ADVERTISEMENT

₹1.5 ಕೋಟಿ ಇನಾಮು ಘೋಷಣೆ: ಹತ್ಯೆಯಾದ ಮೋಸ್ಟ್ ವಾಂಟೆಡ್ ನಕ್ಸಲ್ ಬಸವರಾಜು ಯಾರು?

​ಪ್ರಜಾವಾಣಿ ವಾರ್ತೆ
Published 22 ಮೇ 2025, 6:53 IST
Last Updated 22 ಮೇ 2025, 6:53 IST
<div class="paragraphs"><p>ಭದ್ರತಾ ಪಡೆಗಳ ಕಾರ್ಯಾಚರಣೆ</p></div>

ಭದ್ರತಾ ಪಡೆಗಳ ಕಾರ್ಯಾಚರಣೆ

   

ನಾರಾಯಣಪುರ/ಹೈದರಾಬಾದ್‌: ಛತ್ತೀಸಗಢದ ಬಸ್ತಾರ್‌ ಪ್ರದೇಶದಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಸಿಪಿಐ (ಮಾವೋವಾದಿ) ಪಕ್ಷದ ಪ್ರಧಾನ ಕಾರ್ಯದರ್ಶಿ, ಪ್ರಮುಖ ನಕ್ಸಲ್‌ ನಾಯಕ ನಂಬಾಲಾ ಕೇಶವ್‌ ರಾವ್‌ ಅಲಿಯಾಸ್‌ ಬಸವರಾಜು (70) ಸೇರಿ 27 ನಕ್ಸಲರನ್ನು ಭದ್ರತಾ ಪಡೆಗಳು ಬುಧವಾರ ಹತ್ಯೆ ಮಾಡಿವೆ.

ಬಸವರಾಜು ಅವರ ಹತ್ಯೆಯು ಭದ್ರತಾ ಪಡೆಗಳಿಗೆ ದೊರಕಿದ ಗೆಲುವು ಎನ್ನಲಾಗಿದೆ. ಬಸವರಾಜು ಹತ್ಯೆಯನ್ನು ಖಚಿತಪಡಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಇದೊಂದು ಐತಿಹಾಸಿಕ ಸಾಧನೆ’ ಎಂದು ಬಣ್ಣಿಸಿದ್ದಾರೆ. ಇನ್ನೊಂದೆಡೆ, ಬಸವರಾಜು ಅವರ ಹತ್ಯೆಯು ನಕ್ಸಲ್‌ ಚಳವಳಿಗೆ ಆದ ಹಿನ್ನಡೆ ಎಂದೂ ವಿಶ್ಲೇಷಿಸಲಾಗುತ್ತಿದೆ. ಛತ್ತೀಸಗಢದ ನಾರಾಯಣಪುರ–ಬಿಜಾಪುರ–ದಂತೆವಾಡಾ ಜಿಲ್ಲೆಗಳಲ್ಲಿ ಹಬ್ಬಿಕೊಂಡಿರುವ ಅಬೂಜ ಮಾಢ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಕಳೆದ 2 ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದವು.

ADVERTISEMENT

ಬಸವರಾಜು ಯಾರು?

ನಂಬಾಲಾ ಕೇಶವ್‌ ರಾವ್‌ ಅಲಿಯಾಸ್‌ ಬಸವರಾಜು ಅವರು ನಕ್ಸಲ್ ಚಳವಳಿಯ ಬೆನ್ನೆಲುಬಾಗಿದ್ದರು. ದಾಳಿಯ ಕಾರ್ಯತಂತ್ರ ರೂಪಿಸುವಲ್ಲಿ ನಿಪುಣರಾಗಿದ್ದರು. ಇವರನ್ನು ಹುಡುಕಿ ಕೊಟ್ಟವರಿಗೆ ₹1.5 ಕೋಟಿ ಬಹುಮಾನ ನೀಡುವುದಾಗಿ ಸರ್ಕಾರ ಘೋಷಿಸಿತ್ತು.

2010ನಲ್ಲಿ ದಂತೇವಾಡದಲ್ಲಿ ನಡೆಸಿದ ದಾಳಿಯಲ್ಲಿ 76 ಸಿಆರ್‌ಪಿಎಫ್‌ ಸಿಬ್ಬಂದಿ ಮೃತಪಟ್ಟಿದ್ದರು. 2013ರ ಜೀರಂ ಘಾಟಿ ದುರಂತದಲ್ಲಿ 27 ಮಂದಿ ಮೃತಪಟ್ಟಿದ್ದರು. ಈ ಎಲ್ಲ ದಾಳಿಗಳ ರೂವಾರಿ ಬಸವರಾಜು ಅವರಾಗಿದ್ದರು. ರ್‍ಯಾಡಿಕಲ್‌ ಸ್ಟೂಡೆಂಟ್ಸ್‌ ಯೂನಿಯನ್‌ (ಆರ್‌ಎಸ್‌ಯು) ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಅವರು ನಂತರ ನಕ್ಸಲ್ ಚಳವಳಿಗೆ ಸೇರಿಕೊಂಡರು.

ಕೇಶವ್‌ ರಾವ್‌ ಅವರಿಗೆ ಬಸವರಾಜು, ಗಂಗಣ್ಣ ಮತ್ತು ಪ್ರಕಾಶ್‌ ಎಂಬ ಹೆಸರುಗಳೂ ಇದ್ದವು. ಇವರು ಹುಟ್ಟಿದ್ದು ಆಂಧ್ರಪ್ರದೇಶದ ಶ್ರೀಕಾಕುಳ ಜಿಲ್ಲೆಯ ಪುಟ್ಟ ಗ್ರಾಮವೊಂದರಲ್ಲಿ. ವರಂಗಲ್‌ನ ರೀಜನಲ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓದು ಮುಗಿಸಿದ್ದ ಅವರು, ಕಾಲೇಜು ದಿನಗಳಲ್ಲಿಯೇ ಎಡಪಂಥೀಯ ವಿದ್ಯಾರ್ಥಿ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. 1980ರಲ್ಲಿ ‘ಸಿಪಿಐ (ಮಾರ್ಕ್ಸ್‌–ಲೆನಿನ್‌) ಪೀಪಲ್ಸ್‌ ವಾರ್‌’ ಪಕ್ಷವನ್ನು ಇತರರ ಜೊತೆ ಸೇರಿಕೊಂಡು ಸ್ಥಾಪಿಸಿದರು. 1992ರಲ್ಲಿ ಇದರ ಕೇಂದ್ರ ಸಮಿತಿಯ ಸದ್ಯಸರಾದರು. 2004ರಲ್ಲಿ ಸಿಪಿಐ (ಮಾವೋವಾದಿ) ಪಕ್ಷದೊಂದಿಗೆ ‘ಸಿಪಿಐ (ಮಾರ್ಕ್ಸ್‌–ಲೆನಿನ್‌) ಪೀಪಲ್ಸ್‌ ವಾರ್‌’ ವಿಲೀನವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.