ADVERTISEMENT

ಐಎಂಎ ವಂಚನೆ: ಕಂಪನಿ ಮಾಲೀಕ ಮನ್ಸೂರ್ ಖಾನ್ ಎಸ್‌ಐಟಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 6:24 IST
Last Updated 19 ಜುಲೈ 2019, 6:24 IST
   

ಬೆಂಗಳೂರು: ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ದೋಚಿ ಪರಾರಿಯಾಗಿದ್ದ ‘ಐ ಮಾನಿಟರಿ ಅಡ್ವೈಸರಿ (ಐಎಂಎ) ಸಮೂಹ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್‌ ಮನ್ಸೂರ್‌ ಖಾನ್‌ ಶುಕ್ರವಾರ ಬೆಳಗಿನ ಜಾವ ಸ್ವದೇಶಕ್ಕೆ ಮರಳಿದ್ದು, ಎಸ್‌ಐಟಿ ಮತ್ತು ಇ.ಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದುಬೈನಲ್ಲಿ ತಲೆಮರೆಸಿಕೊಂಡಿದ್ದ ಮನ್ಸೂರ್‌ ಖಾನ್‌ ಅವರ ಮನವೊಲಿಸಿ, ವಾ‍‍‍‍ಪಸ್‌ ಕರೆತಂದು, ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ) ಮತ್ತು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಕೊನೆಗೂ ಯಶಸ್ವಿಯಾಗಿದ್ದಾರೆ.

ADVERTISEMENT

ರಂಜಾನ್ ಸಮಯದಲ್ಲಿ ಕಂಪನಿ ಬಂದ್‌ ಮಾಡಿ, ದುಬೈಗೆ ಪರಾರಿಯಾಗಿದ್ದ ಮನ್ಸೂರ್‌ ಖಾನ್‌ ಪತ್ತೆಗೆ ‘ಇಂಟರ್‌ಪೋಲ್‌’ ಬ್ಲೂಕಾರ್ನರ್‌ ನೋಟಿಸ್‌ ಹೊರಡಿಸಿತ್ತು. ಎಸ್‌ಐಟಿ ಪೊಲೀಸರು ತಮ್ಮ ಮೂಲಗಳಿಂದ ದುಬೈನಲ್ಲಿ ಮನ್ಸೂರ್‌ ಖಾನ್‌ ಇರುವ ಅಡಗುತಾಣವನ್ನು ಪತ್ತೆ ಹಚ್ಚಿದ್ದರು.

ಆಗಿಂದಾಗ್ಗೆ ಆಡಿಯೊ ಮೂಲಕ ಸಂದೇಶಗಳನ್ನು ರವಾನಿಸುತ್ತಿದ್ದ ಮನ್ಸೂರ್‌ ಖಾನ್‌ ಜೊತೆ ಎಸ್‌ಐಟಿಯ ಅಧಿಕಾರಿಗಳು ಸಂಪರ್ಕ ಸಾಧಿಸಿದ್ದರು. ಆನಂತರ ಇಬ್ಬರು ಅಧಿಕಾರಿಗಳನ್ನು ದುಬೈಗೆ ಕಳುಹಿಸಿ ಆರೋಪಿ ಮನವೊಲಿಸಿದ್ದರು. ಖಾನ್‌ ಸ್ವದೇಶಕ್ಕೆ ಮರಳಲು ಒಪ್ಪಿದ ಬಳಿಕ ರಾಯಭಾರ ಕಚೇರಿಯಲ್ಲಿ ಪ್ರಯಾಣ ದಾಖಲೆ ಸಿದ್ಧಪಡಿಸಿ, ಕೇಂದ್ರ ಸರ್ಕಾರದ ನೆರವಿನೊಂದಿಗೆ ವಾ‍ಪಸ್‌ ಕರೆತರಲಾಯಿತು ಎಂದು ಎಸ್‌ಐಟಿ ಮೂಲಗಳು ವಿವರಿಸಿವೆ.

ಏರ್‌ ಇಂಡಿಯಾ ವಿಮಾನದಲ್ಲಿ (AI 916) ಬೆಳಗಿನ ಜಾವ 1.50ಕ್ಕೆ ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮನ್ಸೂರ್‌ ಖಾನ್‌ ಅವರನ್ನು ಎಸ್‌ಐಟಿ ಹಾಗೂ ಇ.ಡಿ ಅಧಿಕಾರಿಗಳು ಜಂಟಿಯಾಗಿ ವಶಕ್ಕೆ ಪಡೆದರು. ಇವೆರಡೂ ತನಿಖಾ ಸಂಸ್ಥೆಗಳು ಜೊತೆಯಾಗಿ ಆರೋಪಿಯ ವಿಚಾರಣೆ ನಡೆಸಲಿವೆ.

ಈಗ ಹೀಗಿದ್ದಾನೆ ಮನ್ಸೂರ್ ಖಾನ್

ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಅಪರಾಧ (73/2019) ಪ್ರಕರಣದಲ್ಲಿ ಖಾನ್‌ ಒಂದನೇ ಆರೋಪಿಯಾಗಿದ್ದು, ಸುಮಾರು 60 ಸಾವಿರ ಷೇರುದಾರರಿಗೆ ₹ 1,410 ಕೋಟಿ ವಂಚಿಸಿದ್ದಾರೆ ಎಂದು ಮೂಲಗಳು ವಿವರಿಸಿವೆ.

ಐಎಂಎ ಸಮೂಹ ಕಂಪನಿಗಳು ₹ 4,000 ಕೋಟಿಗೂ ಅಧಿಕ ವ್ಯವಹಾರ ನಡೆಸಿರುವುದು ತನಿಖೆಯಿಂದ ಗೊತ್ತಾಗಿದೆ. ಈಗಾಗಲೇ ಖಾನ್‌ ಅವರಿಗೆ ಸೇರಿರುವ ₹ 209 ಕೋಟಿ ಮೌಲ್ಯದ ಸ್ಥಿರ ಹಾಗೂ ಚರಾಸ್ತಿಯನ್ನು ಇ.ಡಿ ಜಪ್ತಿ ಮಾಡಿದೆ. ಐಎಂಎ ಕಂಪನಿಗೆ ಸೇರಿರುವ 105 ಖಾತೆಗಳಲ್ಲಿ ಲಕ್ಷಾಂತರ ಸಲ ವಹಿವಾಟು ನಡೆದಿವೆ. ಒಂದು ನಿರ್ದಿಷ್ಟ ಬ್ಯಾಂಕ್‌ ಖಾತೆಯಲ್ಲಿ 9 ಲಕ್ಷಕ್ಕೂ ಅಧಿಕ ಎಂಟ್ರಿಗಳಿವೆ ಎಂದು ಇ.ಡಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಿನ್ನ, ಬೆಳ್ಳಿ ವಜ್ರದ ವ್ಯಾಪಾರದ ಹೆಸರಿನಲ್ಲಿ ₹ 4,000 ಕೋಟಿ ಠೇವಣಿ ಸಂಗ್ರಹಿಸಿದ್ದ ಐಎಂಎ ಜ್ಯೂವೆಲ್ಸ್‌ ಮತ್ತು ಅದರ ಸಮೂಹ ಕಂಪನಿಗಳು ಬಂದ್‌ ಆಗುತ್ತಿದ್ದಂತೆ, ಸಾವಿರಾರು ಹೂಡಿಕೆದಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಕಂಪನಿಯಿಂದ ವಂಚನೆಗೊಳಗಾದವರು ವಾರಗಟ್ಟಲೆ ಸರದಿಯಲ್ಲಿ ನಿಂತು ದೂರುಗಳನ್ನು ದಾಖಲಿಸಿದ್ದರು.

ಐಎಂಎ ವಂಚನೆ ಪ್ರಕರಣ ರಾಜಕೀಯವಾಗಿ ಅತ್ಯಂತ ಮಹತ್ವ ಪಡೆದಿದ್ದು, ಈಗಾಗಲೇ ಸಚಿವ ಜಮೀರ್‌ ಅಹಮದ್‌ ಖಾನ್‌, ಶಿವಾಜಿನಗರದ ಶಾಸಕ ರೋಷನ್‌ ಬೇಗ್‌ ಅವರನ್ನು ಇ.ಡಿ ಹಾಗೂ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇನ್ನೂ ಹಲವು ರಾಜಕಾರಣಿಗಳು, ಹಿರಿಯ ಅಧಿಕಾರಿಗಳ ಹೆಸರು ಪ್ರಕರಣದಲ್ಲಿ ತಳಕು ಹಾಕಿಕೊಂಡಿದ್ದು, ಅವರನ್ನು ಪ್ರಶ್ನಿಸುವ ಸಾಧ್ಯತೆಯಿದೆ.

ಕೆಲವು ಗಣ್ಯರ ತಲೆದಂಡ?

ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ಸೂರ್‌ ಖಾನ್‌ ಸ್ಪೋಟಕ ಮಾಹಿತಿಗಳನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ.

ಮನ್ಸೂರ್‌ ಖಾನ್‌ ಈಗಾಗಲೇ ಮೂರ್ನಾಲ್ಕು ಆಡಿಯೋ ಬಿಡುಗಡೆ ಮಾಡಿದ್ದು, ಮೊದಲ ಆಡಿಯೋದಲ್ಲಿ ‘ಶಿವಾಜಿನಗರದ ಶಾಸಕರು ತಮ್ಮಿಂದ ಹಣ ಪಡೆದು ವಾ‍ಪಸ್‌ ಕೊಡದೆ ಮೋಸ ಮಾಡಿದ್ದಾರೆ’ ಎಂದು ಆರೋಪಿಸಿದ್ದರು. ಈ ಆರೋಪವನ್ನು ರೋಷನ್‌ ಬೇಗ್‌ ನಿರಾಕರಿಸಿದ್ದರು.

ಸಚಿವ ಜಮೀರ್‌ ಅಹಮದ್‌ ಖಾನ್‌ ಅವರಿಗೆ ಸೇರಿದ್ದ ರಿಚ್ಮಂಡ್‌ ರಸ್ತೆಯ ಆಸ್ತಿಯೊಂದನ್ನು ಮನ್ಸೂರ್‌ ಖಾನ್‌ ₹ 5 ಕೋಟಿಗೆ ಖರೀದಿಸಿದ್ದರು. ಈ ಬಗ್ಗೆ ಅವರು 2018ರ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಘೋಷಣೆ ಮಾಡಿಕೊಂಡಿದ್ದರು.

ಇನ್ನೊಂದು ಆಡಿಯೋದಲ್ಲಿ, ಹಿರಿಯ ಕಾಂಗ್ರೆಸ್‌ ಮುಖಂಡ ಕೆ. ರೆಹಮಾನ್‌ ಖಾನ್‌ ಮತ್ತಿತರ ಹೆಸರನ್ನು ಹೇಳಿದ್ದರು. ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದ ಕೊನೆಯ ಆಡಿಯೊದಲ್ಲಿ ಮನ್ಸೂರ್‌ ಖಾನ್‌ ತನ್ನಿಂದ ಹಣ ಪಡೆದ ಎಲ್ಲರ ಹೆಸರನ್ನು ಕೋರ್ಟ್‌ ಮತ್ತು ಪೊಲೀಸರ ಮುಂದೆ ಬಹಿರಂಗ ಮಾಡುವುದಾಗಿ ತಿಳಿಸಿದ್ದಾರೆ.

ಮನ್ಸೂರ್‌ ಖಾನ್‌ ಸತ್ಯ ಬಾಯಿ ಬಿಟ್ಟರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಕೆಲವು ರಾಜಕಾರಣಿಗಳ ತಲೆದಂಡ ಆಗುವುದು ಖಚಿತ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಮನ್ಸೂರ್ ಖಾನ್‌ ಅವರನ್ನು ವಾಪಸ್‌ ಕರೆತಂದ .ಶ್ರೇಯ ಪಡೆಯುವ ವಿಷಯದಲ್ಲಿ‌ ಎಸ್ಐಟಿ ಹಾಗೂ ಇ.ಡಿ ನಡುವೆ ತಿಕ್ಕಾಟ ಆರಂಭವಾಗಿದೆ.


ನಾವು ಆತ‌ನ ಮನವೊಲಿಸಿ‌ ಕರೆತಂದಿದ್ದೇವೆ. ‌‌‌ಇ.ಡಿ ಅದರ‌‌‌‌ ಕ್ರೆಡಿಟ್ ಪಡೆಯುತ್ತಿದೆ ಎಂದು ಎಸ್ಐಟಿ ಮೂಲಗಳು ಹೇಳಿವೆ.
ಯಾರು ಕರೆ ತಂದಿದ್ದು ಎಂದು ನಿಮಗೆ ಮಧ್ಯಾಹ್ನದೊಳಗೆ ತಿಳಿಯಲಿದೆ ಎಂದು ಇ.ಡಿ ಮೂಲಗಳು ಸ್ಪಷ್ಟಪಡಿಸಿವೆ.

ಐಎಂಎ ಹಗರಣದ ಬಗ್ಗೆ ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.