ADVERTISEMENT

Israel Hamas War | ಒತ್ತೆಯಾಳುಗಳ ಬಿಡುಗಡೆಗೆ ಇಸ್ರೇಲ್–ಹಮಾಸ್ ಒಪ್ಪಿಗೆ: ಟ್ರಂಪ್

ಪಿಟಿಐ
Published 9 ಅಕ್ಟೋಬರ್ 2025, 2:02 IST
Last Updated 9 ಅಕ್ಟೋಬರ್ 2025, 2:02 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ಕೈರೊ: ‘ಶಾಂತಿ ಯೋಜನೆಯ ಮೊದಲ ಹಂತದ ಅನುಷ್ಠಾನದ ಭಾಗವಾಗಿ ಇಸ್ರೇಲ್ ಮತ್ತು ಹಮಾಸ್, ಯುದ್ಧವನ್ನು ನಿಲ್ಲಿಸುವುದರ ಜತೆಗೆ ಒತ್ತೆಯಾಳುಗಳು ಹಾಗೂ ಕೈದಿಗಳನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘ಎಲ್ಲಾ ಒತ್ತೆಯಾಳುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ. ಶಾಶ್ವತವಾಗಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಇಸ್ರೇಲ್ ಮತ್ತು ಹಮಾಸ್ ಬಂಡುಕೋರ ಸಂಘಟನೆಯ ಪ್ರತಿನಿಧಿಗಳು ಮೊದಲ ಹೆಜ್ಜೆಯನ್ನು ಇಟ್ಟಿದ್ದಾರೆ. ಶಾಂತಿ ಯೋಜನೆ ಕುರಿತು ನ್ಯಾಯಯುತವಾಗಿ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದು ಟ್ರಂಪ್ ವಿವರಿಸಿದ್ದಾರೆ.

ಇಸ್ರೇಲ್-ಹಮಾಸ್ ಕದನ ವಿರಾಮ ಮಾತುಕತೆಗಳು ಮುಂದುವರಿಯುತ್ತಿರುವುದರಿಂದ ಮುಂದಿನ ವಾರ ಮಧ್ಯಪ್ರಾಚ್ಯಕ್ಕೆ ಪ್ರವಾಸ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಒತ್ತೆಯಾಳುಗಳ ಬಿಡುಗಡೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ‘ದೇವರ ಸಹಾಯದಿಂದ ನಮ್ಮವರನ್ನು ಮನೆಗೆ ಕರೆತರುತ್ತೇವೆ’ ಎಂದು ಹೇಳಿದ್ದಾರೆ.

ಈ ವಾರಾಂತ್ಯದಲ್ಲಿ ಹಮಾಸ್ ಎಲ್ಲಾ 20 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿದೆ. ಆದೇ ರೀತಿ ಒಪ್ಪಂದದ ಭಾಗವಾಗಿ ಗಾಜಾದಲ್ಲಿರುವ ಇಸ್ರೇಲಿ ಪಡೆಗಳ ಹಿಂದೆ ಸರಿಯಲಿವೆ ಎಂದು ಮೂಲಗಳು ತಿಳಿಸಿವೆ.

ಇಸ್ರೇಲ್‌–ಹಮಾಸ್‌ ಯುದ್ಧ ಅಕ್ಟೋಬರ್ 7ಕ್ಕೆ ಎರಡು ವರ್ಷ ಪೂರೈಸಿದೆ. 2023ರ ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ಹಮಾಸ್‌ ನಡೆಸಿದ ದಾಳಿಯೊಂದಿಗೆ ಯುದ್ಧ ಆರಂಭವಾಗಿತ್ತು. ಹಮಾಸ್‌ ದಾಳಿಯಲ್ಲಿ 1,200 ಇಸ್ರೇಲಿಗರು ಮೃತಪಟ್ಟಿದ್ದರು. ಬಂಡುಕೋರರು 251 ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ಆ ಬಳಿಕ ಇಸ್ರೇಲ್‌ ನಡೆಸಿದ ನಿರಂತರ ದಾಳಿಯಲ್ಲಿ ಗಾಜಾ ಪಟ್ಟಿಯಲ್ಲಿ 67 ಸಾವಿರಕ್ಕೂ ಅಧಿಕ ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.