ADVERTISEMENT

ವಿಶ್ಲೇಷಣೆ: ವಿಶ್ವಶಾಂತಿಗೆ ಬೇಕು ಗಾಂಧಿ ಪಥ

ವಿಶ್ವಕ್ಕೆ ಶಾಶ್ವತ ಶಾಂತಿಯ ಮಾರ್ಗ ತೋರುವ ಅವಕಾಶ ಝೆಲೆನ್‌ಸ್ಕಿ ಮುಂದಿತ್ತು

ಜಿ.ಎಸ್.ಜಯದೇವ
Published 9 ಮಾರ್ಚ್ 2025, 23:30 IST
Last Updated 9 ಮಾರ್ಚ್ 2025, 23:30 IST
   

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮತ್ತು ಉಕ್ರೇನಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ನಡುವೆ ನಡೆದ ವಾಕ್ಸಮರವನ್ನು ಇಡೀ ಜಗತ್ತು ವೀಕ್ಷಿಸಿತು. ವೀಕ್ಷಿಸುವಂತೆ ಸಜ್ಜುಗೊಳಿಸಲಾಗಿತ್ತು. ಇಸ್ರೇಲ್– ಹಮಾಸ್‌ ಬಂಡುಕೋರರ ನಡುವಣ ಯುದ್ಧ ಅಥವಾ ರಷ್ಯಾ– ಉಕ್ರೇನ್ ಯುದ್ಧದಿಂದ ಆಗಿರುವ ಹಿಂಸೆ, ರಕ್ತಪಾತಗಳಿಗೆ ಸ್ಪಂದಿಸುವ ಹೃದಯವಂತಿಕೆಯನ್ನು ಜಗತ್ತು ಕಳೆದುಕೊಂಡಿರುವಂತೆ ತೋರುತ್ತಿದೆ.

ಕಳಿಂಗ ಯುದ್ಧದ ರಕ್ತಪಾತವನ್ನು ಕಂಡ ಕಟುಕ ಹೃದಯದ ಚಕ್ರವರ್ತಿ ಅಶೋಕನು ಮರುಗಿ, ಯುದ್ಧದ ನಿರರ್ಥಕತೆಯನ್ನು ಮನಗಂಡು ಅಹಿಂಸಾ ಮಾರ್ಗ ಹಿಡಿದ. ಟ್ರಂಪ್, ಪುಟಿನ್, ನೆತನ್ಯಾಹು ಅವರಂತಹ ಆಧುನಿಕ ಜಗತ್ತಿನ ನಮ್ಮ ನಾಯಕರು ಇಂತಹ ಸಂವೇದನಾಶೀಲತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರಲ್ಲ, ಇದಕ್ಕೆ ಕಾರಣವೇನು? ಸರಾಸರಿಯಾಗಿ ಇಡೀ ಮನುಷ್ಯ ಕುಲವೇ ನೋವಿಗೆ ಸ್ಪಂದಿಸುವ ಗುಣವನ್ನು ಕಳೆದುಕೊಳ್ಳು ವಂತೆ ಪ್ರಭಾವಿಸುತ್ತಿರುವ ಇಂದಿನ ಆಧುನಿಕತೆಯ
ಪ್ರೇರಣೆಗಳಾದರೂ ಯಾವುವು?

ಆರ್ಥಿಕ ಪ್ರಗತಿ ಮತ್ತು ತಾಂತ್ರಿಕ ಸಾಧ್ಯತೆಗಳು ಪ್ರಬಲ ಸಮುದಾಯಗಳ, ಪ್ರಬಲ ದೇಶಗಳ ಪರವಾಗಿ ಮಾತ್ರ ಕೆಲಸ ಮಾಡುತ್ತ ‘ಬಲಿಷ್ಠನಿಗೆ ಮಾತ್ರ ಬಾಳು’ ಎಂಬಂತಹ ಕಾಡುನಿಯಮಕ್ಕೆ ಎಡೆಮಾಡಿಕೊಡಬೇಕೆ? ಕ್ವಾಂಟಮ್ ಕಂಪ್ಯೂಟರ್ ತಂತ್ರಜ್ಞಾನವನ್ನು ಸಾಧಿಸಲು ನಡೆದಿರುವ ಸ್ಪರ್ಧೆಯನ್ನೇ ನೋಡಿ. ನಮ್ಮ ಸೂಪರ್ ಕಂಪ್ಯೂಟರ್‌ಗಳಿಗೆ ಸಾವಿರಾರು ವರ್ಷ ಹಿಡಿಯುವ ಲೆಕ್ಕಾಚಾರವನ್ನು ಈ ಕ್ವಾಂಟಮ್ ಕಂಪ್ಯೂಟರ್‌ಗಳು ಕೆಲವು ಸೆಕೆಂಡ್‍ಗಳಲ್ಲಿ ಮಾಡಿ ಮುಗಿಸುತ್ತವೆಯಂತೆ. ಹೀಗೆ ವಿವರಿಸುತ್ತಿದ್ದ ವಿಜ್ಞಾನಿ ಹೇಳಿದ ಮತ್ತೊಂದು ಮಾತೆಂದರೆ ‘ಯಾವ ದೇಶ ಕ್ವಾಂಟಂ ಕಂಪ್ಯೂಟರ್‌ಗಳನ್ನು ಮೊದಲು ನಿರ್ಮಿಸುತ್ತದೋ ಅದು ಜಗತ್ತನ್ನು ಆಳುತ್ತದೆ!’

ಹೊಸ ತಂತ್ರಜ್ಞಾನದ ಸಾಧ್ಯತೆಗಳಿಂದ ಬಡತನವನ್ನು ಹೋಗಲಾಡಿಸಬಹುದು, ಅಂತರರಾಷ್ಟ್ರೀಯ ಅಪಾರ್ಥಗಳನ್ನು ಪರಿಹರಿಸಿ ಸೌಹಾರ್ದ ಸಂಬಂಧಗಳನ್ನು ಕಟ್ಟ ಬಹುದು ಅಥವಾ ಕೆಡುತ್ತಿರುವ ಹವಾಮಾನ ಬದಲಾವಣೆ ಯನ್ನು ತಡೆಯಬಹುದು ಎಂದು ಈ ವಿಜ್ಞಾನಿಗೆ ಹೊಳೆಯಲೇ ಇಲ್ಲ. ಮನುಷ್ಯನ ಮನಸ್ಸು ನೆಮ್ಮದಿಗಿಂತ ವಿಧ್ವಂಸಕತೆಯ ಕಡೆಗೇ ವಾಲುತ್ತದಲ್ಲ, ಹೀಗೇಕೆ?

ಇಂತಹ ಪ್ರಶ್ನೆ ಎದುರಾದಾಗಲೆಲ್ಲ ಗಾಂಧೀಜಿ ನೆನಪಿಗೆ ಬರುತ್ತಾರೆ. ತಂತ್ರಜ್ಞಾನದ ಸಾಧ್ಯತೆಗಳು ಹೆಚ್ಚಾದಂತೆಲ್ಲ ಮನುಷ್ಯರು ತಮ್ಮ ಒಡನಾಡಿಗಳ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ವಿಜೃಂಭಿಸುವ ಮನಃಸ್ಥಿತಿಗೆ ತಲುಪುತ್ತಾರೆ ಎಂಬುದನ್ನು ಅವರು ಗುರುತಿಸಿದ್ದರು. ಶಾಂತಿಗಿಂತ ಯುದ್ಧದಲ್ಲಿ ವಿಜಯಿಯಾಗುವ ವಿಕೃತ ತವಕಕ್ಕೆ, ನೆಮ್ಮದಿಯ ಬದುಕಿಗಿಂತ ವೈಭವದಿಂದ ಮೆರೆಯುವ ದುರಾಸೆಗೆ ಮನುಷ್ಯರು ದಾಸರಾಗುತ್ತಾರೆ ಎಂಬುದನ್ನು ಅರಿತೇ ಗಾಂಧೀಜಿ ಹೇಳಿದರು- ಸರಳ ಕಾಯಕದ ಬದುಕು ಸಾಗಿಸುತ್ತ ನೆಮ್ಮದಿಯ ಸಮಾಜವನ್ನು ಕಟ್ಟಬೇಕು; ಮನುಷ್ಯ ತನ್ನ ಮೂಲಭೂತ ಆವಶ್ಯಕತೆಗಳನ್ನೂ ಪೂರೈಸಿಕೊಂಡು ಹೆಚ್ಚು ಬಯಸದೆ ತೃಪ್ತಿಯಿಂದ ಬದುಕುವುದನ್ನು ಕಲಿಯಬೇಕು. ಜೊತೆಗೆ ಗಾಂಧೀಜಿ, ದುರಾಸೆಗೆ ಇಂಬು ಕೊಡುವ ಅನಗತ್ಯ ಉತ್ಪಾದನೆ ಮತ್ತು ಅನೈತಿಕ ಆರ್ಥಿಕ ಪ್ರಗತಿಯ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದರು.

ಕಟ್ಟಕಡೆಯ ಮನುಷ್ಯನ ಕ್ಷೇಮವನ್ನು ಪ್ರಗತಿಯ ಆದ್ಯತೆಯಾಗಿ ಎತ್ತಿ ಹಿಡಿಯುವ ಗಾಂಧಿ ತತ್ವವು ಜಗತ್ತಿನ ಕಟ್ಟಕಡೆಯ ದೇಶವೂ ಘನತೆಯಿಂದ, ನೆಮ್ಮದಿಯಿಂದ ಬಾಳುವಂತೆ ಆಗಬೇಕು ಎಂದು ಬಯಸುತ್ತದೆ. ಇದೇ ಸರಿಯಾದ ವಿಶ್ವ ವಿಕಾಸ ಪಥ. ಇಂತಹ ವಿಕಾಸ ಪಥದಲ್ಲಿ ಜಗತ್ತು ನಡೆಯಬೇಕಾದರೆ ಬುದ್ಧಿಪೂರ್ವಕವಾಗಿ
ನಾವು ‘ಆರ್ಥಿಕ ಸಾಮ್ರಾಜ್ಯಶಾಹಿ’ ಬೆಳವಣಿಗೆಯ ಕಂಟಕವನ್ನು ದಾಟಬೇಕು. ಇಂದಿನ ಯುದ್ಧ, ಹಿಂಸೆ, ಅಸಮಾನತೆಯ ಅನರ್ಥಗಳಿಗೆ ಆರ್ಥಿಕ ಸಾಮ್ರಾಜ್ಯಶಾಹಿಯೇ ಕಾರಣ. ಗಾಂಧೀಜಿ ಹೇಳುತ್ತಾರೆ ‘ಒಂದು ಸಣ್ಣ ದ್ವೀಪರಾಷ್ಟ್ರ (ಇಂಗ್ಲೆಂಡ್) ಆರ್ಥಿಕ ಸಾಮ್ರಾಜ್ಯಶಾಹಿಯಾಗಿ ಬೆಳೆದು ಇಂದು ಜಗತ್ತನ್ನೇ ಸರಪಳಿಯಲ್ಲಿ ಬಂಧಿಸಿದೆ. ಭಾರತದಂತಹ ಬೃಹತ್ ರಾಷ್ಟ್ರವೇನಾದರೂ ಕೈಗಾರಿಕೀ ಕರಣದ ಮೂಲಕ ಆರ್ಥಿಕ ಸಾಮ್ರಾಜ್ಯಶಾಹಿಯಾಗಿ ಪರಿಣಮಿಸಿದರೆ ಇಡೀ ಜಗತ್ತನ್ನು ಮಿಡತೆಗಳಂತೆ ತಿಂದು ಮುಗಿಸುತ್ತದೆ. ದೇವರದಯೆಯಿಂದ ನಾವು ಆ ಸ್ಥಿತಿಗೆ ಹೋಗುವುದು ಬೇಡ’.

ಇಂದು ಜಗತ್ತಿನ ಅತಿ ಬಲಿಷ್ಠ ಆರ್ಥಿಕ ಸಾಮ್ರಾಜ್ಯಶಾಹಿ ದೇಶವಾಗಿ ಬೆಳೆದುನಿಂತ ಅಮೆರಿಕ ಇಡೀ ಜಗತ್ತನ್ನೇ ತನ್ನೆದುರು ಮಂಡಿಯೂರಿ ನಿಲ್ಲುವಂತೆ ಮಾಡಲು ಹುಚ್ಚು ಪ್ರಯತ್ನಗಳನ್ನು ಮಾಡುತ್ತಿದೆ. ‘ಅಮೆರಿಕ ಮೊದಲು’ ಎಂಬ ಘೋಷಣೆಯೊಂದಿಗೆ ಸರಕು ಸೇವೆಗಳ ಮೇಲಿನ ಸುಂಕ, ಆಮದು ಸುಂಕಗಳನ್ನು ವಿಧಿಸುತ್ತಿರುವ ಟ್ರಂಪ್ ಆರ್ಥಿಕ ಭಯೋತ್ಪಾದಕನಂತೆ ವರ್ತಿಸುತ್ತಿದ್ದಾರೆ. ಯುದ್ಧ ಬೇಡವೆಂದು ಶಾಂತಿಯನ್ನು ಬಯಸಿದರೆ ಅದನ್ನೂ ಮಾರಲು ಸಿದ್ಧವಿರುವ ಟ್ರಂಪ್ ‘ನಿರಂತರ ಶಾಂತಿ’ಯನ್ನು ದಯಪಾಲಿಸುವ ತಮ್ಮ ಸಾಮರ್ಥ್ಯಕ್ಕೆ ಉಕ್ರೇನ್ ಅಮೂಲ್ಯ ಖನಿಜ ಸಂಪತ್ತನ್ನು ಬಿಟ್ಟುಕೊಡುವ ಒಪ್ಪಂದಕ್ಕೆ ಸಹಿ ಹಾಕಬೇಕು ಎನ್ನುತ್ತಾರೆ. ಬಲಿಷ್ಠ ಆರ್ಥಿಕ ಸಾಮ್ರಾಜ್ಯಶಾಹಿಯ ದೇಶ ಒಂದು ಕಡೆ, ಅಣ್ವಸ್ತ್ರ ಸಮರಕ್ಕೂ ಸಿದ್ಧ ಎನ್ನುವ ರಾಕ್ಷಸ ಶಕ್ತಿಯ ರಷ್ಯಾ ಇನ್ನೊಂದು ಕಡೆ. ಈ ಇಕ್ಕಟ್ಟಿನ ನಡುವೆ ನಿರುಪದ್ರವಿ ಉಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ ಜಗತ್ತಿನ ಅನುಕಂಪವನ್ನು ಗಳಿಸಿದರು ಎನ್ನಬಹುದೇ?

ಐರೋಪ್ಯ ಒಕ್ಕೂಟವು ಝೆಲೆನ್‍ಸ್ಕಿ ಪರವಾಗಿ ನಿಂತಿದೆಯಾದರೂ ಬ್ರಿಟನ್ ಪ್ರಧಾನಿಯು ಅಮೆರಿಕದ ನೆರವಿಲ್ಲದೆ ಶಾಂತಿ ಸಾಧ್ಯವಿಲ್ಲ ಎನ್ನುತ್ತ ಅಮೆರಿಕದ ಆರ್ಥಿಕ ಸಾಮರ್ಥ್ಯಕ್ಕೆ ತಲೆಬಾಗಿದರು. ವಿಧಿ ಇಲ್ಲದೆ ಝೆಲೆನ್‍ಸ್ಕಿ ಮತ್ತೆ ದೊಡ್ಡಣ್ಣನಿಗೆ ಶರಣಾಗಬೇಕಾಯಿತು. ಓವಲ್‍ ಆಫೀಸ್‌ನಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆಯಲ್ಲಿ ಝೆಲೆನ್‍ಸ್ಕಿ ತಮ್ಮ ಕೋಪವನ್ನು, ಪ್ರತೀಕಾರ ಬುದ್ಧಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ವಿಫಲರಾದರು. ಪುಟಿನ್ ಒಬ್ಬ ಭಯೋತ್ಪಾದಕ, ಕೊಲೆಗಡುಕ, ನಂಬಿಕೆಗೆ ಅರ್ಹನಲ್ಲದ ವ್ಯಕ್ತಿ, ಅವನನ್ನು ಅಮೆರಿಕ ಏಕೆ ನಿಯಂತ್ರಿಸ ಲಿಲ್ಲ ಎನ್ನುತ್ತ ಅಸಹನೆಯನ್ನು ವ್ಯಕ್ತಪಡಿಸಿದರು. ‘ಬಡವನ ಕೋಪ ದವಡೆಗೆ ಮೂಲ’ ಎನ್ನುವ ಗಾದೆಯಂತೆ ಮತ್ತೆ ದೊಡ್ಡಣ್ಣನಿಗೇ ಅವರು ಶರಣಾಗಬೇಕಾಯಿತು.

ಝೆಲೆನ್‍ಸ್ಕಿ ಅವರ ಸ್ಥಾನದಲ್ಲಿ ಗಾಂಧಿ ಮಾದರಿಯೊಂದನ್ನು ಇಟ್ಟು ನೋಡೋಣ. ಬಲಿಷ್ಠ ಶಕ್ತಿಗಳಿಂದ ಆಗುವ ಅನ್ಯಾಯವನ್ನು ಗಾಂಧಿ ದೈಹಿಕ ಸಾಮರ್ಥ್ಯದಿಂದ ಎಂದೂ ಎದುರಿಸಲಿಲ್ಲ. ಹೀಗೆ ಎದುರಿಸಿ ಗೆಲ್ಲುವುದು ಸಾಧ್ಯವೆ ಅಥವಾ ಅಸಾಧ್ಯವೆ ಎಂಬ ಪ್ರಶ್ನೆ ಮುಖ್ಯವಲ್ಲ. ಬಾಹ್ಯ ಜಗತ್ತಿನ ವಿದ್ಯಮಾನಗಳು ಅಂತರಂಗದ ಜಗತ್ತಿನಲ್ಲಿ ನಾವು ಗಾಢವಾಗಿ ನಂಬಿ ಸ್ಥಾಪಿಸುವ ತಾತ್ವಿಕತೆಯನ್ನು ಆಧರಿಸಿವೆ. ಸತ್ಯ– ಅಹಿಂಸೆಯ ತತ್ವಗಳ ಮೇಲೆ ಯಾವುದನ್ನು ಸಾಧಿಸುತ್ತೇವೆಯೋ ಅದು ಶಾಶ್ವತ ಎಂಬ ಅಚಲ ವಿಶ್ವಾಸ ಗಾಂಧಿ ತತ್ವದ ಬುನಾದಿ. ದುರ್ಬಲ ಉಕ್ರೇನ್ ದೇಶ ರಷ್ಯಾದಿಂದ ತನಗಾಗುತ್ತಿರುವ ಅನ್ಯಾಯವನ್ನು ಶಕ್ತಿಶಾಲಿ ಅಮೆರಿಕ ಮತ್ತು ಯುರೋಪ್ ದೇಶಗಳ ಶಸ್ತ್ರಾಸ್ತಗಳ ನೆರವಿನಿಂದ ಎದುರಿಸಿ, ತಪ್ಪಿಗೆ ತಕ್ಕ ಶಿಕ್ಷೆ ವಿಧಿಸುತ್ತೇನೆ ಎಂದು ಭಾವಿಸಿದರೆ, ಝೆಲೆನ್‍ಸ್ಕಿಗಾದ ಮುಖಭಂಗಕ್ಕಿಂತ ಬೇರೇನು ಸಾಧ್ಯ?

‘ಶಸ್ತ್ರಾಸ್ತ್ರ ಸಾಮರ್ಥ್ಯದಲ್ಲಿ ನನಗೆ ನಂಬಿಕೆಯಿಲ್ಲ, ಒಳಿತೆಸಗುವ ಸಾಧ್ಯತೆಯೇ ನನ್ನ ಸಾಮರ್ಥ್ಯ. ನಾನು ಯಾರನ್ನೂ ದ್ವೇಷಿಸುವುದಿಲ್ಲ, ಪುಟಿನ್‍ ಅವರಿಗೂ ಒಳಿತನ್ನೇ ಬಯಸುತ್ತ ಅವರ ಹೃದಯದಲ್ಲಿ ಅನುಕಂಪ ಹುಟ್ಟಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಝೆಲೆನ್‍ಸ್ಕಿ ಓವಲ್‌ ಆಫೀಸ್‌ನಲ್ಲಿ ಹೇಳಿದ್ದರೆ, ಹೆಚ್ಚಿನ ಅಂತರ
ರಾಷ್ಟ್ರೀಯ ಅನುಕಂಪವನ್ನು ಅವರು ಗಳಿಸುತ್ತಿದ್ದರು. ಬಲಿಷ್ಠ ದುಷ್ಟಶಕ್ತಿಗಳನ್ನು ಎದುರಿಸುವ ಗಾಂಧಿ ಮಾದರಿಯನ್ನು ಬಲಪಡಿಸುವ ಮೂಲಕ ವಿಶ್ವ ವಿಕಾಸ ಪಥಕ್ಕೆ ಶಾಶ್ವತ ಶಾಂತಿಯ ಸಾಧ್ಯತೆಯನ್ನು ತೋರಿಸುತ್ತಿದ್ದರು.

‘ದ್ವೇಷದಿಂದ ದ್ವೇಷ ಪರಿಹಾರವಾಗದು’ ಎಂಬ ಬುದ್ಧನ ಮಾತು ಇಂದಿಗೂ ಮುಂದೆಂದಿಗೂ ಸತ್ಯ. ಸಂಯಮದ ಮೂಲಕ ಮಾತ್ರ ನಾವು ಇಂತಹ ಸಾಧ್ಯತೆ ಗಳನ್ನು ನೋಡಬಹುದು. ಆದರೆ ಇಡೀ ಜಗತ್ತು ಸಂಯಮವನ್ನು ಒಪ್ಪುತ್ತಿಲ್ಲ. ‘ಅದು ಅಗತ್ಯ, ಆದರೆ ಅದು ನನ್ನಿಂದ ಸಾಧ್ಯವಾಗುತ್ತಿಲ್ಲ’ ಎಂಬ ಪಶ್ಚಾತ್ತಾಪವೂ ಇಲ್ಲದೆ, ಅಪರಾಧಿ ಪ್ರಜ್ಞೆಯೂ ಇಲ್ಲದೆ ಜಗತ್ತು ಆತ್ಮಹತ್ಯಾ ಪಥವನ್ನು ತುಳಿಯುತ್ತಿರುವುದು ದುರದೃಷ್ಟಕರ. ಶಸ್ತ್ರಾಸ್ತ್ರ ಗಳ ಬಲದಿಂದ ಮಾತ್ರ ಶಾಂತಿ ಸಾಧ್ಯ, ಶಕ್ತಿಶಾಲಿಗಳಲ್ಲ ದವರಿಗೆ ಶಾಂತಿ ಸಾಧ್ಯವಿಲ್ಲ ಎಂಬ ನಂಬಿಕೆ ದಿನಗಳೆದಂತೆ ಸುಳ್ಳಾಗುತ್ತಿದೆ. ಗಾಂಧಿ ಪರಿಹಾರವನ್ನು ಒಪ್ಪಿಕೊಳ್ಳದೆ ಜಗತ್ತಿಗೆ ಅನ್ಯಮಾರ್ಗ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.