ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಅನುಭವಿಸಿದ್ದು ವಿದ್ಯುನ್ಮಾನ ಮತಯಂತ್ರಗಳಿಂದಲ್ಲ (ಇವಿಎಂ), ಬದಲಾಗಿ ನಾಯಕತ್ವದ ಕೊರತೆಯಿಂದ. ಹಾಗಾಗಿ ಇವಿಎಂಗಳ ಬದಲಿಗೆ ರಾಹುಲ್ ಗಾಂಧಿಯನ್ನು ಬದಲಿಸುವ ಬಗ್ಗೆ ಯೋಚಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಜೆಪಿ ಸಲಹೆ ನೀಡಿದೆ.
ದೇಶದಲ್ಲಿ ಮತಪತ್ರ ವ್ಯವಸ್ಥೆಯನ್ನು ಪುನಃ ಜಾರಿಗೆ ತರಬೇಕು ಎಂದು ಮಂಗಳವಾರ ಒತ್ತಾಯಿಸಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇದಕ್ಕಾಗಿ ಜಾಗೃತಿ ಮೂಡಿಸಲು ಭಾರತ್ ಜೋಡೊ ಯಾತ್ರೆಯಂಥ ಆಂದೋಲನಕ್ಕೆ ಕರೆ ನೀಡಿದ್ದರು. ಈ ಕುರಿತು ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರು ಪ್ರತಿಕ್ರಿಯಿಸಿದ್ದಾರೆ.
‘ವಿದ್ಯುನ್ಮಾನ ಮತಯಂತ್ರಗಳು, ಚುನಾವಣಾ ಆಯೋಗ, ಜಾರಿ ನಿರ್ದೇಶನಾಲಯ (ಇ.ಡಿ), ಕೇಂದ್ರೀಯ ತನಿಖಾ ದಳ (ಸಿಬಿಐ), ನ್ಯಾಯಾಂಗ ಮತ್ತು ಮೋದಿ ಸರ್ಕಾರ ಬೇಡವೆಂದಾದರೆ ಖರ್ಗೆಯವರು ರಾಹುಲ್ ಗಾಂಧಿಯನ್ನು ಕರೆದುಕೊಂಡು ಮಂಗಳಗ್ರಹಕ್ಕೆ ಹೋಗಿ ನೆಮ್ಮದಿಯಿಂದ ಬದುಕಬಹುದು ಎಂದು ಪಾತ್ರಾ ಲೇವಡಿ ಮಾಡಿದ್ದಾರೆ.
ಇವಿಎಂ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಮೂಲಕ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಬಗ್ಗೆ ಕಾಂಗ್ರೆಸ್ ನಾಯಕರು ತಮ್ಮ ಹತಾಶೆಯನ್ನು ಹೊರಹಾಕುತ್ತಿದ್ದಾರೆ ಎಂದು ಪಾತ್ರಾ ವಾಗ್ದಾಳಿ ನಡೆಸಿದ್ದಾರೆ.
‘ಸಮಸ್ಯೆ ಇರುವುದು ಮತಯಂತ್ರದಲ್ಲಿ (ಇವಿಎಂ) ಇಲ್ಲ. ಸಮಸ್ಯೆ ಇರುವುದು ಕಾಂಗ್ರೆಸ್ ನಾಯಕತ್ವದಲ್ಲಿ. ಇವಿಎಂ ಚೆನ್ನಾಗಿದೆ. ಆದರೆ, ರಾಹುಲ್ ದೋಷಪೂರಿತವಾಗಿದ್ದಾರೆ. ಹಾಗಾಗಿ ಇವಿಎಂ ಬದಲಿಗೆ ರಾಹುಲ್ ಅವರನ್ನು ಬದಲಾಯಿಸುವುದು ಸೂಕ್ತ’ ಎಂದು ಪಾತ್ರಾ ವ್ಯಂಗ್ಯವಾಡಿದ್ದಾರೆ.
ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ‘ಮಹಾಯುತಿ’ ಮೈತ್ರಿಕೂಟ 235 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದರಲ್ಲಿ ಬಿಜೆಪಿ 132, ಶಿವಸೇನಾ 57 ಹಾಗೂ ಎನ್‌ಸಿಪಿ 41 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.