ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ರಾಯಿಟರ್ಸ್ ಚಿತ್ರ
ನ್ಯೂಯಾರ್ಕ್/ವಾಷಿಂಗ್ಟನ್: ‘ಭಾರತ ಮತ್ತು ಪಾಕಿಸ್ತಾನದ ‘ಬಹಳ ಬುದ್ಧಿವಂತ’ ನಾಯಕರು ಸೇನಾ ಸಂಘರ್ಷ ಮುಂದುವರಿಸದಿರಲು ‘ನಿರ್ಧಾರ’ ಮಾಡಿದರು. ಇಲ್ಲದೇ ಹೋದಲ್ಲಿ, ಸಂಘರ್ಷದಲ್ಲಿ ಅಣ್ವಸ್ತ್ರಗಳ ಬಳಕೆಯಾಗಲಿತ್ತು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ತಾನೇ ಮಧ್ಯಸ್ಥಿಕೆ ವಹಿಸುವ ಮೂಲಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ನಿಲ್ಲಿಸಿದ್ದಾಗಿ ಇದುವರೆಗೆ ಹೇಳುತ್ತಲೇ ಬಂದಿದ್ದ ಟ್ರಂಪ್, ಇದೇ ಮೊದಲ ಬಾರಿಗೆ ಇದರ ಶ್ರೇಯ ತಮ್ಮದೆಂದು ಹೇಳಿಕೊಂಡಿಲ್ಲ.
ಪಾಕಿಸ್ತಾನ ಸೇನಾ ಮಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರಿಗೆ ಶ್ವೇತಭವನದಲ್ಲಿ ಭೋಜನಕೂಟ ಏರ್ಪಡಿಸಿದ್ದ ಸಂದರ್ಭದಲ್ಲಿ ಟ್ರಂಪ್ ಅವರು ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಈ ಮಾತು ಹೇಳಿದ್ದಾರೆ.
‘ಮುನೀರ್ ಅವರಿಗೆ ಆತಿಥ್ಯ ನೀಡುತ್ತಿರುವುದು ಹೆಮ್ಮೆಯ ವಿಚಾರ. ಸಂಘರ್ಷವನ್ನು ನಿಲ್ಲಿಸುವ ನಿರ್ಧಾರ ಕೈಗೊಂಡಿದ್ದಕ್ಕಾಗಿ ನಾನು ಮುನೀರ್ ಅವರಿಗೆ ಧನ್ಯವಾದ ಹೇಳಲು ಬಯಸಿದ್ದು, ಇದಕ್ಕಾಗಿಯೇ ಅವರನ್ನು ಆಹ್ವಾನಿಸಿರುವೆ. ಪ್ರಧಾನಿ ಮೋದಿ ಅವರಿಗೂ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಭಾರತ ಮತ್ತು ಪಾಕಿಸ್ತಾನ ಜೊತೆ ವ್ಯಾಪಾರ ಒಪ್ಪಂದ ಕುದುರಿಸಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ’ ಎಂದು ಟ್ರಂಪ್ ಹೇಳಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ 26 ಜನರನ್ನು ಹತ್ಯೆ ಮಾಡಿದ ನಂತರ, ಭಾರತ ‘ಆಪರೇಷನ್ ಸಿಂಧೂರ’ ಆರಂಭಿಸಿತು. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ ನಿರ್ದಿಷ್ಟ ದಾಳಿಗಳನ್ನು ನಡೆಸಿತು.
ಬಳಿಕ, ಮೇ 10ರಂದು ಭಾರತ ಮತ್ತು ಪಾಕಿಸ್ತಾನ ಸಂಘರ್ಷ ಸ್ಥಗಿತಗೊಳಿಸಲು ತೀರ್ಮಾನಿಸಿದವು. ಉಭಯ ದೇಶಗಳ ನಡುವಿನ ಸಂಘರ್ಷವನ್ನು ತಾನು ನಿಲ್ಲಿಸಿದ್ದಾಗಿ ಟ್ರಂಪ್ ಪದೇಪದೇ ಹೇಳುತ್ತಲೇ ಇದ್ದರು.
ಮುನೀರ್ ಅವರೊಂದಿಗಿನ ಮಾತುಕತೆ ವೇಳೆ ಇರಾನ್ ವಿದ್ಯಮಾನ ಕುರಿತು ಚರ್ಚೆ ನಡೆಯಿತೇ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಇತರ ಎಲ್ಲ ದೇಶಗಳಿಗಿಂತ ಇರಾನ್ ಕುರಿತು ಪಾಕಿಸ್ತಾನಕ್ಕೆ ಚೆನ್ನಾಗಿ ಗೊತ್ತು. ಯಾವ ಬೆಳವಣಿಗೆ ಬಗ್ಗೆಯೂ ಪಾಕಿಸ್ತಾನಕ್ಕೆ ಅಸಮಾಧಾನ ಇಲ್ಲ. ಏನು ನಡೆಯುತ್ತಿದೆ ಎನ್ನುವುದು ಆ ದೇಶಕ್ಕೆ ಗೊತ್ತಿದೆ. ನನ್ನ ಅಭಿಪ್ರಾಯಕ್ಕೆ ಮುನೀರ್ ಅವರ ಸಹಮತ ಇದೆ’ ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಅಣ್ವಸ್ತ್ರಗಳನ್ನು ಹೊಂದಿರುವ ದೇಶಗಳು. ಸಂಘರ್ಷ ನಿಲ್ಲಿಸುವ ನಿರ್ಧಾರದ ಮೂಲಕ ಅಣು ಯುದ್ಧವಾಗುವುದನ್ನು ಎರಡೂ ದೇಶಗಳು ತಪ್ಪಿಸಿವೆಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.