ADVERTISEMENT

ಸಕಾರಣವಿದ್ದರಷ್ಟೇ ವಾಹನ ತಪಾಸಣೆ: ಸಿಬ್ಬಂದಿಗೆ ಡಿಜಿಪಿ ಎಂ.ಎ.ಸಲೀಂ ಸೂಚನೆ

​ಪ್ರಜಾವಾಣಿ ವಾರ್ತೆ
Published 31 ಮೇ 2025, 23:30 IST
Last Updated 31 ಮೇ 2025, 23:30 IST
ಎಂ.ಎ. ಸಲೀಂ
ಎಂ.ಎ. ಸಲೀಂ   

ಬೆಂಗಳೂರು: ಸಕಾರಣವಿದ್ದರಷ್ಟೇ ವಾಹನಗಳ ದಾಖಲೆಗಳನ್ನು ಪೊಲೀಸರು ಪರಿಶೀಲನೆ ನಡೆಸಬೇಕೇ ವಿನಃ, ಅನಗತ್ಯವಾಗಿ ತಪಾಸಣೆ ನಡೆಸಬಾರದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಅವರು ಠಾಣಾ ವ್ಯಾಪ್ತಿಯ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ಮಂಡ್ಯದಲ್ಲಿ ಮಗು ಸಾವು ಹಾಗೂ ದಾವಣಗೆರೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಕ್ಯಾಂಟರ್ ಚಾಲಕ ಡಿಕ್ಕಿ ಹೊಡೆದ ಪ್ರಕರಣವನ್ನು ಉಲ್ಲೇಖಿಸಿ ಆದೇಶ ಹೊರಡಿಸಿರುವ ಅವರು, ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸುವ ವೇಳೆ ರಸ್ತೆ ಸುರಕ್ಷತಾ ಕ್ರಮಗಳನ್ನು ಗಮನದಲ್ಲಿರಿಸಿಕೊಳ್ಳುತ್ತಿಲ್ಲ. ಇದರಿಂದ ಸಾರ್ವಜನಿಕರ ಹಾಗೂ ಪೊಲೀಸರ ಜೀವಕ್ಕೆ ಕುತ್ತು ಉಂಟಾಗುತ್ತಿದೆ. ಹಾಗಾಗಿ ಅಧಿಕಾರಿ ಮತ್ತು ಸಿಬ್ಬಂದಿಗೆ ಕೆಲವು ನಿರ್ದೇಶನಗಳನ್ನು ಪಾಲಿಸುವಂತೆ ಹೇಳಿದ್ದಾರೆ.  

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಕಂಡುಬಂದಾಗ ಮಾತ್ರವೇ ವಾಹನಗಳನ್ನು ನಿಲ್ಲಿಸಿ ಪ್ರಕರಣ ದಾಖಲಿಸಬೇಕು. ಹೆದ್ದಾರಿಗಳಲ್ಲಿ ಜಿಗ್ ಜಾಗ್ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳನ್ನು ತಡೆಯಬಾರದು. ರಸ್ತೆ ಮಧ್ಯೆ ದಿಢೀರ್ ಅಡ್ಡ ಬಂದು ವಾಹನ ನಿಲ್ಲಿಸುವಂತೆ ಹೇಳಬಾರದು ಹಾಗೂ ಬೈಕ್‌ನ ಹಿಂಬದಿ ಸವಾರನನ್ನು ಹಿಡಿದು ಎಳೆಯುವುದು ಹಾಗೂ ವಾಹನದ ಕೀಲಿ ಕೈ ತೆಗೆದುಕೊಳ್ಳುವುದನ್ನು ಮಾಡಬಾರದು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.

ADVERTISEMENT

ವೇಗವಾಗಿ ವಾಹನ ಚಲಾಯಿಸಿಕೊಂಡು ಬರುವ ಸವಾರರನ್ನು ಬೆನ್ನಟ್ಟದೇ ಆ ವಾಹನಗಳ ನೋಂದಣಿ ಸಂಖ್ಯೆ ಗುರುತು ಮಾಡಿ, ವಿವಿಧ ನಿಯಂತ್ರಣ ಕೊಠಡಿಗಳಿಗೆ ಮಾಹಿತಿ ರವಾನಿಸಿ, ವಾಹನ ಸವಾರನ ಪತ್ತೆಹಚ್ಚಿ ಪ್ರಕರಣ ದಾಖಲಿಸಬೇಕು. ವಾಹನಗಳ ತಪಾಸಣೆ ವೇಳೆ ಪೊಲೀಸರು ಸುರಕ್ಷತೆಗಾಗಿ ರಿಫ್ಲೆಕ್ಟಿವ್ ಜಾಕೆಟ್ ಧರಿಸಬೇಕು ಮತ್ತು ಬಾಡಿ ವೋರ್ನ್ ಕ್ಯಾಮೆರಾ ಧರಿಸಬೇಕು ಎಂದು ಹೇಳಿದ್ದಾರೆ.

ರಾಜ್ಯ, ರಾಷ್ಟ್ರೀಯ ಹೆದ್ದಾರಿ ಹಾಗೂ ಇತರೆ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಅತಿ ವೇಗವಾಗಿ ಚಲಿಸುವ ವಾಹನಗಳನ್ನು ತಡೆಯುವ ಪ್ರಯತ್ನ ಮಾಡಬಾರದು ಹಾಗೂ ಇಂತಹ ವಾಹನಗಳ ವಿರುದ್ಧ ಎಫ್‌ಟಿವಿಆರ್ ದಾಖಲಿಸಲು ತಂತ್ರಜ್ಞಾನ ಆಧಾರಿತ ನಿಯಮಗಳ ಜಾರಿ ಅನುಸರಿಸಬೇಕು. ರಾತ್ರಿ ಮತ್ತು ತಡರಾತ್ರಿಯಲ್ಲಿ ಸಂಚಾರ ಜಂಕ್ಷನ್ ಬದಿಯೇ ವಾಹನ ತಪಾಸಣೆ ಮಾಡಬೇಕು. ವಾಹನ ವೇಗ ತಗ್ಗಿಸಲು ತಪಾಸಣೆ ಸ್ಥಳದ ಸುಮಾರು 100–150 ಮೀಟರ್‌ ಮೊದಲೇ ರಿಫ್ಲೆಕ್ಟಿವ್ ರಬ್ಬರ್ ಕೋನ್‌ ಮತ್ತು ಸುರಕ್ಷತಾ ಸಲಕರಣೆ ಅಳವಡಿಸುವಂತೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.