ಪ್ರಧಾನಿ ನರೇಂದ್ರ ಮೋದಿ
-ಪಿಟಿಐ ಚಿತ್ರ
ನವದೆಹಲಿ: ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮೂಲಕ ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಯ ತಾಕತ್ತನ್ನು ಇಡೀ ಜಗತ್ತು ನೋಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಂಜಾಬ್‌ನ ಆದಂಪುರ ವಾಯುನೆಲೆಯಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆಗಳನ್ನು ಕೂಗುವ ಮೂಲಕ ಭಾರತೀಯ ಸೇನೆಯ ಪರಾಕ್ರಮವನ್ನು ಕೊಂಡಾಡಿದ್ದಾರೆ.
‘ಭಾರತ್ ಮಾತಾ ಕಿ ಜೈ’ ಎಂಬುದು ಕೇವಲ ಘೋಷಣೆಯಲ್ಲ. ಬದಲಾಗಿ ನಮ್ಮ ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸುವುದಾಗಿ ಪ್ರತಿಜ್ಞೆ ಮಾಡಿರುವುದಾಗಿದೆ ಎಂದು ಅವರು ಹೇಳಿದ್ದಾರೆ.
‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಕೇವಲ ಸೇನೆಯ ಅಭಿಯಾನ ಮಾತ್ರವಲ್ಲ. ಬದಲಾಗಿ ಭಾರತದ ನೀತಿ, ನಿಯತ್ತು ಆಗಿದೆ. ನಿಮ್ಮ (ಸೈನಿಕರ) ಶೌರ್ಯದ ಪ್ರತಿಧ್ವನಿ ವಿಶ್ವದ ಎಲ್ಲಡೆ ಕೇಳಿ ಬರುತ್ತಿದೆ. ನಿಮ್ಮ ಶೌರ್ಯದ ಕಥೆಗಳು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ನಮ್ಮ ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಸಿಬ್ಬಂದಿಗೆ ನನ್ನ ಸಲ್ಯೂಟ್ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಮ್ಮ ಸಹೋದರಿಯರ ‘ಸಿಂಧೂರ’ ಅಳಿಸಿದವರಿಗೆ ತಕ್ಕ ಪಾಠ ಕಲಿಸಿದ್ದೇವೆ. ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಯಶಸ್ಸು ಪ್ರತಿಯೊಬ್ಬ ಯೋಧನಿಗೆ ಸಲ್ಲುತ್ತದೆ. ಪಾಕಿಸ್ತಾನಕ್ಕೆ ಭಾರತದ ಕಡೆಗೆ ತಲೆ ಎತ್ತಿ ನೋಡದಂತೆ ಮಾಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಪಾಕ್‌ನ ಅಣ್ವಸ್ತ್ರ ಬಳಕೆ ಬೆದರಿಕೆಗೆ ಭಾರತ ಹೆದರುವುದಿಲ್ಲ. ಪಾಕ್ ಸೇನೆಯ ಕ್ಷಿಪಣಿ, ಡ್ರೋನ್, ಜೆಟ್‌ಗಳನ್ನು ಹೊಡದುರುಳಿಸುವ ಮೂಲಕ ನಮ್ಮ ಸೇನೆ ಪಾರಮ್ಯ ಮೆರೆದಿದೆ ಎಂದು ಮೋದಿ ಹೇಳಿದ್ದಾರೆ.
ನಮ್ಮ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಬಗ್ಗೆ ಯೋಚಿಸುತ್ತಾ ಪಾಕಿಸ್ತಾನ ದೀರ್ಘಕಾಲ ನಿದ್ರೆ ಮಾಡುವುದಿಲ್ಲ. ‘ಆಪರೇಷನ್ ಸಿಂಧೂರ’ ಮೂಲಕ ನೀವು (ಸೈನಿಕರು) ದೇಶದ ಆತ್ಮ ವಿಶ್ವಾಸ, ಜನರಲ್ಲಿ ಏಕತೆಯನ್ನು ಹೆಚ್ಚಿಸಿದ್ದೀರಿ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಪ್ರತಿ ಕ್ಷಣವೂ ನಮ್ಮ ಸಶಸ್ತ್ರ ಪಡೆಗಳ ಶೌರ್ಯಕ್ಕೆ ಸಾಕ್ಷಿಯಾಗಿದೆ. ಇದು ನಮ್ಮ ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಶ್ರೇಷ್ಠತೆಯನ್ನು ಸಾಬೀತುಪಡಿಸುತ್ತದೆ ಎಂದು ಮೋದಿ ತಿಳಿಸಿದ್ದಾರೆ.
ಭಯೋತ್ಪಾದನೆ ಕುರಿತು ನಮ್ಮ ಗುರಿ ಏನು ಎಂಬುದು ಪಾಕಿಸ್ತಾನಕ್ಕೆ ಬಹಳ ಸ್ಪಷ್ಟವಾಗಿ ಗೊತ್ತಿದೆ. ಭವಿಷ್ಯದಲ್ಲಿ ಯಾವುದೇ ಭಯೋತ್ಪಾದಕ ದಾಳಿಗೆ ನಮ್ಮದೇ ರೀತಿಯಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.