ADVERTISEMENT

ಬೆಂಗಳೂರು, ಕೇರಳದ ಸಾಮ್ರಾಜ್ಯ ಸಾಲದು ಅಂತ CJ ರಾಯ್ ಹಾರಿದ್ದು ಎಲ್ಲಿಗೆ ಗೊತ್ತಾ?

ಪ್ರಜಾವಾಣಿ ವಿಶೇಷ
Published 5 ಫೆಬ್ರುವರಿ 2026, 14:39 IST
Last Updated 5 ಫೆಬ್ರುವರಿ 2026, 14:39 IST
<div class="paragraphs"><p>ಸಿ.ಜೆ. ರಾಯ್</p></div>

ಸಿ.ಜೆ. ರಾಯ್

   

ಅದೊಂದು ಐತಿಹಾಸಿಕ ಮೀಟಿಂಗ್... ಟೇಬಲ್ ಮೇಲೆ ಬರೋಬ್ಬರಿ ₹210 ಕೋಟಿಯ ಆಸ್ತಿ!

ಒಂದು ಕಡೆ ಸಿ.ಜೆ. ರಾಯ್. ಎದುರುಗಡೆ ಪಾರ್ಟ್‌ನರ್ ಲತಾ ನಂಬೂದಿರಿ ಮತ್ತು ಲೆಕ್ಕ ನೋಡೋ ಚಾರ್ಟರ್ಡ್ ಅಕೌಂಟೆಂಟ್. ವಾತಾವರಣ ಗಂಭೀರವಾಗಿತ್ತು. ರಾಯ್ ನೇರವಾಗಿ ಕಣ್ಣಲ್ಲಿ ಕಣ್ಣಿಟ್ಟು ಕೇಳಿದ್ರು... 'ಹೇಳಿ, ನಿಮಗೇನು ಬೇಕು?, ಅವರ ಕಡೆಯಿಂದ ಬಂದ ಲಿಸ್ಟ್ ನೋಡಿ ರಾಯ್ ಮನಸಲ್ಲೇ ನಕ್ಕಿರಬೇಕು. ಅವರು ಕೇಳಿದ್ದೇನು ಗೊತ್ತಾ?, 'ನಮಗೆ ರನ್ನಿಂಗ್ ಪ್ರಾಜೆಕ್ಟ್‌ ಬೇಕು. ಆಫೀಸ್ ಬೇಕು. ಕಂಪನಿಯ ಫರ್ನಿಚರ್, ಸ್ಟಾಫ್, ಮೆಟೀರಿಯಲ್ಸ್... ಕಣ್ಣಿಗೆ ಕಾಣೋ ಆಸ್ತಿ ಎಲ್ಲಾ ನಮಗೆ ಬೇಕು!"

ADVERTISEMENT

ರಾಯ್ ಒಂದೇ ಮಾತು... ‘ತೆಗೆದುಕೋ..., ಆಫೀಸ್ ಬೇಕಾ? ತೆಗೆದುಕೋ. ಸ್ಟಾಫ್ ಬೇಕಾ? ಅವ್ರನ್ನೂ ಕರೆದುಕೊಂಡು ಹೋಗು. ನಡೀತಿರೋ ಪ್ರಾಜೆಕ್ಟ್ ಬೇಕಾ? ಧಾರಾಳವಾಗಿ ಇಟ್ಕೋ. ಆಮೇಲೆ ರಾಯ್ ಕೇಳಿದ್ರು: ‘ಸರಿ, ನಿಮಗೇನು ಬೇಡ?’ ಅವರು ಹೇಳಿದ ಆ ಉತ್ತರ ಇದೆಯಲ್ಲಾ... ಅದೇ ಇವತ್ತಿನ ಇತಿಹಾಸ! ‘ನಮಗೆ ಆ ಸರ್ಜಾಪುರದ ಲ್ಯಾಂಡ್ ಬೇಡ. ಅದ್ಯಾವ ಊರು ಸ್ವಾಮಿ?, ಬರೀ ಕಾಡು. ಅಲ್ಲಿ ಯಾರು ಬರ್ತಾರೆ?, ಆ ಹಾಳು ಬಿದ್ದ ಜಾಗ, ಮತ್ತೆ ಈ ಯೂಸ್‌ಲೆಸ್ ಐಟಂಗಳು ನಮಗೆ ಬೇಡವೇ ಬೇಡ. ‘ಅವತ್ತಿನ ದಿನಕ್ಕೆ ಸರ್ಜಾಪುರ ಅಂದ್ರೆ ಕಾಡು, ಗಿಡ-ಗಂಟಿ ಬೆಳೆದ ಪಾಳು ಬಿದ್ದ ಭೂಮಿ. ನಂಬೂದಿರಿ ಕಣ್ಣಿಗೆ ಅದು ಕಸದ ಹಾಗೆ ಕಂಡಿತು. ಅವರು ಕ್ರೀಮ್ ಅಂದುಕೊಂಡು ಆಫೀಸು, ಪ್ರಾಜೆಕ್ಟ್, ಸ್ಟಾಫ್ ಎಲ್ಲಾ ಬಾಚಿಕೊಂಡ್ರು. ಆದರೆ, ರಾಯ್? ಯಾವುದೇ ಆರ್ಗ್ಯುಮೆಂಟ್ ಇಲ್ಲ, ಚೌಕಾಶಿ ಇಲ್ಲ. ಟೇಬಲ್ ಮೇಲಿದ್ದ ಪೇಪರ್ ಸರಿಸಿ, ಪೆನ್ನು ತೆಗೆದು ಒಂದೇ ಮಾತು ಹೇಳಿದ್ರು: ‘ಓಕೆ... ಇಲ್ಲಿ ಸೈನ್ ಹಾಕಿ!’ ಅವರು ‘ಚೆನ್ನಾಗಿರೋ ಹಣ್ಣು’ ಅಂತ ಆರಿಸಿಕೊಂಡ್ರು. ರಾಯ್ ‘ಬೀಜ’ವನ್ನ ಆರಿಸಿಕೊಂಡ್ರು. ಅವರು ಆಫೀಸ್ ಒಳಗೆ ಕೂತರು, ರಾಯ್ ಆ ‘ಕಾಡಿನ’ ದಾರಿ ಹಿಡಿದ್ರು.

ಆಗ ಯಾರಿಗೂ ಗೊತ್ತಿರಲಿಲ್ಲ... ಅವರು ಕಸ ಅಂತ ಎಸೆದ ಆ ‘ಸರ್ಜಾಪುರದ ಕಾಡು’, ಮುಂದೆ ಚಿನ್ನದ ಮೊಟ್ಟೆ ಇಡೋ ಕೋಳಿ ಆಗುತ್ತೆ ಅಂತ! ಆ ಒಂದು ಸಹಿ, ಒಂದು ಸಾಮ್ರಾಜ್ಯದ ಅಂತ್ಯ ಮತ್ತು ಇನ್ನೊಂದು ಸಾಮ್ರಾಜ್ಯದ ಉದಯಕ್ಕೆ ಕಾರಣವಾಯ್ತು. ಆಗ ಹುಟ್ಟಿಕೊಂಡಿತು ನೋಡಿ ಆ ‘ಬೆಂಗಳೂರು ಸ್ಟೋರಿ’! ಇದನ್ನ ನಾನು ಹೇಳ್ತಿಲ್ಲ, ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲೂ, ರಿಯಲ್ ಎಸ್ಟೇಟ್ ಏಜೆಂಟರ ಅಡ್ಡೆಗಳಲ್ಲೂ ಇವತ್ತಿಗೂ ಜನ ಪಿಸುಗುಟ್ಟುವ ಕಥೆ ಇದು. ಗೋಡೆಗಳಿಗೂ ಕಿವಿ ಇರುತ್ತೆ ಸ್ವಾಮಿ!

ಕೆ.ಕೆ. ನಂಬೂದಿರಿ ಆಡಳಿತ, ಟೆಕ್ನಿಕಲ್ ಅಂತ ಬ್ಯುಸಿ ಆಗಿದ್ರೆ, ಇತ್ತ ಲತಾ ನಂಬೂದಿರಿ ಅಡ್ಮಿನ್ ನೋಡ್ಕೊಳ್ತಿದ್ರು. ಈ ಆಡಳಿತದ ಹಾದಿಯಲ್ಲಿ ಲತಾ ನಂಬೂದಿರಿ ಮತ್ತು ಸಿ.ಜೆ. ರಾಯ್ ನಡುವೆ ಬೆಳೆದ ಆ ‘ಸಂಬಂಧ’ ಇದೆಯಲ್ಲ... ಅದು ಬರೀ ಬಿಸಿನೆಸ್‌ಗೆ ಸೀಮಿತವಾಗಿತ್ತಾ? ಊಹುಂ... ಬೆಂಗಳೂರು ಹಾಗೆ ಹೇಳಲ್ಲ!

ಆಗ ಶುರುವಾಗಿದ್ದೇ ನೋಡಿ ಅಸಲಿ ಆಟ. ಸರ್ಜಾಪುರದಲ್ಲಿರುವ ಆ ಬೆಲೆ ಬಾಳುವ, ಬಂಗಾರದಂಥ ಜಮೀನು ರಾಯ್ ಕೈಗೆ ಹೋಗಿದ್ದು ಹೇಗೆ?, ಅದನ್ನ ಇವರು ದುಡ್ಡು ಕೊಟ್ಟು, ರಿಜಿಸ್ಟ್ರೇಷನ್ ಮಾಡಿಸಿ, ಸಾಲ ಮಾಡಿ ತಗೊಂಡಿದ್ದಲ್ಲ. ಆ ಜಮೀನು ಇವರ ಮಡಿಲಿಗೆ ಬಂದು ಬಿದ್ದಿದ್ದು ಆ ‘ಸಂಬಂಧ’ದ ಕಾರಣದಿಂದನಾ?, ಒಂದು ಕಡೆ ಕಂಪನಿಯ ಮೇಲಿರೋ ಹಕ್ಕು, ಇನ್ನೊಂದು ಕಡೆ ಒಳಗೊಳಗೆ ನಡೆದ ಈ ‘ವ್ಯವಹಾರ’. ಸರ್ಜಾಪುರದ ಲ್ಯಾಂಡ್ ಸಿಕ್ಕಿದ್ದು ಅದೃಷ್ಟದಿಂದಲ್ಲ, ಅಥವಾ ಚೌಕಾಶಿ ಮಾಡಿ ಕೊಂಡಿದ್ದಲ್ಲ... ಅದು ಲತಾ ನಂಬೂದಿರಿ ಅವರೊಂದಿಗಿನ ಆ ನಂಟಿನ ಫಲವಾಗಿ ಕೈಸೇರಿದ ಆಸ್ತಿ ಎನ್ನುತ್ತದೆ ಆ ಹಳೇ ಫೈಲುಗಳು!

ಕಲ್ಪನೆ ಮಾಡ್ಕೊಳ್ಳಿ... ಅದು ವಿಂಡ್ಸರ್ ಮ್ಯಾನರ್ ಹೋಟೆಲ್, ಒಳಗೆ ಬರೋಬ್ಬರಿ 350 ಜನ ಸ್ಟಾಫ್ ಜಮಾಯಿಸಿದ್ದಾರೆ. ಅದರಲ್ಲಿ 300 ಜನ ಪಕ್ಕಾ ಇಂಜಿನಿಯರ್ಸ್! ಇವರನ್ನೆಲ್ಲಾ ಒಂದೆಡೆ ಸೇರಿಸಿದ್ದು ಯಾರು?, ಅದೇ ಸಿ.ಜೆ. ರಾಯ್. ಎಲ್ಲರೂ ಅಂದುಕೊಂಡಿದ್ದು ಒಂದೇ, ‘ರಾಯ್ ಕಂಪನಿ ಬಿಡ್ತಿದ್ದಾರೆ, ಇವತ್ತು ನಮ್ಮನ್ನೆಲ್ಲಾ ಬ್ರೈನ್ ವಾಶ್ ಮಾಡಿ ಅವರ ಹೊಸ ಕಂಪನಿಗೆ ಕರ್ಕೊಂಡು ಹೋಗ್ತಾರೆ’ ಅಂತ. ಆದರೆ, ಆತ ಮೈಕ್ ಹಿಡಿದು ಹೇಳಿದ್ದೇನು ಗೊತ್ತಾ?, ‘ನೋಡಿ, ನೀವು ಯಾರೂ ಕ್ರಿಸ್ಟಲ್ ಬಿಡಬಾರದು. ಅದು ಕೇವಲ ಕಂಪನಿಯಲ್ಲ, ಅದೂ ನನ್ನ ಮನೆ, ನೀವು ನನ್ನ ಮಗು. ತಂದೆ ಬೇರೆ ಮನೆ ಮಾಡಿದ ಮಾತ್ರಕ್ಕೆ ಮಗು ಅನಾಥವಾಗಬಾರದು. ನೀವು ಅಲ್ಲೇ ಇರಬೇಕು. ಇದು ನಿಮ್ಮ ಭವಿಷ್ಯ!’ ಆ ಊಟದ ಖರ್ಚನ್ನೆಲ್ಲಾ ತನ್ನ ಸ್ವಂತ ಜೇಬಿನಿಂದ ಕಟ್ಟಿದ ರಾಯ್, ‘ನೀವು ಅಲ್ಲೇ ಇರಿ’ ಅಂತ ಹೇಳಿ ಸೆಂಡ್ ಆಫ್ ಕೊಟ್ಟು ಹೊರಬಂದ.

ಇದು ಮೇಲ್ನೋಟಕ್ಕೆ ಕಂಡ ತ್ಯಾಗ. ಆದರೆ, ಅಸಲಿ ‘ಚಾಣಕ್ಯ ನೀತಿ’ ವರ್ಕ್ ಆಗಿದ್ದು ಮರುದಿನ ಬೆಳಿಗ್ಗೆ! ರಾಯ್ ನೇರವಾಗಿ ಹಳೆಯ ಪಾರ್ಟ್‌ನರ್ (ನಂಬೂದಿರಿ) ಹತ್ತಿರ ಹೋದ್ರು. ‘ನೋಡಿ, ನಿಮ್ಮ ಸ್ಟಾಫ್‌ಗೆ ನಾನು ಹೇಳಿ ಬಂದಿದ್ದೀನಿ, ಯಾರೂ ಕಂಪನಿ ಬಿಡಬೇಡಿ ಅಂತ. ಆದರೆ... ನಿಮಗೆ ಬೇಡವಾದವರು ಯಾರಾದರೂ ಇದ್ದಾರಾ? ಇವರು ನಮಗೆ ದಂಡ, ಇವರಿಂದ ಕಂಪನಿಗೆ ಲಾಭ ಇಲ್ಲ ಅನ್ನೋರು ಯಾರಾದ್ರೂ ಇದ್ರೆ ಹೇಳಿ?’ ಅಂತ ಕೇಳಿದ್ರು. ಅವರು ಒಂದು ಲಿಸ್ಟ್ ಕೊಟ್ರು. ಅದರಲ್ಲಿ ಇದ್ದಿದ್ದು 35 ಜನ! ‘ಈ 35 ಜನ ನಮಗೆ ಯೂಸ್‌ಲೆಸ್, ಬೇಕಾದ್ರೆ ನೀನೇ ಕರ್ಕೊಂಡು ಹೋಗು’ ಅಂತ ಉದಾಸೀನವಾಗಿ ಬಿಸಾಕಿದ್ರು.

ರಾಯ್ ಕಾಯ್ತಾ ಇದ್ದಿದ್ದು ಇದಕ್ಕೇ! ಯಾರನ್ನು ಹಳೆಯ ಕಂಪನಿ ‘ದಂಡ’ ಎಂದು ಜರೆದಿತೋ, ಯಾರನ್ನು ‘ಯೂಸ್‌ಲೆಸ್’ ಎಂದು ಹೊರಗೆ ಹಾಕಿತೋ... ಆ 35 ಜನರನ್ನೇ ತನ್ನ ಬಂಡವಾಳವನ್ನಾಗಿ ಮಾಡಿಕೊಂಡ ರಾಯ್, ಅವರ ಬೆನ್ನಿಗೆ ನಿಂತ. ಆ 35 ಜನ ರಿಜೆಕ್ಟ್ ಆದವರಲ್ಲ... ಅವರೇ ಮುಂದೆ ‘ಕಾನ್ಫಿಡೆಂಟ್ ಗ್ರೂಪ್’ ಎನ್ನುವ ಮಹಾಸಾಮ್ರಾಜ್ಯದ ಪಿಲ್ಲರ್‌ಗಳಾದರು! ಯಾಕಂದ್ರೆ ಕಸ ಎಂದು ಎಸೆದಿದ್ದನ್ನೇ ರಸವತ್ತಾದ ಬಂಗಾರವನ್ನಾಗಿ ಮಾಡುವ ತಾಕತ್ತು ಆತನಿಗಿತ್ತು.

ಒಮ್ಮೆ ಫ್ಲ್ಯಾಶ್‌ಬ್ಯಾಕ್‌ಗೆ ಹೋಗಿ. ಅದು 2000ರ ಆರಂಭ. ‘ಕ್ರಿಸ್ಟಲ್ ಗ್ರೂಪ್’ ಉತ್ತುಂಗದಲ್ಲಿದ್ದ ಸಮಯ. ಅಂದು ಆ ಕಂಪನಿಯ ವಾರ್ಷಿಕ ವಹಿವಾಟು ಎಷ್ಟಿತ್ತು ಗೊತ್ತಾ? ಬರೋಬ್ಬರಿ ₹520 ಕೋಟಿ! ಊಹಿಸಿಕೊಳ್ಳಿ... ಅಷ್ಟು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿತ್ತು ಆ ಸಾಮ್ರಾಜ್ಯ. ಮುಟ್ಟಿದ್ದೆಲ್ಲಾ ಚಿನ್ನ, ತುಳಿದಿದ್ದೆಲ್ಲಾ ಆಸ್ತಿ! ಆದರೆ, ಕಾಲಾಯ ತಸ್ಮೈ ನಮಃ!

ಕಾಲ ಚಕ್ರ ಉರುಳಿತು. 2014-15ರ ಸಮಯ ಬಂತು. ಎವರ್‌ಗ್ರೀನ್ ಅಂದುಕೊಂಡಿದ್ದ ಕ್ರಿಸ್ಟಲ್ ಗ್ರೂಪ್‌ನ ಒಂದೊಂದೇ ಪಿಲ್ಲರ್‌ಗಳು ಅಲುಗಾಡಿದವು. ಪ್ರಾಜೆಕ್ಟ್‌ಗಳು ಒಡೆಯಲು ಶುರುವಾದವು. ನೋಡನೋಡುತ್ತಿದ್ದಂತೆ ₹520 ಕೋಟಿಯ ಸಾಮ್ರಾಜ್ಯ ಪೂರ್ತಿ ನೆಲಕ್ಕುರುಳಿತು. ಅಷ್ಟೇ ಅಲ್ಲ, ಕಂಪನಿ ದಿವಾಳಿಯೂ ಆಯ್ತು. ಅಂದು ಮೆರೆದಾಡಿದ್ದ ಆ ಗಂಡ-ಹೆಂಡತಿ (ನಂಬೂದಿರಿ ದಂಪತಿ) ಕಂಬಿ ಎಣಿಸುವಂತೆ ಆಯ್ತು.

ಇಲ್ಲಿ ಗಮನಿಸಬೇಕಾದ ಅಸಲಿ ಸಂಗತಿ ಬೇರೆಯೇ ಇದೆ! ರಾಯ್ ಅವರು, ‘ಹೆಂಡತಿ ಹೇಳಿದ್ರು, ಅದಕ್ಕೆ ನಾನು ಶಾಂತಿಯಿಂದ ಇಳಿದು ಹೋದೆ’ ಅಂತ ಒಂದು ಸ್ಟೇಟ್‌ಮೆಂಟ್ ಕೊಟ್ರಲ್ಲ... ಅದು ಬರೀ ಮೇಲ್ನೋಟಕ್ಕೆ ಮಾತ್ರ. ಜನರನ್ನು ನಂಬಿಸೋಕೆ ಆಡಿದ ಮಾತು. ಅಸಲಿಗೆ ಅವರು ಸುಮ್ಮನೆ ಬ್ಯಾಗ್ ಎತ್ಕೊಂಡು ಇಳಿದು ಹೋಗಲಿಲ್ಲ. ಹೋಗುವಾಗ ಆ ಕಂಪನಿಯ ಆಳಕ್ಕೆ ಇಳಿದು, ಅದರ ಅಡಿಬೇರನ್ನೇ ತೋಡಿ, ಅಲ್ಲಿ ಕೆಲಸ ಮಾಡುತ್ತಿದ್ದ ಅಷ್ಟು ಜನ ‘ಸ್ಟಾಫ್’ಗಳನ್ನೂ ಕೂಡ ತಮ್ಮ ಕಡೆಗೆ ಎಳೆದುಕೊಂಡು ಹೋದರು! ಯಾವಾಗ ಹಳೆಯ ಮರದ ಅಡಿಬೇರು ಕತ್ತರಿಸಿದರೋ, ಆ ಮರ ಒಣಗುವುದು ಗ್ಯಾರಂಟಿ ಆಗಿತ್ತು. ಆ ಕಿತ್ತು ತಂದ ಬೇರುಗಳನ್ನೇ ನೆಟ್ಟು, ಅತ್ತ ಕಡೆ ಹೊಸದೊಂದು ಸಾಮ್ರಾಜ್ಯ ಹುಟ್ಟುಹಾಕಿದರು...ಅದೇ ಇವತ್ತಿನ

‘ಕಾನ್ಫಿಡೆಂಟ್ ಗ್ರೂಪ್’

ಅಧಿಕಾರ ಹೋಯ್ತು, ಕಂಪನಿ ಹೋಯ್ತು ಅಂತ ಕೆ.ಕೆ. ನಂಬೂದಿರಿ ಸುಮ್ಮನೆ ಕೂರಲಿಲ್ಲ. ಅತ್ತ ನಂಬೂದಿರಿ - ಇತ್ತ ಸಿ.ಜೆ. ರಾಯ್. ಇಬ್ಬರ ನಡುವೆ ನಡೆದಿದ್ದು ಸಾಧಾರಣ ಜಗಳ ಅಲ್ಲ... ಅದೊಂದು ಮಹಾ ಕಾನೂನು ಯುದ್ಧ ರಾಜರಂತೆ ಬದುಕಿದ್ದ ಒಂದು ತುಂಬು ಕುಟುಂಬ, ಅಕ್ಷರಶಃ ರೋಡಿಗೆ ಬಂದು ಬಿತ್ತು. ಯಾರು ಅನ್ನ ಹಾಕಿದ್ರೋ, ಯಾರು ನಂಬಿ ಬೋರ್ಡ್ ಸೀಟ್ ಕೊಟ್ಟರೋ, ಅವರನ್ನೇ ಹೀಗೆ ಬೀದಿಗೆ ತಳ್ಳಿ, ಅವರ ಸಮಾಧಿಯ ಮೇಲೆ ಈ ಮನುಷ್ಯ ತನ್ನ ಸಾಮ್ರಾಜ್ಯ ಕಟ್ಟಿದನಲ್ಲ...

ಒಬ್ಬ ಮನುಷ್ಯ ಬಿಸಿನೆಸ್ ಮಾಡ್ತಾನೆ, ಲಾಭ ಮಾಡ್ತಾನೆ. ಅದು ಸಹಜ. ಆದರೆ, ರಾಯ್ ಮಾಡಿದ್ದು ಬಿಸಿನೆಸ್ ಮಾತ್ರ ಅಲ್ಲ... ನೀವು ಟಿವಿ ಆನ್ ಮಾಡಿದ್ರೆ ಸಾಕು, ಏಷ್ಯಾನೆಟ್‌ನ ‘ಸ್ಟಾರ್ ಸಿಂಗರ್’ ಕಾರ್ಯಕ್ರಮದಿಂದ ಹಿಡಿದು, ದೊಡ್ಡ ದೊಡ್ಡ ಸ್ಯಾಟಲೈಟ್ ಚಾನೆಲ್‌ಗಳಲ್ಲಿ ಇವರದ್ದೇ ಹವಾ. ಇದೆಲ್ಲಾ ಚಾರಿಟಿನಾ? ಊಹುಂ... ಪಕ್ಕಾ ‘ಸೆಲ್ಫ್ ಪಿಆರ್’! ಜನರ ಮುಂದೆ ಒಂದು ಬ್ರ್ಯಾಂಡ್ ಬೆಳೆಸಬೇಕು ಅಂದ್ರೆ, ಮೊದಲು ಆ ಬ್ರ್ಯಾಂಡ್‌ನ ಮಾಲೀಕನ ಮುಖವನ್ನು ‘ದೇವರು’ ಅಂತ ನಂಬಿಸಬೇಕು. ಇದು ಇವರ ಸ್ಟ್ರಾಟಜಿ. ಅದು ಕಾಂಟ್ರವರ್ಸಿ ಆಗಿರಲಿ, ಮೀಮ್ ಪೇಜ್‌ಗಳ ಟ್ರೋಲ್ ಆಗಿರಲಿ, ಅಥವಾ ಚಾರಿಟಿ ಶೋ ಆಗಿರಲಿ... ಎಲ್ಲದರ ಹಿಂದೆಯೂ ಇರೋದು ಒಂದೇ ಉದ್ದೇಶ: ಸಿ.ಜೆ. ರಾಯ್ ಎನ್ನುವ ಬ್ರ್ಯಾಂಡ್ ಬಿಲ್ಡಿಂಗ್!

ರಾಯ್ ಅವರು ಒಂದು ಕಡೆ ಹೇಳ್ತಾರೇ... ‘ನನಗೆ ಈ ಸೋಶಿಯಲ್ ಮೀಡಿಯಾ ಎಲ್ಲಾ ಗೊತ್ತಿಲ್ಲಪ್ಪ, ನಾನು ಟೀಮ್ ಇಟ್ಟುಕೊಳ್ಳಲ್ಲ, ನಾನು ಬಹಳ ಡೌನ್ ಟು ಅರ್ಥ್ ಅಂತ. ಅಸಲಿಗೆ ಇವರೊಬ್ಬ ‘ಬುದ್ಧಿ ರಾಕ್ಷಸ’ ಜೋಜಿ ತಂಬಿ ಜೊತೆ ಸೇರಿ ಗಿವ್ ಅವೇ ಮಾಡೋದ್ರಿಂದ ಹಿಡಿದು, ಮಾಡರ್ನ್ ಪಿಆರ್ ಟೆಕ್ನಿಕ್‌ಗಳನ್ನು ಹೇಗೆ ಬಳಸಬೇಕು ಅಂತ ಇವತಿಗೆ ಗೊತ್ತಿರೋ ಹಾಗೆ ಇನ್ಯಾರಿಗೂ ಗೊತ್ತಿಲ್ಲ. ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಯೂಟ್ಯೂಬ್... ಎಲ್ಲಿ ನೋಡಿದ್ರೂ ಮಿಲಿಯನ್ ಗಟ್ಟಲೆ ಫಾಲೋವರ್ಸ್. ಇದೆಲ್ಲಾ ತಾನಾಗೇ ಆಗಿದ್ದಲ್ಲ, ಕೋಟಿ ಸುರಿದು ಕಟ್ಟಿದ ಸಾಮ್ರಾಜ್ಯ!

ನಾರ್ಮಲ್ ಆಗಿ ಒಬ್ಬ ಬಿಸಿನೆಸ್ ಮ್ಯಾನ್ ಮನೆಗೆ ಐಟಿ ರೈಡ್ ಆದ್ರೆ ಅಥವಾ ಇ.ಡಿ ಬಂದ್ರೆ ಜನ ತಲೆ ಕೆಡಿಸಿಕೊಳ್ಳಲ್ಲ. ‘ಓಹ್, ಯಾರೋ ಶ್ರೀಮಂತ, ಟ್ಯಾಕ್ಸ್ ಕಟ್ಟಿಲ್ಲ ಬಿಡು’ ಅಂತ ಸುಮ್ಮನಾಗ್ತಾರೆ. ಆದರೆ, ಇವರ ಕಥೆ ಹಾಗಲ್ಲ. ಇವನು ಜನರಿಗೆ ‘ನಾನು ದಾನ ಶೂರ, ಕಲಿಯುಗದ ಕರ್ಣ’ ಅಂತ ಬಿಂಬಿಸಿಕೊಂಡಿದ್ದಾರೇ. ಈಗ ಇವರ ಮನೆ ಬಾಗಿಲಿಗೆ ಐಟಿ ಅಧಿಕಾರಿಗಳು ಬಂದ್ರೆ ಏನಾಗುತ್ತೆ?, ಜನ ಕೇಳೋ ಪ್ರಶ್ನೆಗಳೇ ಬೇರೆ ಇರುತ್ತೆ. ‘ರಾಯ್, ಎಲ್ಲರಿಗೂ ದಾನ ಮಾಡ್ತಿದ್ದನಲ್ಲ, ಆ ದುಡ್ಡು ಎಲ್ಲಿಂದ ಬಂತು?, ‘ಇದರ ಹಿಂದಿರೋದು ಮನಿ ಲಾಂಡರಿಂಗಾ?’, ಅಥವಾ ‘ದೇಶ ವಿರೋಧಿ ಚಟುವಟಿಕೆನಾ?’ ಅಂತ.

ಬಿಳಿ ಬಟ್ಟೆ ಹಾಕೊಂಡವನ ಮೇಲೆ ಒಂದು ಸಣ್ಣ ಕಲೆ ಬಿದ್ದರೂ ಎದ್ದು ಕಾಣುತ್ತೆ. ಇವರು ತನ್ನನ್ನು ತಾನೇ ಅಷ್ಟು ಶುದ್ಧ ಅಂತ ತೋರಿಸಿಕೊಂಡಿದ್ದೇ ಈಗ ಇವನಿಗೆ ಬರ್ಡನ್ ಆಗಿದೆ. ಸಾರ್ವಜನಿಕರ ಮುಂದೆ ಇವರು ಬೆಳೆಸಿಕೊಂಡ ಆ ‘ದೇವರ ಇಮೇಜ್’ ಇದೆಯಲ್ಲ, ಅದಕ್ಕೆ ಒಂದು ಚೂರು ಗ್ರಹಣ ಹಿಡಿದರೂ ಇವನಿಗೆ ಸಹಿಸಿಕೊಳ್ಳೋಕೆ ಆಗಲ್ಲ. ಪಿಆರ್ ಟೀಮ್ ಮೂಲಕ ಬೆಳೆಸಿದ ಆಕಾಶದ ಎತ್ತರದ ವ್ಯಕ್ತಿತ್ವ, ಈಗ ಒಂದೇ ಒಂದು ರೈಡ್‌ನಿಂದ, ಒಂದೇ ಒಂದು ನೆಗೆಟಿವ್ ನ್ಯೂಸ್‌ನಿಂದ ಪಾತಾಳಕ್ಕೆ ಕುಸಿಯುತ್ತೆ ಅನ್ನೋ ಭಯ! ಆ ಭಯವೇ ಇವರನ್ನ ಈಗ ತಿಂದಿರೋದು. ತಾನು ಕಟ್ಟಿದ ಗಾಜಿನ ಮನೆಯಲ್ಲಿ ತಾನೇ ಬಂಧಿಯಾಗ್ ಬಿಟ್ರು!

ಬೆಂಗಳೂರಿನ ರಿಯಲ್ ಎಸ್ಟೇಟ್, ಕೇರಳದ ಸಾಮ್ರಾಜ್ಯ ಸಾಲದು ಅಂತ ಈ ಮನುಷ್ಯ ಹಾರಿದ್ದು ಎಲ್ಲಿಗೆ ಗೊತ್ತಾ? ದಟ್ ಈಸ್ ‘ಸ್ಲೋವಾಕಿಯಾ’. ಇಲ್ಲಿಗೆ ಮುಗೀತಾ ಕಥೆ? ಊಹುಂ... ಅಸಲಿ ಇಂಟರ್ನ್ಯಾಷನಲ್ ಆಟ ಶುರುವಾಗೋದೇ ನಾಳೆ!!!!!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.