ADVERTISEMENT

ಉಪ್ರ: ಗಲಭೆ ವೇಳೆ ಕಾನ್‌ಸ್ಟೆಬಲ್ ಸಾವು, ತಿಂಗಳಲ್ಲಿ ಜೀವತೆತ್ತರು ಇಬ್ಬರು ಪೊಲೀಸರು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 18:31 IST
Last Updated 30 ಡಿಸೆಂಬರ್ 2018, 18:31 IST
   

ಘಾಜಿಪುರ್:ಉತ್ತರಪ್ರದೇಶದ ಘಾಜಿಪುರ್‌ ಜಿಲ್ಲೆಯಲ್ಲಿ ನಿಶಾದ್‌ ಪಕ್ಷದ ಕಾರ್ಯಕರ್ತರು ನಡೆಸಿದ ಗಲಭೆ ವೇಳೆ ಪೊಲೀಸ್‌ ಕಾನ್ಸ್‌ಟೆಬಲ್‌ ಒಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ನೊನ್ಹಾರ ಪೊಲೀಸ್‌ ಠಾಣೆ ವ್ಯಾಪ್ತಿಯ ಅತ್ವಾ ಎಂಬಲ್ಲಿ ಸಂಜೆ 5.30ರ ವೇಳೆಗೆ ಗಲಭೆ ನಡೆದಿದೆ.ನರೇಂದ್ರ ಮೋದಿ ಅವರು ಶನಿವಾರ ರ‍್ಯಾಲಿ ನಡೆಸಿದ ಸ್ಥಳದಿಂದ ಇಲ್ಲಿಗೆ ಇರುವ ಅಂತರ ಕೇವಲ 15 ಕಿ.ಮೀ.

ಮೃತ ಕಾನ್ಸ್‌ಟೆಬಲ್‌ ಅವರನ್ನು ಸುರೇಂದ್ರ ವತ್ಸ್‌ ಎಂದು ಗುರುತಿಸಲಾಗಿದೆ. ಅವರಿಗೆ 45 ವರ್ಷ ವಯಸ್ಸಾಗಿತ್ತು. ಇದಕ್ಕೂ ಮೊದಲು ಇದೇ ತಿಂಗಳು ನಡೆದಿದ್ದ ಬುಲಂದ್‌ಶಹರ್‌ ಗಲಭೆ ವೇಳೆಪೊಲೀಸ್‌ ಇನ್‌ಸ್ಪೆಕ್ಟರ್‌ ಸುಭೋದ್‌ ಕುಮಾರ್‌ ಸಿಂಗ್‌ ಸಾವಿಗೀಡಾಗಿದ್ದರು.

ಮೀಸಲಾತಿಗೆ ಸಂಬಂಧಿಸಿದಂತೆ ಶನಿವಾರ ಬೆಳಗಿನಿಂದಲೂ ಹೋರಾಟ ನಡೆಸುತ್ತಿದ್ದ ನಿಶಾದ್‌ ಪಕ್ಷದ ಕಾರ್ಯಕರ್ತರು ರಸ್ತೆ ತಡೆ ನಡೆಸಿದ್ದರು. ಈ ವೇಳೆ ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು ಪ್ರತಿಭಟನಾ ಕಾರರನ್ನು ಚದುರಿಸಿದ್ದರು. ಕೆಲಹೊತ್ತಿನ ಬಳಿಕ ಮತ್ತೆ ಜಮಾಯಿಸಿದ 60–70 ಕಾರ್ಯಕರ್ತರು(ಮಹಿಳೆಯರೂ ಸೇರಿ) ಬಂಧಿತರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿದರು.

ರ‍್ಯಾಲಿ ಬಳಿಕ ವಾಪಸ್‌ ಆಗುತ್ತಿದ್ದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ವಾಹನಗಳ ಮೇಲೂ ಪ್ರತಿಭಟನಾನಿರತರು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಗಲಭೆ ಸ್ವರೂಪ ಪಡೆದುಕೊಂಡಿದೆ.

ಸ್ವತಃ ರ‍್ಯಾಲಿ ಯಲ್ಲಿ ಭಾಗವಹಿಸಿದ್ದಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರುಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು,ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ಸೂಪರಿಂಟೆಂಡೆಂಟ್‌ ಅವರಿಗೆ ಸೂಚಿಸಿದ್ದಾರೆ. ವತ್ಸ್‌ ಸಾವಿಗೆ ಮರುಕ ವ್ಯಕ್ತಪಡಿಸಿರುವ ಯೋಗಿ, ಮೃತರ ಮಡದಿಗೆ ವಿಶೇಷ ಪಿಂಚಣಿ ಸೌಲಭ್ಯ, ₹ 40 ಲಕ್ಷ ಹಾಗೂ ಪೋಷಕರಿಗೆ ₹ 10 ಲಕ್ಷ ಪರಿಹಾರ ಘೋಷಿಸಿದ್ದಾರೆ. ಜೊತೆಗೆ ಅವಲಂಬಿತರೊಬ್ಬರಿಗೆ ಉದ್ಯೋಗದ ಭರವಸೆ ನೀಡಿದ್ದಾರೆ.

ಗಲಭೆ ಕುರಿತು ಪ್ರತಿಕ್ರಿಯೆ ನೀಡಿರುವ ಉತ್ತರಪ್ರದೇಶ ಪೊಲೀಸ್‌ ಮಹಾನಿರ್ದೇಶಕ ಒ.ಪಿ. ಸಿಂಗ್‌, ‘ಬೆಳಿಗ್ಗೆ ಬಂಧಿಸಲಾಗಿದ್ದ ತಮ್ಮ ಪಕ್ಷದ ನಾಲ್ವರು ಕಾರ್ಯಕರ್ತರ ಬಿಡುಗಡೆಗಾಗಿ ನಿಶಾದ್‌ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಪ್ರಧಾನ ಮಂತ್ರಿಗಳ ರ‍್ಯಾಲಿ ಗೂ, ಗಲಭೆಗೂ ಯಾವುದೇ ಸಂಬಂಧವಿಲ್ಲ’ ಎಂದಿದ್ದಾರೆ.

ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದವಾರಣಾಸಿ ವಲಯದ ಪೊಲೀಸ್‌ ಅಧಿಕಾರಿ ವಿಜಯ್‌ ಸಿಂಗ್‌ ಮೀನಾ, ‘ಕರೀಮುದ್ದೀನ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವತ್ಸ್‌ ಅವರನ್ನು ಮೋದಿ ರ‍್ಯಾಲಿಗೆ ನಿಯೋಜಿಸಲಾಗಿತ್ತು. ರ‍್ಯಾಲಿ ಮುಗಿದ ಬಳಿಕ ಸಬ್‌ಇನ್ಸ್‌ಪೆಕ್ಟರ್‌ ಒಬ್ಬರ ಜೊತೆ ಮನೆಗೆ ಮರಳುತ್ತಿದ್ದಾಗ ಪ್ರತಿಭಟನಾಕಾರರು ತೂರಿದ ಕಲ್ಲು ವತ್ಸ್‌ ತಲೆಗೆ ಬಡಿದಿದೆ. ಇನ್ಸ್‌ಪೆಕ್ಟರ್‌ ಹೆಲ್ಮೆಟ್‌ ಧರಿಸಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಘಟನೆ ವೇಳೆಇನ್ನೂ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿಸಿದ ಸಿಂಗ್‌ ಸ್ಥಳದಲ್ಲಿರುವ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ ಗಲಭೆಕೋರರನ್ನು ಬಂಧಿಸಲಾಗುವುದು ಎಂದರು.

ಪ್ರಕರಣ ಸಂಬಂಧ ಸದ್ಯ 13 ಜನರನ್ನು ಬಂಧಿಸಿರುವ ಪೊಲೀಸರು ಇನ್ನೂ ಹತ್ತು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.