿತ್ತು. ರಾಜಕಾರಣಿಗಳೇ ಅವರನ್ನು ಸುತ್ತುವರಿದಿದ್ದರು ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಬಗ್ಗೆ ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಮಮತಾ ಬ್ಯಾನರ್ಜಿ, ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಇಂದು ನಡೆದ ಘಟನೆಯಿಂದ ತೀವ್ರ ನೋವಾಗಿದೆ, ಆಘಾತಕ್ಕೊಳಗಾಗಿದ್ದೇನೆ. ನೆಚ್ಚಿನ ಫುಟ್‌ಬಾಲ್ ಆಟಗಾರ ಲಯೊನೆಲ್ ಮೆಸ್ಸಿಯನ್ನು ನೋಡಲು ಸಾವಿರಾರು ಕ್ರೀಡಾ ಪ್ರೇಮಿಗಳು ಮತ್ತು ಅಭಿಮಾನಿಗಳೊಂದಿಗೆ ನಾನು ಕ್ರೀಡಾಂಗಣಕ್ಕೆ ತೆರಳುತ್ತಿದ್ದೆ ಎಂದು ಹೇಳಿದ್ದಾರೆ.

ಈ ದುರದೃಷ್ಟಕರ ಘಟನೆಗೆ ಲಯೊನೆಲ್ ಮೆಸ್ಸಿ, ಎಲ್ಲಾ ಕ್ರೀಡಾ ಪ್ರೇಮಿಗಳು ಮತ್ತು ಅವರ ಅಭಿಮಾನಿಗಳಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಘಟನೆಯ ಬಗ್ಗೆ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಆಶಿಮ್ ಕುಮಾರ್ ರೇ ಅವರ ಅಧ್ಯಕ್ಷತೆಯಲ್ಲಿ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಮತ್ತು ಗುಡ್ಡಗಾಡು ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸದಸ್ಯರಾಗಿರುವ ತನಿಖಾ ಸಮಿತಿಯನ್ನು ನಾನು ರಚಿಸುತ್ತಿದ್ದೇನೆ. ಸಮಿತಿಯು ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಿ, ಹೊಣೆಗಾರರನ್ನು ಪತ್ತೆ ಮಾಡಲಿದೆ. ಭವಿಷ್ಯದಲ್ಲಿ ಅಂತಹ ಘಟನೆಗಳನ್ನು ತಡೆಗಟ್ಟಲು ಕ್ರಮಗಳನ್ನು ಶಿಫಾರಸು ಮಾಡಲಿದೆ ಎಂದು ಅವರು ಹೇಳಿದ್ದಾರೆ.

ಮತ್ತೊಮ್ಮೆ, ನಾನು ಎಲ್ಲಾ ಕ್ರೀಡಾ ಪ್ರೇಮಿಗಳಿಗೆ ನನ್ನ ಹೃತ್ಪೂರ್ವಕ ಕ್ಷಮೆಯಾಚಿಸುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.