ADVERTISEMENT

Bharat Bandh | ಸಾರ್ವತ್ರಿಕ ಮುಷ್ಕರ ಇಂದು: ಬಸ್‌, ಬ್ಯಾಂಕ್‌ಗಳು ಬಂದ್‌ ಇಲ್ಲ

ಜನರಿಗೆ ಅಡಚಣೆಯಿಲ್ಲ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 23:30 IST
Last Updated 11 ಫೆಬ್ರುವರಿ 2026, 23:30 IST
<div class="paragraphs"><p>ಸಾರ್ವತ್ರಿಕ ಮುಷ್ಕರಕ್ಕೆ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಕಂಡ ಘೋಷವಾಕ್ಯ </p></div>

ಸಾರ್ವತ್ರಿಕ ಮುಷ್ಕರಕ್ಕೆ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಕಂಡ ಘೋಷವಾಕ್ಯ

   

(ಸಂಗ್ರಹ ಚಿತ್ರ)

ಬೆಂಗಳೂರು: ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ವಿರೋಧಿಸಿ, ನರೇಗಾ ಉಳಿಸಲು ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಫೆ.12ರಂದು ಸಾರ್ವತ್ರಿಕ ಮುಷ್ಕರ ನಡೆಸಲಿದ್ದು, ಜನಜೀವನ, ಸಾರ್ವಜನಿಕ ಸಂಚಾರ ಯಥಾಸ್ಥಿತಿಯಲ್ಲಿರಲಿವೆ. ಕೈಗಾರಿಕಾ ಸಂಸ್ಥೆಗಳಲ್ಲಿ ಉತ್ಪಾದನೆ ಸ್ಥಗಿತಗೊಳ್ಳಲಿದೆ.

ADVERTISEMENT

ಬಿಡದಿ, ಕುಂಬಳಗೋಡು, ಜಿಗಣಿ, ಬೊಮ್ಮಸಂದ್ರ, ನರಸೀಪುರ, ಪೀಣ್ಯ, ವೇಮಗಲ್‌, ದಾಬಸ್‌ಪೇಟೆ, ಎಲೆಕ್ಟ್ರಾನಿಕ್ಸ್‌ ಸಿಟಿ, ವೈಟ್‌ಫೀಲ್ಡ್‌ ಸೇರಿದಂತೆ ಎಲ್ಲ ಕೈಗಾರಿಕಾ ವಲಯಗಳಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸದೇ ಮುಷ್ಕರವನ್ನು ಬೆಂಬಲಿಸಲಿದ್ದಾರೆ. ಆಯಾ ವಲಯಗಳಲ್ಲಿ ಪ್ರತಿಭಟನಾ ಸಭೆಗಳೂ ನಡೆಯಲಿವೆ ಎಂದು ಕಾರ್ಮಿಕ ಸಂಘಟನೆಗಳು ಹೇಳಿವೆ.

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಮತ್ತು ಎಲ್‌ಐಸಿ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಸಾರಿಗೆ ನಿಗಮಗಳು, ಬ್ಯಾಂಕ್‌ಗಳು ಸೇರಿದಂತೆ ಉಳಿದ ಸಾರ್ವಜನಿಕ ವಲಯಗಳ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿವೆ.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಫೆ.12ರಂದು ಬೆಳಿಗ್ಗೆ 11.30ಕ್ಕೆ ಪುರಭವನದಲ್ಲಿ ಪ್ರತಿಭಟನೆ ನಡೆಸಿ ಬಂಧನಕ್ಕೆ ಒಳಗಾಗಲು ನಿರ್ಧರಿಸಲಾಗಿದೆ. ವಿವಿಧ ವಿಭಾಗದ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ಜೆಸಿಟಿಯು ಸಮನ್ವಯಕಾರ ಕೆ.ವಿ. ಭಟ್‌ ತಿಳಿಸಿದ್ದಾರೆ.

‘ಜನಜೀವನಕ್ಕೆ ನೇರ ಪರಿಣಾಮ ಆಗದೇ ಇರಬಹುದು. ಆದರೆ, ಕೈಗಾರಿಕೋದ್ಯಮಿಗಳು, ಐಟಿ–ಬಿಟಿ ಉದ್ಯಮಿಗಳು ಸೇರಿದಂತೆ ಬಂಡವಾಳಶಾಹಿಗಳಿಗೆ ಹೊಡೆತ ಬೀಳಲಿದೆ. ಒಂದು ದಿನದ ಉತ್ಪಾದನೆ ಸ್ಥಗಿತಗೊಂಡಾಗ ಕೋಟ್ಯಂತರ ರೂಪಾಯಿ ನಷ್ಟವಾಗುತ್ತದೆ. ಆಗಲಾದರೂ ಕಾರ್ಮಿಕರ ಮಹತ್ವ ಅರ್ಥವಾಗಲಿ ಎಂದು ಮುಷ್ಕರ ಕೈಗೊಳ್ಳಲಾಗಿದೆ’ ಎಂದು ಸಿಐಟಿಯು ಅಧ್ಯಕ್ಷ ಮೀನಾಕ್ಷಿ ಸುಂದರಂ, ಕಾರ್ಯದರ್ಶಿ ಎಸ್‌. ವರಲಕ್ಷ್ಮೀ ತಿಳಿಸಿದ್ದಾರೆ.

ಬೇಡಿಕೆಗಳೇನು?

  • ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ರದ್ದುಗೊಳಿಸಬೇಕು.

  • ವಿಬಿ ಜಿ ರಾಮ್‌ ಜಿ ಕಾಯ್ದೆ ರದ್ದುಗೊಳಿಸಿ, ನರೇಗಾ ಪುನರ್ ಸ್ಥಾಪಿಸಬೇಕು.

  • ಭೂಸ್ವಾಧೀನ ಕಾಯ್ದೆಯನ್ನು ಹಿಂಪಡೆಯಬೇಕು.

  • ಭೂಸುಧಾರಣಾ, ಎಪಿಎಂಸಿ, ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು.

  • ವಿದ್ಯುಚ್ಛಕ್ತಿ ಖಾಸಗೀಕರಣ ಮಾಡಬಾರದು.

  • ಬೀಜ ಕಾಯ್ದೆ ಹಿಂಪಡೆಯಬೇಕು.

  • ವಿಮಾ ತಿದ್ದುಪಡಿ ಕಾಯ್ದೆ, ಶಾಂತಿ ಕಾಯ್ದೆ ರದ್ದುಗೊಳಿಸಬೇಕು.

  • ರಾಜ್ಯ ಸರ್ಕಾರ ತರಲು ಉದ್ದೇಶಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ಸಂಬಂಧಿಸಿದ ಅಧಿಸೂಚನೆ ರದ್ದುಪಡಿಸಬೇಕು.

  • ಕಾರ್ಮಿಕರಿಗೆ ಕನಿಷ್ಠ ವೇತನ ಹೆಚ್ಚಳ ಮಾಡಲು ಅಧಿಸೂಚನೆ ಹೊರಡಿಸಬೇಕು.

  • ಕೇಂದ್ರದ ಜನವಿರೋಧಿ ಕಾಯ್ದೆಗಳನ್ನು ಕರ್ನಾಟಕದಲ್ಲಿ ಜಾರಿಗೊಳಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಬೇಕು ಎಂಬುದು ಬೇಡಿಕೆಗಳಾಗಿವೆ.

ಪ್ರಚಾರಕ್ಕೆ ಸಿಗದ ಅವಕಾಶ
‘ಮುಷ್ಕರದ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಆಟೊದಲ್ಲಿ ಪ್ರಚಾರ ಮಾಡಲು ಅನುಮತಿ ನೀಡುವಂತೆ ಪೊಲೀಸ್‌ ಇಲಾಖೆಗೆ ಮನವಿ ಮಾಡಿದ್ದೆವು. ಆದರೆ ಅನುಮತಿ ನಿರಾಕರಿಸಿದ್ದರು. ಹಾಗಾಗಿ ಜನರಿಗೆ ಮಾಹಿತಿ ನೀಡಲು ಸಾಧ್ಯವಾಗಿಲ್ಲ’ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಸ್‌. ವರಲಕ್ಷ್ಮೀ ತಿಳಿಸಿದರು. ‘ಆಟೊದಲ್ಲಿ ಪ್ರಚಾರಕ್ಕೆ ಅನುಮತಿ ನೀಡದೇ ಇರುವುದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದೆವು. ನ್ಯಾಯಾಲಯವು ನಮ್ಮ ಪರ ತೀರ್ಪು ನೀಡಿದೆ. ಆದರೆ ಬುಧವಾರ ಸಂಜೆ ತೀರ್ಪು ಪ್ರತಿ ಕೈಸೇರಿದ್ದರಿಂದ ಪ್ರಚಾರ ಮಾಡಲು ಸಮಯವಿಲ್ಲದಂತಾಯಿತು’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.