ನ್ಯೂಯಾರ್ಕ್/ವಾಷಿಂಗ್ಟನ್: ಭಾರತವು ಭಯೋತ್ಪಾದನೆ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಲಿದೆ ಎಂಬುದನ್ನು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಇಡೀ ಜಗತ್ತಿಗೆ ಸ್ಪಷ್ಟ ರೀತಿಯಲ್ಲಿ ಖಾತರಿಪಡಿಸಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ಬುಧವಾರ ವಾಷಿಂಗ್ಟನ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಭಯೋತ್ಪಾದನೆ ಪೋಷಣೆ ಮಾಡುವವರನ್ನು ಮಟ್ಟಹಾಕಲೇಬೇಕು ಎಂದು ಕ್ವಾಡ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪಹಲ್ಗಾಮ್ ದಾಳಿಯ ಹೊಣೆಗಾರರನ್ನು ಕಾನೂನಿನ ಅಡಿಯಲ್ಲಿ ಶಿಕ್ಷಿಸಬೇಕೆನ್ನುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೇಳಿಕೆಯನ್ನು ಕ್ವಾಡ್ ಪುನರುಚ್ಚರಿಸಿದೆ’ ಎಂದರು. ಇದೇ ವೇಳೆ, ‘ಆಪರೇಷನ್ ಸಿಂಧೂರ’ದ ಉದ್ದೇಶಗಳನ್ನೂ ಸಚಿವರು ಸ್ಪಷ್ಟಪಡಿಸಿದರು.
‘ಭಯೋತ್ಪಾದನೆ ಸೃಷ್ಟಿಸುವವರು, ಬೆಂಬಲಿಸುವವರು, ಹಣಕಾಸು ನೆರವು ನೀಡುವವರನ್ನು ಸುಮ್ಮನೆ ಬಿಡುವುದಿಲ್ಲ ಎನ್ನುವ ಸಂದೇಶವನ್ನು ಮೇ 7ರಂದೇ ನಾವು ರವಾನೆ ಮಾಡಿದ್ದೇವೆ. ಇದು ವಿಶ್ವಕ್ಕೂ ಮನವರಿಕೆಯಾಗಿದೆ’ ಎಂದರು.
ಎಸ್.ಜೈಶಂಕರ್, ಅಮೆರಿಕದ ರಾಜ್ಯ ಕಾರ್ಯದರ್ಶಿ ಮಾರ್ಕೋ ರುಬಿಯೋ ಸೇರಿದಂತೆ ಕ್ವಾಡ್ ಒಕ್ಕೂಟದ ವಿದೇಶಾಂಗ ಸಚಿವರು ಎಲ್ಲ ರೀತಿಯ ಭಯೋತ್ಪಾದನೆ ಚಟುವಟಿಕೆ ಮತ್ತು ಹಿಂಸಾರೂಪದ ಉಗ್ರವಾದವನ್ನು ಸರ್ವಾನುಮತದಿಂದ ಖಂಡಿಸಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದರು.
‘ಯಾವುದೇ ವಿಳಂಬವಿಲ್ಲದೇ ಭಯೋತ್ಪಾದಕರನ್ನು ಶಿಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳನ್ನೂ ಒತ್ತಾಯಿಸಲಾಗುವುದು. ಭದ್ರತಾ ಮಂಡಳಿಯ ನಿರ್ಣಯಗಳಂತೆ ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು’ ಎಂದು ಜಂಟಿ ಹೇಳಿಕೆಯಲ್ಲಿ ಮನವಿ ಮಾಡಲಾಗಿದೆ ಎಂದರು.
‘ಹಲವು ದಶಕಗಳಿಂದ ಭಾರತಕ್ಕೆ ಸವಾಲಾಗಿರುವ ಭಯೋತ್ಪಾದನೆಯು ಕ್ವಾಡ್ ಅಲ್ಲದೇ ಇಡೀ ಜಗತ್ತನ್ನು ಕಾಡುತ್ತಿದೆ. ನಾವು ಭಯೋತ್ಪಾದನೆಗೆ ತೀಕ್ಷ್ಣವಾಗಿ ಉತ್ತರ ನೀಡಿದ್ದೇವೆ. ನಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕು ನಮಗಿದೆ’ ಎಂದು ಹೇಳಿದರು.
‘ಶೇ 500ರಷ್ಟು ತೆರಿಗೆ: ಲಿಂಡ್ಸೆಗೆ ಮನವರಿಕೆ ಯತ್ನ’
ರಷ್ಯಾದಿಂದ ತೈಲ ಖರೀದಿ ಮಾಡುವ ದೇಶಗಳ ಮೇಲೆ ಶೇ 500ರಷ್ಟು ತೆರಿಗೆ ವಿಧಿಸುವ ಅಮೆರಿಕದ ಯೋಜನೆ ಸೆನಟರ್ ಲಿಂಡ್ಸೆ ಗ್ರಹಾಮ್ ಮಂಡಿಸಿರುವ ಮಸೂದೆ ಬಗ್ಗೆ ಪ್ರತಿಕ್ರಿಯಿಸಿದ ಜೈಶಂಕರ್ ‘ಅಮೆರಿಕ ಸಂಸತ್ತಿನಲ್ಲಿ (ಕಾಂಗ್ರೆಸ್) ನಡೆಯುವ ಬೆಳವಣಿಗೆಗಳ ಬಗ್ಗೆ ಭಾರತ ಆಸಕ್ತಿ ಹೊಂದಿದೆ’ ಎಂದರು. ಲಿಂಡ್ಸೆ ಅವರಿಗೆ ಭಾರತೀಯರ ಆತಂಕ ಏನೆಂಬುದನ್ನು ತಿಳಿಸಲಾಗಿದೆ ಎಂದೂ ಹೇಳಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ರಾಯಭಾರ ಕಚೇರಿ ಮತ್ತು ಅಧಿಕಾರಿಗಳು ಲಿಂಡ್ಸೆ ಅವರ ಸಂಪರ್ಕದಲ್ಲಿದ್ದಾರೆ. ಇಂಧನ ಭದ್ರತೆಯಲ್ಲಿ ಭಾರತದ ಕಾಳಜಿ ಮತ್ತು ಆಸಕ್ತಿ ಏನೆಂದು ಅವರಿಗೆ ಮನವರಿಕೆ ಮಾಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.