ADVERTISEMENT

Plane crash: ಮಗನನ್ನು ನೋಡಲು ಲಂಡನ್‌ಗೆ ಹೊರಟಿದ್ದ ಸೊಲ್ಲಾಪುರದ ದಂಪತಿ ಸಾವು

ಪಿಟಿಐ
Published 13 ಜೂನ್ 2025, 10:20 IST
Last Updated 13 ಜೂನ್ 2025, 10:20 IST
<div class="paragraphs"><p>ಸೊಲ್ಲಾಪುರದ ದಂಪತಿ</p></div>

ಸೊಲ್ಲಾಪುರದ ದಂಪತಿ

   

ಪುಣೆ: ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರ ವಿವರಗಳು ತಡವಾಗಿ ಒಂದೊಂದೇ ಹೊರಬೀಳುತ್ತಿದ್ದು, ಒಬ್ಬಬ್ಬರ ಕಥೆಯೂ ಮನಮಿಡಿಯುವಂತಿವೆ.

ಮಗನನ್ನು ನೋಡಲು ಲಂಡನ್‌ಗೆ ತೆರಳುತ್ತಿದ್ದ ಮಹಾರಾಷ್ಟ್ರದ ಸೋಲ್ಲಾಪುರ ಮೂಲದ ವೃದ್ದ ದಂಪತಿ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ.

ADVERTISEMENT

ಸೋಲ್ಲಾಪುರ ಜಿಲ್ಲೆಯ ಸಂಗೊಲಾ ತಾಲ್ಲೂಕಿನ ಹಾತಿಡ್ ಗ್ರಾಮದ ಮಹಾದೇವ್ ಪವಾರ್ (68) ಹಾಗೂ ಅವರ ಪತ್ನಿ ಆಶಾ (60) ಮೃತ ದುರ್ದೈವಿಗಳು.

ಮಹಾದೇವ್ ಪವಾರ್ ಅವರು ಗುಜರಾತ್‌ನ ನಾದಿಯಾಡ್‌ನ ಟೆಕ್ಟ್ಸ್‌ಟೈಲ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ 15 ವರ್ಷಗಳಿಂದ ಅಲ್ಲಿಯೇ ನೆಲೆಸಿದ್ದರು. ಸ್ವಗ್ರಾಮಕ್ಕೆ ಆಗಾಗ ಬಂದು ಹೋಗುತ್ತಿದ್ದರು ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಮಹಾದೇವ್ ಅವರಿಗೆ ಇಬ್ಬರು ಮಕ್ಕಳು. ಕಿರಿಯ ಮಗ ಅಹಮದಾಬಾದ್‌ನಲ್ಲಿ ನೆಲೆಸಿದ್ದಾರೆ. ಉದ್ಯೋಗದ ನಿಮಿತ್ತ ಲಂಡನ್‌ನಲ್ಲಿ ನೆಲೆಸಿದ್ದ ಹಿರಿಯ ಮಗನ ಜೊತೆ ಸ್ವಲ್ಪ ದಿನ ಕಾಲ ಕಳೆಯಲು ಅವರು ಲಂಡನ್‌ಗೆ ತೆರಳುತ್ತಿದ್ದರು.

ಆದರೆ, ದುರಾದೃಷ್ಟದ ವಿಮಾನವನ್ನೇರಿದ್ದ ಅವರು ಟೇಕ್ ಆಫ್ ಆದ ಕೆಲವೇ ನಿಮಿಷದಲ್ಲಿ ವಿಮಾನ ಪತನಗೊಂಡು ಮೃತಪಟ್ಟಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಸ್ಥಳದಲ್ಲಿ ಮೃತದೇಹಗಳ ಡಿಎನ್‌ಎ ಪರೀಕ್ಷೆ ಮಾಡುತ್ತಿದ್ದು ವರದಿ ಬಂದ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಿದ್ದಾರೆ.

ಬೋಯಿಂಗ್ ಕಂಪನಿಯ (787–8 ಡ್ರೀಮ್‌ಲೈನರ್) ಈ ವಿಮಾನವು 12 ಸಿಬ್ಬಂದಿ ಸೇರಿ 242 ಮಂದಿಯನ್ನು ಹೊತ್ತು ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿತ್ತು. ವಿಮಾನದಲ್ಲಿದ್ದ 241 ಜನರು ಸಾವನ್ನಪ್ಪಿದ್ದಾರೆ ಎಂದು ಏರ್ ಇಂಡಿಯಾ ದೃಢಪಡಿಸಿದೆ. ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾನೆ.

ವಿಮಾನದಲ್ಲಿ 242 ಜನರಲ್ಲಿ 169 ಭಾರತೀಯರು, 53 ಬ್ರಿಟಿಷ್, 7 ಪೋರ್ಚುಗೀಸ್ ಮತ್ತು ಓರ್ವ ಕೆನಡಾದ ಪ್ರಜೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.