ADVERTISEMENT

ರಕ್ಷಣಾ ಬಜೆಟ್‌ 2026: ಭಾರತದ ಅಸ್ತಿತ್ವಕ್ಕೆ ಶಕ್ತಿ

ಗಿರೀಶ್ ಲಿಂಗಣ್ಣ
Published 28 ಜನವರಿ 2026, 7:58 IST
Last Updated 28 ಜನವರಿ 2026, 7:58 IST
   

ಪ್ರತಿ ರಾತ್ರಿ ನಾವು ನೆಮ್ಮದಿಯಿಂದ ನಿದ್ದೆ ಮಾಡುತ್ತಿರುವಾಗ, ಗಡಿಯಲ್ಲಿ ಒಂದಷ್ಟು ಜನರು ನಮಗೋಸ್ಕರ ಕೊರೆಯುವ ಚಳಿಯಲ್ಲಿ, ಸುಡುವ ಬಿಸಿಲಲ್ಲಿ ಕಾವಲು ಕಾಯುತ್ತಲೇ ಇರುತ್ತಾರೆ. ನಮ್ಮ ವಿದ್ಯಾರ್ಥಿಗಳು ಭಯವಿಲ್ಲದೆ ಶಾಲೆಗಳಿಗೆ ತೆರಳುವಾಗ, ಜನರು ಕಾರ್ಯನಿಮಿತ್ತ ಪ್ರಯಾಣ ಬೆಳೆಸುವಾಗ, ಅಥವಾ ನಾವು ಸಂಭ್ರಮ, ಸಂತೋಷಗಳಿಂದ ಹಬ್ಬಗಳನ್ನು ಆಚರಿಸುವಾಗ, ಇದೆಲ್ಲವೂ ಸಾಧ್ಯವಾಗಿರುವುದು ಗಡಿಯಲ್ಲಿ ಯೋಧರು ಪಹರೆ ಕಾಯುತ್ತಿರುವುದರಿಂದಲೇ ಎನ್ನುವುದನ್ನು ನಾವು ನೆನಪಿಡಬೇಕು. ಆದ್ದರಿಂದಲೇ ರಕ್ಷಣಾ ಬಜೆಟ್‌ ಭಾರತಕ್ಕೆ ಅತ್ಯಂತ ಮುಖ್ಯವಾಗುತ್ತದೆ. ರಕ್ಷಣಾ ಬಜೆಟ್‌ ಎನ್ನುವುದು ಕೇವಲ ಕಡತಗಳಲ್ಲಿನ ಅಂಕಿಅಂಶಗಳಲ್ಲ. ಬದಲಿಗೆ ನಾವು ಸುರಕ್ಷಿತವಾಗಿ, ಮುಕ್ತವಾಗಿ ಬಾಳಲು, ದೊಡ್ಡ ಕನಸುಗಳನ್ನು ಕಾಣಲು ನೆರವಾಗುವಂತಹ ವ್ಯವಸ್ಥೆಯೂ ಹೌದು. ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು ಫೆಬ್ರವರಿ ತಿಂಗಳಲ್ಲಿ 2026-27ನೇ ಸಾಲಿನ ಕೇಂದ್ರ ಬಜೆಟ್‌ ಮಂಡಿಸಲು ಸಿದ್ಧರಾಗುತ್ತಿದ್ದು, ಈಗ ಒಂದು ಮುಖ್ಯವಾದ ಪ್ರಶ್ನೆಯೂ ಎದುರಾಗುತ್ತಿದೆ. ಅದೇನೆಂದರೆ, ನಮ್ಮ ರಕ್ಷಣಾ ಪಡೆಗಳಿಗೆ ಅವುಗಳಿಗೆ ಬೇಕಾದ ಅವಶ್ಯಕತೆಗಳನ್ನು ಪಡೆಯಲು ಸಾಧ್ಯವೇ?

ಕಳೆದ ವರ್ಷದ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ₹6.81 ಲಕ್ಷ ಕೋಟಿ ನಿಯೋಜಿಸಲಾಗಿದ್ದು, ಇದು ಕೇಂದ್ರ ಬಜೆಟ್‌ನ ಅಂದಾಜು ಶೇ 13ರಷ್ಟು ಪಾಲು ಹೊಂದಿದ್ದು, ಹಿಂದಿನ ಬಜೆಟ್‌ಗೆ ಹೋಲಿಸಿದರೆ ಶೇ 9.5ರಷ್ಟು ಹೆಚ್ಚಳ ಕಂಡಿತ್ತು. ಆದರೆ ರಕ್ಷಣಾ ಬಜೆಟ್‌ನ ಎಲ್ಲ ಮೊತ್ತ ಹೊಸ ಆಯುಧಗಳಿಗೆ ಅಥವಾ ಅತ್ಯಾಧುನಿಕ ತಂತ್ರಜ್ಞಾನಗಳಿಗೇ ವಿನಿಯೋಗವಾಗುವುದಿಲ್ಲ. ಒಂದು ಮನೆಯ ಖರ್ಚು ವೆಚ್ಚಗಳ ವಿಚಾರದಲ್ಲಿ ಹೇಗೆ ಸಂಬಳದ ಬಹುಪಾಲು ಸಾಲಗಳು, ಬಾಡಿಗೆ ಮತ್ತು ದಿನಸಿಗಳಿಗೆ ವೆಚ್ಚವಾಗಿ, ಸಣ್ಣ ಮೊತ್ತ ಮಾತ್ರ ಭವಿಷ್ಯದ ಹೂಡಿಕೆಗೆ ಉಳಿಯುತ್ತದೆಯೋ, ರಕ್ಷಣಾ ವೆಚ್ಚದಲ್ಲೂ ಹಾಗೇ ಆಗುತ್ತದೆ.

ರಕ್ಷಣಾ ಬಜೆಟ್‌ನ ನಾಲ್ಕನೇ ಒಂದು ಪಾಲು ದೇಶಕ್ಕಾಗಿ ನಿರಂತರ ಸೇವೆ ಸಲ್ಲಿಸುವ ನಿವೃತ್ತ ಯೋಧರ ಪಿಂಚಣಿಗೆ ವೆಚ್ಚವಾಗುತ್ತದೆ. ಬಹಳಷ್ಟು ಹಣ ಸೇವೆ ಸಲ್ಲಿಸುತ್ತಿರುವ ಯೋಧರ ಸಂಬಳ, ಸಮವಸ್ತ್ರ, ಆಹಾರ, ಇಂಧನ, ಮತ್ತು ಉಪಕರಣಗಳ ನಿರ್ವಹಣೆಗೆ ಬೇಕಾಗುತ್ತದೆ. ಅವಶ್ಯಕ ವೆಚ್ಚಗಳ ಬಳಿಕ, ಸೇನೆಯ ಆಧುನೀಕರಣಕ್ಕೆ ಕಡಿಮೆ ಮೊತ್ತವಷ್ಟೇ ಲಭಿಸುತ್ತದೆ. ಇದನ್ನು ಯುದ್ಧ ವಿಮಾನಗಳ, ಸಬ್‌ಮರೀನ್‌ಗಳ ಖರೀದಿಗೆ ಅಥವಾ ಯುದ್ಧಗಳಿಗೆ ಬೇಕಾದ ಎಐ ತಂತ್ರಜ್ಞಾನದ ಅಭಿವೃದ್ಧಿಗೆ ಬಳಸಲಾಗುತ್ತದೆ. ಭಾರತ ತನ್ನ ಜಿಡಿಪಿಯ ಕೇವಲ 1.9% ಭಾಗವನ್ನು ಮಾತ್ರವೇ ರಕ್ಷಣೆಗೆ ಬಳಸುತ್ತದೆ. ನಾವು ಇತರ ದೇಶಗಳ ಸಾಮರ್ಥ್ಯವನ್ನು ಸರಿಗಟ್ಟಬೇಕಾದರೆ, ಕನಿಷ್ಠ ಜಿಡಿಪಿಯ ಶೇ 2.5ರಷ್ಟು ಪಾಲನ್ನು ರಕ್ಷಣೆಗೆ ವೆಚ್ಚ ಮಾಡಬೇಕು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ADVERTISEMENT

ಭಾರತದ ನೆರೆಹೊರೆಯಲ್ಲೂ ನಮಗೆ ಆತ್ಮೀಯವಾದ ದೇಶಗಳಿಲ್ಲ. ನಮಗೆ ಚೀನಾ ಮತ್ತು ಪಾಕಿಸ್ತಾನಗಳೊಡನೆ ನಿರಂತರ ಉದ್ವಿಗ್ನತೆಗಳಿವೆ. ಹೀಗಿರುವಾಗ ನಾವು ಹಳೆಯ ಆಯುಧಗಳನ್ನೇ ಅವಲಂಬಿಸಿಕೊಂಡು, ಆಧುನಿಕ ಉಪಕರಣಗಳ ಖರೀದಿಯನ್ನು ವಿಳಂಬಗೊಳಿಸಲು ಸಾಧ್ಯವೇ? ಇತ್ತೀಚಿನ ಆಪರೇಶನ್‌ ಸಿಂದೂರದಂತಹ ಕಾರ್ಯಾಚರಣೆಗಳು ನಾವು ಸದಾ ಸನ್ನದ್ಧವಾಗಿರುವುದು ಅನಿವಾರ್ಯ ಎನ್ನುವುದನ್ನು ಸಾಬೀತುಪಡಿಸಿವೆ. ಓರ್ವ ಯೋಧ ಅಸಮರ್ಥ ಆಯುಧಗಳೊಡನೆ ಶತ್ರುಗಳನ್ನು ಎದುರಿಸುವ ಪರಿಸ್ಥಿತಿ ಬಂದೊದಗಿದರೆ, ಅದು ನ್ಯಾಯಯುತ ಯುದ್ಧವಾಗಲು ಸಾಧ್ಯವಿಲ್ಲ.

ಆತ್ಮನಿರ್ಭರ ಭಾರತ ಅತ್ಯಂತ ಮುಖ್ಯವಾಗುವುದು ಈ ಹಂತದಲ್ಲಿ. ದಶಕಗಳ ಕಾಲ ನಾವು ರಷ್ಯಾ, ಫ್ರಾನ್ಸ್‌, ಅಮೆರಿಕ ಮತ್ತು ಇಸ್ರೇಲ್‌ಗಳಿಂದ ಆಯುಧ ಉಪಕರಣಗಳನ್ನು ಖರೀದಿಸುತ್ತಾ ಬಂದಿದ್ದೆವು. ಆದರೆ, ರಾತ್ರೋರಾತ್ರಿ ಅಂತಾರಾಷ್ಟ್ರೀಯ ಸಂಬಂಧಗಳು ಬದಲಾದರೆ? ಅಥವಾ ಪೂರೈಕೆದಾರ ರಾಷ್ಟ್ರಗಳು ಬಿಕ್ಕಟ್ಟಿನ ಸಮಯದಲ್ಲಿ ಬಿಡಿಭಾಗಗಳ ಪೂರೈಕೆಗೆ ನಿರಾಕರಿಸಿದರೆ? ಆಗ ಭಾರತ ಅಪಾಯಕ್ಕೆ ಸಿಲುಕುತ್ತದೆ. ಆದ್ದರಿಂದಲೇ ಭಾರತ ತನ್ನ ಆಯುಧಗಳು, ವಿಮಾನಗಳು, ನೌಕೆಗಳು ಮತ್ತು ತಂತ್ರಜ್ಞಾನಗಳನ್ನು ತಾನೇ ನಿರ್ಮಿಸಲು ನಿರ್ಧರಿಸಿತು. ರಕ್ಷಣಾ ಉತ್ಪಾದನೆ ವಿಸ್ತರಣೆಗೊಂಡು, ರಕ್ಷಣಾ ರಫ್ತು ₹21,000 ಕೋಟಿಗೂ ಹೆಚ್ಚಾಯಿತು. ಭಾರತೀಯ ನಿರ್ಮಾಣದ ಕ್ಷಿಪಣಿಗಳು, ರೇಡಾರ್‌ಗಳು ಮತ್ತು ಗಸ್ತು ಬೋಟುಗಳು ಇಂದು ಜಾಗತಿಕವಾಗಿ ಖರೀದಿಯಾಗುತ್ತಿವೆ.

2025-26ನೇ ಸಾಲಿನ ಬಜೆಟ್‌ ನಿಜಕ್ಕೂ ಭರವಸೆಯ ಸಂಕೇತಗಳನ್ನು ನೀಡಿತ್ತು. ಬಂಡವಾಳ ವೆಚ್ಚವನ್ನು ₹1.8 ಲಕ್ಷ ಕೋಟಿಗೆ ಹೆಚ್ಚಿಸಲಾಗಿದ್ದು, ಇದರಲ್ಲಿ ಶೇ 75ರಷ್ಟು ಮೊತ್ತವನ್ನು ಭಾರತೀಯ ಉತ್ಪಾದಕರಿಗೆ ಮೀಸಲಿಡಲಾಗಿದೆ. ಇದರಿಂದ ನಮ್ಮ ಮಿಲಿಟರಿ ಶಕ್ತಿಯುತವಾಗುವುದರ ಜೊತೆಗೆ, ಹೆಚ್ಚಿನ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಪ್ರಯೋಜನಗಳೂ ಲಭಿಸಿವೆ. ಡಿಆರ್‌ಡಿಒಗೆ ಬಹುತೇಕ ₹27,000 ಕೋಟಿ ಲಭಿಸಿದೆ. ಐಡಿಇಎಕ್ಸ್‌ನಂತಹ ಕಾರ್ಯಕ್ರಮಗಳು ಯುವ ಉದ್ಯಮಿಗಳಿಗೆ ಡ್ರೋನ್‌ಗಳು, ಸೈಬರ್‌ ಭದ್ರತಾ ಉಪಕರಣಗಳು ಮತ್ತು ಎಐ ರಕ್ಷಣಾ ವ್ಯವಸ್ಥೆಗಳನ್ನು ನಿರ್ಮಿಸಲು ಉತ್ತೇಜನ ನೀಡಿವೆ.

2026-27ರ ಬಜೆಟ್‌ನಿಂದ ನಾವು ಏನನ್ನು ನಿರೀಕ್ಷಿಸಬಹುದು? ವಿಶ್ಲೇಷಕರು ಈ ಬಾರಿ ₹7.5 ಲಕ್ಷ ಕೋಟಿಗೂ ಹೆಚ್ಚಿನ ಹೆಚ್ಚಳದ ನಿರೀಕ್ಷೆ ಹೊಂದಿದ್ದಾರೆ. ಭಾರತೀಯ ಸೇನೆಗೆ ನೂತನ ಯುದ್ಧ ಟ್ಯಾಂಕ್‌ಗಳು, ಆರ್ಟಿಲರಿ, ಮತ್ತು ಸಶಸ್ತ್ರ ವಾಹನಗಳು ಬೇಕಿವೆ. ನೌಕಾಪಡೆಗೆ ಸಬ್‌ಮರೀನ್‌ಗಳು ಮತ್ತು ಇನ್ನೊಂದು ವಿಮಾನ ವಾಹಕ ನೌಕೆಯ ಅವಶ್ಯಕತೆ ಇದೆ. ಭಾರತೀಯ ವಾಯು ಸೇನೆಗೆ ದೇಶೀಯ ನಿರ್ಮಾಣದ ಎಎಂಸಿಎ, ರಫೇಲ್‌ ಯುದ್ಧ ವಿಮಾನಗಳು ಮತ್ತು ಡ್ರೋನ್‌ಗಳು ಸೇರಿದಂತೆ, ಆಧುನಿಕ ಯುದ್ಧ ವಿಮಾನಗಳ ಅವಶ್ಯಕತೆ ಇದೆ. ಸೇನೆಯ ಎಲ್ಲ ವಿಭಾಗಗಳಿಗೂ ಕೃತಕ ಬುದ್ಧಿಮತ್ತೆ, ಸೈಬರ್‌ ಯುದ್ಧ ಸಾಮರ್ಥ್ಯ ಮತ್ತು ಮಾನವ ರಹಿತ ವ್ಯವಸ್ಥೆಗಳ ಅಗತ್ಯವಿದೆ.

ಆದರೆ, ಪಿಂಚಣಿ ಮತ್ತು ಸಂಬಳದ ವೆಚ್ಚಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಜಾಗತಿಕ ಪೂರೈಕೆ ವ್ಯವಸ್ಥೆಗಳಿಗೂ ತೊಂದರೆಯಾಗಿದ್ದು, ಇದರ ಪರಿಣಾಮವಾಗಿ ವಿವಿಧ ಬಿಡಿಭಾಗಗಳ ಆಮದು ವೆಚ್ಚವೂ ದಿನೇ ದಿನೇ ಹೆಚ್ಚಳ ಕಾಣುತ್ತಿದೆ. ಆದ್ದರಿಂದಲೇ ದೇಶೀಯವಾಗಿ ರಕ್ಷಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಈಗ ಅನಿವಾರ್ಯವಾಗಿದೆ.

ರಕ್ಷಣಾ ವಲಯದ ತಜ್ಞರೂ ಸಹ ಈಗ ಸ್ಮಾರ್ಟ್‌ ಪರಿಹಾರಗಳನ್ನು ಸೂಚಿಸುತ್ತಿದ್ದಾರೆ. ಇದರಲ್ಲಿ ರದ್ದಾಗದಂತಹ ರಕ್ಷಣಾ ನಿಧಿಯನ್ನು ಸ್ಥಾಪಿಸುವುದೂ ಒಂದು ಯೋಚನೆಯಾಗಿದೆ. ಈಗಿನ ಪರಿಸ್ಥಿತಿಯಲ್ಲಿ, ಮಿಲಿಟರಿಗೆ ನಿಯೋಜಿಸಿರುವ ನಿಧಿಯನ್ನು ಮಾರ್ಚ್‌ 31ರ ಒಳಗಾಗಿ ವೆಚ್ಚ ಮಾಡದಿದ್ದರೆ, ಅದು ಸರ್ಕಾರಿ ಖಜಾನೆಗೆ ಮರಳುತ್ತದೆ. ಆದರೆ, ರದ್ದಾಗದಂತಹ ರಕ್ಷಣಾ ನಿಧಿಯನ್ನು ಸ್ಥಾಪಿಸಿದರೆ, ಆಗ ಈ ಹಣ ಸೇನೆಯ ಬಳಕೆಗೆ ಲಭ್ಯವಾಗಿಯೇ ಇರುತ್ತದೆ. ಇನ್ನೊಂದು ಸಲಹೆ ಎಂದರೆ, ರಕ್ಷಣಾ ವಲಯದ ಖಾಸಗಿ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿಗಳನ್ನು ಒದಗಿಸುವುದು, ಮತ್ತು ಸುಲಭವಾಗಿ ಸಾಲ ಸೌಲಭ್ಯಗಳನ್ನು ಕಲ್ಪಿಸುವುದು. ಇದರಿಂದ ರಕ್ಷಣಾ ಕ್ಷೇತ್ರದಲ್ಲಿ ಆರೋಗ್ಯಕರ ಸ್ಪರ್ಧೆಗೆ ಉಂಟಾಗುತ್ತದೆ.

ಜನ ಸಾಮಾನ್ಯರಿಗೂ ಬಲವಾದ ರಕ್ಷಣಾ ಬಜೆಟ್‌ ಮುಖ್ಯವೇ ಆಗಿದೆ. ರಕ್ಷಣಾ ವಲಯ ಈಗ ದಿನೇ ದಿನೇ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಏರೋಸ್ಪೇಸ್‌, ರೊಬೋಟಿಕ್ಸ್‌, ಅಥವಾ ಕಂಪ್ಯೂಟರ್‌ ಸೈನ್ಸ್‌ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವವರಿಗೆ ರಕ್ಷಣಾ ವಲಯದಲ್ಲಿ ಅವಕಾಶಗಳಿವೆ. ಇದಲ್ಲದೆ, ಯಾವ ದೇಶ ಅತ್ಯಂತ ಸುಭದ್ರವಾಗಿರುತ್ತದೋ, ಅದು ಹೆಚ್ಚು ಸಮೃದ್ಧವೂ ಆಗಿರುತ್ತದೆ. ಉದ್ಯಮಗಳು ಸುರಕ್ಷಿತ ಭಾವ ಹೊಂದಿದ್ದರೆ, ಅವು ಆ ದೇಶಗಳಲ್ಲಿ ಹೆಚ್ಚಿನ ಹೂಡಿಕೆ ನಡೆಸುತ್ತವೆ.

ನಾವು ಫೆಬ್ರವರಿ ತಿಂಗಳಲ್ಲಿ ಮಂಡನೆಯಾಗುವ ಕೇಂದ್ರ ಬಜೆಟ್‌ಗೆ ಎದುರು ನೋಡುತ್ತಿದ್ದು, ಸರ್ಕಾರವೂ ಧೈರ್ಯ ಮತ್ತು ದೂರದೃಷ್ಟಿಯನ್ನು ಪ್ರದರ್ಶಿಸುವ ಅಗತ್ಯವಿದೆ. ಶಿಕ್ಷಣ, ಆರೋಗ್ಯ, ಮತ್ತು ಮೂಲಭೂತ ಸೌಕರ್ಯಗಳಿಗೂ ಹೂಡಿಕೆಯ ಅಗತ್ಯವಿದೆ. ಆದರೆ ರಕ್ಷಣಾ ಕ್ಷೇತ್ರ ಹತ್ತರಲ್ಲಿ ಹನ್ನೊಂದು ಎನ್ನುವಂತಹ ವೆಚ್ಚವಲ್ಲ. ನಮ್ಮ ಉಳಿವಿಗೆ ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದು ಅನಿವಾರ್ಯವೂ ಹೌದು. ಒಂದು ಪ್ರಬಲ, ಆಧುನಿಕ ರಕ್ಷಣಾ ಪಡೆಗಳಿಲ್ಲದೆ 2047ರ ವೇಳೆಗೆ ಸರ್ಕಾರ ಅಂದುಕೊಂಡಿರುವಂತೆ ವಿಕಸಿತ ಭಾರತವನ್ನು ಸಾಧಿಸಲು ಸಾಧ್ಯವೇ ಇಲ್ಲ.

2026-27ನೇ ಸಾಲಿನ ರಕ್ಷಣಾ ಬಜೆಟ್‌ ಮೂರು ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮೊದಲನೆಯದಾಗಿ, ಸೇನೆಯ ಆಧುನೀಕರಣಕ್ಕೆ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಬೇಕು. ಎರಡನೆಯದಾಗಿ, ಭಾರತೀಯ ರಕ್ಷಣಾ ಉತ್ಪಾದಕರಿಗೆ ಉತ್ತಮ ಸಹಾಯ ಧನ ಮತ್ತು ಸ್ಪಷ್ಟ ನೀತಿಗಳ ಮೂಲಕ ಬೆಂಬಲ ಒದಗಿಸಬೇಕು. ಮೂರನೆಯದಾಗಿ, ಸಂಶೋಧನೆ ಮತ್ತು ಭವಿಷ್ಯದ ತಂತ್ರಜ್ಞಾನ ಕ್ಷೇತ್ರಗಳಿಗೆ ಹೆಚ್ಚಿನ ಹೂಡಿಕೆ ನಡೆಸಬೇಕು. ಏಕೆಂದರೆ, ನಾಳಿನ ಯುದ್ಧಗಳನ್ನು ಎಐ ಮೂಲಕ, ಡ್ರೋನ್‌ಗಳ ಮೂಲಕ, ಮತ್ತು ಸೈಬರ್‌ ಆಯುಧಗಳ ಮೂಲಕವೇ ನಡೆಸಲಾಗುತ್ತದೆ. ರಕ್ಷಣೆ ಎಂದರೆ ಸದಾ ಸಿದ್ಧರಾಗಿರುವುದು, ಸ್ವಾವಲಂಬಿಯಾಗಿರುವುದು, ಮತ್ತು ನಮ್ಮನ್ನು ರಕ್ಷಿಸುವವರನ್ನು ಗೌರವಿಸುವುದೂ ಹೌದು. ಈಗ ಕೇಂದ್ರ ಬಜೆಟ್‌ ಮಂಡನೆಯ ದಿನ ಹತ್ತಿರಾಗುತ್ತಿದ್ದು, ಅದರಲ್ಲಿ ರಕ್ಷಣಾ ಕ್ಷೇತ್ರಕ್ಕೆ ಎಷ್ಟೇ ಮೊತ್ತವನ್ನು ನಿಗದಿಪಡಿಸಿದರೂ ಇಷ್ಟು ಮೊತ್ತ ಸಾಕೇ? ನಾವು ನಿಜಕ್ಕೂ ನಮ್ಮ ರಕ್ಷಣೆಗೆ ಸನ್ನದ್ಧರಾಗಿದ್ದೇವೆಯೇ? ಎಂದು ನಾವು ಪ್ರಶ್ನಿಸಲೇಬೇಕು. ಏಕೆಂದರೆ, ನಮ್ಮ ಸೈನಿಕರು ದೇಶ ರಕ್ಷಣೆಗಾಗಿ ಎಂತಹ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ. ಆದರೆ, ಕನಿಷ್ಠ ಅವರು ತಮ್ಮ ಕಾರ್ಯದಲ್ಲಿ ಯಶಸ್ವಿಯಾಗಲು ಬೇಕಾದ ಆಯುಧ, ಉಪಕರಣಗಳನ್ನಾದರೂ ನಾವು ನೀಡಬೇಕಲ್ಲವೇ?

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.