
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ
ಕೀವ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು, ಕ್ರಿಸ್‌ಮಸ್ ಮುನ್ನಾದಿನ ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಹೆಸರನ್ನು ಉಲ್ಲೇಖಿಸದೆ, 'ಇಂದು ನಾವೆಲ್ಲರೂ ಒಂದೇ ಕನಸನ್ನು ಕಾಣುತ್ತಿದ್ದೇವೆ. ನಮ್ಮೆಲ್ಲರಿಗೂ ಒಂದೇ ಆಶಯವಿದೆ. ಅವನು ನಾಶವಾಗಲಿ' ಎಂದು ಹೇಳಿದ್ದಾರೆ.
ದೇಶದ ಜನರನ್ನುದ್ದೇಶಿಸಿ ಮಾತನಾಡಿರುವ ಅವರು, 'ಅವನು ನಾಶವಾಗಲಿ ಎಂಬುದು ನಮ್ಮೆಲ್ಲರ ಯೋಚನೆಯಾಗಿರಬಹುದು. ಆದರೆ, ದೇವರತ್ತ ನೋಡಿದಾಗ, ಖಂಡಿತವಾಗಿಯೂ ಅದಕ್ಕಿಂತ ಹೆಚ್ಚಿನದನ್ನು ಬೇಡುತ್ತೇವೆ' ಎಂದಿದ್ದಾರೆ.
'ಉಕ್ರೇನ್‌ನಲ್ಲಿ ಶಾಂತಿ ನೆಲೆಸಲೆಂದು ಕೋರುತ್ತೇವೆ. ಅದಕ್ಕಾಗಿ ಹೋರಾಡುತ್ತೇವೆ ಹಾಗೂ ಪ್ರಾರ್ಥಿಸುತ್ತೇವೆ. ಅದಕ್ಕೆ ನಾವು ಅರ್ಹರೂ ಹೌದು. ಹಾಗಾದಾಗಲಷ್ಟೇ, ಉಕ್ರೇನ್‌ನ ಪ್ರತಿಯೊಂದು ಕುಟುಂಬ ಸಾಮರಸ್ಯದಿಂದ ಬದುಕಲಿದೆ' ಎಂದು ಹೇಳಿದ್ದಾರೆ.
ಮುಂದುವರಿದು, 'ಅಪಾರ ಸಾವು–ನೋವು ತಂದೊಡ್ಡಿದ್ದರೂ, ಅತ್ಯಂತ ಮುಖ್ಯವಾದದ್ದನ್ನು ಆಕ್ರಮಿಸಲು ಅಥವಾ ದಾಳಿ ಮಾಡಿ ನಾಶ ಮಾಡಲು ರಷ್ಯಾಗೆ ಸಾಧ್ಯವಾಗಿಲ್ಲ. ಅದು, ಉಕ್ರೇನಿಯನ್ನರ ಹೃದಯ. ನಾವು, ಒಬ್ಬರ ಮೇಲೊಬ್ಬರು ಇಟ್ಟಿರುವ ವಿಶ್ವಾಸ. ನಮ್ಮ ಒಗ್ಗಟ್ಟು' ಎಂದು ಅಭಿಪ್ರಾಯಪಟ್ಟಿದ್ದಾರೆ.
ರಷ್ಯಾ ಪಡೆಗಳು ಮಂಗಳವಾರ ಉಕ್ರೇನ್‌ನತ್ತ ಕ್ಷಿಪಣಿ ಹಾಗೂ ಡ್ರೋನ್‌ಗಳ ಮೂಲಕ ದಾಳಿ ನಡೆಸಿದ್ದವು. ಈ ವೇಳೆ ಕನಿಷ್ಠ ಮೂವರು ಮೃತಪಟ್ಟು ಹಲವೆಡೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು.
ಇದನ್ನು ಖಂಡಿಸಿರುವ ಝೆಲೆನ್‌ಸ್ಕಿ, 'ಕ್ರಿಸ್‌ಮಸ್ ಸಂದರ್ಭದಲ್ಲಿ ರಷ್ಯನ್ನರು ತಾವು ನಿಜವಾಗಿಯೂ ಯಾರೆಂಬುದ್ನು ತೋರಿಸಿದ್ದಾರೆ. ದಾಳಿಗೆ ಎಲ್ಲ ರೀತಿಯ ಶಸ್ತ್ರಾಸ್ತ್ರಗಳನ್ನೂ ಬಳಸಿದ್ದಾರೆ. ದೇವರ ಮೇಲೆ ನಂಬಿಕೆ ಇಲ್ಲದವರು ನಡೆಸುವ ಆಕ್ರಮಣ ಇಂಥದ್ದೇ' ಎಂದು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.