ADVERTISEMENT

ಶರಾವತಿ ಕಣಿವೆಗೇ ಕನ್ನ !

ವಿದ್ಯುತ್ ಯೋಜನೆಯಿಂದ ಜೀವ ವೈವಿಧ್ಯತೆಗೆ ಸಂಚಕಾರ

ಎಸ್.ರವಿಪ್ರಕಾಶ್
Published 27 ಸೆಪ್ಟೆಂಬರ್ 2019, 19:30 IST
Last Updated 27 ಸೆಪ್ಟೆಂಬರ್ 2019, 19:30 IST
   

ಬೆಂಗಳೂರು: ವಿಶ್ವದ ಜೀವ ವೈವಿಧ್ಯತೆಯ ಆಗರವಾಗಿರುವ ಶರಾವತಿ ಕಣಿವೆಯ ‘ಉದರ’ದೊಳಗೆ ಸುರಂಗ ಕೊರೆದು; ಜಲ ವಿದ್ಯುತ್‌ ಘಟಕಗಳನ್ನು ಸ್ಥಾಪಿಸುವ‘ಪಂಪ್ಡ್‌ ಸ್ಟೋರೇಜ್‌’ ಯೋಜನೆಯ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ.

ಇದು ಜಾರಿಯಾದರೆ ದಟ್ಟ ಅರಣ್ಯ, ವನ್ಯಜೀವಿ ಸಂಕುಲದ ಅಸ್ತಿತ್ವಕ್ಕೇ ಕೊಡಲಿ ಪೆಟ್ಟು ಬೀಳಲಿದೆ ಎಂಬ ಆತಂಕ ವ್ಯಕ್ತವಾಗಿದೆ. ಹಲವು ಅಭಿವೃದ್ಧಿ ಯೋಜನೆಗಳಿಂದ ಈಗಾಗಲೇ ಪಶ್ಚಿಮಘಟ್ಟದ ಜೀವ ವೈವಿಧ್ಯತೆ ನಾಶದ ಅಂಚಿಗೆ ತಲುಪಿದ್ದು, ಮತ್ತೊಂದು ಹೊಸ ಬಗೆಯ ಜಲವಿದ್ಯುತ್‌ ಯೋಜನೆ ಈ ಭಾಗದ ಜನರಲ್ಲಿ ಆತಂಕ ಮೂಡಿಸಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಇಂಧನ ಸಚಿವರಾಗಿದ್ದಾಗ ₹4,862.89 ಕೋಟಿ ಅಂದಾಜು ವೆಚ್ಚದಲ್ಲಿ ಈ ಯೋಜನೆ ರೂಪುಗೊಂಡಿತ್ತು. ಈಗ ಅದರ ಅಂದಾಜು ವೆಚ್ಚ ಇನ್ನೂ ಹೆಚ್ಚಾಗಲಿದೆ. ಯೋಜನೆಯ ಕಾರ್ಯ ಸಾಧ್ಯತೆಯ ಸಮಗ್ರ ಯೋಜನಾ ವರದಿಯನ್ನು(ಡಿಪಿಆರ್‌) ತಯಾರಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯ ವನ್ಯಜೀವಿ ಮಂಡಳಿ ಗುರುವಾರ ಒಪ್ಪಿಗೆ ನೀಡಿದೆ.

ADVERTISEMENT

ಭೂಗರ್ಭಕ್ಕೇ ಕನ್ನ: ‘ಪಂಪ್ಡ್‌ ಸ್ಟೋರೇಜ್‌ ಪ್ರಾಜೆಕ್ಟ್‌’ ಮಾಮೂಲಿ ಜಲ ವಿದ್ಯುತ್‌ ಯೋಜನೆಯಲ್ಲ. ಎರಡು ಜಲಾಶಯಗಳ ನಡುವೆ ಭೂಗರ್ಭದೊಳಗೆ ಹಲವು ಕಿ.ಮೀ.ಗಳಷ್ಟು ಸುರಂಗ ಕೊರೆದು ಅಲ್ಲಿ ಜಲವಿದ್ಯುತ್‌ ಉತ್ಪಾದನಾ ಘಟಕಗಳ ಮೂಲಕ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ಇದಕ್ಕೆ ಒಂದು ಜಲಾಶಯ ಎತ್ತರ ಪ್ರದೇಶದಲ್ಲಿದ್ದು, ಮತ್ತೊಂದು ಜಲಾಶಯ ಕೆಳ ಭಾಗದಲ್ಲಿರಬೇಕು. ಹೀಗಾಗಿ, ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆ ತಳಕಳಲೆ ಮತ್ತು ಉತ್ತರಕನ್ನಡ ಜಿಲ್ಲೆ ಗೇರುಸೊಪ್ಪ ಜಲಾಶಯಗಳನ್ನು ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಎರಡೂ ಜಲಾಶಯಗಳು ಲಿಂಗನಮಕ್ಕಿ ಜಲಾಶಯದ ಕೆಳ ಭಾಗದಲ್ಲಿವೆ.

ಸುರಂಗದ ಮೂಲಕ ಎರಡೂ ಜಲಾಶಯಗಳ ಮಧ್ಯೆ ನೀರು ರಭಸದಿಂದ ಹರಿಯುವಂತೆ ಮಾಡಲಾಗುವುದು. ಇದರಿಂದ ಜನರೇಟರ್‌ಗಳು ವಿದ್ಯುತ್‌ ಉತ್ಪಾದಿಸುತ್ತವೆ. ವಿದ್ಯುತ್‌ ಬೇಡಿಕೆ ಕಡಿಮೆ ಇದ್ದಾಗ ಅಂದರೆ, ರಾತ್ರಿ ಅಥವಾ ವಾರಾಂತ್ಯದಲ್ಲಿ ಅಧಿಕ ವಿದ್ಯುತ್‌ ಬಳಸಿ ಕೆಳಗಿನ ಜಲಾಶಯದಿಂದ ಮೇಲಿನ ಜಲಾಶಯಕ್ಕೆ ನೀರು ಪಂಪ್‌ ಮಾಡಲಾಗುತ್ತದೆ. ಕೆಳಗಿನ ಜಲಾಶಯದಿಂದ ಮೇಲಿನ ಜಲಾಶಯಕ್ಕೆ ನೀರನ್ನೆತ್ತಲು ಟರ್ಬೈನ್‌ ಪಂಪ್‌ನಂತೆ ಕೆಲಸ ಮಾಡುತ್ತದೆ. ವಿದ್ಯುತ್‌ ಬೇಡಿಕೆ ಅಧಿಕ ಇದ್ದಾಗ ಮೇಲೆ ಸಂಗ್ರಹಿಸಿದ ನೀರನ್ನು ಟರ್ಬೈನ್‌ ಮೂಲಕ ಬಿಡುಗಡೆ ಮಾಡಲಾಗುತ್ತದೆ. ‘ಪಂಪ್ಡ್‌ ಸ್ಟೋರೇಜ್‌ ಘಟಕ’ವು ಜಲ ವಿದ್ಯುತ್‌ ಘಟಕದಂತೆ ಕಾರ್ಯ ನಿರ್ವಹಿಸುತ್ತದೆ. ಬಳಸಿದ ನೀರನ್ನೇ ಮತ್ತೆ ಮತ್ತೆ ಬಳಸಲಾಗುತ್ತದೆ.

ಅರಣ್ಯ ಪ್ರದೇಶಕ್ಕೆ ಕುತ್ತು: ಈ ಯೋಜನೆಗೆ ಬೇಕಾಗುವ ಬೃಹತ್ ಪ್ರಮಾಣದ ಭೂಮಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬರಲಿದೆ. ಇದಕ್ಕೆ ಹೊಂದಿಕೊಂಡಂತೆ ಶರಾವತಿ ವನ್ಯಜೀವಿಧಾಮವಿದೆ. ಇದು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, 80 ಗ್ರಾಮಗಳು ಈ ವ್ಯಾಪ್ತಿಯಲ್ಲಿವೆ.

ಅಪೂರ್ವ ಜೀವಿ ತಾಣ
ಜಗತ್ತಿನಲ್ಲೇ ಅತ್ಯಂತ ಅಪರೂಪದ ಜೀವರಾಶಿ ಮತ್ತು ವನ್ಯಜೀವಿ ಇಲ್ಲಿವೆ. ಕಾಡೆಮ್ಮೆ, ಕಡವೆ, ಜಿಂಕೆ, ಮಲಬಾರ್‌ ಅಳಿಲು, ಚಿರತೆ, ಕಾಡು ಬೆಕ್ಕು, ಕರಡಿ, ಸಿಂಗಳೀಕ, ಕಾಳಿಂಗ ಸರ್ಪಗಳ ಆಶ್ರಯ ತಾಣ ಇದು.

ಯೋಜನೆಗೆ ಮರುಜೀವ: ಆಕ್ರೋಶ
ಶಿವಮೊಗ್ಗ:
ಪರಿಸರವಾದಿಗಳ ವಿರೋಧದ ಪರಿಣಾಮವಾಗಿ ಸ್ಥಗಿತಗೊಂಡಿದ್ದ ಭೂಗರ್ಭ ಜಲ ವಿದ್ಯುತ್ ಸ್ಥಾವರ ಪ್ರಸ್ತಾವಕ್ಕೆ ಮತ್ತೆ ಜೀವ ತುಂಬಿರುವ ರಾಜ್ಯ ಸರ್ಕಾರದ ನಡೆಗೆ ಶರಾವತಿ ಕಣಿವೆ ಪ್ರದೇಶದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.

ಯೋಜನೆ ಜಾರಿಯಾದರೆ ಶರಾವತಿ ಕಣಿವೆಯ ಜೋಗ, ಮಾವಿನಗುಂಡಿ, ಗೇರುಸೊಪ್ಪ, ಹೆನ್ನಿ, ಪಡನಬೈಲು, ತಳಕಳಲೆ, ಬಿದರೂರು ಮೊದಲಾದ ಭಾಗಗಳ ಜೀವಸಂಕುಲವೇ ನಾಶವಾಗಲಿದೆ. ಭಾರತೀಯ ವಿಜ್ಞಾನ ಸಂಸ್ಥೆ 2002ರಲ್ಲೇ ಯೋಜನೆ ಸಾಧುವಲ್ಲ ಎಂದು ವರದಿ ನೀಡಿತ್ತು ಎನ್ನುತ್ತಾರೆ ಪರಿಸರ ತಜ್ಞರಾದ ಪ್ರೊ.ಬಿ.ಎಂ. ಕುಮಾರಸ್ವಾಮಿ, ಜಗದೀಶ್ ನಾರಗೋಡು, ಕೆ.ವೆಂಕಟೇಶ್.

ಶರಾವತಿ ಅಭಯಾರಣ್ಯ, ಕಣಿವೆಯ ರೈತರು, ಅರಣ್ಯವಾಸಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವನ್ನು ಬಗೆಹರಿಸಬೇಕು. ಶರಾವತಿ ಕಣಿವೆಯಲ್ಲಿ ಹೊಸ ಜಲವಿದ್ಯುತ್ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸುತ್ತಾರೆ ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ.

‘ಜಿಲ್ಲೆಯ ಅಸ್ಮಿತೆ ಶರಾವತಿಯನ್ನು ಸರ್ಕಾರ ಶವಾವತಿಯಾಗಿಸಲು ಹೊರಟಿದೆ. ತಕ್ಷಣ ಡಿಪಿಆರ್ ಆದೇಶ ಹಿಂಪಡೆಯಬೇಕು. ಇಲ್ಲಿದ್ದರೆ ಹೋರಾಟ ಅನಿವಾರ್ಯ ’ಎಂದು ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳಿ ಹೇಳಿದ್ದಾರೆ.

‘2 ಸಾವಿರ ಮೆಗಾವಾಟ್‌ ವಿದ್ಯುತ್ ಉತ್ಪಾದನೆ ಸಾಧ್ಯವಾಗುವುದು ದಿನದ 6 ತಾಸು ಮಾತ್ರ. ಅದಕ್ಕಾಗಿ ಸುಮಾರು ₹ 5 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ. ಸದ್ಯ ಲಿಂಗನಮಕ್ಕಿ ಜಲಾಶಯ ನೀರು ಬಳಸಿಕೊಂಡು 1,469.8 ಮೆಗಾವಾಟ್‌ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಹೆಚ್ಚಿನ ವಿದ್ಯುತ್‌ಗೆ ಬೇಡಿಕೆ ಇದ್ದರೆ ಸೋಲಾರ್ ಸೇರಿದಂತೆ ಪರ್ಯಾಯ ಮಾರ್ಗಗಳಿವೆ ಎನ್ನುವುದುಪರಿಸರವಾದಿಗಳ ವಾದ.

ಯೋಜನೆಗೆ ಬೇಕಾದ ಭೂಮಿ

ವಿಭಾಗ; ರಕ್ಷಿತ ಅರಣ್ಯಭೂಮಿ(ಹೆಕ್ಟೇರ್‌ಗಳಲ್ಲಿ);

ಸಾಗರ (ಶಿವಮೊಗ್ಗ ಜಿಲ್ಲೆ); 2.05 ಎಕರೆ

ಹೊನ್ನಾವರ (ಉ.ಕ.ಜಿಲ್ಲೆ);1305 ಎಕರೆ

ಒಟ್ಟು; 1307.05 ಎಕರೆ

––––––––––––––––

ವಿದ್ಯುತ್‌ ಉತ್ಪಾದನೆ(ಪ್ರಸ್ತಾವಿತ)

2,000 ಮೆ.ವ್ಯಾ ವಿದ್ಯುತ್‌ ಘಟಕಗಳು
ಒಟ್ಟು 8ತಲಾ 250 ಮೆಗಾ ವ್ಯಾಟ್‌ಗಳು

––––––––––––––

ಪಶ್ಚಿಮಘಟ್ಟ ಮಾತ್ರವಲ್ಲ ಇಡೀ ಜಗತ್ತಿನಲ್ಲೇ ಅತ್ಯಂತ ಅಪರೂಪದ ಜೀವರಾಶಿ ಮತ್ತು ವನ್ಯಜೀವಿ ಇಲ್ಲಿವೆ. ಹುಲಿ, ಕಾಡುಕೋಣ, ಕಾಡೆಮ್ಮೆಗಳು, ಕಡವೆ, ಜಿಂಕೆ, ಮಲಬಾರ್‌ ಅಳಿಲು, ಚಿರತೆ, ಕಾಡು ಬೆಕ್ಕು, ಕರಡಿ, ಸಿಂಗಳೀಕ, ಕಾಳಿಂಗ ಸರ್ಪಗಳ ಆಶ್ರಯ ತಾಣ ಇದು. ಯೋಜನೆ ಅನುಷ್ಠಾನಗೊಂಡರೆ ಈ ಅರಣ್ಯವಾಸಿಗಳಿಗೆ ಆತಂಕ ಖಚಿತ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.