ಅಪಘಾತಕ್ಕೊಳಗಾಗಿದ್ದ ಪೋಶೆ ಕಾರು (ಸಂಗ್ರಹ ಚಿತ್ರ)
ಪುಣೆ: ಇಬ್ಬರ ಸಾವಿಗೆ ಕಾರಣವಾದ ಪೋಶೆ ಕಾರು ಅಪಘಾತ ಪ್ರಕರಣದ ಪ್ರಮುಖ ಆರೋಪಿ 17 ವರ್ಷದ ಬಾಲಕನನ್ನು ಬಚಾವ್ ಮಾಡಲು ಮತ್ತು ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ಆರೋಪಿಗಳು ಆಸ್ಪತ್ರೆಯಲ್ಲಿ ರಕ್ತದ ಮಾದರಿಗಳನ್ನು ತಿರುಚಲು ಪ್ರಯತ್ನಿಸಿದ್ದರು. ಆದರೆ, ಇದು ಯಶಸ್ವಿಯಾಗಲಿಲ್ಲ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿದೆ.
ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 173(8)ರ ಅಡಿಯಲ್ಲಿ ನ್ಯಾಯಾಲಯಕ್ಕೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಿದ ಪ್ರಾಸಿಕ್ಯೂಷನ್, ಸಸೂನ್ ಆಸ್ಪತ್ರೆಯಲ್ಲಿ ಬಾಲಕನ ರಕ್ತದ ಮಾದರಿಗಳಲ್ಲಿ ಅಕ್ರಮ ನಡೆಯುವ ಸಾಧ್ಯತೆ ಬಗ್ಗೆ ಪುಣೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದೆ.
ಇದಕ್ಕೂ ಮುನ್ನ ಔಂಧ್ ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕನ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಆದರೆ, ಆರೋಪಿಯ ಪೋಷಕರು ಸೇರಿದಂತೆ ಪ್ರಕರಣದ ಇತರೆ ಆರೋಪಿಗಳು ರಕ್ತದ ಮಾದರಿಗಳನ್ನು ತಿರುಚಲು ಆಸ್ಪತ್ರೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಆದರೆ, ಇದಕ್ಕೆ ವೈದ್ಯರು ನಿರಾಕರಿಸಿದ್ದಾರೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಔಂಧ್ ಆಸ್ಪತ್ರೆಯಲ್ಲಿ ರಕ್ತದ ಮಾದರಿಗಳನ್ನು ತಿರುಚಿದ ರೀತಿಯಲ್ಲೇ ಬಾಲಕನ ಪೋಷಕರು ಸಸೂನ್ ಆಸ್ಪತ್ರೆಯಲ್ಲಿಯೂ ಹಾಗೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಅಪರಾಧ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಸೂನ್ ಆಸ್ಪತ್ರೆಯಲ್ಲಿ ರಕ್ತದ ಮಾದರಿಗಳನ್ನು ಬದಲಾಯಿಸಿದ ಆರೋಪದಡಿ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಅಜಯ್ ತಾವರೆ, ವೈದ್ಯಕೀಯ ಅಧಿಕಾರಿ ಶ್ರೀಹರಿ ಹಾಲ್ನೋರ್ ಮತ್ತು ಸಿಬ್ಬಂದಿ ಅತುಲ್ ಘಟ್ಕಾಂಬಳೆ ಅವರನ್ನು ಬಂಧಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಪುಣೆಯ ಕಲ್ಯಾಣಿ ನಗರದಲ್ಲಿ 2024ರ ಮೇ 19ರಂದು ಪೋಶೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಟೆಕಿಗಳು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ವೇಳೆ ಕಾರನ್ನು ಬಾಲಕ ಕುಡಿದ ಮತ್ತಿನಲ್ಲಿ ಚಲಾಯಿಸಿದ್ದ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ರಕ್ತದ ಮಾದರಿಗಳನ್ನು ಬದಲಾಯಿಸಿದ ಆರೋಪದಲ್ಲಿ ಬಾಲಕನ ಪೋಷಕರು ಪೊಲೀಸರ ವಶದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.