ಬ್ರಸೆಲ್ಸ್: ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧಕ್ಕೆ ಸಂಬಂಧಿಸಿದಂತೆ ಐರೋಪ್ಯ ಒಕ್ಕೂಟವು ರಷ್ಯಾದ ವಿರುದ್ಧ ಹೊಸ ನಿರ್ಬಂಧಗಳನ್ನು ವಿಧಿಸಿದೆ.
ಹೊಸ ನಿರ್ಬಂಧಗಳಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳು, ಮಾನವ ಹಕ್ಕುಗಳು ಮತ್ತು ಹೈಬ್ರಿಡ್ ಬೆದರಿಕೆಗಳಿಗೆ ಸಂಬಂಧಿಸಿದ ಕ್ರಮಗಳು ಸೇರಿವೆ ಎಂದು ಐರೋಪ್ಯ ಒಕ್ಕೂಟ ತಿಳಿಸಿದೆ.
ರಷ್ಯಾದ ಕಚ್ಚಾ ತೈಲದ ಮೇಲಿನ ಬೆಲೆ ಮಿತಿಯನ್ನು ತಪ್ಪಿಸಲು ಹಂತಹಂತವಾಗಿ ಕಠಿಣ ಕ್ರಮ ಕೈಗೊಳ್ಳಲು ಐರೋಪ್ಯ ಒಕ್ಕೂಟ ಮತ್ತು ಅದರ ಮಿತ್ರ ರಾಷ್ಟ್ರಗಳು ತೀರ್ಮಾನಿಸಿವೆ ಎಂದು ವರದಿಯಾಗಿದೆ.
ಇದೇ ವಾರ ಕೆನಡಾದಲ್ಲಿ ನಡೆಯುವ ಜಿ–7 ದೇಶಗಳ ಹಣಕಾಸು ಮಂತ್ರಿಗಳ ಸಭೆಯಲ್ಲಿ ಐರೋಪ್ಯ ಒಕ್ಕೂಟವು ಕಚ್ಚಾ ತೈಲದ ಮೇಲೆ ಕಡಿಮೆ ಬೆಲೆ ಮಿತಿಗೆ ಒತ್ತಾಯಿಸಲಿದೆ. ತೈಲ ರಫ್ತು ಉಕ್ರೇನ್‌ನಲ್ಲಿ ತನ್ನ ಯುದ್ಧಕ್ಕೆ ಹಣಕಾಸು ಒದಗಿಸುವ ರಷ್ಯಾದ ಪ್ರಮುಖ ಆದಾಯದ ಮೂಲಗಳಲ್ಲಿ ಒಂದಾಗಿದೆ.
ಹೊಸ ನಿರ್ಬಂಧಗಳಿಂದಾಗಿ ರಷ್ಯಾದ ಪ್ರಮುಖ ತೈಲ ಸಂಸ್ಥೆ ಸುರ್ಗುಟ್ನೆಫ್ಟೆಗಾಜ್, ಹಡಗು ವಿಮಾ ಕಂಪನಿಗಳು ಸೇರಿದಂತೆ 130ಕ್ಕೂ ಹೆಚ್ಚು ಘಟಕಗಳ ಮೇಲೆ ಪರಿಣಾಮ ಬೀರಲಿದೆ ಎಂದು ಮೂಲಗಳು ತಿಳಿಸಿವೆ.
ರಷ್ಯಾದ ಮಿಲಿಟರಿಯಿಂದ ಮರುಬಳಕೆ ಮಾಡಬಹುದಾದ ಉತ್ಪನ್ನಗಳ ಮರು ಮಾರಾಟದ ಮೇಲಿನ ಕ್ರಮಗಳನ್ನು ಬಿಗಿಗೊಳಿಸಲಾಗುವುದು ಎಂದು ಐರೋಪ್ಯ ಒಕ್ಕೂಟ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.