ADVERTISEMENT

ಪ್ರಿಯಾಂಕಾಗೆ ಪ್ಯಾಲೆಸ್ಟೀನ್, ಬಾಂಗ್ಲಾ ಮೇಲಿರುವ ಪ್ರೀತಿ ಭಾರತದ ಮೇಲಿಲ್ಲ: ಸಿಂಗ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಡಿಸೆಂಬರ್ 2024, 6:33 IST
Last Updated 17 ಡಿಸೆಂಬರ್ 2024, 6:33 IST
<div class="paragraphs"><p>‘ಪ್ಯಾಲೆಸ್ಟೀನ್‌’ ಬರಹ ಇರುವ ಕೈಚೀಲ ಹಿಡಿದು ಸಂಸತ್ತಿಗೆ ಬಂದ ಪ್ರಿಯಾಂಕಾ ಗಾಂಧಿ ವಾದ್ರಾ</p></div>

‘ಪ್ಯಾಲೆಸ್ಟೀನ್‌’ ಬರಹ ಇರುವ ಕೈಚೀಲ ಹಿಡಿದು ಸಂಸತ್ತಿಗೆ ಬಂದ ಪ್ರಿಯಾಂಕಾ ಗಾಂಧಿ ವಾದ್ರಾ

   

– ಪಿಟಿಐ ಚಿತ್ರ

ನವದೆಹಲಿ: ‘ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಪ್ಯಾಲೆಸ್ಟೀನ್‌, ಪಾಕಿಸ್ತಾನ, ಬಾಂಗ್ಲಾದೇಶದ ಮೇಲೆ ಪ್ರೀತಿ ಇದೆಯೇ ಹೊರತು ಭಾರತದ ಮೇಲಲ್ಲ’ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಪ್ರಿಯಾಂಕಾ ಗಾಂಧಿ ವಾದ್ರಾ ಅವರು ‘ಪ್ಯಾಲೆಸ್ಟೀನ್‌’ ಎಂದು ಬರೆದಿದ್ದ ಕೈಚೀಲವನ್ನು ಸಂಸತ್ತಿಗೆ ಸೋಮವಾರ ತರುವ ಮೂಲಕ ಗಮನ ಸೆಳೆದಿದ್ದರು. ಪ್ರಿಯಾಂಕಾ ಅವರ ನಡೆಯನ್ನು ಬಿಜೆಪಿ ಟೀಕಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಗಿರಿರಾಜ್ ಸಿಂಗ್, ‘ಪ್ರಿಯಾಂಕಾ ಗಾಂಧಿ ಅವರು ಇಂದಿರಾ ಗಾಂಧಿಯವರ ಮೊಮ್ಮಗಳು, ನೆಹರೂ ಅವರ ಮರಿ ಮೊಮ್ಮಗಳು, ಆಕೆ ಏನು ಬೇಕಾದರೂ ಮಾಡಬಹುದು. ಅವರಿಗೆ (ಪ್ರಿಯಾಂಕಾ) ಪ್ಯಾಲೆಸ್ಟೀನ್‌, ಪಾಕಿಸ್ತಾನ, ಬಾಂಗ್ಲಾದೇಶದ ಮೇಲೆ ಪ್ರೀತಿ ಇದೆಯೇ ಹೊರತು ಭಾರತದ ಮೇಲಲ್ಲ’ ಎಂದು ಕಿಡಿಕಾರಿದ್ದಾರೆ.

ಇಸ್ರೇಲ್‌ ಮತ್ತು ಪ್ಯಾಲೆಸ್ಟೀನ್‌ ನಡುವಿನ ಯುದ್ಧದಲ್ಲಿ ಮೊದಲಿನಿಂದಲೂ ಇಸ್ರೇಲ್‌ ನಡೆಯನ್ನು ಖಂಡಿಸುತ್ತಿರುವ ಪ್ರಿಯಾಂಕಾ, ಪ್ಯಾಲೆಸ್ಟೀನ್‌ಗೆ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ. ಇದರ ಭಾಗವಾಗಿಯೇ ಅವರು ಈ ವಿಶೇಷ ಕೈಚೀಲವನ್ನು ಸಂಸತ್ತಿಗೆ ತಂದಿದ್ದರು.

ಪ್ರಿಯಾಂಕಾ ತಂದಿದ್ದ ಚೀಲದ ಮೇಲೆ ‘ಪ್ಯಾಲೆಸ್ಟೀನ್‌’ ಎಂಬ ಬರಹ ಮತ್ತು ಲಾಂಛನದ ಚಿತ್ರ ಹಾಗೂ ಕಲ್ಲಂಗಡಿ ಹಣ್ಣಿನ ಚಿತ್ರವಿತ್ತು. ಕಲ್ಲಂಗಡಿ ಹಣ್ಣಿನ ಚಿತ್ರವು ಪ್ಯಾಲೆಸ್ಟೀನಿಯರ ಜತೆಗಿನ ಒಗ್ಗಟ್ಟನ್ನು ಸೂಚಿಸುತ್ತದೆ.

ವಯನಾಡ್‌ ಸಂಸದೆಯಾಗಿ ಆಯ್ಕೆಯಾದ ಪ್ರಿಯಾಂಕಾ ಅವರಿಗೆ ನವದೆಹಲಿಯಲ್ಲಿರುವ ಪ್ಯಾಲೆಸ್ಟೀನ್ ರಾಯಭಾರಿಯು ಕಳೆದ ವಾರ ಕರೆ ಮಾಡಿ ಅಭಿನಂದಿಸಿದ್ದರು.

ಜೂನ್‌ನಲ್ಲಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಟೀಕಿಸಿದ್ದ ಪ್ರಿಯಾಂಕಾ, ‘ಇಸ್ರೇಲ್ ಸರ್ಕಾರ ನರ ಹಂತಕನಂತೆ ಅನಾಗರಿಕವಾಗಿ ವರ್ತಿಸುತ್ತಿದೆ. ಹಿಂಸಾಚಾರ ಮತ್ತು ನರಮೇಧಗಳನ್ನು ಸಹಿಸದ ಇಸ್ರೇಲ್ ನಾಗರಿಕರು ಮತ್ತು ಪ್ರಪಂಚದ ಎಲ್ಲರೂ ಇಸ್ರೇಲ್ ನಡೆಯನ್ನು ಖಂಡಿಸಬೇಕು ಮತ್ತು ಪ್ಯಾಲೆಸ್ಟೀನ್‌ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಒತ್ತಾಯಿಸಬೇಕು’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.